“ಅವಧಿ ಮುಗಿದು ಮೂರು-ನಾಲ್ಕು ವರ್ಷಗಳಾದರೂ ನಗರ ಪಾಲಿಕೆಗಳ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಡೆಯದೇ ಇರುವುದು ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗಿದೆ. ಜನತಂತ್ರ ವ್ಯವಸ್ಥೆಯಡಿ ಆಡಳಿತ ಮಾಡುತ್ತೇವೆ ಎನ್ನುವ ಪಕ್ಷಗಳು ಯಾಕೆ ಚುನಾವಣೆ ನಡೆಸಲು ಮುಂದಾಗಿಲ್ಲ” ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಟೀಕಿಸಿದರು.
ಕಲಬುರಗಿಯ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, “ಲೋಕಸಭಾ ಚುನಾವಣೆ ಬರುವ ಕಾರಣ, ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡಲಾಗುತ್ತಿದೆ. ಒಂದು ದೇಶ, ಒಂದು ಧರ್ಮ, ಒಂದು ಭಾಷೆ ಎನ್ನುವ ಹೆಸರಿನಲ್ಲಿ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರಲಾಗುತ್ತಿದೆ” ಎಂದರು.
“ನಾನು ರಾಮನ ಭಕ್ತನೇ, ನಮ್ಮೂರಿನ ರಾಮ ಮಂದಿರಕ್ಕೆ ನಾನು ಹೋಗುತ್ತೇನೆ. ನಾನು ರಾಮ ಮಂದಿರದ ವಿರೋಧಿಯಲ್ಲ. ಆದರೆ, ಬಡವರು ಅಷ್ಟು ದೂರ ಹೋಗಿ ರಾಮನನ್ನು ನೋಡಲು ಸಾಧ್ಯವಾ? ರಾಮ ಮಂದಿರ ಆದ್ಯತೆಯಾಗಬೇಕಾ, ರಾಮರಾಜ್ಯ ನಿರ್ಮಾಣ ಆದ್ಯತೆಯಾಗಬೇಕಾ?” ಎಂದು ಪ್ರಶ್ನಿಸಿದರು.
“ಇಡೀ ದೇಶದಲ್ಲಿ ಯಾವ ರಾಜ್ಯವೂ ಉಳಿತಾಯ ಬಜೆಟ್ ಮಂಡಿಸಿಲ್ಲ. ಎಲ್ಲ ಸರ್ಕಾರಗಳೂ ಸಾಲ ಮಾಡಿ, ಕೊರತೆ ಬಜೆಟ್ ಮಂಡಿಸುತ್ತಿವೆ. ಆದರೆ, ಆಮ್ ಆದ್ಮಿ ಪಕ್ಷ ಮಾತ್ರ ದೆಹಲಿಯಲ್ಲಿ 8 ಸಾವಿರ ಕೋಟಿ ಉಳಿತಾಯ ಬಜೆಟ್ ಮಂಡಿಸಿದೆ. ಅದೂ ಕೂಡ ಉಚಿತ ಶಿಕ್ಷಣ, ನೀರು, ವಿದ್ಯುತ್, ಆರೋಗ್ಯ ಸೇವೆ ಕೊಟ್ಟು ಉಳಿತಾಯ ಬಜೆಟ್ ಮಂಡಿಸಿದೆ” ಎಂದರು.
“₹11 ಲಕ್ಷ ಕೋಟಿ ಉದ್ಯಮಿಗಳ ಸಾಲವನ್ನು ವೇವ್ ಆಫ್ ಮಾಡಲಾಗಿದೆ. ರೈತರ ಸಾಲ ಮನ್ನಾ ಮಾಡಲು ಆಗಿಲ್ಲ. ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಬೆಂಬಲ ಬೆಲೆ ನೀಡಿಲ್ಲ. ರೈತರಿಗೆ ಸರಿಯಾಗಿ ವಿದ್ಯುತ್, ನೀರು ಪೂರೈಕೆ ಆಗುತ್ತಿಲ್ಲ” ಎಂದರು.
“ಗ್ಯಾರಂಟಿ ಯೋಜನೆಗಳನ್ನು ನಾನು ಸ್ವಾಗತಿಸುತ್ತೇನೆ. ಆದರೆ, ಕೇಜ್ರಿವಾಲ್ ಅವರ ಯೋಜನೆಗಳನ್ನು ಕದ್ದು ರಾಜ್ಯದಲ್ಲಿ ಜನರಿಗೆ ಗ್ಯಾರಂಟಿ ಕೊಟ್ಟಿದ್ಧಿರಾ ಆದರೆ ಅದನ್ನು ಸರಿಯಾಗಿ ಜಾರಿ ಮಾಡಿಲ್ಲ. ಬೇರೆ ಯೋಜನೆಗಳಿಗೆ ಇಟ್ಟಿದ್ದ ಹಣವನ್ನು ತೆಗೆದು ಗ್ಯಾರಂಟಿಗಳಿಗೆ ಖರ್ಚು ಮಾಡುತ್ತಿದ್ದಾರೆ” ಎಂದು ಹೇಳಿದರು.
“ಪ್ರತಾಪ್ ರೆಡ್ಡಿಯವರು ಸಜ್ಜನ ರಾಜಕಾರಣಿ, ಪದವೀಧರರ ಚುನಾವಣೆಯಲ್ಲಿ ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋತಿದ್ದರು. ಈ ಬಾರಿ ಕೂಡ ಅವರು ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಅವರಿಗೆ ಆಮ್ ಆದ್ಮಿ ಪಕ್ಷ ಬೆಂಬಲ ನೀಡಲಿದೆ. ಅವರ ಗೆಲುವಿಗೆ ಶ್ರಮಿಸುತ್ತೇವೆ” ಎಂದು ಹೇಳಿದರು.
“ಕಾಂಗ್ರೆಸ್ ಅಧಿಕಾರಕ್ಕೆ ಬಂದು 9 ತಿಂಗಳಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಧಿಕಾರಿಗಳಿಗೆ ಹಣ ಮೀಸಲಿಟ್ಟಿಲ್ಲ. 14 ಅಕಾಡಮಿಗಳಿದ್ದು ಅಧ್ಯಕ್ಷರು, ಸದಸ್ಯರನ್ನು ಆಯ್ಕೆ ಮಾಡಿಲ್ಲ. ಕನ್ನಡದ ಬಗ್ಗೆ ಇಷ್ಟೆಲ್ಲಾ ಮಾತನಾಡುವ ಸಿಎಂ ಸಿದ್ದರಾಮಯ್ಯನವರು ಈ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿರುವುದು ಏಕೆ?” ಎಂದರು.
“ಕಣ್ಣೆದುರೇ ಕೋಟಿ ಕೋಟಿ ಹಣ ಸಿಕ್ಕಿದ ಮಾಡಾಳ್ ವಿರೂಪಾಕ್ಷಪ್ಪ ಅವರ ಭ್ರಷ್ಟಾಚಾರ ಪ್ರಕರಣ ಹಳ್ಳ ಹಿಡಿದರೆ, ಒಂದೂ ರೂಪಾಯಿ ಸಿಗದೇ ಇದ್ದರೂ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ನಾಯಕರಿಗೆ ತನಿಖಾ ಸಂಸ್ಥೆಗಳನ್ನು ಬಳಸಿ ತೊಂದರೆ ನೀಡಲಾಗುತ್ತಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ | ನಾಮಫಲಕಗಳಲ್ಲಿ ಕನ್ನಡ ಅಳವಡಿಸದ 49,241 ಮಳಿಗೆಗಳಿಗೆ ನೋಟಿಸ್
ಪದವೀಧರರ ಕ್ಷೇತ್ರದ ಚುನಾವಣಾ ಅಭ್ಯರ್ಥಿ ಪ್ರತಾಪ್ ರೆಡ್ಡಿ ಮಾತನಾಡಿ, “ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋತಿದ್ದೇನೆ. ನಮ್ಮ ಭಾಗದಲ್ಲಿ ಸರ್ಕಾರ ಯಾವ ಶಾಲಾ-ಕಾಲೇಜುಗಳಿಗೂ ಹಣ ನೀಡುತ್ತಿಲ್ಲ. ಎಲ್ಲ ಕಡೆಯೂ ಅತಿಥಿ ಉಪನ್ಯಾಸಕರಿದ್ದಾರೆ. ಅವರಿಗೆ ಸರಿಯಾಗಿ ಸಂಬಳ ಸಿಗುತ್ತಿಲ್ಲ” ಎಂದರು.
ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ರುದ್ರಯ್ಯ ನವಲಿಮಠ, ನಾಸಿಮುದ್ದೀನ್ ಪಟೇಲ್, ಎಂಎಲ್‌ಸಿ ಚುನಾವಣಾ ಅಭ್ಯರ್ಥಿ ಪ್ರತಾಪ್ ರೆಡ್ಡಿ ಹಾಗೂ ಜಿಲ್ಲಾ ಮಟ್ಟದ ನಾಯಕರು ಹಾಜರಿದ್ದರು.