- ನ್ಯಾಯಾಲಯದಲ್ಲಿ ವಿಚಾರಣೆ ಮುಗಿಯೋವರೆಗೂ ನೀರು ನಿಲ್ಲಿಸಿ: ಮಾಜಿ ಸಿಎಂ ಆಗ್ರಹ
- ರೈತ ಸಂಘದವರಿಂದ ಕಾವೇರಿ ರಕ್ಷಣೆಗೆ ಪ್ರಾಮಾಣಿಕ ಹೋರಾಟ
ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸದಿದ್ದರೇ ಸೆ.12ರ ನಂತರ ಕಾವೇರಿ ಕೊಳ್ಳದ ಜಿಲ್ಲೆಗಳ ಜನರೊಂದಿಗೆ ಸೇರಿ ‘ಕಾವೇರಿ ರಕ್ಷಣಾ ಯಾತ್ರೆ’ ನಡೆಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಂಡ್ಯದ ಕೆಆರ್‌ಎಸ್‌ಗೆ ಭೇಟಿ ನೀಡಿ ನೀರಿನ ವಸ್ತುಸ್ಥಿತಿ ಪರಿಶೀಲನೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಈ ವರ್ಷ ಮಳೆ ಕೊರತೆಯಾಗಿರುವುದು ಮೇ, ಜೂನ್ ತಿಂಗಳ ಪ್ರಾರಂಭದಲ್ಲಿಯೇ ಗೊತ್ತಾಗಿದೆ. ಆದರೂ ಸರ್ಕಾರ ಸಂಪೂರ್ಣವಾಗಿ ಕಾವೇರಿ ವ್ಯಾಪ್ತಿಯ ನಾಲ್ಕು ಅಣೆಕಟ್ಟುಗಳ ನಿರ್ವಹಣೆಯಲ್ಲಿ ವಿಫಲವಾಗಿದೆ. ಕುಡಿಯುವ ನೀರಿಗೆ ಅನುಕೂಲವಾಗಲು ಕೆರೆಗಳಿಗೆ, ರೈತರ ಹೊಲಗಳಿಗೆ ಜೂನ್ ತಿಂಗಳಲ್ಲಿ ನೀರು ಬಿಡಬೇಕಿತ್ತು. ಜೂನ್‌ನಲ್ಲಿ ಕರೆಯುವ ಸಭೆಯನ್ನು ಆಗಸ್ಟ್‌ನಲ್ಲಿ ಕರೆದಿದ್ದಾರೆ. ತಮಿಳುನಾಡಿನವರು 15000 ಕ್ಯೂಸೆಕ್ಸ್ ನೀರು ಕೇಳಿದ ಮೇಲೆ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳದೇ ಕಾಲಹರಣ ಮಾಡಿದೆ” ಎಂದು ಆರೋಪಿಸಿದರು.
ತಮಿಳುನಾಡಿನವರು ಕುರುವೈ ಬೆಳೆಗೆ ಈಗಾಗಲೇ 32 ಟಿಎಂಸಿ ಬದಲು 60 ಟಿಎಂಸಿ ನೀರು ಬಳಕೆ ಮಾಡಿಕೊಂಡಿದ್ದಾರೆ. ಆದರೂ ಅವರ ಬೇಡಿಕೆಯಂತೆ ಪ್ರತಿದಿನ ನೀರು ಹರಿಸುತ್ತಿದ್ದಾರೆ. ಈ ಬಗ್ಗೆ ಸರ್ವ ಪಕ್ಷ ಸಭೆಯಲ್ಲೇ ಕೇಳಿದಾಗ ಇನ್ನು ಮುಂದೆ ನೀರು ಬಿಡುವುದಿಲ್ಲ ಅಂತ ಹೇಳಿ, ನಿರಂತರ ನೀರು ಹರಿಸುತ್ತಿದ್ದಾರೆ. ಸಿಡಬ್ಲುಎಂಎ ಎದುರು ಸರಿಯಾಗಿ ವಾದ ಮಾಡಿದ್ದರೆ ಸುಮಾರು 15 ಟಿಎಂಸಿ ನೀರು ಉಳಿಯುತ್ತಿತ್ತು ಎಂದು ಬೊಮ್ಮಾಯಿ ಅಭಿಪ್ರಾಯಪಟ್ಟರು.
ನೀರು ಹರಿಸುವುದನ್ನು ನಿಲ್ಲಿಸಬೇಕು
ರಾಜ್ಯ ಸರ್ಕಾರ ಸೆ. 12ನೇ ತಾರೀಖಿನ ನಂತರವೂ ನೀರು ಬಿಡುವ ಸಾಧ್ಯತೆ ಇದೆ. ಸುಪ್ರೀಂಕೋರ್ಟ್ ವಿಚಾರಣೆ ನಡೆಯುವವರೆಗೂ ನೀರು ಹರಿಯುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಕಾವೇರಿ ಮಕ್ಕಳಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಮಾಜಿ ಸಿಎಂ ತಿಳಿಸಿದರು.
ಮಂಡ್ಯ ಜಿಲ್ಲೆಯೊಂದರಲ್ಲೆ ಸುಮಾರು 4 ಲಕ್ಷ ಎಕರೆ ಬೆಳೆ ಒಣಗುತ್ತಿದೆ. ಕೃಷಿ ಅಧಿಕಾರಿಗಳು ಒಣ ಬೇಸಾಯದ ಬೆಳೆ ಬೆಳೆಯುವಂತೆ ಸೂಚನೆ ನೀಡುತ್ತಿದ್ದಾರೆ. ಕೆಆರ್ ಎಸ್ ಡ್ಯಾಮ್ ನಲ್ಲಿ ಕೇವಲ 13 ಟಿಎಂಸಿ ನೀರು ಮಾತ್ರ ಬಳಕೆಗೆ ಇದೆ. ಮುಂದಿನ ಮೇ ವರೆಗೂ ಇನ್ನೂ ಎರಡು ಟಿಎಂಸಿ ನೀರು ಆವಿಯಾಗಿ ಹೋಗುತ್ತದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ರಾಜ್ಯದ ಜನರು ಇದನ್ನು ಕ್ಷಮಿಸುವುದಿಲ್ಲ ಎಂದು ಬೊಮ್ಮಾಯಿ ತಿಳಿಸಿದರು.
ಡಿಸಿಎಂ ಡಿಕೆ ಶಿವಕುಮಾರ್ ಅವರು ಮೇಕೆದಾಟು ಬಗ್ಗೆ ಹೇಳಿದ್ದಾರೆ. ನ್ಯಾಷನಲ್ ಹೈಡ್ರೊ ಎಲೆಕ್ಟ್ರಿಕ್ ಕಾರ್ಪೊರೇಶನ್ ನವರು ವಿದ್ಯುತ್ ಉತ್ಪಾದನೆಗೆ ನಾಲ್ಕು ಡ್ಯಾಮ್ ಗಳಿಗೆ ಅನುಮತಿ ನೀಡಿದ್ದರು. ಆದರೆ, ತಮಿಳುನಾಡು ವಿರೋಧ ಮಾಡಿತು. ನಾನು 2012 ರಲ್ಲಿ ನೀರಾವರಿ ಸಚಿವನಾಗಿದ್ದಾಗ ಮೇಕೆದಾಟು ಯೋಜನೆ ಮಾಡಲು ತೀರ್ಮಾನಿಸಿ, ಫಿಜಿಬಿಲಿಟಿ ವರದಿ ಸಿದ್ದಪಡಿಸಿದ್ದೇವು. ಡಿಪಿಆರ್ ಸಿದ್ದಪಡಿಸುವ ಸಂದರ್ಭದಲ್ಲಿ ಕಾಂಗ್ರೆಸ್ ನವರು ಮೇಕೆದಾಟು ಪಾದಯಾತ್ರೆ ಮಾಡಿದರು. ಪ್ರಕರಣ ನ್ಯಾಯಾಲಯದಲ್ಲಿದೆ ಎಂದಾಗ ಒಪ್ಪಲಿಲ್ಲ. ಈಗ ಅವರೇ ಸತ್ಯ ಒಪ್ಪಿಕೊಂಡಿದ್ದಾರೆ ಎಂದರು.
ರೈತ ಸಂಘದವರು ಕಾವೇರಿ ರಕ್ಷಣೆಗೆ ಪ್ರಾಮಾಣಿಕವಾಗಿ ಹೋರಾಟ ಮಾಡುತ್ತಿದ್ದಾರೆ. ನಾವು ರಾಜಕಾರಣ ಮಾಡಬಾರದು ಅಂತ ಕಾದು ನೋಡಿದೆವು. ಸಿಡಬ್ಲುಸಿ ಸಭೆ ಕರೆಯುವ ಮೊದಲು ನಾನು ಸಿಎಂಗೆ ಪತ್ರ ಬರೆದಿದ್ದೆ, ಸರ್ವಪಕ್ಷ ಸಭೆ ಕರೆಯುವಂತೆ ಒತ್ತಡ ಹೇರಿದ್ದೇವೆ. ಸರ್ಕಾರ ಈಗಲೂ ನೀರು ಹರಿಸುವುದನ್ನು ತಡೆಯುವಂತೆ ಒತ್ತಡ ಹೇರಲು ವಸ್ತುಸ್ಥಿತಿ ಅರಿಯಲು ಬಂದಿದ್ದೇವೆ ಎಂದರು.
ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ನೋಡಿದರೆ, ತಮಿಳುನಾಡಿನ ಓಲೈಕೆಗೆ ರಾಜಕಾರಣ ಮಾಡುತ್ತಿದ್ದಾರೆ.
ಕಾವೇರಿ ಹಿನ್ನೀರು ಸಂಪೂರ್ಣ ಖಾಲಿಯಾಗಿದೆ. ಸರ್ಕಾರ ಇನ್ನೂ ನೀರು ಹರಿಸಿದರೆ ಈ ಪರಿಸ್ಥಿತಿಯಲ್ಲಿ ನಾವು ಕಾವೇರಿ ಮಕ್ಕಳಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಗೋವಿಂದ ಕಾರಜೋಳ, ಆರ್. ಅಶೋಕ್, ಡಾ. ಅಶ್ವಥ್ ನಾರಾಯಣ, ಕೆ.ಗೋಪಾಲಯ್ಯ, ಸಂಸದರಾದ ಸುಮಲತಾ ಅಂಬರೀಶ್, ಪ್ರತಾಪ್ ಸಿಂಹ ಜೊತೆಯಲ್ಲಿದ್ದರು.