ಆಪಾದಿತ ಅಬಕಾರಿ ನೀತಿ ಪ್ರಕರಣದಲ್ಲಿ ತಮ್ಮನ್ನು ಸಿಬಿಐ ಬಂಧಿಸಿರುವುದನ್ನು ಪ್ರಶ್ನಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಅವರ ಅರ್ಜಿಯನ್ನು ಗುರುವಾರ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದೆ. “ಕಳೆದ ಎರಡು ವರ್ಷಗಳಲ್ಲಿ ಸಿಬಿಐ ನನ್ನನ್ನು ಬಂಧಿಸಲಿಲ್ಲ. ಆದರೆ, ಇಡಿ ಪ್ರಕರಣದಲ್ಲಿ ಜಾಮೀನು ಪಡೆದ ಬಳಿಕವೇ ನನ್ನನ್ನು ಬಂಧಿಸಿದೆ ಎಂದು ಕೇಜ್ರಿವಾಲ್ ವಾದಿಸಿದ್ದಾರೆ.
ಆಪಾದಿತ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಇಡಿ ಬಂಧಿಸಿತ್ತು. ಚುನಾವಣೆಯ ಸಮಯದಲ್ಲಿ ಕೇಜ್ರಿವಾಲ್ ಅವರಿಗೆ ಜಾಮೀನು ನೀಡಲಾಗಿತ್ತು. ಬಳಿಕ, ಮತ್ತೆ ಜೂನ್ 2ರಂದು ಕೇಜ್ರಿವಾಲ್ ಅವರನ್ನು ಬಂಧಿಸಲಾಗಿತ್ತು. ನಂತರ, ಅವರು ಮತ್ತೊಮ್ಮೆ ಜಾಮೀನು ಪಡೆದುಕೊಂಡಿದ್ದರು. ಅವರಿಗೆ ಇಡಿ ದಾಖಲಿಸಿದ ಪ್ರಕರಣದಲ್ಲಿ ಜಾಮೀನು ದೊರೆತ ಬಳಿಕ, ಜೂನ್ 26ರಂದು ಸಿಬಿಐ ಆಪಾದಿತ ಅಬಕಾರಿ ನೀತಿ ಹಗರಣದ ಸಂಬಂಧ ಬಂಧಿಸಿದೆ. ಹೀಗಾಗಿ, ಕೇಜ್ರಿವಾಲ್ ಜೈಲಿನಲ್ಲಿಯೇ ಇದ್ದಾರೆ.
ಸಿಬಿಐ ದಾಖಲಿಸಿರುವ ಪ್ರಕರಣದಲ್ಲಿ ಜಾಮೀನು ಕೋರಿ ಕೇಜ್ರಿವಾಲ್ಸುಪ್ರೀಂ ಮೆಟ್ಟಿಲೇರಿದ್ದಾರೆ. ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರು ಅರ್ಜಿ ವಿಚಾರಣೆ ನಡೆಸಿದ್ದು, ವೇಳೆ, ಇಡಿ ದಾಖಲಿಸಿದ್ದ ಪ್ರಕರಣದಲ್ಲಿ ಜಾಮೀನು ಪಡೆದ ಬಳಿಕ, ಸಿಬಿಐ ತಮ್ಮನ್ನು ಬಂಧಿಸಿದೆ ಎಂದು ಕೇಜ್ರಿವಾಲ್ ಗಮನ ಸೆಳೆದಿದ್ದಾರೆ.
ಕೇಜ್ರಿವಾಲ್ ಪರವಾಗಿ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ವಾದ ಮಂಡಿಸಿದ್ದು, “ಸಿಬಿಐ ಎಫ್‌ಐಆರ್‌ನಲ್ಲಿ ಕೇಜ್ರಿವಾಲ್ ಹೆಸರಿಲ್ಲ” ಎಂದು ಹೇಳಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಈ ಹಿಂದೆ ಕೇಜ್ರಿವಾಲ್ ಅವರಿಗೆ ಮಧ್ಯಂತರ ಜಾಮೀನು ನೀಡಿತ್ತು. ಅಲ್ಲದೆ, ಕೇಜ್ರಿವಾಲ್ ಸಮಾಜಕ್ಕೆ ಬೆದರಿಕೆಯಾಗಿಲ್ಲವೆಂದು ಸುಪ್ರೀಂ ತಮ್ಮ ಆದೇಶದಲ್ಲಿ ಹೇಳಿತ್ತು ಎಂಬುದನ್ನು ಸಂಘ್ವಿ ಎತ್ತಿ ತೋರಿಸಿದ್ದಾರೆ.
ಈ ವರದಿ ಓದಿದ್ದೀರಾ?: ಕೋವಿಡ್ ಹಗರಣ | 2,200 ಕೋಟಿ ಭ್ರಷ್ಟಾಚಾರ ತನಿಖಾ ಆಯೋಗದ ವರದಿಯಲ್ಲಿ ಸಾಬೀತಾಗುವುದೇ?
ಈ ಹಿಂದೆ, ಸಿಬಿಐ ತಮ್ಮನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಕೇಜ್ರಿವಾಲ್ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅವರ ಬಂಧನವನ್ನು ಅಗಸ್ಟ್ 5ರಂದು ಹೈಕೋರ್ಟ್ ಎತ್ತಿಹಿಡಿದಿತ್ತು. ಜಾಮೀನಿಗಾಗಿ ವಿಚಾರಣಾ ನ್ಯಾಯಾಲಯದ ಮೊರೆ ಹೋಗುವಂತೆ ಸೂಚಿಸಿತ್ತು.
ಬಳಿಕ, ಕೇಜ್ರಿವಾಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆಗಸ್ಟ್ 14 ರಂದು ಅವರಿಗೆ ಮಧ್ಯಂತರ ಜಾಮೀನು ನೀಡಲು ಸುಪ್ರೀಂ ನಿರಾಕರಿಸಿತ್ತು. ಸಿಬಿಐನಿಂದ ಪ್ರತಿಕ್ರಿಯೆ ಕೇಳಿತ್ತು. ಗುರುವಾರ, ಕೇಜ್ರಿವಾಲ್ ಅವರ ಅರ್ಜಿಯನ್ನು ಮತ್ತೆ ವಿಚಾರಣೆಗೆ ಸುಪ್ರೀಂ ಕೋರ್ಟ್ ತೆಗೆದುಕೊಂಡಿದೆ. ಜಾಮೀನು ಮಂಜೂರಾಗುವುದೇ ಇಲ್ಲವೇ ಎಂಬುದು ಶೀಘ್ರದಲ್ಲೇ ತಿಳಿಯಲಿದೆ.