ಕೋವಿಡ್ ಹಗರಣ | 2,200 ಕೋಟಿ ಭ್ರಷ್ಟಾಚಾರ ತನಿಖಾ ಆಯೋಗದ ವರದಿಯಲ್ಲಿ ಸಾಬೀತಾಗುವುದೇ?

Date:

ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಜಾನ್ ಮೈಕಲ್ ಕುನ್ಹಾ ನೇತೃತ್ವದ ವಿಚಾರಣಾ ಆಯೋಗವು ಕೋವಿಡ್ ಹಗರಣದ ಬಗ್ಗೆ ತನಿಖೆ ನಡೆಸಿದ್ದು, ಮಧ್ಯಂತರ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ. ಕೊರೋನ ಸಮಯದಲ್ಲಿ 1,163.65 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದ ಬಿಜೆಪಿ ಸರ್ಕಾರ, 3,392 ಕೋಟಿ ರೂ.ಗಳ ಲೆಕ್ಕ ತೋರಿಸಿ, ಸುಮಾರು 2,200 ಕೋಟಿ ರೂ. ಲೂಟಿ ಮಾಡಿದೆ ಎಂದು ಆರೋಪವಿದೆ. ಇದು ವರದಿಯಲ್ಲಿ ಹೊರಬೀಳಬಹುದೇ?

ಸದ್ಯ ರಾಜ್ಯ ರಾಜಕಾರಣದಲ್ಲಿ ಕೊರೋನ ಹಗರಣ ಮತ್ತೆ ಸದ್ದು ಮಾಡುತ್ತಿದೆ. 2020ರಲ್ಲಿ ಕೊರೋನ ದೇಶವನ್ನು ವ್ಯಾಪಿಸಿಕೊಂಡು, ಮಾರಣಹೋಮ ನಡಸುತ್ತಿದ್ದಾಗಲೂ ಕರ್ನಾಟಕದಲ್ಲಿ ಅಂದಿನ ರಾಜ್ಯ ಬಿಜೆಪಿ ಸರ್ಕಾರ ಕೊರೋನ ನಿರ್ವಹಣೆಯಲ್ಲೂ ಭ್ರಷ್ಟಾಚಾರ ನಡೆಸಿತ್ತು. ಕೋವಿಡ್ ನಿರ್ವಹಣೆಯಲ್ಲಿ ಬರೋಬ್ಬರಿ 40,000 ಕೋಟಿ ರೂ. ಹಗರಣ ನಡೆದಿದೆ ಎಂದು ಸ್ವತಃ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಆರೋಪಿಸಿದ್ದರು. ಅವರ ಆರೋಪದ ಬಳಿಕ ಹಗರಣ ಬಯಲಿಗೆ ಬಂದಿತ್ತು. ಮಾತ್ರವಲ್ಲದೆ, ಕೊರೋನ ವೈದ್ಯಕೀಯ ಕಿಟ್ ಖರೀದಿಯಲ್ಲಿಯೇ 2,200 ಕೋಟಿ ರೂ. ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿತ್ತು. ಮಾತ್ರವಲ್ಲದೆ, 2021ರ ಜುಲೈ- ಆಗಸ್ಟ್‌ನಲ್ಲಿ ‘ಸಾರ್ವಜನಿಕ ಲೆಕ್ಕಪತ್ರ ಸಮಿತಿ’ ಬಿಡುಗಡೆ ಮಾಡಿದ ವರದಿಯಲ್ಲಿ ಕೋವಿಡ್ ಹಗರಣದ ಬಗ್ಗೆ ಗಂಭೀರ ಆರೋಪಗಳಿದ್ದವು.

- Advertisement -

ಆದಾಗ್ಯೂ, 40% ಕಮಿಷನ್ ಸೇರಿದಂತೆ ನಾನಾ ಆರೋಪಗಳನ್ನು ಎದುರಿಸುತ್ತಿದ್ದ ಬಿಜೆಪಿ ಸರ್ಕಾರ, ಎಲ್ಲ ಆರೋಪಗಳನ್ನು ತಳ್ಳಿ ಹಾಕಿ, ವಿಲಾಸಿ ಆಡಳಿತ ನಡೆಸುತ್ತಿತ್ತು. 2023ರ ಮೇನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ, ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರಗಳ ಬಗ್ಗೆ ತನಿಖೆ ನಡೆಸಲು ಸಮಿತಿ ರಚನೆ ಮಾಡಿತ್ತು. ಅಂತೆಯೇ, ಕೋವಿಡ್ ಹಗರಣದ ಬಗ್ಗೆ ತನಿಖೆಗಾಗಿ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಜಾನ್ ಮೈಕಲ್ ಕುನ್ಹಾ ನೇತೃತ್ವದಲ್ಲಿ ವಿಚಾರಣಾ ಆಯೋಗವನ್ನು ರಚಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ...

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು ನಿರಾಕರಿಸಿ ತನ್ನನ್ನು ತಾನು ಮೇಕೆಯ ಮಮಕಾರದ ಹಾಲಿಗೆ ಕೊಟ್ಟುಕೊಂಡಿದ್ದರು. ಈಗಿನ ಪಶುಪಾಲಕ ಸಮುದಾಯಗಳ ಸಾವಯವ ಬದುಕಿನ ರೀತಿ ನೀತಿ ಗಮನಿಸಿ......

ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಮೊಳಗಿಸಿದ್ದ ಮತ ಹಕ್ಕಿನ ಕೂಗಿಗೆ...

ಮತದಾನ ಕೇವಲ ಹಕ್ಕಲ್ಲ, ಅದು ಪ್ರಜೆಯೊಬ್ಬನ ಘನತೆ ಹಾಗೂ ಅಸ್ತಿತ್ವದ ಸಂಕೇತ. 131 ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಇದೇ ಮತಾಧಿಕಾರಕ್ಕಾಗಿ ಗಾಂಧೀಜಿ ಬ್ರಿಟಿಷರ ವಿರುದ್ಧ ಸಿಡಿದೆದ್ದಿದ್ದರು. ಆದರೆ, ಇಂದು ಸ್ವತಂತ್ರ ಭಾರತದಲ್ಲಿ...

ಇದೀಗ, ಆಯೋಗವು ಕೋವಿಡ್ ಹಗರಣದ ಬಗ್ಗೆ ತನಿಖೆ ನಡೆಸಿದ್ದು, ಮಧ್ಯಂತರ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ. ವರದಿ ಬಂದ ಕೂಡಲೇ ಕೊರೋನ ಸಮಯದಲ್ಲಿ ಆರೋಗ್ಯ ಸಚಿವರಾಗಿದ್ದ, ಹಾಲಿ ಸಂಸದ ಡಾ. ಕೆ ಸುಧಾಕರ್ ಬಡಬಡಾಯಿಸುತ್ತಿದ್ದಾರೆ. ”ನಾನು ಕೋವಿಡ್ ಕಾಲದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಆಗಿದ್ದೆ. ಆ ವೇಳೆ ನಾನು ಅಂತಃಕರಣದಿಂದ ಕೆಲಸ ಮಾಡಿದ್ದೇನೆ. ನನ್ನ ಪ್ರಾಣ ಒತ್ತೆ ಇಟ್ಟು ಊಟ ತಿಂಡಿ ಮರೆತು ಹಗಲಿರುಳು ರೋಗಿಗಳ ಸೇವೆ ಮಾಡಿದ್ದೇನೆ. ನಾನು ಯಾವುದೇ ಕಾನೂನು ಬಾಹಿರ ಕೆಲಸ ಮಾಡಿಲ್ಲ” ಎನ್ನುತ್ತಿದ್ದಾರೆ.

ಡಾ. ಕೆ ಸುಧಾಕರ್
ಡಾ. ಕೆ ಸುಧಾಕರ್

ಸದ್ಯ, ಇನ್ನೂ ಜಾನ್ ಮೈಕಲ್ ಕುನ್ಹಾ ಅವರ ಆಯೋಗ ಸಲ್ಲಿಸಿದ ವರದಿಯಲ್ಲಿ ಏನಿದೆ ಎಂಬುದು ಬಹಿರಂಗವಾಗಿಲ್ಲ. ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ವರದಿಯ ಬಗ್ಗೆ ಚರ್ಚೆಗಳು ನಡೆಯಲಿವೆ. ಆದರೂ, ವರದಿಯ ಮಾಹಿತಿ ಹೊರಬರುವ ಮುನ್ನವೇ ಸುಧಾಕರ್ ‘ಕುಂಬಳಕಾಯಿ ಕಳ್ಳ ಎಂದರೆ, ಹೆಗಲು ಮುಟ್ಟಿ ನೋಡಿಕೊಂಡವರಂತೆ’ ಮಾತನಾಡುತ್ತಿದ್ದಾರೆ. ಇದು, ಭ್ರಷ್ಟಾಚಾರದ ವಾಸನೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಏನೇ ಇರಲಿ, ಇಡೀ ದೇಶವೇ ಕೊರೋನ ಅಬ್ಬರದಿಂದ ಸ್ತಬ್ಧವಾಗಿತ್ತು. ಆದರೂ, ರಾಜ್ಯದಲ್ಲಿ ಹಗರಣ, ಅಕ್ರಮ, ಭ್ರಷ್ಟಾಚಾರಗಳು ‘ಆಕ್ಟಿವ್’ ಆಗಿದ್ದವು. ರಾಜ್ಯದಲ್ಲಿ ಚಾಮರಾಜನಗರ ಆಮ್ಲಜನಕ ದುರಂತ, ಕೋವಿಡ್‌ನಿಂದ ಸಾವಿರಾರು ಜನರ ಮಾರಣಹೋಮ ನಡೆಯುತ್ತಿದ್ದಾಗಲೂ ವೆಂಟಿಲೇಟರ್ ಖರೀದಿ, ಮಾಸ್ಕ್‌ ಖರೀದಿ, ಬೆಡ್‌ಗಳ ಬಾಡಿಗೆ, ವೈದ್ಯಕೀಯ ಉಪಕರಣಗಳು ಹಾಗೂ ಸಾಮಗ್ರಿಗಳ ಖರೀದಿ, ಆಮ್ಲಜನಕ ನಿರ್ವಹಣೆ ನೆಪದಲ್ಲಿ ಸಾವಿರಾರು ಕೋಟಿ ರೂ. ಹಗರಣ ಎಗ್ಗಿಲ್ಲದೆ ನಡೆಯುತ್ತಿತ್ತು.

ಒಂದು ವೆಂಟಿಲೇಟರ್‌ಗೆ ಮಾರುಕಟ್ಟೆ ಬೆಲೆ 4 ಲಕ್ಷ ರೂ. ಇದ್ದಾಗಲೂ ರಾಜ್ಯ ಬಿಜೆಪಿ ಸರ್ಕಾರ ಪ್ರತಿ ವೆಂಟಿಲೇಟರ್‌ಗೆ ಮೂರು ಪಟ್ಟು ಹೆಚ್ಚು, ಅಂದರೆ, 12 ಲಕ್ಷ ರೂ. ಕೊಟ್ಟು ಖರೀದಿ ಮಾಡಿತ್ತು. 40 ಕೋಟಿ ರೂ.ಗೆ ದೊರೆಯಬಹುದಾಗಿದ್ದ 1,000 ವೆಂಟಿಲೇಟರ್‌ಗಳನ್ನು 120 ಕೋಟಿ ರೂ. ಖರ್ಚು ಮಾಡಿ ಖರೀದಿ ಮಾಡಿತ್ತು.

ಅಲ್ಲದೆ, ಒಟ್ಟು 48.65 ಕೋಟಿ ರೂ. ಮೌಲ್ಯದ 4.89 ಲಕ್ಷ ಪಿಪಿಇ ಕಿಟ್‌ಗಳನ್ನು 150 ಕೋಟಿ ರೂ.ಗೆ ಖರೀದಿ ಮಾಡಿತ್ತು. ಪಿಪಿಟಿ ಕಿಟ್ ಖರೀದಿಯಲ್ಲಿ ಬರೋಬ್ಬರಿ 101.35 ಕೋಟಿ ರೂ. ಅಕ್ರಮ ನಡೆದಿತ್ತು. ಜೊತೆಗೆ, ಸರ್ಜಿಕಲ್ ಮಾಸ್ಕ್‌ಗಳ ಖರೀದಿಯಲ್ಲೂ ಅಕ್ರಮ ಎಸಗಿದ್ದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ, 45 ರೂ. ಮೌಲ್ಯದ ಮಾಸ್ಕ್‌ಗೆ 485 ರೂ. ಪಾವತಿಸಿರುವುದಾಗಿ ಹೇಳಿಕೊಂಡಿತ್ತು. 10 ಲಕ್ಷ ಮಾಸ್ಕ್‌ ಖರೀದಿಗಾಗಿ 40 ಕೋಟಿ ರೂ. ಪಾವತಿಸಿದ್ದಾಗಿ ಲೆಕ್ಕ ತೋರಿಸಿತ್ತು.

ಇನ್ನು, 200 ರೂಪಾಯಿಯ ಸರ್ಜಿಕಲ್ ಕೈಗವಸಿಗೆ 400 ರೂಪಾಯಿ ಲೆಕ್ಕ ತೋರಿಸಿ 10 ಲಕ್ಷ ಕೈಗವಸಿಗೆ 40 ಕೋಟಿ ರೂ. ಖರ್ಚು ಮಾಡಿದ್ದಾಗಿ ಹೇಳಿಕೊಂಡಿತ್ತು. ಜೊತೆಗೆ, 40 ಕೋಟಿ ರೂ. ಬೆಲೆ ಬಾಳುವ ಒಟ್ಟು 20 ಲಕ್ಷ ಪರೀಕ್ಷಾ ಕೈಗವಸುಗಳಿಗೆ 65 ಕೋಟಿ ರೂ. ವ್ಯಯಿಸಿದ್ದಾಗಿ ಲೆಕ್ಕ ತೋರಿಸಿತ್ತು.

image 11 6

ಆಮ್ಲಜನಕ ಕೊರತೆಯಿಂದ ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ, ಅದೇ ಆಮ್ಲಜನಕದ ಸಿಲಿಂಡರ್ ಖರೀದಿಯಲ್ಲಿ ಬಿಜೆಪಿ ಸರ್ಕಾರ ಅಕ್ರಮ ಎಸಗಿತ್ತು. ಒಟ್ಟು 43 ಕೋಟಿ ರೂ. ಮೌಲ್ಯದ 5,000 ಆಮ್ಲಜನಕ ಸಿಲಿಂಡರ್‌ ಖರೀದಿಗೆ 80 ಕೋಟಿ ರೂ. ಖರ್ಚು ಮಾಡಿರುವುದಾಗಿ ಹೇಳಿಕೊಂಡಿತ್ತು. 6.5 ಲಕ್ಷ ಮಂದಿಗೆ ಕೋವಿಡ್ ಪರೀಕ್ಷೆ ನಡೆಸಿ, 530 ಕೋಟಿ ರೂ. ವ್ಯಯಿಸಿದ್ದಾಗಿ ಸರ್ಕಾರ ಹೇಳಿಕೊಂಡಿತ್ತು. ಆದರೆ, ಕೋವಿಡ್ ಪರೀಕ್ಷಾ ಕಿಟ್‌ ಮಾರುಕಟ್ಟೆ ದರ 4,000 ರೂ. ಇದ್ದು, 248 ಕೋಟಿ ರೂ. ಮಾತ್ರವೇ ಖರ್ಚಾಗಿದೆ ಎಂದು ಹೇಳಲಾಗಿದೆ. ಇನ್ನು ಸೋಂಕಿತರ ಆರೈಕೆಗಾಗಿ 100 ಕೋಟಿ ರೂ. ಖರ್ಚು ಮಾಡಿ, 525 ಕೋರಿ ರೂ. ಖರ್ಚಾಗಿದೆ ಎಂದೂ ಇತರೆ ವೈದ್ಯಕೀಯ ವೆಚ್ಚವಾಗಿ 600 ಕೋಟಿ ರೂ. ವ್ಯಯಿಸಿ, 1,737 ಕೋಟಿ ರೂ. ಖರ್ಚಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ ಎಂದು ಆರೋಪಿಸಲಾಗಿದೆ. ಒಟ್ಟಾರೆಯಾಗಿ ಕೊರೋನ ಸಮಯದಲ್ಲಿ 1,163.65 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದ ಬಿಜೆಪಿ ಸರ್ಕಾರ, 3,392 ಕೋಟಿ ರೂ.ಗಳ ಲೆಕ್ಕ ತೋರಿಸಿ, ಸುಮಾರು 2,200 ಕೋಟಿ ರೂ. ಲೂಟಿ ಮಾಡಿದೆ ಎಂದು ಆರೋಪಿಸಲಾಗಿದೆ.

ಕೊರೋನ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ರಾಜ್ಯ ಬಿಜೆಪಿ ಸರ್ಕಾರ ಅಕ್ರಮ ಎಸಗಿದೆ ಎಂಬ ಆರೋಪಗಳು ಕೇಳಿಬಂದಾಗಲೂ, ಸ್ವತಃ ಬಿಜೆಪಿ ಶಾಸಕರೇ ತಮ್ಮ ಸರ್ಕಾರದ ವಿರುದ್ಧ ಆರೋಪ ಮಾಡಿದಾಗಲೂ, ‘ಸಾರ್ವಜನಿಕ ಲೆಕ್ಕಪತ್ರ ಸಮಿತಿ’ ಕೋವಿಡ್ ಅಕ್ರಮದ ಬಗ್ಗೆ ಆರೋಪಿಸಿದಾಗಲೂ ‘ನಾ ಕಾವೂಂಗಾ – ನಾ ಖಾನೇ ದೂಂಗಾ’ ಎನ್ನುವ ಪ್ರಧಾನಿ ಮೋದಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಯಾವುದೇ ತನಿಖಾ ಸಂಸ್ಥೆಗಳು ಈ ಬಗ್ಗೆ ತನಿಖೆ ನಡೆಸಲಿಲ್ಲ.

ಈ ವರದಿ ಓದಿದ್ದೀರಾ?: ಕೊರೋನಗೆ ದೇಶ ತತ್ತರ; 20 ಲಕ್ಷ ಕೋಟಿ ಏನಾಯ್ತು? ಪಿಎಂ-ಕೇರ್ಸ್‌ ಎಲ್ಲೋಯ್ತು?

ಅಂದಹಾಗೆ, ಕೊರೋನ ವಿರುದ್ಧ ಹೋರಾಟಕ್ಕಾಗಿ ಜನರು ದೇಣಿಗೆ ನೀಡಬೇಕೆಂದು ಕೇಳಿಕೊಂಡಿದ್ದ ಮೋದಿ, ‘ಪಿಎಂ ಕೇರ್ಸ್‌’ ನಿಧಿ ತೆರೆದಿದ್ದರು. ಮಾಹಿತಿಯ ಪ್ರಕಾರ, ‘ಪಿಎಂ-ಕೇರ್ಸ್‌’ಗೆ ಬರೋಬ್ಬರಿ 12,691.82 ಕೋಟಿ ರೂ. ಹಣ ಹರಿದುಬಂದಿದೆ. ಈ ಮೊತ್ತದಲ್ಲಿ, ಹಣಕಾಸು ವರ್ಷದಲ್ಲಿ ವಿವಿಧ ಕೋವಿಡ್-19 ಸಂಬಂಧಿತ ಯೋಜನೆಗಳಿಗಾಗಿ 2020-21ರಲ್ಲಿ 3,976.17 ಕೋಟಿ ರೂ. ಹಾಗೂ 2021-22ನೇ 3,716.29 ಕೋಟಿ ರೂ.ಗಳನ್ನು ಸರ್ಕಾರ ಖರ್ಚು ಮಾಡಲಾಗಿದೆ. ಅಲ್ಲದೆ 5,415.65 ಕೋಟಿ ರೂ.ಗಳು ಸರ್ಕಾರದ ಬಳಿ ಇದೆ ಎಂದು ವರದಿಯಾಗಿದೆ.

ಆದರೆ, ಪಿಎಂ-ಕೇರ್ಸ್ ಸಾರ್ವಜನಿಕ ನಿಧಿಯಲ್ಲ. ಅದರ ಬಗ್ಗೆ ಮಾಹಿತಿಯನ್ನು ಸಾರ್ವಜನಿಕಗೊಳಿಸಲು ಸಾಧ್ಯವಿಲ್ಲ ಎಂದೂ ಹೇಳಿರುವ ಮೋದಿ ಸರ್ಕಾರ, ಆ ಹಣದ ಮಾಹಿತಿಯನ್ನು ಗೌಪ್ಯವಾಗಿ ಇರಿಸಿದೆ. ಪಿಎಂ-ಕೇರ್ಸ್‌ನಲ್ಲಿ ಉಳಿಸಿದ್ದ 5,415 ಕೋಟಿ ರೂ. ಏನಾಯಿತು ಎಂಬ ಪ್ರಶ್ನೆಗೆ ಈವರೆಗೆ ಉತ್ತರ ದೊರೆತಿಲ್ಲ.

ಹೀಗಾಗಿ, ಮೋದಿ ಅವರೇ ಸ್ಥಾಪಿಸಿದ ಪಿಎಂ-ಕೇರ್ಸ್‌ ಕತೆಯನ್ನೇ ಮೋದಿ ಸರ್ಕಾರ ಜನರಿಗೆ ತಿಳಿಸಲು ಸಿದ್ದರಿಲ್ಲದಿರುವಾಗ, ಕರ್ನಾಟಕ ಕೋವಿಡ್ ಹಗರಣದ ಬಗ್ಗೆ ಮೋದಿ ಅವರಿಂದ ಕ್ರಮ ನಿರೀಕ್ಷಿಸಲು ಸಾಧ್ಯವೇ?

ಅದೇನೆ ಇರಲಿ, ರಾಜ್ಯ ಕಾಂಗ್ರೆಸ್‌ ಸರ್ಕಾರ ನೇಮಿಸಿದ್ದ ತನಿಖಾ ಆಯೋಗವು ಸದ್ಯ ಮಧ್ಯಂತರ ವರದಿ ಸಲ್ಲಿಸಿದೆ. ವರದಿಯಲ್ಲಿ ಏನಿದೆ? ಅಕ್ರಮ, ಹಗರಣ ಸಾಬೀತಾಗಿದೆಯೇ? ಆಯೋಗವು ಕ್ರಮಕ್ಕೆ ಶಿಫಾರಸು ಮಾಡಿದೆಯೇ? ಕಾದು ನೋಡೋಣ…

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

SIR | ಮತ ಡಿಲೀಟ್‌ ಮಾಡಲು ಒಳಸಂಚು ಆರೋಪ : ಭಾಲ್ಕಿಯಲ್ಲಿ 32 ಜನರ ವಿರುದ್ಧ FIR

ಮತದಾರರ ಪಟ್ಟಿಯ ಸಮಗ್ರ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಯಾವುದೇ ಆಧಾರ...

ಮಂಗಳೂರು ಎಂಆರ್‌ಪಿಎಲ್ ದುರಂತ: ಮೃತ ಕಾರ್ಮಿಕನ ಕುಟುಂಬಕ್ಕೆ ₹1.20 ಕೋಟಿ ಪರಿಹಾರ ಘೋಷಣೆ

ಮಂಗಳೂರಿನ ಎಂಆರ್‌‌ಪಿಎಲ್ (MRPL) ಕಾರ್ಖಾನೆಯಲ್ಲಿ ನಡೆದ ದಾರುಣ ಅಪಘಾತದಲ್ಲಿ ಜೀವ ಕಳೆದುಕೊಂಡ...

‘ಎಫ್ಐಆರ್ ದಾಖಲಾಗುವವರೆಗೂ ಚುನಾವಣಾ ಆಯೋಗದ ಕಚೇರಿಯಿಂದ ಕದಲೋದೆ ಇಲ್ಲ’: ಪಟ್ಟು ಹಿಡಿದು ಕುಳಿತ ಸಿಎಂ

'ಎಫ್ಐಆರ್ ದಾಖಲಾಗುವವರೆಗೂ ಕದಲುವುದೇ ಇಲ್ಲ' ಎಂದು ಸ್ಪಷ್ಟವಾಗಿ ಹೇಳಿರುವ ಮುಖ್ಯಮಂತ್ರಿ ಡಿ.ಕೆ....