- ವಂಚನೆ ಪ್ರಕರಣದಲ್ಲಿ ಈವರೆಗೆ ಒಟ್ಟು 8 ಮಂದಿಯನ್ನು ಬಂಧಿಸಿರುವ ಸಿಸಿಬಿ
- ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ ದಯಾನಂದ್ ಮಾಹಿತಿ
ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ, 5 ಕೋಟಿ ವಂಚನೆ ಪ್ರಕರಣದ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ನಗದು ಚಿನ್ನ ಸೇರಿ 2 ಕೋಟಿಗೂ ಹೆಚ್ಚು ಮೌಲ್ಯದ ವಸ್ತು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣದ ತನಿಖೆಯ ಬಗ್ಗೆ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ ದಯಾನಂದ್, ವಂಚನೆ ಪ್ರಕರಣದಲ್ಲಿ ಈವರೆಗೆ ಒಟ್ಟು 8 ಮಂದಿಯನ್ನು ಬಂಧಿಸಲಾಗಿದೆ. ನಗದು ಚಿನ್ನ ಸೇರಿ 2 ಕೋಟಿಗೂ ಹೆಚ್ಚು ಮೌಲ್ಯದ ವಸ್ತು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

“ಚೈತ್ರಾ ಕುಂದಾಪುರ ಸೇರಿದಂತೆ ಎಲ್ಲರಿಂದಲೂ ಬೇರೆ ಬೇರೆ ವಸ್ತುಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚೈತ್ರಾ ಕುಂದಾಪುರ ಕಡೆಯಿಂದ ಡಿಡಿ, ಚಿನ್ನಾಭರಣ, ಕಾರು, ನಗದನ್ನು ವಶಕ್ಕೆ ಪಡೆಯಲಾಗಿದೆ. ಹಾಲಶ್ರೀ ಸ್ವಾಮೀಜಿಯವರಿದ್ದ ವಿಜಯಪುರದ ಹಿರೇಹಡಗಲಿಯಲ್ಲಿರುವಂತಹ ಅವರ ಮಠದಲ್ಲಿ 56 ಲಕ್ಷ ನಗದು ಹಾಗೂ ಇನ್ನೊಬ್ಬ ವ್ಯಕ್ತಿಯಿಂದ 20 ಲಕ್ಷ ನಗದು ಸೇರಿದಂತೆ ಈವರೆಗೆ ಒಟ್ಟು 2 ಕೋಟಿಗೂ ಹೆಚ್ಚು ಮೌಲ್ಯದ ವಸ್ತು ವಶಕ್ಕೆ ಪಡೆಯಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ ದಯಾನಂದ್ ತಿಳಿಸಿದರು.
“8 ಆರೋಪಿಗಳ ಹೊರತಾಗಿಯೂ ಪ್ರಕರಣದ ಸಂಬಂಧ ಹಲವಾರು ಜನರನ್ನು ಸಿಸಿಬಿ ಪೊಲೀಸರು ತನಿಖೆಯ ಭಾಗವಾಗಿ ಕೂಲಂಕಷವಾಗಿ ವಿಚಾರಣೆ ನಡೆಸುತ್ತಿದ್ದಾರೆ. ತನಿಖೆಯ ಹಂತದಲ್ಲಿರುವುದರಿಂದ ಎಲ್ಲವನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲ. ಬಂಧಿತ ಎಂಟು ಮಂದಿಯಿಂದ ಸಿಸಿಬಿ ಪೊಲೀಸರು ಎಲ್ಲ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ” ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ತಿಳಿಸಿದರು.