ಚುನಾವಣಾ ಬಾಂಡ್ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್, ಇದು ಕೇಂದ್ರ ಸರ್ಕಾರದ ‘ಪ್ರಧಾನಮಂತ್ರಿ ಹಫ್ತಾ ವಸೂಲಿ ಯೋಜನೆ’ ಎಂದು ಟೀಕಿಸಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಫ್ತಾ ವಸೂಲಿ ಮಾಡುತ್ತಿದೆ ಎಂದು ದೂರಿದೆ.
ಕೇಂದ್ರದ ತನಿಖಾ ತಂಡಗಳಾದ ಸಿಬಿಐ, ಇಡಿ ಅಥವಾ ಐಟಿ ದಾಳಿಗೆ ಒಳಗಾದ ಸುಮಾರು 21 ಸಂಸ್ಥೆಗಳು ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆಯನ್ನು ನೀಡಿರುವುದನ್ನು ಕಾಂಗ್ರೆಸ್ ಒತ್ತಿ ಹೇಳಿದೆ. ಈ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಎಕ್ಸ್ (ಟ್ವೀಟ್) ಮಾಡಿದ್ದಾರೆ.
“ಇಂದು ನಾವು ಪ್ರಧಾನಮಂತ್ರಿ ಹಫ್ತಾ ವಸೂಲಿ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲಿದ್ದೇವೆ. ಚುನಾವಣಾ ಬಾಂಡ್ ಹಗರಣದಲ್ಲಿರುವ ನಾಲ್ಕು ಮಾದರಿಯ ಭ್ರಷ್ಟಾಚಾರವನ್ನು ನಾವು ನಿಮಗೆ ತಿಳಿಸುತ್ತೇವೆ” ಎಂದಿರುವ ರಮೇಶ್, “1.ಚಂದಾ ನೀಡಿ, ದಂಧೆ ಪಡೆಯಿರಿ 2.ಹಫ್ತಾ ವಸೂಲಿ 3.ಗುತ್ತಿಗೆ ಪಡೆದು, ಲಂಚ ನೀಡಿ, 4.ನಕಲಿ ಕಂಪನಿ” ಎಂದಿದ್ದಾರೆ.
With each passing day, more examples emerge on the true depths of the #ElectoralBondScam. Today, we zoom in on the Pradhan Mantri Hafta Vasuli Yojana, the second of the four channels of corruption in the Electoral Bond Scam:
1.Chanda Do, Dhandha Lo
2.Hafta Vasulia.On 10… https://t.co/Ts6KkjsYmF
— Jairam Ramesh (@Jairam_Ramesh) March 18, 2024
ಜೈರಾಮ್ ರಮೇಶ್ ಟ್ವೀಟ್ ಏನು ಹೇಳುತ್ತದೆ?
.ನವೆಂಬರ್ 10, 2022ರಲ್ಲಿ ಇಡಿ ಅರಬಿಂದೋ ಫಾರ್ಮಾದ ಪಿ ಶರತ್ ಚಂದ್ರ ರೆಡ್ಡಿ ಮೇಲೆ ಮನಿಲಾಂಡರಿಂಗ್ ಪ್ರಕರಣದಲ್ಲಿ ದಾಳಿ ನಡೆದಿದೆ. ಅದಾದ ಕೆಲವೇ ದಿನಗಳಲ್ಲಿ ನವೆಂಬರ್ 15ರಂದು ಅರಬಿಂದೋ ಫಾರ್ಮಾ ಚುನಾವಣಾ ಬಾಂಡ್ ಮೂಲಕ ಐದು ಕೋಟಿ ರೂಪಾಯಿ ನೀಡಿದೆ.
ಇದನ್ನು ಓದಿದ್ದೀರಾ? ಚುನಾವಣಾ ಬಾಂಡ್ ಹಗರಣ | ದೇಣಿಗೆ ನೀಡಿ- ಗುತ್ತಿಗೆ ಪಡಿ; ಬಿಜೆಪಿಯ ದಂಧೆ ಜಗಜ್ಜಾಹೀರು
.ನವಯುಗ ಇಂಜಿನಿಯರಿಂಗ್ ಕಂಪನಿ ಏಪ್ರಿಲ್ 2019ರಲ್ಲಿ 30 ಕೋಟಿ ರೂಪಾಯಿಯ ಬಾಂಡ್ ಖರೀದಿಸಿದೆ. ಇದಕ್ಕೂ ಆರು ತಿಂಗಳ ಮುನ್ನ ಅಕ್ಟೋಬರ್ 2018ರಲ್ಲಿ ಈ ಸಂಸ್ಥೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.
2023ರ ಡಿಸೆಂಬರ್ 7ರಂದು ರಂಗ್ತಾ ಸನ್ಸ್ ಪ್ರೈವೇಟ್ ಲಿಮಿಟೆಡ್ (Rungta Sons Pvt) ಮೇಲೆ ಐಟಿ ದಾಳಿ ನಡೆದಿದೆ. ಜನವರಿ 11, 2024 ಈ ಸಂಸ್ಥೆ ತಲಾ ಒಂದು ಕೋಟಿ ರೂಪಾಯಿಯ 50 ಬಾಂಡ್‌ಗಳನ್ನು ಖರೀದಿಸಿದೆ. ಈ ಸಂಸ್ಥೆ ಇದಕ್ಕೂ ಮುನ್ನ 2021ರಲ್ಲಿ ದೇಣಿಗೆ ನೀಡಿದೆ.
ಹೈದಾರಾಬಾದ್ ಮೂಲದ ಶಿರಡಿ ಸಾಯ್ ಎಲೆಕ್ಟ್ರಿಕಲ್ಸ್ ಲಿಮಿಟೆಡ್ ಮೇಲೆ ಡಿಸೆಂಬರ್ 20ರಂದು ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜನವರಿ 11, 2024ರಂದು ಈ ಸಂಸ್ಥೆಯು 40 ಕೋಟಿ ರೂಪಾಯಿ ಬಾಂಡ್ ಅನ್ನು ಖರೀದಿಸಿದೆ.
ನವೆಂಬರ್ 2023ರಲ್ಲಿ ಆದಾಯ ತೆರಿಗೆ ಅಧಿಕಾರಿಗಳು ರೆಡ್ಡೀಸ್ ಲ್ಯಾಬ್ಸ್ ಮೇಲೆ ದಾಳಿ ನಡೆಸಿದ್ದಾರೆ. ಇದಾದ ಬಳಿಕ ಸಂಸ್ಥೆಯು ಬಾಂಡ್ ಮೂಲಕ 31 ಕೋಟಿ ರೂಪಾಯಿ ದೇಣಿಗೆ ನೀಡಿದೆ, ಅದಾದ ಬಳಿಕ 21 ಕೋಟಿ ರೂಪಾಯಿ ದೇಣಿಗೆ ನವೆಂಬರ್ 2023ರಲ್ಲಿ ನೀಡಿದೆ. ಜನವರಿ 2024ರಲ್ಲಿ 10 ಮತ್ತು 84 ಕೋಟಿ ರೂಪಾಯಿ ದೇಣಿಗೆ ನೀಡಿದೆ.
“ಇವೆಲ್ಲವೂ ಕೂಡಾ ಬರೀ ಕೆಲವೇ ಉದಾಹರಣೆಗಳು. ಒಟ್ಟು 21 ಸಂಸ್ಥೆಗಳ ವಿರುದ್ಧ ಸಿಬಿಐ, ಇಡಿ ಮತ್ತು ಐಟಿ ದಾಳಿ ನಡೆದಿದ್ದು, ಅದಾದ ಬಳಿಕ ಚುನವಣಾ ಬಾಂಡ್ ಅನ್ನು ಖರೀದಿಸಲಾಗಿದೆ” ಎಂದು ಜೈರಾಮ್ ರಮೇಶ್ ಆರೋಪಿಸಿದ್ದಾರೆ.
“ಐಟಿ ಇಲಾಖೆ ಮತ್ತು ಇಡಿ ‘ಪ್ರಧಾನಮಂತ್ರಿ ಹಫ್ತಾ ವಸೂಲಿ ಯೋಜನೆ’ ಅನ್ನು ಜಾರಿ ಮಾಡಿದರೆ, ಎಸ್‌ಬಿಐ ಚುನಾವಣಾ ಬಾಂಡ್ ಅನ್ನು ಜಾರಿ ಮಾಡಿದೆ. ದಿನ ಮುಗಿಯುತ್ತಿದ್ದಂತೆ ಈ ಎಲ್ಲಾ ಸಂಸ್ಥೆಗಳು ಒಂದೇ ವ್ಯಕ್ತಿಗೆ ಇದರ ಮಾಹಿತಿ ನೀಡಬೇಕಾಗಿತ್ತು. ಅವರೇ ಹಣಕಾಸು ಸಚಿವರು” ಎಂದು ರಮೇಶ್ ದೂರಿದ್ದಾರೆ.