ಪ್ರಧಾನಿ ಮೋದಿ ಅವರ ಪ್ರಚಾರ ಅಭಿಯಾನಕ್ಕೆ ಅನುಗುಣವಾಗಿ ವರ್ತಿಸುವಂತೆ ಪಶ್ಚಿಮ ಬಂಗಾಳ ಸರ್ಕಾರವನ್ನು ಕೇಂದ್ರವು ಒತ್ತಾಯಿಸುತ್ತಿದೆ. ಇಂತಹ ಅಸಂಬದ್ದ ಪ್ರಯತ್ನದ ಭಾಗವಾಗಿ, ರಾಜ್ಯಾದ್ಯಂತ ಪಡಿತರ ಅಂಗಡಿಗಳಲ್ಲಿ ಮೋದಿ ಚಿತ್ರ ಹಾಕಬೇಕೆಂದು ಹೇಳಿದೆ. ಅದನ್ನು ಪಾಲಿಸದ ಕಾರಣಕ್ಕಾಗಿ, ಬಂಗಾಳ ಸರ್ಕಾರಕ್ಕೆ ಕೇಂದ್ರ ಸರ್ಕಾರ ನೀಡಬೇಕಿದ್ದ 7,000 ಕೋಟಿ ರೂ.ಗಳನ್ನು ತಡೆಹಿಡಿದಿದೆ.
ಪಶ್ಚಿಮ ಬಂಗಾಳದ ಎಲ್ಲ ಪಡಿತರ ಅಂಗಡಿಗಳಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಲಾಂಛನ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋಗಳನ್ನು ಒಳಗೊಂಡ ಫಲಕಗಳು ಮತ್ತು ಫ್ಲೆಕ್ಸ್‌ಗಳನ್ನು ಹಾಕಬೇಕೆಂದು ಕೇಂದ್ರವು ಹೇಳಿದೆ. ಕೇಂದ್ರ ಸರ್ಕಾರದ ನಿರ್ದೇಶನವನ್ನು ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜಾರಿಗೆ ತಂದಿಲ್ಲ. ಹೀಗಾಗಿ, ರಾಜ್ಯಕ್ಕೆ ನೀಡಬೇಕಿದ್ದ ಹಣವನ್ನು ತಡೆಹಿಡಿಯಲಾಗಿದೆ ಎಂದು ‘ದಿ ವೈರ್‘ ವರದಿ ಮಾಡಿದೆ.
ಕೇಂದ್ರ ಸರ್ಕಾರದ ಯೋಜನೆಗಳಿಗೆ ಭತ್ತ ಖರೀದಿಸಲು ರಾಜ್ಯಕ್ಕೆ ನೀಡಬೇಕಿದ್ದ ಹಣದಲ್ಲಿ 7,000 ಕೋಟಿ ರೂ. ಮೊತ್ತವನ್ನು ಪಾವತಿಸಿಲ್ಲ. ಕೇಂದ್ರ ಸರ್ಕಾರ ಹಣ ಪಾವತಿಸದೇ ಇರುವುದರಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ರಾಜ್ಯದಲ್ಲಿ ಭತ್ತ ಸಂಗ್ರಹಣೆಯ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಬಂಗಾಳದ ಸರ್ಕಾರಿ ಅಧಿಕಾರಿಗಳು ಹೇಳಿದ್ದಾರೆ.
ಕೇಂದ್ರದ ಎನ್‌ಎಫ್‌ಎಸ್‌ಎ ಯೋಜನೆಗಳಿಗಾಗಿ ಈ ಹಣಕಾಸು ವರ್ಷದಲ್ಲಿ ರಾಜ್ಯ ಸರ್ಕಾರವು ಈಗಾಗಲೇ 8.52 ಲಕ್ಷ ಟನ್‌ಗಳಷ್ಟು ಭತ್ತ ಸಂಗ್ರಹಿಸಿದೆ. ಈ ವರ್ಷ, ರಾಜ್ಯ ಸರ್ಕಾರವು ವಾರ್ಷಿಕ 70 ಲಕ್ಷ ಟನ್ ಭತ್ತ ಸಂಗ್ರಹಿಸುವ ಗುರಿಯನ್ನು ಹೊಂದಿದೆ. ಇದರಲ್ಲಿ ಕೇಂದ್ರದ ಯೋಜನೆಗಾಗಿನ 22 ಲಕ್ಷ ಟನ್ ಭತ್ತವೂ ಒಳಗೊಂಡಿದೆ. ಆದರೆ, ಕೇಂದ್ರದ ಪರವಾಗಿ ರಾಜ್ಯ ಸರ್ಕಾರ ಖರೀದಿಸಿದ ಭತ್ತಕ್ಕೆ ಕೇಂದ್ರ ಇನ್ನೂ ಹಣ ಪಾವತಿ ಮಾಡಿಲ್ಲ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವರದಿ ಓದಿದ್ದೀರಾ?: ಆರ್‌ಎಸ್‌ಎಸ್‌ಗೆ ಹಣ ನೀಡುವ ಎನ್‌ಆರ್‌ಐ ಬ್ರಾಹ್ಮಣರು ಮಾಂಸ ತಿನ್ನುತ್ತಿಲ್ಲವೇ? : ‘ಅನ್ನಪೂರ್ಣಿ’ ವಿವಾದದ ಬಗ್ಗೆ ಗಾಯಕ ಟಿ.ಎಂ.ಕೃಷ್ಣ
ವರದಿಯ ಪ್ರಕಾರ, ರಾಜ್ಯವು ತನ್ನ ವಾರ್ಷಿಕ ಗುರಿಯ 70 ಲಕ್ಷ ಟನ್‌ಗಳ ಪೈಕಿ 80%ರಷ್ಟು ಭತ್ತವನ್ನು ಈ ಋತುವಿನಲ್ಲಿ ಸಂಗ್ರಹಿಸುವ ಗುರಿ ಹೊಂದಿದೆ. ಅಂದರೆ, ಫೆಬ್ರವರಿ ಅಂತ್ಯದೊಳಗೆ ಹೆಚ್ಚಿನ ಪ್ರಮಾಣದ ಭತ್ತವನ್ನು ರಾಜ್ಯ ಸಂಗ್ರಹಿಸಬೇಕಿದೆ. ಈ ತಿಂಗಳಲ್ಲಿ ರಾಜ್ಯವು ಸಾಕಷ್ಟು ಹಣವನ್ನು ಕೇಂದ್ರದಿಂದ ಪಡೆಯದಿದ್ದರೆ, ಸಂಗ್ರಹಣೆ ಪ್ರಕ್ರಿಯೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಹೇಳಲಾಗಿದೆ.
ಪ್ರಚಾರಕ್ಕಾಗಿನ ಜಗಳ ಇದೇ ಮೊದಲಲ್ಲ
ನರೇಂದ್ರ ಮೋದಿ ಸರ್ಕಾರವು ಬ್ರ್ಯಾಂಡಿಂಗ್ (ಪ್ರಚಾರ) ಜಗಳದಿಂದಾಗಿ ಪಶ್ಚಿಮ ಬಂಗಾಳಕ್ಕೆ ಹಣ ನೀಡುವುದನ್ನು ತಡೆಹಿಡಿಯುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ನವೆಂಬರ್‌ನಲ್ಲಿ, ಆರೋಗ್ಯ ಕೇಂದ್ರಗಳ ಬಣ್ಣದ ಕಾರಣಕ್ಕಾಗಿಯೂ ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ಅಡಿಯಲ್ಲಿ ಹಣ ಪಾವತಿ ತಡೆಯಲಾಗಿತ್ತು. ಆಗ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಬ್ಯಾನರ್ಜಿ ಅವರು ಪ್ರಧಾನಿಗೆ ಪತ್ರ ಬರೆದಿದ್ದರು.
“ಪಶ್ಚಿಮ ಬಂಗಾಳಕ್ಕೆ ಎನ್‌ಎಚ್‌ಎಂ ಹಣವನ್ನು ತಕ್ಷಣ ಬಿಡುಗಡೆ ಮಾಡಲು ಹಾಗೂ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳಿಗೆ ನಿರ್ದಿಷ್ಟ ಬಣ್ಣವನ್ನೇ ಬಳಿಯಬೇಕೆಂಬ ಷರತ್ತುಗಳನ್ನು ತೆಗೆದುಹಾಕಲು ತಾವು ಮಧ್ಯಪ್ರವೇಶಿಸುವಂತೆ ಮನಃಪೂರ್ವಕವಾಗಿ ವಿನಂತಿಸುತ್ತೇನೆ. ಹಣ ಬಿಡುಗಡೆಯಾದ ಪರಿಣಾಮ, ಬಡ ಜನರು ಆರೋಗ್ಯ ಸೇವೆಗಳ ಕೊರತೆಯಿಂದ ಬಳಲುತ್ತಿದ್ದಾರೆ” ಎಂದು ಮಮತಾ ಬ್ಯಾನರ್ಜಿ ಪತ್ರದಲ್ಲಿ ಉಲ್ಲೇಖಿಸಿದ್ದರು.
ಕೇಂದ್ರ ಸರ್ಕಾರವು ಮೆಟ್ರೋ ನಿಲ್ದಾಣಗಳು ಮತ್ತು ಆರೋಗ್ಯ ಸೌಲಭ್ಯಗಳು ಸೇರಿದಂತೆ ಕೇಂದ್ರ ಸರ್ಕಾರಿ ಸಂಸ್ಥೆಗಳಿಗೆ ‘ಕೇಸರಿ’ ಬಣ್ಣ ಬಳಿಯಲು ಯೋಜಿಸಿತ್ತು. ಆದರೆ, ಬಂಗಾಳ ಸರ್ಕಾರವು ಈ ಕ್ರಮವನ್ನು ವಿರೋಧಿಸಿತ್ತು. ‘ಕೇಂದ್ರ ಸರ್ಕಾರಿ ಸಂಸ್ಥೆಗಳ ಕಟ್ಟಡಗಳಿಗೆ 2011ರಿಂದ ರಾಜ್ಯದ ಬಣ್ಣಗಳನ್ನೇ ಬಳಿಯಲಾಗುತ್ತಿದೆ’ ಎಂದಿದ್ದ ಬಂಗಾಳ ಸರ್ಕಾರ ಕೇಸರಿ ಬಣ್ಣ ಬಳಿಯಲು ನಿರಾಕರಿಸಿತ್ತು.