“ಪ್ರತಿ ಕಂದಾಯ ವಿಭಾಗದಲ್ಲಿ ತಲಾ ಒಂದು ಜಯದೇವ ಹೃದ್ರೋಗ ರೀತಿಯ ಆಸ್ಪತ್ರೆ, ಕಿದ್ವಾಯಿ ಮಾದರಿಯ ಕ್ಯಾನ್ಸರ್ ಆಸ್ಪತ್ರೆ ಮತ್ತು ನಿಮ್ಹಾನ್ಸ್ ಮಾದರಿಯ ಮನೋರೋಗ ಹಾಗೂ ಮಿದುಳು ಚಿಕಿತ್ಸಾ ಆಸ್ಪತ್ರೆ ಸ್ಥಾಪನೆ” – ಇದು 2023ರ ವಿಧಾನಸಭಾ ಚುನಾವಣೆಯ ವೇಳೆ ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷವು ಘೋಷಿಸಿದ್ದ ಚುನಾವಣಾ ಪ್ರಣಾಳಿಕೆಯಲ್ಲಿನ ಒಂದು ಅಂಶ. ಒಟ್ಟು 62 ಪುಟಗಳ ಚುನಾವಣಾ ಪ್ರಣಾಳಿಕೆಯ ಆರೋಗ್ಯ ಕಾಲಂ (ಪುಟ 35-36)ನಲ್ಲಿ ಹೇಳಿಕೊಂಡಿದ್ದ ಚುನಾವಣಾ ಘೋಷಣೆಗಳು.
ಮೇ 20ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳನ್ನು ಪೂರೈಸಿದೆ. ಹೊಸಪೇಟೆಯಲ್ಲಿ ಬೃಹತ್ ಸಮಾವೇಶ ನಡೆಸಿ, ಸಂಭ್ರಮಿಸಿದೆ. ಈ ಬೆನ್ನಲ್ಲೇ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದ ಆರೋಗ್ಯ ಇಲಾಖೆಯು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಕ್ಯಾನ್ಸರ್ ರೋಗಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯದ 16 ಜಿಲ್ಲಾಸ್ಪತ್ರೆಗಳಲ್ಲಿ ಇಂದು(ಮೇ 23) ‘ಕಿಮೋಥೆರಪಿ ಕೇಂದ್ರ’ಕ್ಕೆ ಚಾಲನೆ ನೀಡಲು ಮುಂದಾಗಿದೆ.
ಕ್ಯಾನ್ಸರ್ ರೋಗಿಗಳ ಅನುಕೂಲಕ್ಕಾಗಿ 16 ಜಿಲ್ಲಾ ಆಸ್ಪತ್ರೆಗಳಲ್ಲಿ ‘ಡೇ ಕೇರ್ ಕಿಮೋಥೆರಪಿ’ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ‘ಡೇ ಕೇರ್ ಕಿಮೋಥೆರಪಿ ಕೇಂದ್ರ’ಕ್ಕೆ ಶುಕ್ರವಾರ (ಮೇ 23) ಚಾಲನೆ ನೀಡಲಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಎಂಬ ಸ್ವಾಯತ್ತ ಸಂಸ್ಥೆ(SAST)ಯ ಅಡಿಯಲ್ಲಿ ನೋಂದಾಯಿತವಾಗಿರುವ ತೃತೀಯ ಹಂತದ ಕ್ಯಾನ್ಸರ್ ಆಸ್ಪತ್ರೆಗಳಲ್ಲಿ ಪ್ರಾರಂಭಿಕ ಚಿಕಿತ್ಸೆ ಪಡೆದ ನಂತರ ಮುಂದುವರಿದ ಕಿಮೋಥೆರಪಿ ಚಿಕಿತ್ಸೆಯನ್ನು ‘ಹಬ್–ಆ್ಯಂಡ್–ಸ್ಪೋಕ್’ ಮಾದರಿಯಲ್ಲಿ ಜಿಲ್ಲಾ ಆಸ್ಪತ್ರೆಗಳಲ್ಲಿ ಸ್ಥಾಪಿಸುವ ‘ಡೇ ಕೇರ್ ಕಿಮೋಥೆರಪಿ ಕೇಂದ್ರ’ಗಳಲ್ಲಿ ಪಡೆಯಬಹುದು ಎಂದು ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ.
ಜಿಲ್ಲಾ ಆಸ್ಪತ್ರೆಗಳಲ್ಲಿ ಡೇ ಕೇರ್ ಕಿಮೋಥೆರಪಿ ಕೇಂದ್ರಗಳನ್ನು ಆರಂಭಿಸಿ, ಅಲ್ಲಿನ ಸಿಬ್ಬಂದಿಗೆ ಎಸ್ಎಎಸ್ಟಿ ನೋಂದಾಯಿತ ಆಸ್ಪತ್ರೆಯ ಸಿಬ್ಬಂದಿಯಿಂದ ತರಬೇತಿ ಕೊಡಿಸಲಾಗುತ್ತದೆ. ಚಿಕಿತ್ಸೆಗೆ ಅಗತ್ಯವಿರುವ ಔಷಧವನ್ನೂ ಆ ಆಸ್ಪತ್ರೆಯೇ ಒದಗಿಸಲಿದೆ ಎಂದು ಗುಂಡೂರಾವ್ ತಿಳಿಸಿದ್ದಾರೆ.
ರಾಜ್ಯದಲ್ಲಿ ವಾರ್ಷಿಕವಾಗಿ ಕ್ಯಾನ್ಸರ್ನ 70 ಸಾವಿರ ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಬೆಳಗಾವಿ ಮತ್ತು ಮೈಸೂರು ನಗರಗಳಿಗೆ ಕಿಮೋಥೆರಪಿ ಸೇವೆ ಪಡೆಯಲು ಶೇ.60ರಷ್ಟು ರೋಗಿಗಳು 100 ಕಿ.ಮೀಗೂ ಹೆಚ್ಚು ಪ್ರಯಾಣಿಸುತ್ತಾರೆ. ಪುನರಾವರ್ತಿತ ಭೇಟಿ ವೆಚ್ಚದಿಂದ ಹೆಚ್ಚಿನ ರೋಗಿಗಳು ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದಾರೆ. ಇದನ್ನು ತಪ್ಪಿಸಲು ಜಿಲ್ಲಾ ಆಸ್ಪತ್ರೆಗಳಲ್ಲಿ ಡೇ ಕೇರ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ.
ಕಳೆದ ಬಜೆಟ್ನಲ್ಲಿ ಕೀಮೋ ಥೆರಪಿ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದೆವು. ಹೀಗಾಗಿ, ಜಿಲ್ಲಾಸ್ಪತ್ರೆಗಳಲ್ಲಿ ಡೇ ಕೇರ್ ಕಿಮೋಥೆರಪಿ ಪ್ರಾರಂಭಿಸುತ್ತಿದ್ದೇವೆ. ಮುಖ್ಯಮಂತ್ರಿಗಳೇ ಮೈಸೂರಿನಲ್ಲಿ ಉದ್ಘಾಟನೆ ಮಾಡಲಿದ್ದಾರೆ. ಕ್ಯಾನ್ಸರ್ ಪತ್ತೆಯಾಗಿದೆ ಅನ್ನುವವರು ಕೀಮೋ ಥೆರಪಿ ಪಡೆಯಬಹುದು. ಎಲ್ಲಾ ರೀತಿಯ ತರಬೇತಿ ಮಾಡಲಾಗಿದೆ. ಮೆಡಿಕಲ್ ಅಂಕಾಲಜಿಸ್ಟ್ ಮಾಡಿದ್ದೇವೆ. ನರ್ಸ್ಗಳಿಗೆ ತರಬೇತಿ ನೀಡುತ್ತಿದ್ದೇವೆ. ಪ್ರತಿ ಆಸ್ಪತ್ರೆಯಲ್ಲಿ 10 ಬೆಡ್ ಮೀಸಲಿಡಲಾಗಿದೆ. ಇಬ್ಬರು ನರ್ಸ್ಗಳು ಇರಲಿದ್ದಾರೆ. ಉಚಿತ ಚಿಕಿತ್ಸೆಗೆ ತುಂಬಾ ಅನುಕೂಲ ಆಗಲಿದೆ. ಬಿಪಿಎಲ್ ಕುಟುಂಗಳಿಗೆ ಉಚಿತವಾಗಿ ಕೀಮೋಥೆರಪಿ ಸೇವೆ ಸಿಗಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಇದು ‘ಬಲಿಷ್ಠರು’ ಬೆತ್ತಲಾಗುವ ಕಾಲ
ಡೇ ಕೇರ್ ಸ್ಥಾಪನೆ ಮೂಲಕ ಕ್ಯಾನ್ಸರ್ ಆರೈಕೆಯಲ್ಲಿ ನಗರ– ಗ್ರಾಮೀಣ ಅಸಮಾನತೆ ಕಡಿಮೆ ಮಾಡಿ, ಪರಿಣಾಮಕಾರಿ ಆರೈಕೆ, ಆಸ್ಪತ್ರೆ ವೆಚ್ಚ ಕಡಿತ ಮಾಡುವ ಜೊತೆಗೆ, ಚಿಕಿತ್ಸೆ ಪಡೆಯುವುದನ್ನು ನಿಲ್ಲಿಸುವವರ ಸಂಖ್ಯೆ ಕಡಿಮೆ ಮಾಡುವುದು ಆರೋಗ್ಯ ಇಲಾಖೆಯ ಉದ್ದೇಶ. ಈ ಉದ್ದೇಶವನ್ನು ಈಡೇರಿಸಲು ಪ್ರಾಥಮಿಕವಾಗಿ 16 ಜಿಲ್ಲಾಸ್ಪತ್ರೆಗಳಲ್ಲಿ ‘ಕಿಮೋಥೆರಪಿ ಕೇಂದ್ರಕ್ಕೆ ಇಂದು ಚಾಲನೆ ನೀಡಲು ಸರ್ಕಾರ ನಿರ್ಧರಿಸಿದೆ.
ಕರ್ನಾಟಕದಲ್ಲಿ ವಾರ್ಷಿಕವಾಗಿ ಸುಮಾರು 70,000 ಹೊಸ ಕ್ಯಾನ್ಸರ್ ಪ್ರಕರಣ
ವಾರ್ಷಿಕವಾಗಿ ಕರ್ನಾಟಕ ರಾಜ್ಯದಲ್ಲಿ ICMR NCRP 2023 ವರದಿಯ ಪ್ರಕಾರ ಸುಮಾರು 70,000 ಹೊಸ ಕ್ಯಾನ್ಸರ್ ಪ್ರಕರಣಗಳನ್ನು ವರದಿಯಾಗುತ್ತಿದೆ.
ಸ್ತನ ಕ್ಯಾನ್ಸರ್ (18%), ಗರ್ಭಕಂಠದ ಕ್ಯಾನ್ಸರ್ (14%), ಬಾಯಿ ಕ್ಯಾನ್ಸರ್ (12%), ಶ್ವಾಸಕೋಶ ಕ್ಯಾನ್ಸರ್ (8%), ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್ (6%), 1 ಲಕ್ಷ ಜನಸಂಖ್ಯೆಯಲ್ಲಿ 12 ಬಾಯಿಯ ಕ್ಯಾನ್ಸರ್ 12 ಪ್ರಕರಣಗಳು, ಒಂದು ಲಕ್ಷ ಮಹಿಳೆಯರಲ್ಲಿ 35 ಸ್ತನ ಕ್ಯಾನ್ಸರ್ ಪ್ರಕರಣಗಳು, ಒಂದು ಲಕ್ಷ ಮಹಿಳೆಯರಲ್ಲಿ 15 ಗರ್ಭಕಂಠದ ಕ್ಯಾನ್ಸರ್ ಸಂಭವ ಪ್ರಮುಖ ಕ್ಯಾನ್ಸರ್ಗಳು ಎಂದು ವರದಿ ತಿಳಿಸಿದೆ. ಈ ಸಂಖ್ಯೆಗಳನ್ನು ಮುಂದಿನ ದಿನಗಳಲ್ಲಿ ಕಡಿಮೆ ಮಾಡುವ ಉದ್ದೇಶದಿಂದ ಆರೋಗ್ಯ ಇಲಾಖೆಯು ಕೀಮೋಥೆರಪಿಯನ್ನು ಆರಂಭಿಸುವ ಮೂಲಕ ಪ್ರಾಥಮಿಕ ಹೆಜ್ಜೆಯನ್ನಿಟ್ಟಿದೆ
ಹಬ್ ಆಸ್ಪತ್ರೆಗಳ ಪಾತ್ರ (ತೃತೀಯ ಕ್ಯಾನ್ಸರ್ ಕೇಂದ್ರಗಳು)
ಕ್ಲಿನಿಕಲ್ ಸೇವೆ, ಸಂಕೀರ್ಣ ಚಿಕಿತ್ಸಾ ವಿತರಣೆ, ಕೀಮೋಥೆರಪಿಯನ್ನು ನಿರ್ವಹಿಸುವುದು, ಚಿಕಿತ್ಸೆಗೆ ಸಂಬಂಧಿಸಿದ ತೊಡಕುಗಳನ್ನು ನಿರ್ವಹಿಸುವುದು, ವಿಶೇಷ ರೋಗನಿರ್ಣಯ ಮತ್ತು ಹಂತ, PET-CT, ಆಣಿಕ ಪ್ರೊಫೈಲಿಂಗ್ ಮತ್ತು ಸುಧಾರಿತ ಬಯಾಪ್ತಿಗಳನ್ನು ನಡೆಸುವುದು, ಸ್ಪೋಕ್ ಕೇಂದ್ರಗಳಿಗೆ ರೋಗಶಾಸ್ತ್ರ ಮತ್ತು ವಿಕಿರಣಶಾಸ್ತ್ರ ಬೆಂಬಲವನ್ನು ಒದಗಿಸಲಿದೆ. ಜೊತೆಗೆ ತರಬೇತಿ ನೀಡುವುದು, ರೆಫರಲ್ ಮತ್ತು ಟೆಲಿಮೆಡಿಸಿನ್ ನೀಡುವ ಸೇವೆಯನ್ನೂ ನೀಡಲಿದೆ.
ಗುಣಮಟ್ಟದ ಭರವಸೆಯನ್ನು ಖಾತ್ರಿಪಡಿಸಲು ಮತ್ತು ಮೇಲ್ವಿಚಾರಣೆಗಾಗಿ ಪ್ರತಿ ವಾರ Medical Oncologist ಅವರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ತಪಾಸಣೆ ಮಾಡಲಿದ್ದಾರೆ. ಪೋರ್ಟಲ್ಗಳನ್ನು ಬಳಸಿ, ಔಷಧಿಗಳನ್ನು ತಯಾರಿಸಿ, ಸ್ಪೋಕ್ ಕೇಂದ್ರಗಳಿಗೆ ರವಾನಿಸುವುದು ಮತ್ತು ದಾಸ್ತಾನು ಮತ್ತು ಅಗತ್ಯ ಕೀಮೋಥೆರಪಿ ಔಷಧಿಗಳನ್ನು ಒದಗಿಸುವ ಸೇವೆಯನ್ನು ಹಬ್ ಆಸ್ಪತ್ರೆಗಳು ನೀಡಲಿದೆ.
ಸ್ಪೋಕ್ ಕೇಂದ್ರಗಳ ಪಾತ್ರ (ಜಿಲ್ಲಾ ಡೇ ಕೇರ್ ಕೀಮೋಥೆರಪಿ ಘಟಕಗಳು)
ಇನ್ನು ಜಿಲ್ಲಾ ಡೇ ಕೇರ್ ಕೀಮೋಥೆರಪಿ ಘಟಕಗಳು, ರೋಗಿಯ ಆರೈಕೆಗೆ ಕೀಮೋಥೆರಪಿ ಆಡಳಿತ, ಸಹಾಯಕ/ ಉಪಶಾಮನಕಾರಿ ಕೀಮೋ ಪೂರ್ವ-ಕೀಮೋ ವರ್ಕಪ್, ಮೂಲಭೂತ ಪ್ರಯೋಗಾಲಯ ಪರೀಕ್ಷೆಗಳು (CBC, LFT, RFT) ಮತ್ತು ECG ಮೇಲ್ವಿಚಾರಣೆಯನ್ನು ಒದಗಿಸಲಿದೆ.
ರೆಫರಲ್ ವ್ಯವಸ್ಥೆ, ವಿಕಿರಣ, ಶಸ್ತ್ರಚಿಕಿತ್ಸೆ ಅಗತ್ಯವಿರುವ ರೋಗಿಗಳನ್ನು ಗುರುತಿಸಿ ಮತ್ತು ಕೇಂದ್ರಗಳಿಗೆ ವರ್ಗಾಯಿಸಿ, ನೈಜ-ಸಮಯದ- ರೆಫರಲ್ ಮಾಡುವುದಕ್ಕೆ ಹಬ್ನೊಂದಿಗೆ ಸಮನ್ವಯವಾಗಿ ಕಾರ್ಯನಿರ್ವಹಿಸಲಿದೆ. ಹಬ್ ಕೇಂದ್ರಗಳಿಂದ ಬಂದಂತಹ ಔಷಧಿಗಳನ್ನು ದಾಸ್ತಾನುಗಳನ್ನು ಸ್ವೀಕರಿಸಿ, ಶಿಷ್ಟಾಚಾರದ ರೀತಿ ರೋಗಿಗಳಿಗೆ ಬಳಕೆ ಮಾಡಲಿದೆ. ಸಮಾಲೋಚನೆ ಮತ್ತು ಡೇಟಾ ವರದಿ ಮಾಡುವುದು ಕೂಡ ಸ್ಪೋಕ್ ಕೇಂದ್ರದ ಕರ್ತವ್ಯ.
ಡೇ ಕೇರ್ ಕೀಮೋಥೆರಪಿ ಕೇಂದ್ರಗಳಿಂದಾಗಿ ರೋಗಿಗಳು ತಮ್ಮ ಜಿಲ್ಲೆಯೊಳಗೆ ಕಡಿಮೆ ಪ್ರಯಾಣ ಮಾಡಲು ಅನುಕೂಲವಾಗಲಿದೆ. ಜೊತೆಗೆ ಕಡಿಮೆ ವೆಚ್ಚ ಕೂಡ ತಗಲುಲಿದೆ.
ಡೇ ಕೇರ್ ಕೀಮೋಥೆರಪಿ ಕೇಂದ್ರಗಳಲ್ಲಿ ಮುಂದುವರೆದ ಕೀಮೋಥೆರಪಿ ಚಿಕಿತ್ಸೆ, ನೋವು ನಿರ್ವಹಣೆ ಚಿಕಿತ್ಸೆ, ಆಪ್ತ ಸಮಾಲೋಚನೆ, ಜಿಲ್ಲಾ ಆಸ್ಪತ್ರೆಗಳಿಂದ ಟೆಲಿಮೆಡಿಸಿನ್ ಮುಖಾಂತರ ಚಿಕಿತ್ಸೆಯ ಸೇವೆಗಳು ಲಭ್ಯವಾಗಲಿದೆ.
ಡೇ ಕೇರ್ ಕೀಮೋಥೆರಪಿ ಕೇಂದ್ರಗಳಲ್ಲಿ ಒಟ್ಟು 6 ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ವೈದ್ಯಕೀಯ ಆಂಕೊಲಾಜಿಸ್ಟ್ ಒಬ್ಬರು (ಭೇಟಿ), ಕೀಮೋಥೆರಪಿ ಚಿಕಿತ್ಸೆಯಲ್ಲಿ ತರಬೇತಿ ನಡೆದ 2 ದಾದಿಯರು, ವೈದ್ಯರು, ಫಾರ್ಮಸಿ ಅಧಿಕಾರಿಗಳು, ಆಪ್ತ ಸಮಾಲೋಚಕರು, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಸಿಬ್ಬಂದಿ ಸೇರಿ ಒಟ್ಟು ಆರು ಜನ ಸಿಬ್ಬಂದಿ ರೋಗಿಗಳಿಗೆ ಆರೋಗ್ಯ ಸೇವೆಯನ್ನು ಒದಗಿಸಲಿದ್ದಾರೆ.
ಯಾವ್ಯಾವ ಆಸ್ಪತ್ರೆಗಳಲ್ಲಿ ಕೀಮೋ ಥೆರಪಿ ಕೇಂದ್ರ?
ಒಪ್ಪಂದದ ಮೂಲಕ ಹಬ್ಗಳೊಂದಿಗೆ ಪ್ರಸ್ತಾವಿತ ಡೇ ಕೇರ್ ಕೀಮೋಥೆರಪಿ ಪ್ರಾರಂಭಿಸಲು ಆರೋಗ್ಯ ಇಲಾಖೆ ಮುಂದಾಗಿದೆ.
- ಇನ್-ಹೌಸ್, ವಿಜಯಪುರ
- ಇನ್-ಹೌಸ್, ಉಡುಪಿ
- ಹುಬ್ಬಳ್ಳಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಬಳ್ಳಾರಿ
- ಹೆಚ್ಸಿಜಿ ಹಾಸ್ಪಿಟಲ್ ಧಾರವಾಡ, ಧಾರವಾಡ
- ಹುಬ್ಬಳ್ಳಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಚಿತ್ರದುರ್ಗ
- ಹುಬ್ಬಳ್ಳಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ವಿಜಯನಗರ
- ಹುಬ್ಬಳ್ಳಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಹಾವೇರಿ
- ಸಂಜೀವಿನಿ ಆಸ್ಪತ್ರೆ, ಬೆಂಗಳೂರು ಗ್ರಾಮಾಂತರ
- ಸಂಜೀವಿನಿ ಆಸ್ಪತ್ರೆ, ರಾಮನಗರ
- ಸಂಜೀವಿನಿ ಆಸ್ಪತ್ರೆ, ಬೆಂಗಳೂರು ನಗರ, ಸಿ.ವಿ.ರಾಮನ್ ಆಸ್ಪತ್ರೆ
- ಕೆಎಂಸಿ, ಮಂಗಳೂರು, ದಕ್ಷಿಣ ಕನ್ನಡ
- ಕಿದ್ವಾಯಿ ಆಸ್ಪತ್ರೆ, ಮೈಸೂರು
- ಸಿದ್ಧಾರ್ಥ ಮೆಡಿಕಲ್ ಕಾಲೇಜು, ತುಮಕೂರು
- ಆರ್.ಎಲ್.ಜಾಲಪ್ಪ ಮೆಡಿಕಲ್ ಕಾಲೇಜು ಆಸ್ಪತ್ರೆ, ಕೋಲಾರ
- ನಿಜಲಿಂಗಪ್ಪ ಮೆಡಿಕಲ್ ಕಾಲೇಜು ಆಸ್ಪತ್ರೆ, ಬಾಗಲಕೋಟೆ
- ಹುಬ್ಬಳ್ಳಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ದಾವಣಗೆರೆ
