ಕರ್ನಾಟಕದ ಸೋಲಿನಿಂದ ಕಂಗೆಟ್ಟಿರುವ ಬಿಜೆಪಿಗೆ ಟಿಡಿಪಿ ಮರೆಯಲ್ಲಾದರೂ ಆಂಧ್ರದಲ್ಲಿ ನೆಲೆ ಕಂಡುಕೊಳ್ಳುವ ಬಯಕೆ; ತನ್ನ ಹೆಸರು ಮತ್ತು ಪಕ್ಷದ ಮತಗಳಿಕೆಯ ಬಗ್ಗೆ ವಿಶ್ವಾಸ ಕಳೆದುಕೊಂಡು ಹೈರಾಣಾಗಿರುವ ಚಂದ್ರಬಾಬು ನಾಯ್ಡುಗೆ ಮೋದಿ ಹೆಸರಿನಲ್ಲಾದರೂ ಆಂಧ್ರದ ಗದ್ದುಗೆ ಏರುವ ಕನವರಿಕೆ.
ಕರ್ನಾಟಕದ ವಿಧಾನಸಭಾ ಚುನಾವಣೆಯ ಸೋಲು ಆಕಾಶದಲ್ಲಿ ವಿಹರಿಸುತ್ತಿದ್ದ ಬಿಜೆಪಿ ಹೈಕಮಾಂಡ್ ಅನ್ನು ನೆಲ ನೋಡುವಂತೆ ಮಾಡಿದೆ. ಪ್ರಾದೇಶಿಕ ಪಕ್ಷಗಳನ್ನು ಕಡೆಗಣ್ಣಿನಿಂದ ನೋಡುತ್ತಿದ್ದ ಮೋದಿ, ಶಾ ತಂಡಕ್ಕೆ ಈಗ ವಿವಿಧ ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಅನಿವಾರ್ಯವಾಗಿ ಪರಿಣಮಿಸಿವೆ. ಹಳೇ ದೋಸ್ತಿಗಳನ್ನು ಹುಡುಕಿ ಅವರೊಂದಿಗೆ ಮೈತ್ರಿ ಕುದುರಿಸಿಕೊಳ್ಳಲು ಬಿಜೆಪಿ ಕಾತರಿಸುತ್ತಿದೆ. ಆಂಧ್ರಪ್ರದೇಶದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳೇ ಇದಕ್ಕೆ ನಿದರ್ಶನ.
ಇತ್ತೀಚೆಗೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಭಾಗವಹಿಸಿದ್ದ ಅಮಿತ್ ಶಾ, ಜಗನ್ ಮೋಹನ್ ರೆಡ್ಡಿ ಸರ್ಕಾರ ಭ್ರಷ್ಟ ಸರ್ಕಾರ ಎಂದು ಟೀಕಿಸಿದ್ದರು. ‘ಜಗನ್ ವಿಶಾಖಪಟ್ಟಣಂ ಅನ್ನು ಸಮಾಜವಿರೋಧಿಗಳ ಹಾಗೂ ಡ್ರಗ್ ಪೆಡ್ಲರ್‌ಗಳ ನೆಲೆಯನ್ನಾಗಿ ಪರಿವರ್ತಿಸಿದ್ದಾರೆ’ ಎಂದು ಆರೋಪಿಸಿದ್ದರು. ಈ ಮೂಲಕ 2024ರಲ್ಲಿ ನಡೆಯಲಿರುವ ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ತಾವು ಜಗನ್ ಅವರ ವೈಎಸ್‌ಆರ್‌ಸಿಪಿ ಜೊತೆಗೆ ಇರುವುದಿಲ್ಲ ಎನ್ನುವ ಪರೋಕ್ಷ ಸಂದೇಶ ರವಾನಿಸಿದ್ದರು. ನಂತರ ಅದಕ್ಕೆ ಪ್ರತಿಕ್ರಿಯಿಸಿದ್ದ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ, ತಮ್ಮೊಂದಿಗೆ ಬಿಜೆಪಿ ಇಲ್ಲದೇ ಇರಬಹುದು, ಆದರೆ ಆಂಧ್ರದ ಜನರಿದ್ದಾರೆ ಎಂದಿದ್ದರು.
ಜಗನ್‌ಮೋಹನ್ ರೆಡ್ಡಿ ಜೊತೆ ಇರುವುದಿಲ್ಲ ಎಂದರೆ, ಬಿಜೆಪಿಗೆ ಆಂಧ್ರದಲ್ಲಿ ಇರುವ ಆಯ್ಕೆ ತೆಲುಗು ದೇಶಂ ಪಕ್ಷವೊಂದೇ. ಪವನ್ ಕಲ್ಯಾಣ್ ಅವರ ಜನಸೇನಾ ಪಾರ್ಟಿ ಈಗಾಗಲೇ ಟಿಡಿಪಿ ಜೊತೆ ಗುರುತಿಸಿಕೊಂಡಿದೆ. ಹೀಗಾಗಿ ಮುಂದಿನ ವರ್ಷ ನಡೆಯಲಿರುವ ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಡಿಪಿ ಹಾಗೂ ಜನಸೇನಾ ಮೈತ್ರಿ ಮಾಡಿಕೊಳ್ಳುವುದು ಬಹುತೇಕ ನಿಶ್ಚಿತವಾಗಿದೆ.
2014ರಲ್ಲಿಯೂ ಇದೇ ರೀತಿಯ ಮೈತ್ರಿ ಏರ್ಪಟ್ಟಿತ್ತು. ಚಂದ್ರಬಾಬು ನಾಯ್ಡು ಎನ್‌ಡಿಎ ಭಾಗವಾಗಿದ್ದರು. ಆದರೆ, 2019ರ ಚುನಾವಣೆ ಹತ್ತಿರ ಬರುತ್ತಿದ್ದಂತೆ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡದೇ ಕೇಂದ್ರ ಸರ್ಕಾರ ವಂಚಿಸಿದೆ ಎಂದು ಮೋದಿ ವಿರುದ್ಧ ಬಂಡೆದ್ದ ಚಂದ್ರಬಾಬು ನಾಯ್ಡು, ಎನ್‌ಡಿಎಯಿಂದ ಹೊರಬಂದಿದ್ದರು. ಜೊತೆಗೆ ಮೋದಿ ಮತ್ತು ಶಾ ವಿರುದ್ಧ ತೀವ್ರ ವಾಗ್ದಾಳಿ ನಡೆಸತೊಡಗಿದ್ದರು. ಆಂಧ್ರಪ್ರದೇಶಕ್ಕೆ ಮೋದಿ ಮತ್ತು ಶಾ ಭೇಟಿ ನೀಡಿದಾಗ ಅವರ ವಿರುದ್ಧ ಟಿಡಿಪಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಿದ್ದರು. ಅಮಿತ್ ಶಾ ಅವರ ಕಾರಿನತ್ತ ಕಲ್ಲು ತೂರಿದ್ದರು. ಅದು ನಾಯ್ಡು ತೆಗೆದುಕೊಂಡ ತಪ್ಪು ನಿರ್ಧಾರ ಎನ್ನುವ ವಿಶ್ಲೇಷಣೆಗಳು ನಂತರದ ದಿನಗಳಲ್ಲಿ ಕೇಳಿಬಂದಿದ್ದವು. ಅದಕ್ಕೆ ತಕ್ಕಂತೆ 2019ರ ವಿಧಾನಸಭಾ ಚುನಾವಣೆಯಲ್ಲಿ ಜಗನ್ ಅವರ ವೈಎಸ್‌ಆರ್‌ಸಿಪಿ ಎದುರು ಟಿಡಿಪಿ ಧೂಳೀಪಟವಾಗಿತ್ತು.
ಇದಾದ ನಂತರ ಚಂದ್ರಬಾಬು ನಾಯ್ಡು ಬಿಜೆಪಿಯೊಂದಿಗಿನ ಸಂಬಂಧ ಪುನರ್ ಸ್ಥಾಪನೆಗೆ ಹಲವು ರೀತಿಗಳಲ್ಲಿ ಪ್ರಯತ್ನಿಸುತ್ತಲೇ ಇದ್ದರು. ಮೊನ್ನೆ ಕೂಡ, ಅಮಿತ್ ಶಾ ವಿಶಾಖಪಟ್ಟಣಂಗೆ ಭೇಟಿ ನೀಡುವ ಎರಡು ವಾರಗಳ ಹಿಂದೆ, ನಾಯ್ಡು ದೆಹಲಿಗೆ ತೆರಳಿ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು. ರಾಜ್ಯದಲ್ಲಿ ಪವನ್ ಕಲ್ಯಾಣ್ ಅವರ ಜನಸೇನಾ ಜೊತೆ, ಕೇಂದ್ರದಲ್ಲಿ ಬಿಜೆಪಿ ಜೊತೆ ಸೇರಿ ಚುನಾವಣೆ ಎದುರಿಸುವುದು ಚಂದ್ರಬಾಬು ನಾಯ್ಡು ಯೋಚನೆಯಾಗಿದೆ.
ಈ ಸುದ್ದಿ ಓದಿದ್ದೀರಾ: ಮಹಾರಾಷ್ಟ್ರ | ‘ಗಂಡು ಸಂತಾನದ ಸೂತ್ರ’ ಹೇಳಿದ ನಿವೃತ್ತಿ ಮಹಾರಾಜ್‌ಗೆ ಜೈಲು ಸೇರುವ ಆತಂಕ
ಟಿಡಿಪಿ ಜನಸೇನಾ ಮೈತ್ರಿಕೂಟಕ್ಕೆ ಸೂಕ್ತ ರೀತಿಯಲ್ಲಿ ತಿರುಗೇಟು ನೀಡಲು ಆಂಧ್ರದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸಕಲ ರೀತಿಯಲ್ಲೂ ತಂತ್ರ ಹೆಣೆಯುತ್ತಿದ್ದಾರೆ. ಪಕ್ಷಗಳಿಗಿಂತಲೂ ಜನರ ಒಲವು ಗಳಿಸುವತ್ತ ಹೆಚ್ಚು ಒತ್ತು ಕೊಟ್ಟಿರುವ ಜಗನ್, ನೇರ ಪಾವತಿ ಯೋಜನೆಗಳ ಮೂಲಕ ಜನರ ಮನ ಗೆಲ್ಲಲು ಹೊರಟಿದ್ದಾರೆ. ತಮ್ಮ ಇತ್ತೀಚಿನ ಬಜೆಟ್‌ನಲ್ಲೂ ಜಗನ್, 54,000 ಕೋಟಿ ರೂಪಾಯಿಗಳನ್ನು ನೇರ ಪಾವತಿ ಯೋಜನೆಗಳಿಗಾಗಿ ಮೀಸಲಿಟ್ಟಿದ್ದರು. ಇದರ ಬಗ್ಗೆ ತಕರಾರು ತೆಗೆದಿರುವ ನಾಯ್ಡು ಬಣ, ಜಗನ್ ರಾಜ್ಯವನ್ನು ಸಾಲದ ಸುಳಿಗೆ ನೂಕುತ್ತಿದ್ದಾರೆ ಎಂದು ಆರೋಪಿಸುತ್ತಿವೆ. ಒಂದು ಕಡೆ ಚಂದ್ರಬಾಬು ನಾಯ್ಡು ಮಗ ನಾರಾ ಲೋಕೇಶ್, ಮತ್ತೊಂದೆಡೆ ಪವನ್ ಕಲ್ಯಾಣ್ ಪ್ರತ್ಯೇಕ ರ್‍ಯಾಲಿಗಳನ್ನು ನಡೆಸುತ್ತಾ ಜಗನ್ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸಲು ಹೆಣಗುತ್ತಿದ್ದಾರೆ.
ಟಿಡಿಪಿ ಮರೆಯಲ್ಲಿ ಆಂಧ್ರಪ್ರದೇಶದಲ್ಲಿ ನೆಲೆ ಕಂಡುಕೊಳ್ಳುವುದು ಬಿಜೆಪಿಯ ಬಯಕೆ. ತನ್ನ ಹೆಸರು, ಪ್ರಭಾವ ಮತ್ತು ಪಕ್ಷದ ಮತಗಳಿಕೆಯ ಬಗ್ಗೆ ವಿಶ್ವಾಸ ಕಳೆದುಕೊಂಡು ಹೈರಾಣಾಗಿರುವ ಚಂದ್ರಬಾಬು ನಾಯ್ಡುಗೆ ಮೋದಿ ಹೆಸರಿನಲ್ಲಾದರೂ ಆಂಧ್ರದ ಗದ್ದುಗೆ ಏರುವ ಕನವರಿಕೆ. ತಮ್ಮದೇ ಆಲೋಚನೆ, ತಂತ್ರಗಳೊಂದಿಗೆ ಬಿಜೆಪಿ, ಟಿಡಿಪಿ, ವೈಎಸ್‌ಆರ್‌ಸಿಪಿ ಹಾಗೂ ಜನಸೇನಾ ಪಕ್ಷಗಳು ಸಮರ ಸಿದ್ಧತೆಯಲ್ಲಿ ತೊಡಗಿವೆ.