ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯನ್ನಾಗಿ ಮಾಡಿಯೇ ತೀರುತ್ತೇನೆಂದು ಶಿವಕುಮಾರ್ ಗುಡುಗಿದ್ದರು. ಈಗ ಕೇಂದ್ರದ ಗೃಹ ಸಚಿವಾಲಯ ನಾಮಕರಣಕ್ಕೆ ತಡೆಯೊಡ್ಡಿ, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿದೆ. ಇದರಿಂದ ಡಿಕೆ ಅಹಂಗೆ ಪೆಟ್ಟು ಬಿದ್ದಿದೆ. ಎಚ್‌ಡಿಕೆ ಮುಖ ಅರಳಿದೆ.
ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವ ಕರ್ನಾಟಕ ಕಾಂಗ್ರೆಸ್ ಸರ್ಕಾರದ ನಿರ್ಧಾರಕ್ಕೆ ಕೇಂದ್ರ ಸರ್ಕಾರ ತಡೆ ಒಡ್ಡಿದೆ. ಸದ್ಯ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದೆ.
ರಾಮನಗರ ಜಿಲ್ಲೆಯ ಹೆಸರು ಬದಲಾವಣೆಗೆ ಕರ್ನಾಟಕ ಸಚಿವ ಸಂಪುಟ 2024ರ ಜುಲೈನಲ್ಲಿ ತೀರ್ಮಾನ ತೆಗೆದುಕೊಂಡಿತ್ತು. ಆ ತೀರ್ಮಾನದ ಹಿಂದೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಒತ್ತಡವಿತ್ತು.
ಹಾಗಾಗಿ ಇದು ಒಂದು ರೀತಿಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗಾದ ರಾಜಕೀಯ ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ. ದುರದೃಷ್ಟಕರ ಸಂಗತಿ ಎಂದರೆ, ಈಗಲೂ ‘ಜಿಲ್ಲೆಯ ಹೆಸರು ಬದಲಾಯಿಸಿಯೇ ತೀರುತ್ತೇವೆ. ಅವರು ದ್ವೇಷದ ರಾಜಕಾರಣ ಮಾಡಿದ್ದಾರೆ. ರಾಮನಗರ ಜನರ ಮೇಲೆ ಗದಾಪ್ರಹಾರ ಮಾಡಿದ್ದಾರೆ’ ಎಂದು ಡಿ.ಕೆ. ಶಿವಕುಮಾರ್ ಕಿರಿಕಾರಿದ್ದಾರೆ. ‘ಅವರು’ ಎನ್ನುವ ಮೂಲಕ ಮತ್ತೆ ದೇವೇಗೌಡರ ಕುಟುಂಬವನ್ನು ಎಳೆದುತಂದು ಹರಿಹಾಯ್ದಿದ್ದಾರೆ.
ಇದೇ ಸಂದರ್ಭದಲ್ಲಿ, ಕೇಂದ್ರ ಸಚಿವಾಲಯ ಮರುನಾಮಕರಣ ಪ್ರಕ್ರಿಯೆಯನ್ನು ಮುಂದುವರಿಸುವ ಅಗತ್ಯವಿಲ್ಲ ಎಂದು ತಿಳಿಸಿದ ದಿನವೇ, ಇತ್ತ ಬಿಡದಿಯ ಕೇತಗಾನಹಳ್ಳಿಯ ಕುಮಾರಸ್ವಾಮಿಯವರ ತೋಟವನ್ನು ರಾಜ್ಯದ ಕಂದಾಯ ಅಧಿಕಾರಿಗಳು ಸರ್ವೆ ಮಾಡಿ, ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ 14 ಎಕರೆ ಭೂಮಿಯನ್ನು ಸರ್ಕಾರದ ಸ್ವಾಧೀನಕ್ಕೆ ಪಡೆದುಕೊಂಡಿದ್ದಾರೆ.
ಅಂದರೆ ರಾಜ್ಯದ ಒಕ್ಕಲಿಗ ನಾಯಕರೆಂದು ಬಿಂಬಿಸಿಕೊಂಡಿರುವ ಕಾಂಗ್ರೆಸ್ಸಿನ ಡಿ.ಕೆ. ಶಿವಕುಮಾರ್ ಮತ್ತು ಜೆಡಿಎಸ್ಸಿನ ಕುಮಾರಸ್ವಾಮಿ- ಇಬ್ಬರಿಗೂ ಸಿಹಿ-ಕಹಿ ಸುದ್ದಿಗಳು ಸಮಾನವಾಗಿ ಹಂಚಿಕೆಯಾಗಿವೆ. ಇಬ್ಬರಿಗೂ ಹಿನ್ನಡೆಯಾಗಿದೆ. ಹೀಗಾಗಲು ಕಾರಣ ಒಕ್ಕಲಿಗ ಸಮುದಾಯವಲ್ಲ, ಆ ಸಮುದಾಯ ತಮ್ಮ ಬೆನ್ನಿಗಿದೆ ಎಂದು ಇಬ್ಬರು ನಾಯಕರು ಆಟ ಆಡಿದ್ದರ ಫಲ.
ಅದನ್ನು ಮತ್ತೊಮ್ಮೆ ನೆನಪು ಮಾಡಿಕೊಳ್ಳುವುದಾದರೆ… ಹೆಚ್ಚಿಗೆ ಅಲ್ಲ, ಇವೆರಡು ಕುಟುಂಬ ರಾಜಕಾರಣ ನಡೆದುಬಂದ ಹಾದಿಯತ್ತ ಒಂದು ಹೊರಳು ನೋಟ ಬೀರಿದರೆ, ಎಲ್ಲವೂ ಸ್ಪಷ್ಟವಾಗುತ್ತದೆ.
ಕನಕಪುರ ತಾಲೂಕಿನ ದೊಡ್ಡಾಲಳ್ಳಿಯ ಕೆಂಪೇಗೌಡರ ಮಗನಾದ ಡಿ.ಕೆ. ಶಿವಕುಮಾರ್ ಮತ್ತವರ ಕುಟುಂಬ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಸಾಮ್ರಾಜ್ಯವನ್ನಾಗಿ ಮಾಡಿಕೊಂಡು ಕಳೆದ ನಲವತ್ತು ವರ್ಷಗಳಿಂದ ಅಕ್ಷರಶಃ ಆಳುತ್ತಿದೆ. ಇಂತಹ ಸುಭದ್ರ ಸಾಮ್ರಾಜ್ಯ ಮೊದಲ ಬಾರಿಗೆ ಬಿರುಕು ಬಿಟ್ಟಿದ್ದು, ಸಹೋದರ 2024ರ ಲೋಕಸಭಾ ಚುನಾವಣೆಯಲ್ಲಿ ಸೋಲುವ ಮೂಲಕ. ಅದನ್ನು ಮರಳಿ ಕಟ್ಟಬೇಕೆಂಬ ಹಠಕ್ಕೆ ಬಿದ್ದ ಡಿ.ಕೆ. ಶಿವಕುಮಾರ್ ಚನ್ನಪಟ್ಟಣದ ಉಪಚುನಾವಣೆಯನ್ನು ಯುದ್ಧವನ್ನಾಗಿ ಪರಿವರ್ತಿಸಿದರು. ಬೊಂಬೆಯ ನಾಡನ್ನು ಚಿನ್ನದ ನಾಡನ್ನಾಗಿ ಪರಿವರ್ತಿಸುತ್ತೇನೆಂದರು. ಸಾಲದು ಎಂದು, ಜನರನ್ನು ಭಾವನಾತ್ಮಕವಾಗಿ ಸೆಳೆಯಲು ‘ನಾವು ಬೆಂಗಳೂರು ಜಿಲ್ಲೆಯವರು’ ಎಂಬ ಕಾರ್ಡ್ ಉರುಳಿಸಿದರು.

ಅದರ ಒಳಾರ್ಥ ಇಷ್ಟೇ, ಹಾಸನ ಜಿಲ್ಲೆಯವರಾದ ದೇವೇಗೌಡರ ಕುಟುಂಬ ಇಲ್ಲಿಗೆ ವಲಸೆ ಬಂದಿದೆ, ಬೆಂಗಳೂರು ಜಿಲ್ಲೆಯನ್ನು ಹರಿದು ಹಂಚಿದೆ, ಅಲ್ಲಿಂದ ಗೆದ್ದು ಅಕ್ಕಪಕ್ಕದ ಗ್ರಾಮಾಂತರ ಮತ್ತು ಮಂಡ್ಯವನ್ನು ಆಕ್ರಮಿಸಿಕೊಂಡಿದೆ. ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುತ್ತಲೇ ಸಾಗಿದೆ. ಸ್ಥಳೀಯ ಪಾಳೇಯಗಾರರಾದ ನಮಗೆ ಆಳಲು, ಆಟವಾಡಲು ಮೈದಾನವಿಲ್ಲದಂತೆ ಮಾಡಿದೆ. ಆ ಕಾರಣದಿಂದ, ಆ ಆಟದ ಮೈದಾನವನ್ನು ಮರಳಿ ಪಡೆಯಬೇಕಾಗಿದೆ ಎನ್ನುವುದು ಡಿಕೆ ಶಿವಕುಮಾರ್ ಇಂಗಿತ. ಹಾಗೆಯೇ ಆ ಸಾಮ್ರಾಜ್ಯವನ್ನು ಮರಳಿ ಪಡೆಯಬೇಕಾದರೆ ಚನ್ನಪಟ್ಟಣದಲ್ಲಿ ಗೆಲ್ಲಬೇಕು. ಅದರ ಬಲದಿಂದ ಬೆಂಗಳೂರು ಗ್ರಾಮಾಂತರದಿಂದ ಗೌಡರ ಕುಟುಂಬವನ್ನು ಹಿಮ್ಮೆಟ್ಟಿಸಬೇಕೆಂಬ ಇರಾದೆ ಇತ್ತು.
ಈ ಎರಡು ಬಲಾಢ್ಯ, ಬಲಿಷ್ಠ ಕುಟುಂಬಗಳ ಕಾದಾಟಕ್ಕೆ ನಲವತ್ತು ವರ್ಷಗಳ ಸುದೀರ್ಘ ಇತಿಹಾಸವಿದೆ. 1985ರಲ್ಲಿ, ಯುವಕ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ಓಡಾಡಿಕೊಂಡಿದ್ದ ದಿನಗಳಲ್ಲಿ, ಎದುರಾದ ವಿಧಾನಸಭಾ ಚುನಾವಣೆಗೆ ಸಾತನೂರು ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾದರು. ಆಗ ರಾಜ್ಯದಲ್ಲಿ ಜನತಾಪಕ್ಷ ಅಧಿಕಾರದಲ್ಲಿತ್ತು. ದೇವೇಗೌಡರು ಬಲಿಷ್ಠ ಒಕ್ಕಲಿಗ ನಾಯಕರಾಗಿದ್ದು, ಹೆಗಡೆಯವರೊಂದಿಗೆ ರಾಜಕೀಯ ಕಾದಾಟಕ್ಕಿಳಿದಿದ್ದ ಕಾಲವದು. ಆ ಚುನಾವಣೆಯಲ್ಲಿ ಗೌಡರು ಹೊಳೆನರಸೀಪುರ ಮತ್ತು ಸಾತನೂರು- ಎರಡೂ ಕಡೆಯಿಂದ ಸ್ಪರ್ಧಿಸಿದರು. ಸುಲಭವಾಗಿ ಗೆಲ್ಲಲು ಅಂದಿನ ಕಾಂಗ್ರೆಸ್ ಮುಖಂಡರೊಂದಿಗೆ ಹೊಂದಾಣಿಕೆ ಮಾಡಿಕೊಂಡರು. ಆ ಹೊಂದಾಣಿಕೆಯ ಫಲವಾಗಿ ಸಾತನೂರು ಕ್ಷೇತ್ರಕ್ಕೆ ಡಮ್ಮಿ ಕ್ಯಾಂಡಿಡೇಟ್ ಆಗಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದವರು ಇದೇ ಡಿ.ಕೆ. ಶಿವಕುಮಾರ್.
ದೊಡ್ಡವರ ಹೊಂದಾಣಿಕೆಯ ಫಲವಾಗಿ ಶಿವಕುಮಾರ್ ಸೋತರೂ, ದೊಡ್ಡಗೌಡರೊಂದಿಗೆ ಸೆಣೆಸಿದ ‘ಪುಟ್ಟ ಪೈಲ್ವಾನ’ ಎಂದು ಪ್ರಚಾರ ಪಡೆದು ರಾಜಕೀಯವಾಗಿ ನೆಲೆಯೂರಿದರು. 1987ರಲ್ಲಿ ಸಾತನೂರು ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆಯಾದರು. 1989ರ ವಿಧಾನಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ ಪಕ್ಷದಿಂದ ಸಾತನೂರು ಕ್ಷೇತ್ರದ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ಮೊತ್ತ ಮೊದಲ ಬಾರಿಗೆ ವಿಧಾನಸೌಧ ಪ್ರವೇಶಿಸಿದರು. ಅದೇ ಸಂದರ್ಭದಲ್ಲಿ ದೇವೇಗೌಡರು ಸೋತು, ಅಧಿಕಾರ ಕಳೆದುಕೊಂಡು ಹಿನ್ನೆಲೆಗೆ ಸರಿದಿದ್ದರು.
ವಿಧಾನಸೌಧ ಪ್ರವೇಶಿಸಿದ ಮೊದಲ ಅವಧಿಯಲ್ಲಿಯೇ ಡಿಕೆಯವರ ಅದೃಷ್ಟ ಖುಲಾಯಿಸಿತು. 1991ರಲ್ಲಿ ಮುಖ್ಯಮಂತ್ರಿಯಾದ ಎಸ್.ಬಂಗಾರಪ್ಪನವರು, ಡಿಕೆಗೆ ಬಂದೀಖಾನೆ ಖಾತೆ ಸಚಿವ ಸ್ಥಾನ ನೀಡಿ, ರಾಜಕೀಯವಾಗಿ ಬೆಳೆಯಲು ಅವಕಾಶ ಕಲ್ಪಿಸಿಕೊಟ್ಟರು. ಆದರೆ 1994ರಲ್ಲಿ ಎದುರಾದ ಚುನಾವಣೆಗೆ ಡಿಕೆಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನಿರಾಕರಿಸಿತು. ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆದ್ದ ಡಿಕೆ, ಮತ್ತೆ ಕಾಂಗ್ರೆಸ್ ಸೇರಿದರು.
ಇದನ್ನು ಓದಿದ್ದೀರಾ?: ಕೇಂದ್ರ ಸಚಿವ ಎಚ್‌ಡಿಕೆ ರಾಜೀನಾಮೆ ಯಾವಾಗ?
ಅದೇ ಸಮಯದಲ್ಲಿ, 1994ರಲ್ಲಿ ಹರದನಹಳ್ಳಿಯ ದೇವೇಗೌಡರು ಹೊಳೆನರಸೀಪುರ ಕ್ಷೇತ್ರವನ್ನು ಪುತ್ರ ರೇವಣ್ಣರಿಗೆ ಬಿಟ್ಟುಕೊಟ್ಟು ರಾಮನಗರದತ್ತ ಹೆಜ್ಜೆ ಹಾಕಿದರು. ಒಕ್ಕಲಿಗರ ಸ್ವಾಮೀಜಿಯನ್ನು ಪಕ್ಕಕ್ಕಿಟ್ಟುಕೊಂಡು ಸಮಾವೇಶ ಮಾಡಿ, ಒಕ್ಕಲಿಗರನ್ನು ಒಟ್ಟುಗೂಡಿಸಿದರು. ಗೆದ್ದು ಮುಖ್ಯಮಂತ್ರಿಯೂ ಆದರು. ಅಷ್ಟೇ ಅಲ್ಲ, ಮುಖ್ಯಮಂತ್ರಿಯ ಪರಮಾಧಿಕಾರ ಬಳಸಿ, ಮತ್ತೊಬ್ಬ ಪುತ್ರ ಕುಮಾರಸ್ವಾಮಿಯವರನ್ನು ಕನಕಪುರದಿಂದ ಕಣಕ್ಕಿಳಿಸಿ ಗೆಲ್ಲಿಸಿಕೊಂಡು, 1996ರಲ್ಲಿ ದೇಶದ ಪ್ರಧಾನಿಯೂ ಆದರು. ನಿಧಾನವಾಗಿ ಒಕ್ಕಲಿಗ ಸಮುದಾಯ ದಟ್ಟವಾಗಿರುವ ಬೆಂಗಳೂರು ಗ್ರಾಮಾಂತರವನ್ನು ಹಿಡಿತಕ್ಕೆ ತೆಗೆದುಕೊಂಡರು.
ಆದರೆ, 1999ರ ಚುನಾವಣೆಯ ವೇಳೆಗೆ, ದೇವೇಗೌಡರು ಅಧಿಕಾರ ಕಳೆದುಕೊಂಡು ಮೂಲೆಗುಂಪಾಗಿದ್ದರು. ಬದಲಾದ ರಾಜಕೀಯ ಬೆಳವಣಿಗೆಗಳಿಂದಾಗಿ ಎಸ್.ಎಂ. ಕೃಷ್ಣ ಕೆಪಿಸಿಸಿ ಅಧ್ಯಕ್ಷರಾಗುವ ಮೂಲಕ, ಮತ್ತೊಬ್ಬ ಒಕ್ಕಲಿಗ ನಾಯಕ ಮುನ್ನೆಲೆಗೆ ಬಂದಿದ್ದರು. ಕೃಷ್ಣ ಪಾಂಚಜನ್ಯ ಮೊಳಗಿಸಿ, ಕಾಂಗ್ರೆಸ್ ಬಹುಮತ ಗಳಿಸಿ ಅಧಿಕಾರ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿ ಮುಖ್ಯಮಂತ್ರಿಯಾದರು. ಎಸ್.ಎಂ ಕೃಷ್ಣರ ‘ನೀಲಿಗಣ್ಣಿನ ಹುಡುಗ’ನಾದ ಶಿವಕುಮಾರ್, ನಗರಾಭಿವೃದ್ಧಿ, ಸಹಕಾರ ಸಚಿವರಾಗಿ ರಾಜಕಾರಣದ ಒಳ-ಹೊರಗನ್ನು ಅರ್ಥ ಮಾಡಿಕೊಳ್ಳತೊಡಗಿದರು. ಅಧಿಕಾರವನ್ನು ಅಸ್ತ್ರವನ್ನಾಗಿ ಪ್ರಯೋಗಿಸಿ ಹಣ ಮಾಡುವ ಕಲೆಯನ್ನು ಕರಗತ ಮಾಡಿಕೊಂಡರು. ಕೃಷ್ಣರು ಕಲ್ಪಿಸಿದ ಅವಕಾಶವನ್ನು ಕೊಂಚ ಹೆಚ್ಚಾಗಿಯೇ ದುರುಪಯೋಗಪಡಿಸಿಕೊಂಡು ವಿರೋಧಿಗಳನ್ನು ಮಟ್ಟಹಾಕಿದರು. ಕಾಂಗ್ರೆಸ್ಸಿನ ಹಿರಿಯರನ್ನು ಹಿಂಬದಿಗೆ ಸರಿಸಿ ಮುಂಚೂಣಿ ನಾಯಕನಾಗಿ ಹೊರಹೊಮ್ಮಿದರು.
ಹಳೇ ಮೈಸೂರು ಭಾಗದಲ್ಲಿ ಕೃಷ್ಣ-ಶಿವಕುಮಾರ್ ಒಂದಾಗಿ ಒಕ್ಕಲಿಗರನ್ನು ಒಗ್ಗೂಡಿಸುವ, ಸಮುದಾಯದ ಮುಖಂಡರಾಗುವ, ಪ್ರಭಾವಿ ನಾಯಕರಾಗುವ ನಾಗಾಲೋಟದಲ್ಲಿದ್ದರು. ಇದು ಮತ್ತೊಬ್ಬ ಒಕ್ಕಲಿಗ ನಾಯಕ ದೇವೇಗೌಡರಿಗೆ ಸಹಿಸಲಸಾಧ್ಯವಾದ ಸಂಕಟಕ್ಕೀಡುಮಾಡಿತು. ಅದರ ಫಲವಾಗಿ 2004ರಲ್ಲಿ ರಚನೆಯಾದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಗೌಡರ ಕೈ ಮೇಲಾಯಿತು. ಧರಂಸಿಂಗ್‌ರನ್ನು ಡಮ್ಮಿ ಸಿಎಂ ಮಾಡಿಕೊಂಡು, ಶಿವಕುಮಾರ್‍ಗೆ ಸ್ಥಾನ ನೀಡದೆ ಅವಮಾನಿಸಿ, ಅಧಿಕಾರದಿಂದ ದೂರವಿಡಲಾಯಿತು. ಅಷ್ಟೇ ಅಲ್ಲ, ತಮ್ಮ ಹಿಡಿತದಲ್ಲಿದ್ದ ಸಮ್ಮಿಶ್ರ ಸರ್ಕಾರವನ್ನು ಬಳಸಿಕೊಂಡು ಕ್ಷೇತ್ರ ಮರುವಿಂಗಡಣೆ ಮಾಡುವಾಗ, ಡಿಕೆಯವರ ಸಾತನೂರು ಕ್ಷೇತ್ರವನ್ನು ಇಲ್ಲದಂತೆ ಮಾಡಿ, ರಾಜಕೀಯ ಅಸ್ತಿತ್ವಕ್ಕೇ ಧಕ್ಕೆ ತರಲಾಯಿತು. ಎದೆಗುಂದದ ಡಿಕೆ, 2008ರಲ್ಲಿ ಕನಕಪುರ ಕ್ಷೇತ್ರದಿಂದಲೂ ಗೆದ್ದರು. 2013ರಲ್ಲಿಯೂ ಗೆಲುವು ಸಾಧಿಸಿದರು. ಆದರೆ, 2004ರಿಂದ 2014ರವರೆಗೆ ಡಿಕೆಗೆ ಯಾವುದೇ ಅಧಿಕಾರದ ಸ್ಥಾನವಿಲ್ಲದಂತೆ ನೋಡಿಕೊಳ್ಳಲಾಯಿತು.
ಅದೇ ಸಮಯದಲ್ಲಿ, 2004ರ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಮತ್ತು 2006ರ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಬಲದಿಂದ, ದೇವೇಗೌಡರ ಕುಟುಂಬ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ ಮತ್ತು ಮೈಸೂರಿನವರೆಗೂ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡಿತ್ತು. ಎಚ್.ಡಿ. ಕುಮಾರಸ್ವಾಮಿ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಾವು ಪ್ರತಿನಿಧಿಸುತ್ತಿದ್ದ ರಾಮನಗರ ಕ್ಷೇತ್ರವನ್ನು ಕೇಂದ್ರ ಸ್ಥಾನವಾಗಿಟ್ಟು ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಿಸಿದರು. ರಾಮನಗರ, ಮಾಗಡಿ, ಕನಕಪುರ ಹಾಗೂ ಚನ್ನಪಟ್ಟಣ ನಾಲ್ಕು ತಾಲ್ಲೂಕುಗಳನ್ನು ಜಿಲ್ಲೆಗೆ ಸೇರ್ಪಡೆಗೊಳಿಸಿದರು. ಆದರೆ, 2008ರಲ್ಲಿ ಅಧಿಕಾರ ಕಳೆದುಕೊಂಡ ಕುಮಾರಸ್ವಾಮಿ ನೇಪಥ್ಯಕ್ಕೆ ಸರಿದರು. 2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು, ಜೆಡಿಎಸ್ ಕುಟುಂಬದ ಪಕ್ಷವಾಗಿ ಸೊರಗತೊಡಗಿತು.
ಇದು ಒಕ್ಕಲಿಗ ಸಮುದಾಯವನ್ನು ಹಿಡಿತಕ್ಕೆ ತೆಗೆದುಕೊಳ್ಳಲು, ಸಮುದಾಯದ ಮೇಲೆ ಪ್ರಭಾವ ಹೆಚ್ಚಿಸಿಕೊಳ್ಳಲು ಎರಡು ಕುಟುಂಬಗಳ ನಡುವಿನ ಕದನವಾಗಿ ಮಾರ್ಪಾಡಾಯಿತು. ಇದರ ಮುಂದುವರೆದ ಭಾಗವಾಗಿ ಡಿಕೆ, 2004ರ ಲೋಕಸಭಾ ಚುನಾವಣೆಯಲ್ಲಿ, ಕನಕಪುರ ಲೋಕಸಭಾ ಕ್ಷೇತ್ರದಿಂದ ದೇವೇಗೌಡರ ವಿರುದ್ಧ ತೇಜಸ್ವಿನಿ ಎಂಬ ಪತ್ರಕರ್ತೆಯನ್ನು ಅಭ್ಯರ್ಥಿಯನ್ನಾಗಿ ಮಾಡಿ, ಗೆಲ್ಲಿಸುವ ಮೂಲಕ ಸೇಡು ತೀರಿಸಿಕೊಂಡಿದ್ದರು. ಇದಷ್ಟೇ ಅಲ್ಲ, ಚಿತ್ರನಟಿ ರಮ್ಯಾ ಅವರನ್ನೂ ರಾಜಕೀಯಕ್ಕೆ ಕರೆತಂದು, ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡಿ, ಗೆಲ್ಲಿಸಿಕೊಂಡು ಬರುವಲ್ಲಿ ಶಿವಕುಮಾರ್ ಯಶಸ್ವಿಯಾದರು.
ಈ ನಡುವೆ, 2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದಾಗ, ಡಿಕೆ ಶಿವಕುಮಾರ್ 2014ರಲ್ಲಿ ಇಂಧನ ಖಾತೆ ಸಚಿವರಾದರು. ಇದು ದೇವೇಗೌಡ ಮತ್ತವರ ಕುಟುಂಬಕ್ಕೆ ಭಾರೀ ಹಿನ್ನಡೆಯಂತೆ ಕಾಣತೊಡಗಿತು. ಏಕೆಂದರೆ, ದೇವೇಗೌಡರಿಗೆ ಸಿದ್ದರಾಮಯ್ಯ ಮತ್ತು ಶಿವಕುಮಾರ್- ಇಬ್ಬರೂ ರಾಜಕೀಯ ಶತ್ರುಗಳು. ಅವರಿಬ್ಬರೂ ಒಂದಾಗಿ, ಅಧಿಕಾರ ಅವರ ಕೈಯಲ್ಲಿದ್ದಾಗ, ಗೌಡರ ಶಕ್ತಿ ಕುಂದತೊಡಗಿತು.
ಏತನ್ಮಧ್ಯೆ, 2017ರಲ್ಲಿ ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ, ಪಕ್ಷದ ಸೂಚನೆಯಂತೆ ಅಲ್ಲಿನ ಶಾಸಕರನ್ನು ಬೆಂಗಳೂರಿಗೆ ಕರೆತಂದು, ಆಗಬಹುದಾಗಿದ್ದ ಕುದುರೆ ವ್ಯಾಪಾರವನ್ನು ಡಿಕೆ ತಪ್ಪಿಸಿದರು. ಇದರಿಂದ ಅಹ್ಮದ್ ಪಟೇಲ್ ಗೆದ್ದು ರಾಜ್ಯಸಭಾ ಸದಸ್ಯರಾದರೆ, ಡಿಕೆ ‘ಟ್ರಬಲ್ ಶೂಟರ್’ ಎಂಬ ಹೆಸರು ಗಳಿಸಿದರು. ಅತ್ತ ಬಿಜೆಪಿಯ ಸೋಲನ್ನು ಸಹಿಸಿಕೊಳ್ಳಲಾಗದ ಅಮಿತ್ ಶಾ ಕೆಂಡಾಮಂಡಲರಾದರು. ಇದರ ಪ್ರತೀಕಾರವಾಗಿ, ಕೇಂದ್ರದ ಐಟಿ ಇಲಾಖೆಯ 300 ಅಧಿಕಾರಿಗಳು ಡಿಕೆ ಮನೆ, ಕಚೇರಿಗಳ ಮೇಲೆ ಏಕಾಏಕಿ ದಾಳಿ ಇಟ್ಟರು. ಲೆಕ್ಕವಿಲ್ಲದ 8 ಕೋಟಿ ಹಣವನ್ನು ವಶಪಡಿಸಿಕೊಂಡು ಕೇಸು ದಾಖಲಿಸಿದರು. ಕಂಬಿಗಳ ಹಿಂದೆ ಕೂರಿಸಿದರು. ಡಿಕೆಗೆ ರಾಜಕಾರಣದಲ್ಲೊಂದು ಕಪ್ಪು ಚುಕ್ಕೆ ಅಂಟಿಕೊಂಡಿತು.
ಇದನ್ನು ಓದಿದ್ದೀರಾ?: ಹೆಚ್‌ಡಿಕೆ ಜಮೀನು ಕದ್ದಿಲ್ಲ ಎಂದರೆ ಅದಕ್ಕೆ ದಾಖಲೆ ಇರುತ್ತೆ, ಯಾಕೆ ಗಾಬರಿ: ಡಿ.ಕೆ.ಶಿವಕುಮಾರ್ ಪ್ರಶ್ನೆ
ಇದರಿಂದ ವಿಚಲಿತರಾದರೂ ತೋರ್ಪಡಿಸಿಕೊಳ್ಳದ ಡಿಕೆ, 2018ರ ಚುನಾವಣೆಯಲ್ಲಿ ಮತ್ತೆ ಗೆದ್ದು, ಕಾಂಗ್ರೆಸ್ ಬಹುಮತ ಗಳಿಸುವಲ್ಲಿ ವಿಫಲವಾದಾಗ, ಕ್ಷಿಪ್ರಕ್ರಾಂತಿಗೆ ಕೈಹಾಕಿ, ಬಿಜೆಪಿ ವಿರುದ್ಧ ಬಹಿರಂಗ ಸಮರ ಸಾರಿದರು. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ತರುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಜಾತ್ಯತೀತ ಶಕ್ತಿಗಳು ಒಂದಾಗಿ, ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಈ ತಂತ್ರ ಫಲಿಸಿ, ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ, ಡಿಕೆ ಶಿವಕುಮಾರ್ ಜಲ ಸಂಪನ್ಮೂಲ, ವೈದ್ಯಕೀಯ ಶಿಕ್ಷಣ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವರಾದರು. ಆದರೆ ಈ ಸರ್ಕಾರ ಬಹಳ ದಿನ ಬದುಕಲಿಲ್ಲ. 2019ರಲ್ಲಿ ಕೊನೆಯುಸಿರೆಳೆಯಿತು.
ಕಾಂಗ್ರೆಸ್-ಜೆಡಿಎಸ್ ಸರ್ಕಾರ ಬಿದ್ದುಹೋಗಿದ್ದಕ್ಕೆ ಸಿದ್ದರಾಮಯ್ಯ ಕಾರಣ ಎಂದು ಕುಮಾರಸ್ವಾಮಿ ಮತ್ತು ಗೌಡರು ಬಹಿರಂಗವಾಗಿಯೇ ದೂರತೊಡಗಿದರು. ಸಮಯ ಸಿಕ್ಕಾಗಲೆಲ್ಲ ಕೆಂಡ ಕಾರತೊಡಗಿದರು. ಆದರೆ, ಡಿಕೆ ಶಿವಕುಮಾರ್ ಸುಮ್ಮನೆ ಕೂರಲಿಲ್ಲ. 2020ರಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಶಿವಕುಮಾರ್ ಪಕ್ಷ ಸಂಘಟಿಸುವತ್ತ ಗಮನ ಹರಿಸತೊಡಗಿದರು. ಅವರ ಸಂಘಟನೆ, ಹೋರಾಟ, ಅಭ್ಯರ್ಥಿಗಳ ಆಯ್ಕೆ ಮತ್ತು ಹಣ ವಿನಿಯೋಗಿಸಿದರ ಫಲವಾಗಿ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಗಳಿಸಿ, ಅಧಿಕಾರಕ್ಕೇರಿದಾಗ ಸಿದ್ದರಾಮಯ್ಯ ಮುಖ್ಯಮಂತ್ರಿ, ಡಿಕೆ ಉಪ ಮುಖ್ಯಮಂತ್ರಿಯಾದರು. ಜೆಡಿಎಸ್ 19 ಸ್ಥಾನಗಳಿಗೆ ಕುಸಿದು, ಹೀನಾಯ ಸೋಲು ಕಂಡಿತು. ಇದು ದೇವೇಗೌಡ ಮತ್ತವರ ಕುಟುಂಬದ ಜಂಘಾಬಲವನ್ನೇ ಉಡುಗಿಸಿತು.
ಅಲ್ಲಿಗೆ ಒಕ್ಕಲಿಗರ ಪಕ್ಷ ಎಂದು ತನಗೆ ತಾನೇ ಬಿಂಬಿಸಿಕೊಳ್ಳುತ್ತಿದ್ದ ಜೆಡಿಎಸ್ ವರಿಷ್ಠರ ಸಾಮ್ರಾಜ್ಯ ಕುಸಿದಿತ್ತು. ಹಾಗೆಯೇ ಬಿಜೆಪಿಯ ಒಕ್ಕಲಿಗ ನಾಯಕರನ್ನೂ ಹಿಮ್ಮೆಟ್ಟಿಸಿತ್ತು. ಸಹಜವಾಗಿಯೇ ಡಿಕೆ ಸಹೋದರರ ಸಾಮ್ರಾಜ್ಯ ವಿಸ್ತರಣೆಗೆ ಅದು ಅನುವು ಮಾಡಿಕೊಟ್ಟಿತ್ತು. ಭರಪೂರ ಅವಕಾಶಗಳನ್ನು ಸೃಷ್ಟಿಸಿತ್ತು. ಅದಕ್ಕೆ ಪೂರಕವಾಗಿ ಎಸ್.ಎಂ. ಕೃಷ್ಣರಿಗೆ ವಯಸ್ಸಾಗಿ, ಬಿಜೆಪಿ ಸೇರಿ, ನೇಪಥ್ಯಕ್ಕೆ ಸರಿದಿದ್ದರು. ಅದು ರಾಜ್ಯದಲ್ಲಿ ಒಕ್ಕಲಿಗರು ಎಂದಾಕ್ಷಣ ಗೌಡರ ಕುಟುಂಬ ಮತ್ತು ಡಿಕೆ ಕುಟುಂಬದ ನಡುವೆ ಹರಿದು ಹಂಚಿಹೋದಂತೆ ಭಾಸವಾಗತೊಡಗಿತು. ಅದಕ್ಕೆ ಪೂರಕವಾಗಿ, ಆ ಕುಟುಂಬಗಳ ಅಪರಿಮಿತ ಆಸ್ತಿ, ಅವರ ಅಟ್ಟಹಾಸ ಎದ್ದು ಕಾಣತೊಡಗಿತು.
ಅದೇ ಸಮಯದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯ ಸುರೇಶ್ ಕೇಂದ್ರದ ಮೋದಿ ಸರ್ಕಾರದ ವಿರುದ್ಧ ಗುಟುರು ಹಾಕಿದರು. ಅವರ ಮೇಲೆ ಮೋದಿ ಕಣ್ಣು ಬಿತ್ತು. ಡಿಕೆ ಮೇಲೆ ಅಮಿತ್ ಶಾಗೆ ಹಳೆಯ ಸಿಟ್ಟಿತ್ತು. ಆ ಸಿಟ್ಟು ಕೆರಳುವಂತೆ, ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ದೆಹಲಿಯಲ್ಲಿ ಪ್ರತಿಭಟನೆ ಮಾಡಿತು. ಅದು ಇನ್ನಷ್ಟು ಹೆಚ್ಚಾಯಿತು.
ಇಂತಹ ಸುಸಂದರ್ಭಕ್ಕಾಗಿಯೇ ಕಾದಿದ್ದ ದೇವೇಗೌಡರು, 2024ರ ಲೋಕಸಭಾ ಚುನಾವಣೆಯ ನೆಪದಲ್ಲಿ ದಿಲ್ಲಿಗೆ ಹೋಗಿ ಮೋದಿಯ ಕೈ ಕುಲುಕಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರು. ಸುರೇಶ್ ಮಣಿಸಲು ಡಾ. ಮಂಜುನಾಥರನ್ನು ಕಣಕ್ಕಿಳಿಸಲು ಮುಂದಾದರು. ಅಲ್ಲಿಯವರೆಗೆ ಬಿಜೆಪಿಯತ್ತ ಒಲವು ತೋರದಿದ್ದ ಹಳೇ ಮೈಸೂರು ಭಾಗದ ಒಕ್ಕಲಿಗರು ಗೌಡರ ಕೃಪೆಯಿಂದ ಬಿಜೆಪಿಯತ್ತ ವಾಲತೊಡಗಿದರು. ಮೋದಿಗೂ ಅದೇ ಬೇಕಿತ್ತು, ಮುದಗೊಂಡರು.
ಈ ಮೈತ್ರಿಯ ಫಲವಾಗಿ ಹಳೇ ಮೈಸೂರು ಭಾಗದ ಒಕ್ಕಲಿಗರು ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳತ್ತ ವಾಲಿದರು. ತವರು ಜಿಲ್ಲೆ ಹಾಸನವೊಂದನ್ನು ಬಿಟ್ಟು, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಮಂಡ್ಯದಲ್ಲಿ ಮತ್ತೆ ಗೌಡರ ಕುಟುಂಬದ ಪ್ರಭಾವ ಮತ್ತು ಪ್ರಾಬಲ್ಯ ಹೆಚ್ಚಿತು. ಕುಮಾರಸ್ವಾಮಿ ಗೆದ್ದು ಕೇಂದ್ರದ ಮಂತ್ರಿಯೂ ಆದರು. ಹಾಗೆಯೇ ಬೆಂಗಳೂರು ಗ್ರಾಮಾಂತರದಲ್ಲಿ ಡಿಕೆ ಸಹೋದರರ ಕೋಟೆಯನ್ನು ಗೌಡರ ಅಳಿಯ ಡಾ. ಮಂಜುನಾಥ್ ಛಿದ್ರ ಮಾಡಿದರು. ಇದರಿಂದ ಜರ್ಜರಿತರಾದ ಡಿಕೆ ಸಹೋದರರು ಸಾಮ್ರಾಜ್ಯ ಕಳೆದುಕೊಂಡು ಕಂಗಾಲಾಗಿ ಕೂರುವಂತಾಯಿತು.
ಹೀಗೆ ತಣ್ಣಗೆ ಕೂರುವುದು ಪೈಲ್ವಾನರ, ಪಾಳೇಗಾರರ ಸ್ವಭಾವವಲ್ಲವಾದ್ದರಿಂದ, ಡಿಸಿಎಂ ಡಿಕೆ ಶಿವಕುಮಾರ್ ಚನ್ನಪಟ್ಟಣ ಉಪಚುನಾವಣೆ ನೆಪದಲ್ಲಿ ಬೀದಿಗಿಳಿದರು. ಕಂಡ ಕಂಡ ದೇವರಿಗೆಲ್ಲ ಕೈ ಮುಗಿದರು. ಒಳಗೊಳಗೆ ಗೌಡರ ಕುಟುಂಬದ ವಿರುದ್ಧ ಹೂಂಕರಿಸುತ್ತಿದ್ದರು. ಅತ್ತ ಕಡೆಯಿಂದ ಕುಮಾರಸ್ವಾಮಿಯವರು ಕೂಡ ತೊಡೆ ತಟ್ಟಿ ಅಖಾಡಕ್ಕೆ ಇಳಿಯಲು ಸಜ್ಜಾದರು. ಒಬ್ಬರು ಸಹೋದರನಿಗಾಗಿ, ಮತ್ತೊಬ್ಬರು ಮಗನಿಗಾಗಿ- ಕದನಕ್ಕೆ ಕಾತರಿಸಿದರು.

ಕುಮಾರಸ್ವಾಮಿಯವರು ಚನ್ನಪಟ್ಟದಲ್ಲಿ ಮಗನನ್ನು ಕಣಕ್ಕಿಳಿಸಿ ಸೋತರೂ, ಕೇಂದ್ರದ ಸಚಿವಸ್ಥಾನವೇನೂ ಹೋಗಲಿಲ್ಲ. ಬಿಜೆಪಿಯಲ್ಲಿದ್ದ ಯೋಗೇಶ್ವರ್ ಅವರನ್ನು ಕಾಂಗ್ರೆಸ್ಸಿಗೆ ಕರೆತಂದ ಶಿವಕುಮಾರ್ ಗೆಲ್ಲಿಸಿಕೊಂಡರೂ, ಬೊಂಬೆನಾಡು ಚಿನ್ನದ ನಾಡಾಗಲಿಲ್ಲ. ‘ನಾನು ಜೀವಂತವಿರುವವರೆಗೆ ರಾಮನಗರ ಹೆಸರು ಬದಲಾಗಲು ಬಿಡಲ್ಲ’ ಎಂದು ಕುಮಾರಸ್ವಾಮಿ ಗುಟುರು ಹಾಕಿದ್ದರು. ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯನ್ನಾಗಿ ಮಾಡಿಯೇ ತೀರುತ್ತೇನೆಂದು ಶಿವಕುಮಾರ್ ಗುಡುಗಿದ್ದರು. ಈಗ ಕೇಂದ್ರದ ಗೃಹ ಸಚಿವಾಲಯ ನಾಮಕರಣಕ್ಕೆ ತಡೆಯೊಡ್ಡಿ, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿದೆ. ಇದರಿಂದ ಡಿಕೆ ಅಹಂಗೆ ಪೆಟ್ಟು ಬಿದ್ದಿದೆ. ಎಚ್‌ಡಿಕೆ ಮುಖ ಅರಳಿದೆ.
ಹಾಗಾಗಿ ಇದು ದೊಡ್ಡಾಲಳ್ಳಿಯ ಕೆಂಪೇಗೌಡರ ಮತ್ತು ಹರದನಹಳ್ಳಿಯ ದೇವೇಗೌಡರ ಕುಟುಂಬಗಳ ಕದನ. ಈ ಎರಡು ಕುಟುಂಬಗಳ ರಾಜಕೀಯ ಅಧಿಕಾರಕ್ಕಾಗಿ, ಅಭಿವೃದ್ಧಿಗಾಗಿ, ಸಂಪತ್ತಿನ ಸಂರಕ್ಷಣೆಗಾಗಿ ನಡೆದ, ನಡೆಯುತ್ತಿರುವ ಕದನ. ಇಲ್ಲಿ ಒಕ್ಕಲಿಗ ಸಮುದಾಯ ಕಾಲಾಳುಗಳಾಗಿ, ಕಾದಾಟದ ಅಸ್ತ್ರಗಳಾಗಿ ಬಳಕೆಯಾಗುತ್ತಿದೆ. ದುರದೃಷ್ಟಕರ ಸಂಗತಿ ಎಂದರೆ, ಈ ಸಮುದಾಯ ನಲವತ್ತು ವರ್ಷಗಳ ಹಿಂದೆ ಹೇಗಿತ್ತೋ ಇವತ್ತು ಕೂಡ ಹಾಗೆಯೇ ಇದೆ.
ರಾಜ್ಯ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಈ ಬಹುಸಂಖ್ಯಾತ ಸಮುದಾಯ ರಾಜಕೀಯ ಪ್ರಜ್ಞೆ ಬೆಳೆಸಿಕೊಂಡು ಯೋಗ್ಯ ನಾಯಕನನ್ನು ಆಯ್ಕೆ ಮಾಡಿಕೊಳ್ಳುವವರೆಗೆ, ಈ ಪಾಳೇಗಾರಿಕೆ ಮುಂದುವರೆಯಲಿದೆ.

ಲೇಖಕ, ಪತ್ರಕರ್ತ