ಕೇಂದ್ರ ಸರ್ಕಾರ, ಕಾಂಗ್ರೆಸ್ ಹೈಕಮಾಂಡ್ ಪ್ಯಾಲೆಸ್ತೀನ್ ಪರ: ರಾಜ್ಯ ಸರ್ಕಾರ ಯಾರ ಪರ?

Date:

Advertisements

ಇಸ್ರೇಲ್-ಹಮಾಸ್ ಸಂಘರ್ಷ ಆರಂಭವಾಗಿ ಅ.26ಕ್ಕೆ 19 ದಿನಗಳು ಉರುಳಿವೆ. ಸಂಘರ್ಷ ಇನ್ನೂ ನಿಂತಿಲ್ಲ. ಇಸ್ರೇಲ್ ಗಾಝಾದ ಮೇಲೆ ಮನಸೋ ಇಚ್ಛೆ ವೈಮಾನಿಕ ದಾಳಿ ನಡೆಸುತ್ತಿದ್ದು, ಈವರೆಗೆ ಸುಮಾರು ಮೂರು ಸಾವಿರ ಮಕ್ಕಳು ಸೇರಿದಂತೆ ಸುಮಾರು ಏಳು ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರೆ, ಸಾವಿರಾರು ಮಂದಿ ಗಾಯಗೊಂಡಿದ್ದಾರೆ.

ಈ ನಡುವೆ ಜಗತ್ತಿನ ಮೂಲೆಮೂಲೆಗಳಲ್ಲಿ ಪ್ಯಾಲೆಸ್ತೀನ್ ಪರ ಪ್ರತಿಭಟನೆ ನಡೆಯುತ್ತಿದೆ. ಇಸ್ರೇಲ್ ತಕ್ಷಣವೇ ಯುದ್ಧವನ್ನು ನಿಲ್ಲಿಸಬೇಕು. ಜೊತೆಗೆ, ಪ್ಯಾಲೆಸ್ತೀನಿಯರಿಗಾಗಿ ಅವರದೇ ಆದ ಒಂದು ಹೊಸ ಸ್ವಾಯತ್ತ ರಾಷ್ಟ್ರವನ್ನು ಕಟ್ಟಿ ಕೊಡುವ ಜವಾಬ್ದಾರಿಯನ್ನು ಅಂತಾರಾಷ್ಟ್ರೀಯ ಸಮುದಾಯ ಹೊತ್ತುಕೊಳ್ಳಬೇಕು ಎಂಬ ಆಗ್ರಹ ವ್ಯಕ್ತವಾಗುತ್ತಿದೆ.

gaza girl

ಇದರ ಭಾಗವಾಗಿಯೇ ನಮ್ಮ ದೇಶದಲ್ಲೂ ಪ್ಯಾಲೆಸ್ತೀನ್ ಪರ ಪ್ರತಿಭಟನೆಗಳು ನಡೆಯುತ್ತಿದೆ. ಭಾರತವು ದೀರ್ಘಾವಧಿಯಿಂದ ಪ್ಯಾಲೆಸ್ತೀನ್ ಪರ ಹಿತಾಸಕ್ತಿಯನ್ನು ಬೆಂಬಲಿಸುವ ಮತ್ತು ಮಾನವ ಹಕ್ಕುಗಳನ್ನು ಎತ್ತಿ ಹಿಡಿಯುವ ನೀತಿಯನ್ನು ಅನುಸರಿಸಿದೆ.

Advertisements

ಅಲ್ಲದೇ, ಇತ್ತೀಚೆಗೆ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಮಾಧ್ಯಮಗಳೊಂದಿಗೆ ಮಾತನಾಡಿ, ‘ಭಾರತವು ಯಾವಾಗಲೂ ಪ್ಯಾಲೆಸ್ತೀನ್ ಸಾರ್ವಭೌಮ, ಸ್ವತಂತ್ರ ಮತ್ತು ಕಾರ್ಯಸಾಧ್ಯವಾದ ರಾಜ್ಯವನ್ನು ಸ್ಥಾಪಿಸಲು ನೇರ ಮಾತುಕತೆಗಳ ಪುನರಾರಂಭವನ್ನು ಪ್ರತಿಪಾದಿಸುತ್ತದೆ ಹಾಗೂ ಇಸ್ರೇಲ್‌ನೊಂದಿಗೆ ಅಕ್ಕಪಕ್ಕದಲ್ಲಿ, ಶಾಂತಿಯಿಂದ ಸುರಕ್ಷಿತ ಮತ್ತು ಮಾನ್ಯತೆ ಪಡೆದ ಗಡಿಗಳಲ್ಲಿ ವಾಸಿಸುವ ಹಾಗೆ ಪ್ರತಿಪಾದಿಸುತ್ತದೆ’ ಎಂದು ಹೇಳಿಕೆ ನೀಡಿದ್ದರು. ಜೊತೆಗೆ ಕೇಂದ್ರ ಸರ್ಕಾರವು ಇತ್ತೀಚೆಗಷ್ಟೇ ಗಾಝಾದ ಸಂತ್ರಸ್ತರಿಗೆ ಅಗತ್ಯ ನೆರವನ್ನು ಕೂಡ ಕಳುಹಿಸಿಕೊಟ್ಟಿತ್ತು.

WhatsApp Image 2023 10 26 at 7.13.52 PM

ಇತ್ತೀಚೆಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಇದೇ ವಿಚಾರವಾಗಿ ತನ್ನ ನಿಲುವನ್ನು ಪ್ರಕಟಿಸುತ್ತಾ, ಇಸ್ರೇಲ್‌ ನಾಗರಿಕರ ಮೇಲಿನ ಬರ್ಬರ ದಾಳಿಯನ್ನು ಪಕ್ಷ ಖಂಡಿಸುತ್ತದೆ. ಜೊತೆಗೆ ಪ್ಯಾಲೆಸ್ತೀನ್ ಜನರ ಹಕ್ಕುಗಳ ಪರವಾಗಿ ಸುದೀರ್ಘ ಸಮಯದಿಂದ ನೀಡುತ್ತಾ ಬಂದಿರುವ ಬೆಂಬಲವನ್ನು ಪುನರುಚ್ಚರಿಸುತ್ತದೆ. ಪ್ಯಾಲೆಸ್ತೀನ್ ಜನರ ಭೂಮಿ, ಸ್ವಯಂ ಸರ್ಕಾರ ಮತ್ತು ಘನತೆ ಹಾಗೂ ಗೌರವದೊಂದಿಗೆ ಬದುಕುವ ಹಕ್ಕುಗಳ ಕಡೆಗಿನ ತನ್ನ ದೀರ್ಘ ಕಾಲದ ಬೆಂಬಲವನ್ನು ಸಿಡಬ್ಲ್ಯೂಸಿ ಪುನರುಚ್ಚರಿಸುತ್ತದೆ. ಈ ಕೂಡಲೇ ಕದನ ವಿರಾಮ ಘೋಷಿಸಲು ಹಾಗೂ ಈಗಿನ ಸಂಘರ್ಷ ಉದ್ಭವಿಸಲು ಕಾರಣವಾದಂತಹ ಪ್ರಮುಖ ಸಮಸ್ಯೆಗಳು ಸೇರಿದಂತೆ ಎಲ್ಲ ವಿವಾದಗಳನ್ನು ಇತ್ಯರ್ಥಪಡಿಸಿಕೊಳ್ಳಲು ಮಾತುಕತೆ ನಡೆಸಬೇಕು ಎಂದು ಸಿಡಬ್ಲ್ಯೂಸಿ ತಿಳಿಸಿತ್ತು.

cwc meeting

ಆದರೆ, ಈ ಎಲ್ಲ ಬೆಳವಣಿಗೆಗಳ ನಡುವೆ ರಾಜ್ಯದಲ್ಲಿ ಇಸ್ರೇಲ್ ದಾಳಿ, ದೌರ್ಜನ್ಯ ವಿರೋಧಿಸಿ ಪ್ಯಾಲೆಸ್ತೀನ್ ಪರ ಪ್ರತಿಭಟನೆ, ವಾಟ್ಸಪ್ ಸ್ಟೇಟಸ್ ಹಾಕಿದವರ ಮೇಲೆ ಕರ್ನಾಟಕದ ಪೊಲೀಸರು ಸ್ವಯಂಪ್ರೇರಿತ ಎಫ್ಐಆರ್ ದಾಖಲಿಸುತ್ತಿದ್ದಾರೆ.

ಸಿಕ್ಕಿರುವ ಮಾಹಿತಿಯ ಪ್ರಕಾರ ಇದೇ ವಿಚಾರದ ಭಾಗವಾಗಿ ಈವರೆಗೆ ತುಮಕೂರು, ಬೆಂಗಳೂರು, ಮಂಗಳೂರು, ಹೊಸಪೇಟೆ ಸೇರಿದಂತೆ ನಾಲ್ಕು ಕಡೆಗಳಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಬೆಳವಣಿಗೆಯು ಈಗ ಸರ್ಕಾರ ಮತ್ತು ಪೊಲೀಸರ ನಡವಳಿಕೆಗಳ ಬಗ್ಗೆಯೇ ಸಾರ್ವಜನಿಕರಲ್ಲಿ ಅದರಲ್ಲೂ ಹೋರಾಟಗಾರರಲ್ಲಿ ಅನುಮಾನ ಹುಟ್ಟುವಂತೆ ಮಾಡಿದೆ. ಯಾಕೆಂದರೆ, ಕೇಂದ್ರ ಸರ್ಕಾರ, ಕಾಂಗ್ರೆಸ್ ಹೈಕಮಾಂಡ್ ಪ್ಯಾಲೆಸ್ತೀನ್ ಪರ ತನ್ನ ನಿಲುವು ಪ್ರಕಟಿಸಿದ್ದರೂ ಕೂಡ, ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಯಾರ ಪರ? ಇದೆ ಎಂದು ನೆಟ್ಟಿಗರು ಸೋಷಿಯಲ್ ಮೀಡಿಯಾಗಳಲ್ಲಿ ಪ್ರಶ್ನಿಸುತ್ತಿದ್ದಾರೆ.

palestine 1

ತುಮಕೂರಿನಲ್ಲಿ ದಾಖಲಾದ ಎಫ್‌ಐಆರ್‌ನಲ್ಲೇನಿದೆ?
ಇಸ್ರೇಲ್ ಯುದ್ಧ ನಿಲ್ಲಿಸಿ, ಜನರ ಜೀವ ರಕ್ಷಿಸುವಂತೆ ಒತ್ತಾಯಿಸಿ ಅ. 20ರಂದು ಪ್ರತಿಭಟನೆ ನಡೆಸಿದ್ದ ಪ್ರಗತಿಪರರು, ಸಿಪಿಎಂ, ಸಿಪಿಐ ಮುಖಂಡರ ವಿರುದ್ಧ ತುಮಕೂರಿನ ತಿಲಕ್ ಪಾರ್ಕ್‌ ಠಾಣೆಯ ಎಸ್‌ಐ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದು, ‘ಪ್ರತಿಭಟನೆ ಸಮಯದಲ್ಲಿ ಉದ್ದೇಶ ಪೂರ್ವಕವಾಗಿ ಕೋಮು ಭಾವನೆಗಳಿಗೆ ಧಕ್ಕೆ ಉಂಟಾಗುವ ರೀತಿಯಲ್ಲಿ ಭಾಷಣ ಮಾಡಿದ್ದಾರೆ’ ಎಂಬ ಆರೋಪ ಹೊರಿಸಿದ್ದಾರೆ.

ತುಮಕೂರು 9

ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸೈಯದ್‌ ಮುಜೀಬ್, ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ಪ್ರಗತಿಪರ ಚಿಂತಕ ಸಿ.ಯತಿರಾಜು, ದಲಿತ ಸಂಘರ್ಷ ಸಮಿತಿಯ ಪಿ.ಎನ್‌. ರಾಮಯ್ಯ, ಮುಖಂಡ ತಾಜುದ್ದೀನ್ ಷರೀಫ್, ಮತ್ತಿತರರ ವಿರುದ್ಧ ಕಲಂ 295 (ಎ) ಅಡಿ ದೂರು ದಾಖಲಾಗಿದೆ.

ಈ ಬಗ್ಗೆ ಈ ದಿನ.ಕಾಮ್ ತಿಲಕ್ ಪಾರ್ಕ್‌ ಠಾಣೆಯ ಎಸ್‌ಐ ಅವರನ್ನು ಸಂಪರ್ಕಿಸಿ ಕಾರಣ ಕೇಳಿದಾಗ, ‘ಅದು 10 ನಿಮಿಷದ ನಂತರ ತಿಳಿಸುತ್ತೇನೆ’ ಎಂದು ಹೇಳಿದರು. ಆ ಬಳಿಕ ಮೂರು ನಾಲ್ಕು ಬಾರಿ ಸಂಪರ್ಕಿಸಿದರೂ ಕರೆಗೆ ಅವರು ಉತ್ತರಿಸಿಲ್ಲ.

ಈ ನಡುವೆ ಹಾಕಿರುವ ಮೊಕದ್ದಮೆಯನ್ನು ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ತುಮಕೂರು ಜಿಲ್ಲಾ ಅಡಿಷನಲ್ ಎಸ್ ಪಿ ಮರಿಯಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದ್ದು, ಕೇಸಿನಲ್ಲಿ ದಾಖಲಿಸಿರುವ ವಿಚಾರವು ಸತ್ಯಕ್ಕೆ ದೂರವಾದ ವಿಚಾರ. ಆದ್ದರಿಂದ ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ.

WhatsApp Image 2023 10 26 at 8.23.36 PM

ತುಮಕೂರಿನ ಅತ್ಯಂತ ಹಿರಿಯ ಚಿಂತಕ ಯತಿರಾಜ್ ನಂಥವರ ಮೇಲೆ ‘ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆ ಕೆರಳಿಸುವ ಭಾಷಣ ಮಾಡಿದ ಕೇಸನ್ನು, ಮೇಲಧಿಕಾರಿಗಳು ಮತ್ತು ಕಾನೂನು ತಜ್ಞರ ಸಲಹೆ ಮೇರೆಗೆ’ ಹಾಕಲಾಗಿದೆ ಎಂದು ಉಲ್ಲೇಖಿಸಿರುವುದು ಸರ್ಕಾರ ಬದಲಾದರೂ ಅಧಿಕಾರಿಗಳ ನಡೆ ಬದಲಾಗಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ತುಮಕೂರಿನ ಮಾನವೀಯತೆ, ಶಾಂತಿ ಕಾಪಾಡುವ ಉದ್ದೇಶದಿಂದ ಶ್ರಮ ಪಟ್ಟ ಮುಖಂಡರಿಗೆ ಈ ಕಾಂಗ್ರೆಸ್ ಸರ್ಕಾರ ಕೊಟ್ಟಿರುವ ಬಹುಮಾನ ಎಂಬುದು ಸ್ಥಳೀಯ ಹೋರಾಟಗಾರರ ವಾದ.

ಪ್ಯಾಲೆಸ್ತೀನ್ ಪರ ವಿಡಿಯೋ ಹಂಚಿದ್ದಕ್ಕೆ ಮುಚ್ಚಳಿಕೆ ಬರೆಸಿದ ಹೊಸಪೇಟೆ ಪೊಲೀಸರು!
ಇದು ರಾಜ್ಯದಲ್ಲಿ ಸುದ್ದಿಯಾದ ಮೊದಲ ಪ್ರಕರಣ. ‘ಪ್ಯಾಲೆಸ್ತೀನ್ ಝಿಂದಾಬಾದ್’ ಎಂಬ ಶೀರ್ಷಿಕೆಯೊಂದಿಗೆ, ‘ಓ ಲಾರ್ಡ್, ದಯವಿಟ್ಟು ಪ್ಯಾಲೆಸ್ತೀನ್ ಜನರನ್ನು ರಕ್ಷಿಸಿ’ ಎಂದು ಸ್ಟೇಟಸ್ ಹಾಕಿದ್ದ ವಿಜಯನಗರ ಜಿಲ್ಲೆಯ ಹೊಸಪೇಟೆಯ 20 ವರ್ಷದ ಮುಸ್ಲಿಂ ಯುವಕನಿಂದ ಮುಚ್ಚಳಿಕೆ ಬರೆಸಿದ್ದ ಘಟನೆಯೂ ನಡೆದಿತ್ತು. ಯುವಕನನ್ನು ಠಾಣೆಗೆ ಕರೆಸಿದ್ದ ಪೊಲೀಸರು, ಈ ರೀತಿಯ ವಿಷಯವನ್ನು ಪೋಸ್ಟ್ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ, ಬಳಿಕ ಪೊಲೀಸರೇ ಆ ಸ್ಟೇಟಸ್ ಡಿಲೀಟ್ ಮಾಡಿಸಿದ್ದಾರೆ.

WhatsApp Image 2023 10 26 at 9.59.25 PM

ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಪ್ಯಾಲೆಸ್ತೀನ್‌ ಪರವಾಗಿ ಪ್ರತಿಭಟನೆ ನಡೆಸಿ, ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಬಹುತ್ವ ಕರ್ನಾಟಕ ಸಂಘಟನೆಯ ಸದಸ್ಯರ ಮೇಲೆ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಈ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿದ್ದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಠಾಣಾಧಿಕಾರಿ, ‘ಯಾವುದೇ ಅನುಮತಿ ಪಡೆಯದೇ ಪ್ರತಿಭಟನೆ ನಡೆಸಿದ್ದಾರೆ. ನೂರಾರು ಮಂದಿ ಸಾರ್ವಜನಿಕರು ಇದರಲ್ಲಿ ಭಾಗವಹಿಸಿದ್ದರು. ನಿಯಮ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಿದ್ದೇವೆ’ ಎಂದಿದ್ದರು.

ಮಂಗಳೂರಿನಲ್ಲಿ ಹಮಾಸ್ ಪರ ವಿಡಿಯೋ ಹಾಕಿದ ಕಾರಣಕ್ಕೆ ಝಾಕಿರ್ ಯಾನೆ ಜಾಕಿ (58) ಎಂಬವರನ್ನು ಬಂದರು ಪೊಲೀಸ್ ಠಾಣೆಯ ಪಿಎಸ್‌ಐ ವಿನಾಯಕ ತೋರಗಲ್ ಸ್ವಯಂ ದೂರು ದಾಖಲಿಸಿಕೊಂಡು ಆತನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಅಲ್ಲದೇ, ಕಲಬುರಗಿಯಲ್ಲಿ ಪ್ಯಾಲೆಸ್ತೀನ್ ಪರ ಪ್ರತಿಭಟನೆ ನಡೆಸಿದವರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು.

 

ಅ. 20ರಂದು ಪ್ಯಾಲೆಸ್ತೀನ್‌ನಲ್ಲಿ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ಯಾಲೆಸ್ತೀನ್ ಪರ ಬೀದಿಗಿಳಿದ ಕಮ್ಯುನಿಸ್ಟ್ ಸಂಘಟನೆಗಳ ಹೋರಾಟಗಾರರನ್ನು ವಶಕ್ಕೆ ಪಡೆದಿದ್ದರು.

cmparamesh

ಈ ಎಲ್ಲ ಬೆಳವಣಿಗೆಗಳ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿದ ಸಾಮಾಜಿಕ ಹೋರಾಟಗಾರ ಶ್ರೀಪಾದ್ ಭಟ್, ಇಸ್ರೇಲ್-ಪ್ಯಾಲೆಸ್ತೀನ್ ವಿಚಾರವಾಗಿ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರದ ನಡೆ ನಿರಾಶಾದಾಯಕ. ಅ.28ರ ಶನಿವಾರದಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಜನಪರ ಸಂಘಟನೆಗಳು ಪ್ಯಾಲೆಸ್ತೀನ್ ಪರ ಹೋರಾಟ ಆಯೋಜಿಸಿತ್ತು. ಆದರೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಕಾರಣ ಕೇಳಿದರೆ ಪೊಲೀಸರಿಂದ ಎರಡು ಉತ್ತರ ಬರುತ್ತಿದೆ. ಮೊದಲನೆಯದು ಕೇವಲ ಪ್ಯಾಲೆಸ್ತೀನ್ ಪರ ಯಾಕೆ ಮಾಡುತ್ತೀರಾ? ಎರಡೂ ಕಡೆಯನ್ನು ಖಂಡಿಸಿ ಎನ್ನುತ್ತಿದ್ದಾರೆ. ಇನ್ನೊಂದು ನೀವು ಪ್ರತಿಭಟನೆ ನಡೆಸಿದರೆ ಬಲಪಂಥೀಯರು ವಿರೋಧ ವ್ಯಕ್ತಪಡಿಸುತ್ತಾರೆ. ಇದರಿಂದ ಶಾಂತಿ-ಸುವ್ಯವಸ್ಥೆಗೆ ಭಂಗವಾಗುತ್ತದೆ ಎಂದು ತಿಳಿಸುತ್ತಿದ್ದಾರೆ. ಹಾಗಾದರೆ, ಪೊಲೀಸರು ಮತ್ತು ಗೃಹ ಇಲಾಖೆ ಇರುವುದು ಯಾಕೆ? ಎಂದು ಪ್ರಶ್ನಿಸಿದ್ದಾರೆ.

shripad bhat

ಶ್ರೀಪಾದ್ ಭಟ್

‘ಒಂದು ಕಡೆ ಕೇಂದ್ರ ಸರ್ಕಾರ ಗಾಝಾಕ್ಕೆ ನೆರವು ಕಳುಹಿಸುತ್ತಿದೆ. ಕಾಂಗ್ರೆಸ್ ಹೈಕಮಾಂಡ್, ರಾಹುಲ್ ಗಾಂಧಿ ಸೇರಿದಂತೆ ಇಂಡಿಯಾ ಕೂಡ ಪ್ಯಾಲೆಸ್ತೀನ್ ಪರ ನಿಲುವು ತೆಗೆದುಕೊಂಡಿದೆ. ಆದರೆ, ರಾಜ್ಯ ಸರ್ಕಾರ ಯಾರ ಪರ ಕೆಲಸ ಮಾಡುತ್ತಿದೆ? ಒಂದು ರಾಜಕೀಯ ವಿಚಾರ ಬಂದಾಗ ಕರ್ನಾಟಕ ಸರ್ಕಾರದಿಂದ ದ್ವಂದ್ವ ನಿಲುವು ಯಾಕೆ? ಮನುಷ್ಯ ಪರ ಹೋರಾಟದಿಂದ ಪೊಲೀಸ್‌ ಇಲಾಖೆಗೆ ಭಯ ಏಕೆ? ಈ ಬೆಳವಣಿಗೆ ತುಂಬಾ ಖಂಡನೀಯ. ಈ ಸರ್ಕಾರದ ನೈತಿಕ ಅಸ್ತಿತ್ವವನ್ನೇ ನಾವು ಪ್ರಶ್ನೆ ಮಾಡಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಪ್ರತಿಯೊಂದು ರಾಜಕೀಯ ವಿಚಾರಕ್ಕೂ ಇದೇ ಅನ್ವಯವೇ? ಈ ಬಗ್ಗೆ ನಮಗೇ ಅನುಮಾನ ಮೂಡುತ್ತಿದೆ. ಇದು ಗೃಹ ಮಂತ್ರಿ, ಸಿಎಂ ಸಿದ್ದರಾಮಯ್ಯನವರ ಗಮನಕ್ಕೆ ಬಂದಿಲ್ಲವೇ? ಎಂದು ಶ್ರೀಪಾದ್ ಭಟ್, ಈ ದಿನ.ಕಾಮ್ ಜೊತೆಗೆ ಮಾತನಾಡುತ್ತಾ ಪ್ರಶ್ನೆಗಳನ್ನು ಎತ್ತಿದ್ದಾರೆ.

vasu hv

“ಪ್ಯಾಲೆಸ್ತೀನ್ ಪರ ಪ್ರತಿಭಟನೆ ನಡೆಸಿದವರ ಮೇಲೆ ರಾಜ್ಯದ ನಾಲ್ಕನೆಯ ಎಫ್‌ಐಆರ್ ಆಗಿದೆ. ಅದು ಕೂಡ ತುಮಕೂರಿನಲ್ಲಿ. ಅಂದರೆ ‌ಗೃಹ ಸಚಿವರ ಜಿಲ್ಲೆಯಲ್ಲಿ. ಕಾಂಗ್ರೆಸ್ ಸಿಡಬ್ಲ್ಯುಸಿ ನಿರ್ಣಯಕ್ಕೆ ಪೂರಕವಾದ ಪ್ರತಿಭಟನೆ ಇದಾಗಿತ್ತು. ತುಮಕೂರಿನ ಅತ್ಯಂತ ಹಿರಿಯ ಚಿಂತಕ, ಗಾಂಧಿ ಸಹಜ ಬೇಸಾಯ ಶಾಲೆಯ ಸ್ಥಾಪಕ ಯತಿರಾಜ್ ಸರ್ ಅಂಥವರ ಮೇಲೆ ‘ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆ ಕೆರಳಿಸುವ ಭಾಷಣ ಮಾಡಿದ ಕೇಸನ್ನು, ಮೇಲಧಿಕಾರಿಗಳು ಮತ್ತು ಕಾನೂನು ತಜ್ಞರ ಸಲಹೆ ಮೇರೆಗೆ’ ಹಾಕಲಾಗಿದೆ. ಈ ಸರ್ಕಾರ ಬರಲಿ ಎಂದು ಅವಿರತ ಶ್ರಮಿಸಿದ ಪ್ರಗತಿಪರ ಹಿರಿಯರ ಶ್ರಮ ಸಾರ್ಥಕವಾಯಿತು. ಇನ್ನು ಈ ಸರ್ಕಾರದ ನೈತಿಕ ಅಸ್ತಿತ್ವ ಪ್ರಶ್ನಾರ್ಹ” ಎಂದು ಸಾಮಾಜಿಕ ಹೋರಾಟಗಾರ ಡಾ. ವಾಸು ಎಚ್ ವಿ ತಿಳಿಸಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಆಗಲೀ, ಉನ್ನತ ಮಟ್ಟದ ಪೊಲೀಸ್ ಇಲಾಖೆಯ ಅಧಿಕಾರಿಗಳಾಗಲೀ ಎಲ್ಲೂ ಮಾತನಾಡಿಲ್ಲ. ಸರ್ಕಾರ ಬಂದರೂ, ವ್ಯವಸ್ಥೆ ಬದಲಾಗಿಲ್ಲ. ಅದು ಆಗಬೇಕು ಎಂಬ ಆಗ್ರಹ ವ್ಯಕ್ತವಾಗುತ್ತಿದೆ.

Irshad Venoor
Website |  + posts

ಇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದವರು. ಕಳೆದ 13 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದು, ವಾರ್ತಾಭಾರತಿ ದಿನಪತ್ರಿಕೆ, ಸಂಜೆ ವಾಣಿ, ಕೋಸ್ಟಲ್ ಡೈಜೆಸ್ಟ್ ಹಾಗೂ ಸನ್ಮಾರ್ಗ ವಾರಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಈದಿನ ಡಾಟ್ ಕಾಮ್‌ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ‌.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಇರ್ಷಾದ್ ವೇಣೂರು
ಇರ್ಷಾದ್ ವೇಣೂರುhttps://eedina.com
ಇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದವರು. ಕಳೆದ 13 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದು, ವಾರ್ತಾಭಾರತಿ ದಿನಪತ್ರಿಕೆ, ಸಂಜೆ ವಾಣಿ, ಕೋಸ್ಟಲ್ ಡೈಜೆಸ್ಟ್ ಹಾಗೂ ಸನ್ಮಾರ್ಗ ವಾರಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಈದಿನ ಡಾಟ್ ಕಾಮ್‌ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ‌.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

Download Eedina App Android / iOS

X