ಬ್ರಾಹ್ಮಣರಿಂದ ಬ್ರಾಹ್ಮಣರಿಗೆ ಮೋಸ: 24 ಲಕ್ಷ ಕಳೆದುಕೊಂಡು ಭಿಕ್ಷೆ ಬೇಡುತ್ತಿರುವ ಹೆಬ್ಬಾರ್

Date:

Advertisements
ಹೆಬ್ಬಾರ್ ಒಬ್ಬರೇ ಅಲ್ಲ, ಬೆಂಗಳೂರಿನ ಬಸವನಗುಡಿಯ ಬ್ರಾಹ್ಮಣರೆಲ್ಲರೂ ಗುರುರಾಘವೇಂದ್ರ ಬ್ಯಾಂಕಿನ ಗ್ರಾಹಕರೇ ಆಗಿದ್ದರು. ಆಡಳಿತ ಮಂಡಳಿಗೆ ಆಯ್ಕೆಯಾಗಿ ಬಂದ ಕೆಲ ಬ್ರಾಹ್ಮಣರೇ ಬ್ಯಾಂಕನ್ನು ಮುಳುಗಿಸಿದರು. ಈ ಬ್ಯಾಂಕ್ ಮುಳುಗಿದ್ದು ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿರುವಾಗಲೇ, ಬಿಜೆಪಿಯ ಶಾಸಕ-ಸಂಸದರ ಮೂಗಿನಡಿಯಲ್ಲಿಯೇ…

ಬೆಂಗಳೂರಿನ ಬಸವನಗುಡಿಯ ಎನ್ನಾರ್ ಕಾಲನಿಯ ಶಾಂತಮ್ಮ ವಠಾರದ ಪುಟ್ಟ ಮನೆಯಲ್ಲಿ ವಾಸವಿರುವ ಲಕ್ಷ್ಮೀನಾರಾಯಣ ಹೆಬ್ಬಾರ್ ಎಂಬ ಎಪ್ಪತ್ತೇಳು ವರ್ಷದ ವಯೋವೃದ್ಧರು, ಪ್ರತಿದಿನ ಬೆಳಗ್ಗೆ ಗುರುರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಮುಂದೆ ಬಂದು ನಿಲ್ಲುತ್ತಾರೆ.

ಗುರುರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್‌ಗೆ ಬೀಗ ಬಿದ್ದಿದೆ. ಬ್ಯಾಂಕಿನ ಮುಂದೆ ಕಸ ಬಿದ್ದಿದೆ. ಒಂದು ಕಾಲದಲ್ಲಿ ಗಿಜಿಗುಡುತ್ತಿದ್ದ ಬ್ಯಾಂಕ್ ಈಗ ಬಿಕೋ ಎನ್ನುತ್ತಿದೆ. ಅಂತಹ ಬ್ಯಾಂಕ್ ಮುಂದೆ ಪ್ರತಿದಿನ ಬರುವ ಹೆಬ್ಬಾರ್, ಬೀಗ ನೋಡುತ್ತಾ ನಿಲ್ಲುತ್ತಾರೆ. ಯಾರನ್ನೂ ಏನನ್ನೂ ಕೇಳುವುದಿಲ್ಲ. ಬ್ಯಾಂಕಿನ ಮುಂದಿನ ರಸ್ತೆಯಲ್ಲಿ ಓಡಾಡುವವರು ಕೂಡ ಇವರನ್ನು ಮಾತನಾಡಿಸುವುದಿಲ್ಲ. ಇವರು ಯಾರು ಏನು ಎತ್ತ ಎಂದು ಯಾರೂ ಕೇಳುವುದಿಲ್ಲ.

ಸ್ವಲ್ಪ ಹೊತ್ತು ಆದಮೇಲೆ, ನಿಧಾನವಾಗಿ ಕೋಲೂರಿಕೊಂಡು ‘ಪ್ರಜಾವಾಣಿ’ ಮಾಲೀಕರ ಮನೆ ಹಿಂದಿರುವ ರಾಘವೇಂದ್ರಸ್ವಾಮಿ ದೇವಸ್ಥಾನದತ್ತ ತೆರಳುತ್ತಾರೆ. ಅಲ್ಲಿ ಸ್ವಲ್ಪ ಹೊತ್ತು ನಿಂತಿದ್ದು ಪ್ರಸಾದ ಪಡೆದುಕೊಂಡು ಮನೆಗೆ ಹೋಗುತ್ತಾರೆ. ಮತ್ತೆ ಸಂಜೆ ಏಳಕ್ಕೆ ಅಲ್ಲಿಯೇ ಹತ್ತಿರದಲ್ಲಿರುವ ಸಾಯಿರಾಂ ಮಂದಿರದ ರಸ್ತೆಯ ಪಕ್ಕದಲ್ಲಿ ಹೋಗಿ ನಿಲ್ಲುತ್ತಾರೆ.

Advertisements

ಇದಿಷ್ಟು ಅವರ ದಿನಚರಿ.

ಬಿಳಿ ಕುರುಚಲು ಗಡ್ಡ, ಚೌಕಳಿ ಶರ್ಟ್, ಎತ್ತಿ ಕಟ್ಟಿದ ಬಿಳಿ ಪಂಚೆ, ಆಧಾರಕ್ಕೊಂದು ಕೋಲು. ರಸ್ತೆಯ ಬದಿಯಲ್ಲಿ ಮೌನವಾಗಿ ನಿಂತಿದ್ದರು. ಸಾಯಿ ಮಂದಿರಕ್ಕೆ ಬರುವ-ಹೋಗುವ ಮಂದಿಯನ್ನು ದೈನ್ಯದಿಂದ ನೋಡುತ್ತಿದ್ದರು. ಯಾರಾದರೂ ಏನಾದರೂ ಕೊಟ್ಟರೆ ಮಾತ್ರ ಪಡೆದುಕೊಳ್ಳುತ್ತಿದ್ದರು. ಕೈ ಎತ್ತಿ ಮುಗಿಯುತ್ತಿದ್ದರು. ಆದರೆ ಬಾಯಿ ಬಿಟ್ಟು ಕೇಳುತ್ತಿರಲಿಲ್ಲ.

ನಿನ್ನೆ ಅವರನ್ನು ಭೇಟಿ ಮಾಡಿದೆ. ಸ್ವಲ್ಪ ಹಣ ಕೊಟ್ಟು, ಏನು ಎತ್ತ ಎಂದು ವಿಚಾರಿಸಿದೆ.

ಅವರು ಉಡುಪಿ ಮೂಲದವರು. ಚಿಕ್ಕಂದಿನಲ್ಲಿಯೇ ಬೆಂಗಳೂರಿಗೆ ಬಂದವರು. ಅಡುಗೆ ಮಾಡುವುದರಲ್ಲಿ ನಿಪುಣರು. ದುಡಿಯುವವರನ್ನು ಕೈಬೀಸಿ ಕರೆಯುವ ಬೆಂಗಳೂರು, ಇವರಿಗೂ ಕೈತುಂಬ ಕೆಲಸ ಕೊಟ್ಟಿತ್ತು. ಬೆಂಕಿಯ ಮುಂದೆ ಬೆವರು ಸುರಿಸುವ ಶ್ರಮದ ಕೆಲಸವಾದರೂ, ಪರಂಪರಾಗತವಾಗಿ ಬಂದ ಕೆಲಸ, ಇಷ್ಟಪಟ್ಟು ಮಾಡುವ ಕೆಲಸ, ಅದು ಅವರಿಗೆ ಖುಷಿಯ ಕೆಲಸವಾಗಿತ್ತು.

ಆನಂತರ ಅವರು ಒಂದು ತಂಡವನ್ನು ಕಟ್ಟಿದರು. ಉಡುಪಿ ಬ್ರಾಹ್ಮಣರಾದ್ದರಿಂದ ಮದುವೆ, ಮುಂಜಿ, ಶುಭಕಾರ್ಯಗಳಿಗೆ ಕರೆಯುವವರು ಹೆಚ್ಚಾಗಿ, ಅಡುಗೆ ಮಾಡುವ ಗುತ್ತಿಗೆದಾರರಾದರು. ರುಚಿ-ಶುಚಿಯಾದ ಅಡುಗೆಯವರು ಎಂಬ ಹೆಸರು ಸಂಪಾದಿಸಿದರು. ಕೈ ತುಂಬಾ ಕೆಲಸ ಮತ್ತು ಜೇಬು ತುಂಬಾ ಹಣ- ಎರಡಕ್ಕೂ ಕೊರತೆ ಇರಲಿಲ್ಲ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಕುಮಾರಸ್ವಾಮಿಯವರನ್ನು ಸೋಲಿಸಲು ಬಿಜೆಪಿ ಸುಪಾರಿ ಕೊಟ್ಟಿದೆಯೇ, ಆತಂಕಕ್ಕೊಳಗಾಗಿದ್ದಾರೆಯೇ?

ಹೀಗೆ, ಅವರು ಸರಿಸುಮಾರು ಐವತ್ತು ವರ್ಷಗಳ ಕಾಲ, ನಿರಂತರವಾಗಿ ಬೆಂಕಿಯ ಮುಂದೆ ಬೆವರು ಸುರಿಸಿದರು. ದೇಹ ದಂಡಿಸಿದರು. ಅಷ್ಟು ವರ್ಷಗಳ ಕಾಲದ ದುಡಿಮೆಯಲ್ಲಿ ಭವಿಷ್ಯದ ಬದುಕಿಗೆ ಇರಲಿ ಎಂದು ಸ್ವಲ್ಪ ಹಣವನ್ನು ಉಳಿತಾಯ ಮಾಡಿದ್ದರು. ಅದು ಸುಮಾರು 30 ಲಕ್ಷವಾಗಿತ್ತು. ಅದನ್ನು ಮನೆಯ ಹತ್ತಿರದಲ್ಲೇ ಇದ್ದ ಗುರುರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ನಲ್ಲಿ ಠೇವಣಿ ಇಟ್ಟಿದ್ದರು. ಅದರಿಂದ ಬರುವ ಬಡ್ಡಿಹಣದಿಂದ ವಯಸ್ಸಾದ ಗಂಡ-ಹೆಂಡತಿ ಕೊಂಚಮಟ್ಟಿಗೆ, ನೆಮ್ಮದಿಯಾಗಿಯೇ ಬದುಕುತ್ತಿದ್ದರು.

‘ಈ ಅಡುಗೆ ಮಾಡ್ತಿದ್ನಲ್ಲ, ಆಗ ನಮ್ಮೋರೊಬ್ಬರ ಪರಿಚಯವಾಯ್ತು, ಅವರು ನಮ್ಮದೇ(ಬ್ರಾಹ್ಮಣರ) ಬ್ಯಾಂಕ್, ದುಡ್ಡೂ ಸುರಕ್ಷಿತವಾಗಿರುತ್ತೆ, ಬಡ್ಡಿನೂ ಜಾಸ್ತಿ ಸಿಗುತ್ತೆ ಅಂತೇಳಿ, ಇಲ್ಲಿ ಠೇವಣಿ ಇಡಿಸಿದ್ರು’ ಎಂದರು ಲಕ್ಷ್ಮೀನಾರಾಯಣ ಹೆಬ್ಬಾರ್.

ಹೆಬ್ಬಾರ್ ಒಬ್ಬರೇ ಅಲ್ಲ, ಬೆಂಗಳೂರಿನ ಬಸವನಗುಡಿಯ ಬ್ರಾಹ್ಮಣರೆಲ್ಲರೂ ಆ ಬ್ಯಾಂಕಿನ ಗ್ರಾಹಕರೇ ಆಗಿದ್ದರು. ಏಕೆಂದರೆ, ಅದು ಬ್ರಾಹ್ಮಣರಿಂದ ಬ್ರಾಹ್ಮಣರಿಗಾಗಿ ಹುಟ್ಟಿಕೊಂಡ ಬ್ಯಾಂಕ್ ಆಗಿತ್ತು. ಮಾಧ್ವ ಬ್ರಾಹ್ಮಣರ ಆರಾಧ್ಯದೈವವಾದ ಗುರು ರಾಘವೇಂದ್ರರ ಹೆಸರನ್ನು ಇಟ್ಟುಕೊಂಡಿತ್ತು. ಬ್ಯಾಂಕಿನ ಒಳಗೆ ರಾಘವೇಂದ್ರ ಸ್ವಾಮಿಗಳ ದೊಡ್ಡ ಫೋಟೋ ಇತ್ತು. ಬ್ಯಾಂಕಿನ ಆಡಳಿತ ಮಂಡಳಿಯಿಂದ ಹಿಡಿದು ತಳವರ್ಗದ ಸಿಬ್ಬಂದಿವರೆಗೆ ಬ್ರಾಹ್ಮಣರೇ ಇದ್ದ ಬ್ಯಾಂಕ್ ಆಗಿತ್ತು. ಸಹಜವಾಗಿಯೇ ಬ್ರಾಹ್ಮಣರಿಗೆ- ನಮ್ಮ ಬ್ಯಾಂಕ್ ಎನಿಸಿತ್ತು.

ಆ ಕಾರಣದಿಂದಾಗಿಯೇ ವ್ಯಾಪಾರಸ್ಥರು, ನಿವೃತ್ತ ಸರ್ಕಾರಿ ನೌಕರರು, ಶ್ರೀಮಂತರು, ಮಧ್ಯಮವರ್ಗದವರು, ಕೆಲಸಗಾರರು ಎಲ್ಲರೂ ಗುರುರಾಘವೇಂದ್ರ ಬ್ಯಾಂಕನ್ನು ನಮ್ಮದೇ ಬ್ಯಾಂಕ್ ಎಂದು ಭಾವಿಸಿ, ದಿನನಿತ್ಯದ ವ್ಯವಹಾರಕ್ಕೆ ಬಳಸಿ ಬೆಳೆಸಿದ್ದರು. ಅದರ ಬೆಳವಣಿಗೆ ಕಂಡು ಹೆಮ್ಮೆಯಿಂದ ಬೀಗಿದ್ದರು.

ಕಾಲಾನಂತರ, ಆಡಳಿತ ಮಂಡಳಿಗೆ ಆಯ್ಕೆಯಾಗಿ ಬಂದ ಕೆಲ ಧನದಾಹಿಗಳು, ಬ್ಯಾಂಕನ್ನು ದುರುಪಯೋಗಪಡಿಸಿಕೊಂಡರು. ಬಡ ಬ್ರಾಹ್ಮಣರ ಸಾವಿರಾರು ಕೋಟಿ ರೂಪಾಯಿಗಳ ಠೇವಣಿ ಹಣಕ್ಕೆ ಕನ್ನ ಹಾಕಿದರು. ಸುಳ್ಳು ದಾಖಲೆ ಪತ್ರ ಸೃಷ್ಟಿಸಿ, ಸಾಲ ಎತ್ತಿ ಗುಳುಂ ಮಾಡಿದರು.

ಗುರುರಾಘವೇಂದ್ರ ಕೋ-ಆಪರೇಟಿವ್ ಸೊಸೈಟಿ, ವಸಿಷ್ಠ ಕೋ-ಆಪರೇಟಿವ್ ಸೊಸೈಟಿ, ಗುರುರಾಘವೇಂದ್ರ ಸೌಹಾರ್ದ ಸೊಸೈಟಿ- ಈ ಮೂರು ಬ್ಯಾಂಕ್‌ಗಳಲ್ಲೂ ಬ್ರಾಹ್ಮಣರದೇ ಪಾರುಪತ್ಯವಿತ್ತು. ಈ ಮೂರೂ ಬ್ಯಾಂಕ್‌ಗಳು ಬಿಜೆಪಿ ಪ್ರಾಬಲ್ಯವಿರುವ ಬಸವನಗುಡಿಯಲ್ಲಿಯೇ ಇದ್ದವು. ಈ ಬ್ಯಾಂಕ್‌ಗಳ ಆಡಳಿತ ಮಂಡಳಿಯಲ್ಲಿದ್ದವರು ಬಿಜೆಪಿಯಿಂದ ಗೆದ್ದ ಶಾಸಕರು, ಸಂಸದರ ಕುಲಬಾಂಧವರೇ ಆಗಿದ್ದರು. ಅವರೆಲ್ಲರೂ ಸೇರಿ 1,800 ಕೋಟಿ ರೂಪಾಯಿಗಳ ವಂಚನೆ ಎಸಗಿದ್ದರು. ಬ್ಯಾಂಕನ್ನು ಮುಳುಗಿಸಿದ್ದರು.

ಈ ಮೂರೂ ಬ್ಯಾಂಕ್‌ಗಳು ದಿವಾಳಿ ಎದ್ದಾಗ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿತ್ತು. ಕೇಂದ್ರದಲ್ಲಿ ‘ನಾ ಕಾವೂಂಗ ನಾ ಕಾನೇದೂಂಗ’ ಎನ್ನುವ ಮೋದಿಯವರ ಆಡಳಿತವಿತ್ತು. ಬಿಜೆಪಿಯ ಶಾಸಕ, ಸಂಸದ, ರಾಜ್ಯ, ಕೇಂದ್ರ ಸರ್ಕಾರಗಳ ಮೂಗಿನಡಿಯಲ್ಲಿಯೇ ಬ್ರಾಹ್ಮಣರಿಂದ ಬ್ರಾಹ್ಮಣರ ಹಣ ದೋಚಲ್ಪಟ್ಟಿತ್ತು. ಬಡ ಬ್ರಾಹ್ಮಣರು ನಿತ್ಯ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿತ್ತು.

ಅಂತಹ ಬಡ ಬ್ರಾಹ್ಮಣರ ಪೈಕಿ ಎಪ್ಪತ್ತೇಳು ವರ್ಷಗಳ ವಯೋವೃದ್ಧರಾದ ಲಕ್ಷ್ಮೀನಾರಾಯಣ ಹೆಬ್ಬಾರ್ ಕೂಡ ಒಬ್ಬರು. ಇವರಿಗೆ ಮಕ್ಕಳಿಲ್ಲ. ಮನೆ-ಮಠವಿಲ್ಲ. ಬೆನ್ನಿಗೆ ಜಾತಿ ಇದೆ, ಬೆಂಬಲಕ್ಕೆ ನಿಲ್ಲುವವರಿಲ್ಲ.

ಚುನಾವಣೆ ಎದುರಾಗಿರುವ ಈ ಸಂದರ್ಭದಲ್ಲಿ, ಮೊನ್ನೆ ಹಣ ಕಳೆದುಕೊಂಡವರ ಸಭೆ ಸೇರಿಸಿದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ‘ಎಲ್ಲರಿಗೂ ಹಣ ಬರುತ್ತದೆ, ಮೋದಿಯವರ ಸರ್ಕಾರದಿಂದ ಈಗಾಗಲೇ ಶೇ. 78 ರಷ್ಟು ಹಣ ಬಂದಿದೆ. ನೀವೆಲ್ಲ ಮೋದಿಯವರನ್ನು ಬೆಂಬಲಿಸಿದರೆ, ಮಿಕ್ಕ ಹಣವೂ ನಿಮ್ಮ ಖಾತೆಗೆ ಜಮೆಯಾಗುತ್ತದೆ’ ಎಂದು ಹಸಿ ಹಸೀ ಸುಳ್ಳನ್ನು ಹೇಳುತ್ತಿದ್ದರು.

ಹಣ ಕಳೆದುಕೊಂಡು ದಿಕ್ಕೆಟ್ಟ ಸ್ಥಿತಿಯಲ್ಲಿದ್ದ ಬಸವನಗುಡಿಯ ಬಡ ಬ್ರಾಹ್ಮಣರು, ಒಮ್ಮೆಲೇ ಸ್ಫೋಟಗೊಂಡು, ಸೂರ್ಯ ಮತ್ತು ರವಿಸುಬ್ರಹ್ಮಣ್ಯರತ್ತ ಧಾವಿಸಿ ಹೋದರು. ಪ್ರಶ್ನೆಗಳ ಸುರಿಮಳೆ ಸುರಿಸತೊಡಗಿದರು. ಅವರ ಪ್ರಶ್ನೆಗಳಿಗೆ ಉತ್ತರಿಸಲಾಗದ ಸಂಸದ ಸೂರ್ಯ, ತಪ್ಪಿಸಿಕೊಂಡು ಹಿಂಬಾಗಿಲಿನಿಂದ ಓಡಿಹೋದರು.

ಹಿಂದೊಮ್ಮೆ, 2004ರಲ್ಲಿ ಬೆಂಗಳೂರಿನ ವಿವಿ ಪುರಂನಲ್ಲಿ ವಿನಿವಿಂಕ್ ಶಾಸ್ತ್ರಿ ಎಂಬ ವ್ಯಕ್ತಿ ಇದೇ ರೀತಿ ಬ್ರಾಹ್ಮಣರಿಗೆ ಟೋಪಿ ಹಾಕಿ, ಠೇವಣಿ ಇಟ್ಟಿದ್ದ ಕೋಟ್ಯಂತರ ರೂಪಾಯಿಗಳನ್ನು ನುಂಗಿ ನೀರು ಕುಡಿದಿದ್ದ. ವಿನಿವಿಂಕ್ ಶಾಸ್ತ್ರಿ ಕೂಡ ಬ್ರಾಹ್ಮಣನೇ. ಅವನ ಬಳಿ ಹಣ ಕಟ್ಟಿದ್ದವರು ಹೆಚ್ಚಿನ ಪಾಲು ಬ್ರಾಹ್ಮಣರೇ.

ವಿನಿವಿಂಕ್ ಶಾಸ್ತ್ರಿಯದು ಖಾಸಗಿ ಫೈನಾನ್ಸ್ ಕಂಪನಿ. ಆದರೆ ಗುರುರಾಘವೇಂದ್ರ ಬ್ಯಾಂಕ್, ಆರ್‍‌ಬಿಐನ ರೀತಿ-ನೀತಿಗೆ ಒಳಪಟ್ಟ ಕಾನೂನು ಕಾಯ್ದೆಗಳಡಿಯಲ್ಲಿಯೇ ಕಾರ್ಯ ನಿರ್ವಹಿಸುವ ಬ್ಯಾಂಕ್. ಇದನ್ನು ಜನ ನಂಬಿದರು. ಹಣ ತೊಡಗಿಸಿದರು. ಕಳೆದುಕೊಂಡರು.

ಹೆಬ್ಬಾರ್ ಅವರಿಗೆ, ‘ಬ್ಯಾಂಕ್ ಮುಳುಗೋದು ಗೊತ್ತಾಗ್ಲಿಲ್ವಾ’ ಎಂದೆ.

‘ಬ್ಯಾಂಕ್ ಮುಳುಗುವುದು ಗೊತ್ತಾಗಿದ್ದರೆ, ಕೆನರಾ ಬ್ಯಾಂಕಿನಲ್ಲಿ ಹಾಕುತ್ತಿದ್ದೆ. ನಮ್ಮೋರು ಯಾರೂ ನನಗೆ ಹೇಳಲಿಲ್ಲ. ಬ್ಯಾಂಕ್‌ಗೆ ಬೀಗ ಬಿದ್ದಮೇಲೆ ಗೊತ್ತಾಯ್ತು. ಅಷ್ಟರಲ್ಲಾಗಲೇ ನಮ್ ಬದುಕಿಗೆ ಬೆಂಕಿ ಬಿದ್ದಿತ್ತು. ಒಂದೈದ್ ಲಕ್ಷ ಸಿಕ್ಕಿದೆ. ಅದನ್ನು ಕೆನರಾ ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದೇನೆ. ಅದರಿಂದ ಬರುವ ಬಡ್ಡಿಹಣದಿಂದ ಬಾಡಿಗೆ ಕಟ್ತೀನಿ. ಊಟಕ್ಕೆ ಇಲ್ಲ. ಕೇಳೋದಕ್ಕೆ ಮನಸ್ಸಾಗಲ್ಲ, ಏನ್ಮಾಡ್ಲಿ’ ಎಂದು ಅಸಹಾಯಕತೆ ತೋಡಿಕೊಂಡರು.

ಲಕ್ಷ್ಮೀನಾರಾಯಣ ಹೆಬ್ಬಾರ್
ಲಕ್ಷ್ಮೀನಾರಾಯಣ ಹೆಬ್ಬಾರ್

‘ಮುಂದೇನು ಮಾಡ್ತೀರಿ’ ಎಂದೆ.

‘ಈ ಎಲೆಕ್ಷನ್ ಆಗ್ಲಿ ಅಂತ ಕಾಯ್ತಿದೀನಿ. ಮೋದಿಯೋರು ಮತ್ತೆ ಎಲೆಕ್ಟ್ ಆಗ್ತರೆ. ಅವರೇ ಗೆಲ್ಲೋದು. ಆಗ ಏನಾದ್ರು ಆಗುತ್ತೆ…’ ಎಂದು ಕಣ್ಣರಳಿಸಿದರು. ಅವರ ಮುಗ್ಧತೆ, ಅಮಾಯಕತೆ ಕಂಡು ಅಯ್ಯೋ ಅನ್ನಿಸಿತು.

ಅವರಿಗೆ ಈಗಿರುವುದು ಕೂಡ ಮೋದಿ ಸರ್ಕಾರವೇ ಅಂತ ಗೊತ್ತಿಲ್ಲವೇ? ಜೈ ಶ್ರೀರಾಮ್ ಎನ್ನುವ ಬಿಜೆಪಿಯ ಮೋಸ, ವಂಚನೆ, ಸುಳ್ಳು ಇನ್ನೂ ಅರ್ಥವಾಗಿಲ್ಲವೇ?

(ನೆರವು ನೀಡುವವರು, ಲಕ್ಷ್ಮೀನಾರಾಯಣ ಹೆಬ್ಬಾರ್ ಅವರನ್ನು ಸಂಪರ್ಕಿಸಬಹುದು: 9902147520)

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

2 COMMENTS

  1. Is it sure that Tejaswi Surya, MP has convened the meeting and told that another 10% will be given and 90% since been paid. If it’s proper news, the debacle of people and for votes, the candidate will goto this bloody extent?

  2. Highly biased article against one political party. Instead article can be about the problem of one bank’s mismanagement and subsequent losses incurred by hapless citizens. Whichever party is in power the legal system and executive machinery is the same since 70 years. Hence everyone has to wait to get justice in this country irrespective of party in power.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

Download Eedina App Android / iOS

X