ಕಾವೇರಿ ಜಲವಿವಾದ | ತಮಿಳುನಾಡಿಗೆ ನೀರು ಬಿಡದಿರಲು ನಿರ್ಧಾರ, ಸುಪ್ರೀಂ ಕೋರ್ಟ್‌ ಮೊರೆ ಹೋಗಲು ಚಿಂತನೆ

Date:

Advertisements
  • ಸರ್ವ ಪಕ್ಷಗಳ ಮುಖಂಡರ ವಿಶೇಷ ತುರ್ತು ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
  • ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಬಿಡಲು ಸೂಚನೆ ಹಿನ್ನೆಲೆಯಲ್ಲಿ ಸಭೆ

ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ಸರ್ವ ಪಕ್ಷಗಳ ಮುಖಂಡರು ಹಾಗೂ ಸಂಸತ್ ಸದಸ್ಯರ ವಿಶೇಷ ತುರ್ತು ಸಭೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯಿತು.

ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ ನೀರನ್ನು 15 ದಿನ ಬಿಡುವಂತೆ ಕಾವೇರಿ ನದಿ ನೀರು ನಿಯಂತ್ರಣಾ ಸಮಿತಿ ಸೂಚಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶೇಷ ತುರ್ತು ಸಭೆ ಕರೆದಿದ್ದರು.

ತಮಿಳುನಾಡಿಗೆ ನೀರು ಬಿಡದಿರಲು ನಿರ್ಧರಿಸಿ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮತ್ತೆ ಅರ್ಜಿ ಸಲ್ಲಿಸುವುದು ಅಥವಾ ನಮ್ಮ ಬಳಿ ನೀರು ಇಲ್ಲ ಎಂದು ಸುಪ್ರೀಂ ಕೋರ್ಟ್‌ ಮೊರೆ ಹೋಗುವುದಾಗಿ ಸಭೆಯಲ್ಲಿ ನಿರ್ಧರಿಸಲಾಯಿತು.

Advertisements

ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, “ಸಾಮಾನ್ಯ ಸಂದರ್ಭಗಳಲ್ಲಿ ನೀರು ಬಿಡಲು ನಮ್ಮ ಅಭ್ಯಂತರ ಇಲ್ಲ. ಸಂಕಷ್ಟ ಸಂದರ್ಭಗಳಲ್ಲಿ, ಸಂಕಷ್ಟ ಸೂತ್ರ ಇಲ್ಲದಿರುವುದರಿಂದ ನಾವು ಹೆಚ್ಚು ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತೇವೆ. ನಾವು 99 ಟಿಎಂಸಿ ನೀರು ಬಿಡಬೇಕಿತ್ತು. ಆದರೆ ಇದುವರೆಗೂ 37 ಟಿಎಂಸಿ ಮಾತ್ರ ಹೋಗಿದೆ. ನಮಗೆ 70 ಟಿಎಂಸಿ ನೀರು ಬೆಳೆ ರಕ್ಷಣೆಗೆ ಬೇಕು. ಕುಡಿಯುವ ನೀರಿಗೆ 33 ಟಿಎಂಸಿ ನೀರು ಬೇಕು. ಆದರೆ ನಮ್ಮಲ್ಲಿ ಸಂಗ್ರಹ ಇರುವುದೇ ಕೇವಲ 53 ಟಿಎಂಸಿ ಮಾತ್ರ. ಹೀಗಾಗಿ ನಮ್ಮಲ್ಲಿ ನೀರೇ ಇಲ್ಲ. ನಮ್ಮ ಅಧಿಕಾರಿಗಳು ರಾಜ್ಯದ ವಾಸ್ತವಾಂಶವನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ಆದರೂ ನಿತ್ಯ 5 ಟಿಎಂಸಿ ನೀರು ಬಿಡಲು ಸೂಚಿಸಲಾಗಿದೆ” ಎಂದು ವಿವರಿಸಿದರು.

“ನಮ್ಮ ರಾಜ್ಯದ ರೈತರ ಹಿತ ಮತ್ತು ಕುಡಿಯುವ ನೀರಿನ ಹಿತ ಕಾಪಾಡುವುದು ನಮ್ಮ ಮೊದಲ ಆದ್ಯತೆ. ತಮಿಳುನಾಡಿಗೆ ನೀರು ಬಿಡಬೇಕಾ ಬೇಡವಾ ಎನ್ನುವುದಕ್ಕಿಂತ ನಮ್ಮಲ್ಲಿ ನೀರೇ ಇಲ್ಲ. ಹೀಗಾಗಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತವನ್ನು ಎಲ್ಲರೂ ಒಟ್ಟಾಗಿ ಕಾಪಾಡೋಣ” ಎಂದು ಸಿದ್ದರಾಮಯ್ಯ ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಶೈಕ್ಷಣಿಕ ಸುಧಾರಣೆಗಳಿಗೆ ನಾಂದಿ ಹಾಡಿದ ಹೊಸ ಪರೀಕ್ಷಾ ವಿಧಾನ: ಸಿಎಂ ಸಿದ್ದರಾಮಯ್ಯ

ಮೇಕೆದಾಟು ಯೋಜನೆಯೇ ಪರಿಹಾರ

“ಜಲಸಂಪನ್ಮೂಲ ಸಚಿವರು ದೆಹಲಿಗೆ ತೆರಳಿ ಜಲಶಕ್ತಿ ಸಚಿವರನ್ನು ಭೇಟಿಯಾಗಲಿದ್ದಾರೆ. ವಕೀಲರ ತಂಡದೊಂದಿಗೆ ಚರ್ಚಿಸಲಿದ್ದಾರೆ. ನಾವು ರೈತರ ಹಿತಾಸಕ್ತಿಯನ್ನು ರಕ್ಷಿಸಬೇಕಾಗಿದೆ. ರಾಜ್ಯದ ಮುಖ್ಯಮಂತ್ರಿಯಾಗಿ, ನೀರು ಕೊಡುವುದು ಕಷ್ಟವಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ರೈತರನ್ನು ಬಲಿಕೊಟ್ಟು ನೀರು ಕೊಡಲಾಗದು. ಈಗ ಸಂಕಷ್ಟದಲ್ಲಿದ್ದೇವೆ ನಾವು. ನಾವೆಲ್ಲರೂ ಒಟ್ಟಿಗೆ ಹೋಗಬೇಕು. ಈ ಸಂಕಷ್ಟಕ್ಕೆ ಮೇಕೆದಾಟು ಯೋಜನೆಯೇ ಪರಿಹಾರ. ಹೀಗಾಗಿ ಎಲ್ಲ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು. ನಮ್ಮ ರಾಜಕೀಯ ಒಲವು, ನಿಲುವುಗಳನ್ನು ಬದಿಗಿಟ್ಟು, ರಾಜ್ಯದ ಹಿತಾಸಕ್ತಿಯ ದೃಷ್ಟಿಯಿಂದ ಒಟ್ಟಿಗೆ ಕೆಲಸ ಮಾಡೋಣ” ಎಂದರು.

ಸಭೆಯಲ್ಲಿ ತಾಂತ್ರಿಕ ಪರಿಣತರು, ಕಾನೂನು ತಜ್ಞರು, ಆ ಭಾಗದ ಜನಪ್ರತಿನಿಧಿಗಳು ಹಾಗೂ ವಿವಿಧ ಪಕ್ಷಗಳ ಮುಖಂಡರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಸಚಿವರಾದ ಡಾ. ಜಿ. ಪರಮೇಶ್ವರ, ಹೆಚ್‌.ಕೆ.ಪಾಟೀಲ, ಚಲುವರಾಯಸ್ವಾಮಿ, ಕೆ.ಹೆಚ್. ಮುನಿಯಪ್ಪ, ಕೆ.ಎನ್. ರಾಜಣ್ಣ, ಎನ್‌.ಎಸ್. ಬೋಸರಾಜು, ಕೆ.ವೆಂಕಟೇಶ್‌, ಜಮೀರ್ ಅಹಮದ್ ಖಾನ್, ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ, ಈ ಭಾಗದ ಸಂಸದರು, ಶಾಸಕರು, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಜಲ ಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌, ಅಡ್ವೊಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ, ಕಾನೂನು ತಜ್ಞರು ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಮಾಜಿ ಸಿಎಂ ಬೊಮ್ಮಾಯಿ ಗೈರು

ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್‌ ನೀರನ್ನು ಬಿಡುವಂತೆ ಕಾವೇರಿ ನದಿ ನೀರು ನಿಯಂತ್ರಣಾ ಸಮಿತಿ ಸೂಚಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆದಿರುವ ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, “ರಾಜ್ಯ ಸರ್ಕಾರ ಕಾವೇರಿ ವಿವಾದ ಕುರಿತು ಚರ್ಚಿಸಲು ನಿನ್ನೆ ತಡರಾತ್ರಿ ಸಭೆಗೆ ಆಹ್ವಾನ ನೀಡಿದೆ. ಆದರೆ, ನಾನು ನನ್ನ ಕ್ಷೇತ್ರದ ಪೂರ್ವ ನಿಯೋಜಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದರಿಂದ ಸರ್ಕಾರ ಕರೆದ ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ” ಎಂದಿದ್ದಾರೆ.

“ಕಾವೇರಿ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು. ರಾಜ್ಯದ ವಸ್ತು ಸ್ಥಿತಿಯನ್ನು ಸುಪ್ರೀಂ ಕೋರ್ಟ್ ಮತ್ತು ಸಿಡಬ್ಲುಎಂಎಗೆ ರಾಜ್ಯ ಸರ್ಕಾರ ಮನವರಿಕೆ ಮಾಡಿಕೊಡಬೇಕು” ಎಂದು ಒತ್ತಾಯಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಬಿಜೆಪಿ ಮತಗಳ್ಳತನ ವಿರುದ್ಧ ವ್ಯಾಪಕ ಹೋರಾಟ: ಮಾಜಿ ಸಚಿವ ವಿನಿಯಕುಮಾರ್

ಬಿಜೆಪಿ ಮತಗಳ್ಳತನ ನಡೆಸಿ ಚುನಾವಣೆ ಅಕ್ರಮ ಎಸಗಿರುವ ಬಗ್ಗೆ ವ್ಯಾಪಕವಾಗಿ ಹೋರಾಟ...

ಶಿವಮೊಗ್ಗ | KSRTC ನಗರ ಸಾರಿಗೆ ಬಸ್ ಮಲವಗೊಪ್ಪದ, ಚೆನ್ನಬಸವೇಶ್ವರ ದೇವಸ್ಥಾನ ಬಳಿ ಕಡ್ಡಾಯ ನಿಲುಗಡೆಗೆ ಆದೇಶ

ಶಿವಮೊಗ್ಗ, ಸಾರ್ವಜಕನಿಕ ಪ್ರಯಾಣಿಕರು/ಶಾಲಾ-ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಿವಮೊಗ್ಗ-ಭದ್ರಾವತಿ ಮಾರ್ಗದಲ್ಲಿ ಕಾರ್ಯಾಚರಣೆಯಾಗುವ ನಗರ...

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

Download Eedina App Android / iOS

X