ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಮಂಡಿಸಿದ ಬಜೆಟ್‌ನಲ್ಲಿ ಮನರೇಗಾ ಯೋಜನೆಗೆ ಕೇವಲ 86,000 ಕೋಟಿ ರೂ.ಗಳನ್ನು ಮಾತ್ರವೇ ನೀಡಲಾಗಿದೆ.
ದೇಶದಲ್ಲಿ ಕೂಲಿ ಕಾರ್ಮಿಕರಿಗೆ 100 ದಿನಗಳ ಉದ್ಯೋಗ ಖಾತರಿ ನೀಡುವ ಯೋಜನೆಗೆ ಕಳೆದ ಫೆಬ್ರವರಿಯಲ್ಲಿ ಮಂಡಿಸಲಾಗಿದ್ದ ಬಜೆಟ್‌ನಲ್ಲಿ 60,000 ಕೋಟಿ ರೂ. ಮೀಸಲಿಡಲಾಗಿತ್ತು. ಇದೀಗ, 26,000 ರೂ. ಹೆಚ್ಚುವರಿಯಾಗಿ ನೀಡುವ ಮೂಲಕ 86,000 ಕೋಟಿ ರೂ. ನೀಡಲಾಗಿದೆ.
ಅದಾಗ್ಯೂ, ಈ ಮೊತ್ತವು 2023ರ ಆರ್ಥಿಕ ವರ್ಷದಲ್ಲಿ ವೆಚ್ಚ ಮಾಡಲಾಗಿದ್ದ ಮೊತ್ತಕ್ಕಿಂತ ಬರೋಬ್ಬರಿ 12,000 ಕೋಟಿ ರೂ. ಕಡಿತ ಮಾಡಲಾಗಿದೆ. 2023ರ ಆರ್ಥಿಕ ವರ್ಷದಲ್ಲಿ ಮನರೇಗಾಗಾಗಿ 98,000 ಕೋಟಿ ರೂ. ವ್ಯಯಿಸಲಾಗಿತ್ತು.
ಗಮನಾರ್ಹವೆಂದರೆ, 2021ರ ಆರ್ಥಿಕ ವರ್ಷದಲ್ಲಿ 1.11 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡಲಾಗಿತ್ತು. ವರ್ಷದಿಂದ ವರ್ಷಕ್ಕೆ ಉದ್ಯೋಗ ಹರಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಮನರೇಗಾ ಯೋಜನೆಯಡಿ ಹೆಚ್ಚಿನ ಜನರು ನೋಂದಾಯಿಸಿಕೊಳ್ಳುತ್ತಿದ್ದಾರೆ. ಇಂತಹ ಸಮಯದಲ್ಲಿ ಯೋಜನೆಗೆ ಹೆಚ್ಚಿನ ಅನುದಾನ ಮೀಸಲಿಡಬೇಕು. ಆದರೆ, ಕೇಂದ್ರ ಸರ್ಕಾರ, ಮನರೇಗಾ ಅನುದಾನವನ್ನ ವರ್ಷದಿಂದ ವರ್ಷಕ್ಕೆ ಮೊಕಟುಗೊಳಿಸುತ್ತಿದೆ.