ಕೇಂದ್ರ ಸರ್ಕಾರವು ಐದು ರಾಜ್ಯಗಳ ಚುನಾವಣೆಗಳತ್ತ ಗಮನ ಹರಿಸಿದೆ. ಹೀಗಾಗಿ, ರಾಜ್ಯಗಳ ಪರಿಸ್ಥಿತಿ ಮತ್ತು ಬರದ ಬಗ್ಗೆ ಕೇಂದ್ರವು ಗಂಭೀರವಾಗಿ ಗಮನಿಸುತ್ತಿಲ್ಲ ಎಂದು ತಮ್ಮದೇ ಸರ್ಕಾರದ ವಿರುದ್ಧ ಬಿಜೆಪಿ ಸಂಸದ ಬಿ.ಎನ್ ಬಚ್ಚೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕೇಂದ್ರಕ್ಕೆ ಯಾವ ರಾಜ್ಯದಲ್ಲಿ ಯಾವ ಪರಿಸ್ಥಿತಿ ಇದೆ ಎಂಬುದು ಗೊತ್ತಿಲ್ಲ. ಆ ಬಗ್ಗೆ ಗಂಭೀರವಾಗಿ ಗಮನಿಸುತ್ತಿಲ್ಲ” ಎಂದಿದ್ದಾರೆ.
“ರಾಜ್ಯದಲ್ಲಿ ಬರದ ಅಧ್ಯಯನಕ್ಕೆ ಕೇಂದ್ರ ಸರ್ಕಾರ ತಂಡ ಕಳುಹಿಸಿತ್ತು. ತಂಡವು ಸರ್ಕಾರಕ್ಕೆ ವರದಿ ನೀಡಿದೆ. ರಾಜ್ಯ ಸರ್ಕಾರ ರಾಜ್ಯದಲ್ಲಿ 33,000 ಕೋಟಿ ರೂ. ಬೆಳೆ ನಷ್ಟವಾಗಿದೆ ಎಂದಿದೆ. 17,000 ಕೋಟಿ ರೂ. ಪರಿಹಾರ ನೀಡುವಂತೆ ಕೇಂದ್ರವನ್ನು ಕೇಳಿದೆ. ಆದರೆ, ಇದೂವರೆಗೂ ಹಣ ಬಿಡುಗಡೆಯಾಗಿಲ್ಲ” ಎಂದು ಕಿರಿಕಾರಿದ್ದಾರೆ.
“ಜಿಎಸ್‌ಟಿ ಸಂಗ್ರಹದಲ್ಲಿ ರಾಜ್ಯಕ್ಕೆ ಪ್ರತಿವರ್ಷ ನೀಡಬೇಕಾದ ರಾಜ್ಯದ ಪಾಲಿನ ಹಣವನ್ನೂ ಕೇಂದ್ರ ಹಣಕಾಸು ಸಚಿವರು ಬಿಡುಗಡೆ ಮಾಡಿಲ್ಲ” ಎಂದು ಆರೋಪಿಸಿದ್ದಾರೆ.
ಈ ಹಿಂದೆಯೂ ತಮ್ಮದೇ ಸರ್ಕಾರದ ವಿರುದ್ಧ ಗುಡುಗಿದ್ದ ಬಚ್ಚೇಗೌಡ, “ರಾಜ್ಯಕ್ಕೆ ಹೆಚ್ಚುವರಿ ಅಕ್ಕಿ ನೀಡದ ಕೇಂದ್ರ ಸರ್ಕಾರದ ಕ್ರಮ ಸರಿ ಇಲ್ಲ. ರಾಜ್ಯ ಸರ್ಕಾರ ಹಣ ನೀಡುತ್ತೇವೆ ಎಂದರೂ ಅಕ್ಕಿ ನೀಡದಿರುವುದು ತಪ್ಪು” ಎಂದು ಹೇಳಿದ್ದರು.