- ಕೇಂದ್ರ ತಂಡಕ್ಕೆ ವಾಸ್ತವ ಬೆಳೆ ಸ್ಥಿತಿ ಮನವರಿಕೆ ಮಾಡಿ
- ಕಲಬುರಗಿ ವಿಭಾಗದ ಕೃಷಿ ಅಧಿಕಾರಿಗಳೊಂದಿಗೆ ಸಭೆ
ಮುಂದಿನ ವಾರದಲ್ಲಿ ರಾಜ್ಯದ ಬರ ಅಧ್ಯಯನಕ್ಕೆ ಕೇಂದ್ರ ತಂಡ ಆಗಮಿಸಲಿದೆ. ಅಧಿಕಾರಿಗಳು ಬೆಳೆ ಮತ್ತು ಬರಗಾಲದ ವಾಸ್ತವ ಸ್ಥಿತಿ ಮನದಟ್ಟು ಮಾಡಬೇಕು ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಸೂಚಿಸಿದರು.
ಕಲಬುರಗಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಲಬುರಗಿ ವಿಭಾಗದ ಕಲಬುರಗಿ, ಬೀದರ, ರಾಯಚೂರು, ಯಾದಗಿರಿ, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳ ಕೃಷಿ ಅಧಿಕಾರಿಗಳೊಂದಿಗೆ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿ ಅವರು ಮಾತನಾಡಿದರು.
“ಈ ಬಾರಿ ಒಂದು ರೀತಿಯ ಹಸಿ ಬರಗಾಲದಂತಾಗಿದೆ. ಸರಿಯಾದ ಸಮಯಕ್ಕೆ ಮಳೆ ಬಾರದ ಕಾರಣ ಬೆಳೆ ಬಿತ್ತನೆಯಾದರೂ ಇಳುವರಿ ತೀರಾ ಕಡಿಮೆ ಬರುವ ಸಾಧ್ಯತೆ ಇದೆ. ಹೀಗಾಗಿ ಕೇಂದ್ರದ ಅಧ್ಯಯನ ತಂಡ ಬರುವ ಮುನ್ನವೆ ಬೆಳೆ ಹಾನಿಹಾನಿ ಸರ್ವೆ ಕಾರ್ಯ ಮುಗಿಸಿ ವಾಸ್ತವ ಸ್ಥಿತಿ ಮನವರಿಕೆ ಮಾಡಿಸಿ ರೈತರಿಗೆ ನ್ಯಾಯುಯುತ ಪರಿಹಾರಕ್ಕೆ ಒದಗಿಸಲು ಅಧಿಕಾರಿಗಳು ಮುಂದಾಗಬೇಕು” ಎಂದರು.
“ರೈತರ ಕಲ್ಯಾಣಕ್ಕೆ ನಮ್ಮ ಸರ್ಕಾರ ಬದ್ದತೆಯಿಂದ ಕೆಲಸ ಮಾಡುತ್ತಿದೆ. ಹೀಗೆ ಅನ್ನದಾತರ ಶ್ರೇಯೋಭಿವೃದ್ಧಿಗೆ ಶೇ.100ರಷ್ಟು ಅನುದಾನ ಖರ್ಚು ಮಾಡಿ ಆರ್ಥಿಕ ಮತ್ತು ಭೌತಿಕ ಪ್ರಗತಿ ಸಾಧಿಸಬೇಕು. ರೈತರು ಸರ್ಕಾರಿ ಯೋಜನೆಗಳ ಸೌಲಭ್ಯ ಪಡೆಯಲು ಕೆ.ವೈ.ಸಿ ಕಾರ್ಯ ಪ್ರಮುಖವಾಗಿದೆ. ಜಿಲ್ಲೆಯಲ್ಲಿ ಡಿ.ಸಿ, ಜಿಲ್ಲಾ ಪಂಚಾಯತ್ ಸಿ.ಇ.ಓ ಅವರ ಸಹಕಾರ ಪಡೆದು ಶೇ.100 ರಷ್ಟು ಪ್ರಗತಿ ಸಾಧಿಸಬೇಕು. ಹಿಂಗಾರು ಬೆಳೆಗೆ ಬೇಕಾದ ಬೀಜ, ರಸಗೊಬ್ಬರ ದಾಸ್ತಾನು ರಾಜ್ಯದಲ್ಲಿ ಸಾಕಷ್ಟಿದ್ದು, ಯಾವುದೇ ಕೊರತೆ ಇಲ್ಲ. ಜಂಟಿ ಕೃಷಿ ನಿರ್ದೇಶಕರು ಸ್ಥಳೀಯ ಶಾಸಕರ ಅಭಿಪ್ರಾಯ, ಸಲಹೆ ಪಡೆದು ಕಾರ್ಯ ನಿರ್ವಹಿಸಬೇಕು” ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬುರ್ನಾಸು ಬಿಜೆಪಿ ಬಿಟ್ಟು ಒಂದಾಗುವರೆ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ?
ನೆಟೆ ರೋಗಕ್ಕೆ ನಿಯಂತ್ರಣ, ನಕಲಿ ಬೀಜದ ಬಗ್ಗೆ ಎಚ್ಚರಿಕೆ ವಹಿಸಿ
“ಕಳೆದ ವರ್ಷ ನೆಟೆ ರೋಗದಿಂದ ಇಲ್ಲಿನ ಪ್ರಮುಖ ಬೆಳೆ ತೊಗರಿ ಹಾಳಾಗಿದೆ. ಎರಡು ಹಂತದಲ್ಲಿ ಈಗಾಗಲೆ 123 ಕೋಟಿ ರೂ. ಪರಿಹಾರ ಸರ್ಕಾರ ನೀಡಿದೆ. ಮುಂದೆ ಈ ರೋಗ ನಿಯಂತ್ರಣಕ್ಕೆ ಈಗಿನಿಂದಲೆ ತಯಾರಿ ಮಾಡಿಕೊಳ್ಳಬೇಕು. ನಕಲಿ ಬೀಜ, ರಸಗೊಬ್ಬರ ಪೂರೈಕೆಯಾಗದಂತೆ ಜಾಗೃತ ಕೋಶ ಕಾರ್ಯನಿರ್ವಹಿಸಬೇಕು. ದಾಳಿ ಮಾಡುವುದು ಒಂದು ಕ್ರಮವಾದರೆ, ಅದನ್ನು ಪೂರೈಕೆಯಾಗದಂತೆ ಕಡಿವಾಣ ಹಾಕುವುದು ಮುಖ್ಯ” ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕಾದ ಅಲ್ಲಮ ಪ್ರಭು ಪಾಟೀಲ , ಬಿ.ಆರ್.ಪಾಟೀಲ್ ಎಂ.ವೈ ಪಾಟೀಲ್, ವಿಧಾನ ಪರಿಷತ್ ಶಾಸಕ ತಿಪ್ಪಣಪ್ಪ ಕಮಕನೂರ ಕೃಷಿಕರ ಪರಿಸ್ಥಿತಿ, ಮಳೆ ಹಾನಿ ತೀವ್ರತೆ ಬಗ್ಗೆ ಗಮನ ಸೆಳೆದು ಶೀಘ್ರ ಪರಿಹಾರ ಒದಗಿಸಲು ಮನವಿ ಮಾಡಿದರು. ವಿಭಾಗದ 7 ಜಿಲ್ಲೆಗಳಲ್ಲಿ ಬಿತ್ತನೆ, ಬೆಳೆ ಹಾನಿ, ಕುಡಿಯುವ ನೀರು ಪೂರೈಕೆ, ನೆಟೆ ರೋಗ ಪರಿಹಾರ ವಿತರಣೆ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು. ಅಯಾ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು ಪ್ರಗತಿ ವರದಿ ಮಂಡಿಸಿದರು.
ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಕೃಷಿ ನಿರ್ದೇಶಕ ಜಿ.ಟಿ.ಪುತ್ರ, ಜಲಾನಯನ ಇಲಾಖೆ ನಿರ್ದೇಶಕರಾದ ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.