ಸಾಮಾನ್ಯವಾಗಿ, ಆಡಳಿತಾರೂಢ ಪಕ್ಷವು ನಂತರದ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸುತ್ತದೆ. ಆದರೆ, ಛತ್ತೀಸಗಢ ರಾಜ್ಯದಲ್ಲಿ ಅದಕ್ಕೆ ವ್ಯತಿರಿಕ್ತವಾದ ಪರಿಸ್ಥಿತಿಯಿದೆ. ಅಲ್ಲಿನ 90 ಸ್ಥಾನಗಳಿಗೆ ನವೆಂಬರ್ 7 ಮತ್ತು 17ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 3ರಂದು ಮತ ಎಣಿಕೆ ನಡೆಯಲಿದೆ. ಅಲ್ಲಿ ಕಾಂಗ್ರೆಸ್ ಆಡಳಿತ ವಿರೋಧಿ ಅಲೆ ಮೆಟ್ಟಿ ನಿಂತು ಮತ್ತೆ ಅಧಿಕಾರಕ್ಕೇರಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ.
2018ರಲ್ಲಿ ನಡೆದಿದ್ದ ಛತ್ತೀಸಗಢ ವಿಧಾನಸಭಾ ಚುನಾವಣೆಯಲ್ಲಿ 15 ವರ್ಷಗಳಿಂದ ಅಧಿಕಾರದಲ್ಲಿದ್ದ ಬಿಜೆಪಿಯನ್ನು ಮಣಿಸಿ ಕಾಂಗ್ರೆಸ್ ಗದ್ದುಗೆ ಏರಿತ್ತು. ರಮಣ್‌ಸಿಂಗ್ ಅವರ ನೇತೃತ್ವದ ಬಿಜೆಪಿಯನ್ನು ಮಣಿಸಿದ್ದ ಭೂಪೇಶ್ ಬಘೇಲ್ ನೇತೃತ್ವದ ಕಾಂಗ್ರೆಸ್ 68 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ ಕೇವಲ 15 ಸ್ಥಾನಗಳಿಗೆ ಕುಸಿದಿತ್ತು. ಉಪಚುನಾವಣೆಗಳ ನಂತರ ಕಾಂಗ್ರೆಸ್ ಬಲ 71ಕ್ಕೇರಿತ್ತು.
ಐದು ವರ್ಷಗಳ ಆಡಳಿತದ ನಂತರವೂ ಘತ್ತೀಸಗಢದ ಬಹುತೇಕ ಎಲ್ಲ ಭಾಗಗಳಲ್ಲೂ ಕಾಂಗ್ರೆಸ್ ತನ್ನ ಪ್ರಾಬಲ್ಯ ಉಳಿಸಿಕೊಂಡಿದೆ. ರಾಜ್ಯದ ಬಹುಸಂಖ್ಯಾತರಾದ ರೈತರಿಗೆ ಉಪಯುಕ್ತವಾದ ಒಂದಷ್ಟು ಕಾರ್ಯಕ್ರಮಗಳನ್ನು ಕೈಗೊಂಡಿದ್ದು, ನಿರುದ್ಯೋಗವನ್ನು ಕಡಿಮೆ ಇರುವಂತೆ ನೋಡಿಕೊಂಡಿರುವುದು ತಮ್ಮ ಸಾಧನೆ ಎಂದು ಮುಖ್ಯಮಂತ್ರಿ ಭೂಪೇಶ್ ಬಘೇಲ್ ಪ್ರಚಾರ ಮಾಡುತ್ತಿದ್ದಾರೆ. ಜೊತೆಗೆ ತಾವು ಮತ್ತೆ ಅಧಿಕಾರಕ್ಕೆ ಬಂದರೆ, ಜಾತಿ ಸಮೀಕ್ಷೆ ಕೈಗೊಳ್ಳುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ.
ಬಿಜೆಪಿಯ ಪಾಲಿಗೆ ಅದರ ಕೇಂದ್ರ ನಾಯಕತ್ವವೇ ಮೊದಲ ಶತ್ರುವಾಗಿದೆ; ಹೈಕಮಾಂಡ್‌ಗೆ ಸ್ಥಳೀಯ ಮುಖಂಡರ ಮೇಲೆ ವಿಶ್ವಾಸವೇ ಇಲ್ಲ. ರಾಜ್ಯ ನಾಯಕರಿಗೆ ಯಾವುದೇ ಮುಖ್ಯ ಜವಾಬ್ದಾರಿಗಳನ್ನು ವಹಿಸದಿರುವುದರಿಂದ ಸ್ಥಳೀಯ ಮುಖಂಡರು ನಿರುತ್ಸಾಹಗೊಂಡಿದ್ದಾರೆ. ಪಕ್ಷವು ಇಲ್ಲಿಯೂ ಪ್ರಧಾನಿ ನರೇಂದ್ರ ಮೋದಿಯವರನ್ನೆ ನೆಚ್ಚಿಕೊಂಡಿದ್ದು, ಮೂರು ತಿಂಗಳಲ್ಲಿ ಅವರು ಮೂರು ಬಾರಿ ರಾಜ್ಯಕ್ಕೆ ಭೇಟಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ: ತೆಲಂಗಾಣ ಚುನಾವಣೆ: ಕೆಸಿಆರ್ ಕುರ್ಚಿ ಕಸಿಯಲು ಕಾಂಗ್ರೆಸ್ ಕಸರತ್ತು; ಬಿಜೆಪಿಗೆ ಒಳಜಗಳವೇ ಕುತ್ತು!
ಉತ್ತರ ಛತ್ತೀಸಗಢ ಅಥವಾ ಸರ್ಗುಜ ಪ್ರಾಂತ್ಯದಲ್ಲಿ 23 ಕ್ಷೇತ್ರಗಳಿದ್ದು, ಇಲ್ಲಿ ಎಸ್‌ಟಿ, ಒಬಿಸಿ ಮತದಾರರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಉಪಮುಖ್ಯಮಂತ್ರಿ ಟಿ ಎಸ್ ಸಿಂಗ್ ಡಿಯೋ, ಸಚಿವ ಜೈಸಿಂಗ್ ಅಗರ್ವಾಲ್ ಅವರು ಈ ಭಾಗದಲ್ಲಿ ಕಾಂಗ್ರೆಸ್‌ಗೆ ಮತ ತಂದುಕೊಡುವ ನಿರ್ಣಾಯಕ ವ್ಯಕ್ತಿಗಳೆನಿಸಿದ್ದಾರೆ. 2018ರಲ್ಲಿ ಈ ಭಾಗದಲ್ಲಿ ಕಾಂಗ್ರೆಸ್ ಉತ್ತಮ ಫಲಿತಾಂಶ ಪಡೆದಿತ್ತು. 2018ರಲ್ಲಿ ಸಿಂಗ್ ಡಿಯೋ ಮುಖ್ಯಮಂತ್ರಿ ಆಗುತ್ತಾರೆ ಎಂದು ಬಯಸಿದ್ದ ಈ ಭಾಗದ ಜನ ನಂತರ ಕಾಂಗ್ರೆಸ್ ನಾಯಕತ್ವದ ವಿರುದ್ಧ ಅಸಮಾಧಾನಗೊಂಡಿದ್ದರು. ಅದನ್ನು ಸರಿದೂಗಿಸಲು ಇತ್ತೀಚೆಗೆ ಸಿಂಗ್ ಡಿಯೋಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ.
ಮಧ್ಯ ಛತ್ತೀಸಗಢದಲ್ಲಿ ರಾಯ್‌ಪುರ್, ಬಿಲಾಸ್‌ಪುರ್, ದುರ್ಗ್‌ನಂಥ ಪ್ರಮುಖ ನಗರಗಳಿವೆ. ಈ ಡಿವಿಷನ್‌ನಲ್ಲಿ 55 ಕ್ಷೇತ್ರಗಳಿವೆ. ರಾಜ್ಯದ ಬಹುತೇಕ ಎಲ್ಲ ಎಸ್‌ಸಿ ಮೀಸಲು ಕ್ಷೇತ್ರಗಳೂ ಈ ಪ್ರಾಂತ್ಯದಲ್ಲಿವೆ. ಮುಖ್ಯಮಂತ್ರಿ ಭೂಪೇಶ್ ಬಘೇಲ್, ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ಅರುಣ್ ಸಾವೋ ಈ ಪ್ರಾಂತ್ಯಕ್ಕೆ ಸೇರಿದವರು. ಕಳೆದ ಚುನಾವಣೆಯಲ್ಲಿ ಬಿಜೆಪಿ ಈ ಭಾಗದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ. ಕಳೆದ ಐದು ವರ್ಷಗಳಲ್ಲಿ ಈ ಭಾಗದಲ್ಲಿ ಹಲವು ಕೋಮು ಜಗಳಗಳು ಭುಗಿಲೆದ್ದಿದೆ. ಅವು ತಮಗೆ ಈ ಬಾರಿ ಮತ ತಂದುಕೊಡುತ್ತವೆ ಎನ್ನುವುದು ಬಿಜೆಪಿ ಲೆಕ್ಕಾಚಾರ. ಹಿಂದೆ ಈ ಭಾಗದಲ್ಲಿ ಬಿಎಸ್‌ಪಿ ಪ್ರಬಲವಾಗಿತ್ತು. ಈಗ ಆ ಮತದಾರರು ಕಾಂಗ್ರೆಸ್ ಅನ್ನು ಬೆಂಬಲಿಸುತ್ತಿದ್ದಾರೆ.
ಛತ್ತೀಸಗಢ ದಕ್ಷಿಣ ಪ್ರಾಂತ್ಯ ಅಥವಾ ಬಸ್ತಾರ್‌ನಲ್ಲಿರುವ 12 ಸ್ಥಾನಗಳ ಪೈಕಿ 11 ಎಸ್ಟಿ ಮೀಸಲು ಕ್ಷೇತ್ರಗಳು. ಮಾವೋವಾದಿಗಳ ಪ್ರಭಾವ ಇರುವ ಇಲ್ಲಿನ ಎಲ್ಲ 12 ಸ್ಥಾನಗಳು ಸದ್ಯ ಕಾಂಗ್ರೆಸ್ ತೆಕ್ಕೆಯಲ್ಲಿವೆ. ಬಸ್ತಾರ್‌ನಲ್ಲಿ ಆಗಾಗ ಮತಾಂತರಕ್ಕೆ ಸಂಬಂಧಿಸಿದ ಜಗಳಗಳು ನಡೆಯುತ್ತಿರುತ್ತವೆ. ಒಬಿಸಿಗಳ ಪೈಕಿ ಸಾವೋ ಜನಾಂಗ ಪ್ರಮುಖವಾಗಿದ್ದು, ಅವರ ಪೈಕಿ ಹೆಚ್ಚಿನವರು ಬಿಜೆಪಿ ಬೆಂಬಲಿಗರಾಗಿದ್ದಾರೆ. ಕುರ್ಮಿಗಳ ಸಂಖ್ಯೆ ಕೂಡ ಗಣನೀಯವಾಗಿದ್ದು, ಅದೇ ಸಮುದಾಯಕ್ಕೆ ಸೇರಿದ ಭೂಪೇಶ್ ಬಘೇಲ್ ಕಾರಣಕ್ಕೆ ಅವರೆಲ್ಲ ಕಾಂಗ್ರೆಸ್ ಜೊತೆಗಿದ್ದಾರೆ.
ಈ ಸುದ್ದಿ ಓದಿದ್ದೀರಾ: ಮಧ್ಯಪ್ರದೇಶ ಚುನಾವಣೆ | ‘ಮಾಮಾ’ ಕೈಬಿಟ್ಟ ಬಿಜೆಪಿ; ಕಾಂಗ್ರೆಸ್‌ಗೆ ಒಬಿಸಿ, ಮಹಿಳೆಯರೇ ಶಕ್ತಿ
ಒಬಿಸಿ, ಗಿರಿಜನ, ದಲಿತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಛತ್ತೀಸಗಢದಲ್ಲಿ ಬಿಜೆಪಿ ಮೇಲ್ಜಾತಿಗಳ ಪಕ್ಷವಾಗಿಯೇ ಉಳಿದಿದೆ. ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಪರಿಗಣಿತವಾಗಿರುವ ರಮಣ್ ಸಿಂಗ್ ಠಾಕೂರ್ ಜಾತಿಗೆ ಸೇರಿದರೆ, ಉಳಿದ ಪ್ರಮುಖ ಮುಖಂಡರು ಬ್ರಾಹ್ಮಣ, ಬನಿಯಾ ಜನಾಂಗಗಳಿಗೆ ಸೇರಿದವರು. ರಾಜ್ಯದ ಬಹುಸಂಖ್ಯಾತರಾದ ಒಬಿಸಿಗಳಿಗೆ, ಎಸ್‌ಸಿ, ಎಸ್‌ಟಿಗಳಿಗೆ ಬಿಜೆಪಿಯಲ್ಲಿ ಪ್ರಾತಿನಿಧ್ಯ ನೀಡಿಲ್ಲ ಎನ್ನುವುದು ಬಿಜೆಪಿ ವಿರುದ್ಧದ ಪ್ರಮುಖ ಆರೋಪವಾಗಿದೆ. ಜೊತೆಗೆ ಗಿರಿಜನ ಮುಖಂಡ ನಂದಕುಮಾರ್ ಈಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವುದು ಕೂಡ ಬಿಜೆಪಿಗೆ ಚುನಾವಣೆಯಲ್ಲಿ ಹೊಡೆತ ನೀಡಲಿದೆ ಎನ್ನಲಾಗುತ್ತಿದೆ.
15 ವರ್ಷ ಅಧಿಕಾರದಲ್ಲಿದ್ದಾಗ ಹಿಂದುತ್ವದ ಅಜೆಂಡಾದ ಹೊರತಾಗಿ ರಾಜ್ಯದ ಸಮಸ್ಯೆಗಳ ಬಗ್ಗೆ ಬಿಜೆಪಿ ತಲೆಕೆಡಿಸಿಕೊಳ್ಳಲಿಲ್ಲ ಎನ್ನುವುದನ್ನು ಆ ರಾಜ್ಯದ ಜನ ಇನ್ನೂ ಮರೆತಿಲ್ಲ. ಸದಾ ರಾಷ್ಟ್ರೀಯ ವಿಚಾರಗಳನ್ನೇ ವೈಭವೀಕರಿಸಿ, ಸ್ಥಳೀಯ ಜನರನ್ನು ಹಾಗೂ ಸಮಸ್ಯೆಗಳನ್ನು ಮರೆತಿದ್ದು ಬಿಜೆಪಿ ಸೋಲಲು ಮುಖ್ಯ ಕಾರಣವಾಗಿತ್ತು. ಆದರೆ, ಈ ಬಾರಿಯೂ ಬಿಜೆಪಿ ಹಿಂದುತ್ವದ ಅಜೆಂಡಾವನ್ನೇ ಮುಂದು ಮಾಡುತ್ತಿದೆ. ಛತ್ತೀಸಗಢದಲ್ಲಿ ಚುನಾವಣಾ ಭಾಷಣ ಮಾಡುವಾಗ ಅಸ್ಸಾಂ ಮುಖ್ಯಮಂತ್ರಿ ಹಿಮವಂತ ಬಿಸ್ವ ಶರ್ಮಾ ಆಡಿರುವ ಮಾತುಗಳು ಅದಕ್ಕೆ ನಿದರ್ಶನವಾಗಿವೆ. ಕವರ್ಧಾ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕ ಮೊಹಮ್ಮದ ಅಕ್ಬರ್ ಸದ್ಯ ಭೂಪೇಶ್ ಬಘೇಲ್ ಸಂಪುಟದಲ್ಲಿ ಸಚಿವರಾಗಿದ್ದಾರೆ. ಅವರ ವಿರುದ್ಧ ಸ್ಪರ್ಧಿಸಿರುವ ಬಿಜೆಪಿಯ ವಿಜಯ್ ಶರ್ಮಾ ಪರವಾಗಿ ಮತ ಯಾಚನೆ ಮಾಡುವಾಗ ‘ದೇಶಕ್ಕೆ ಬೇಕಾಗಿರುವುದು ಮೋದಿ, ಅಕ್ಬರ್ ಅಲ್ಲ’ ಎಂದಿದ್ದಾರೆ ಶರ್ಮ. ‘ಛತ್ತೀಸ್‌ಗಢವನ್ನು ಲವ್ ಜಿಹಾದ್, ಧಾರ್ಮಿಕ ಮತಾಂತರ ಮತ್ತು ಅಕ್ಬರ್‌ನಂತಹ ವ್ಯಕ್ತಿಗಳಿಂದ ರಕ್ಷಿಸಲು ನಮಗೆ ವಿಜಯ್ ಶರ್ಮಾ ಅವರಂತಹ ಜನರು ಬೇಕು. ವಿಜಯ್ ಅವರನ್ನು ಚುನಾವಣೆಯಲ್ಲಿ ಗೆಲ್ಲುವಂತೆ ಮಾಡಿ, ಇಲ್ಲದಿದ್ದರೆ ಕವರ್ಧಾದ ಈ ಅಕ್ಬರ್ ಇಡೀ ಛತ್ತೀಸ್‌ಗಢವನ್ನು ವಶಪಡಿಸಿಕೊಳ್ಳುತ್ತಾನೆ’ ಎಂದು ಚುನಾವಣಾ ಸಮಯದಲ್ಲಿ ದ್ವೇಷ ಭಾಷಣ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ: ರಾಜಸ್ಥಾನ ಚುನಾವಣೆ | ಬಿಜೆಪಿಗೆ ಬಿಜೆಪಿಯೇ ಶತ್ರು; ಕಾಂಗ್ರೆಸ್‌ಗೂ ಅಂತಃಕಲಹದ ಅಂಕುಶ
ಕೇವಲ ಹಿಂದುತ್ವ, ಮತಾಂತರದಂಥ ವಿಚಾರಗಳ ಸುತ್ತಲೇ ಗಿರಕಿ ಹೊಡೆಯುತ್ತ ವಿರೋಧ ಪಕ್ಷವಾಗಿದ್ದ ಬಿಜೆಪಿ ಕಾಲಹರಣ ಮಾಡಿದ್ದರ ಪರಿಣಾಮ ಚುನಾವಣೆಯಲ್ಲಿ ಕಾಣಿಸುತ್ತಿದೆ. ಕಾಂಗ್ರೆಸ್‌ನ ವೈಫಲ್ಯಗಳನ್ನು ಜನರಿಗೆ ಮುಟ್ಟಿಸಲು ಬಿಜೆಪಿ ವಿಫಲವಾಗಿದ್ದು, ಆಡಳಿತ ವಿರೋಧಿ ಅಲೆಯ ನಡುವೆಯೂ ಕಾಂಗ್ರೆಸ್ ಛತ್ತೀಸಗಢದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ.
ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ ಇದ್ದರೂ, ಅಖಾಡದಲ್ಲಿ ಬಿಎಸ್‌ಪಿ, ಆಮ್ ಆದ್ಮಿ, ಜೆಸಿಸಿ ಮುಂತಾದ ಪಕ್ಷಗಳಿವೆ. ಬಿಎಸ್‌ಪಿ ಗೊಂಡ್ವಾನ ಗಣತಂತ್ರ ಪಕ್ಷ (ಜಿಜಿಪಿ) ಜೊತೆ ಮೈತ್ರಿ ಮಾಡಿಕೊಂಡಿದೆ. ಇವುಗಳ ಜೊತೆಗೆ ಸರ್ವ ಆದಿವಾಸಿ ಸಮಾಜ ನೂತನವಾಗಿ ಸ್ಥಾಪಿಸಿರುವ ಹಮಾರ್ ರಾಜ್ ಪಕ್ಷವು ಬಸ್ತಾರ್ ಪ್ರಾಂತ್ಯದಲ್ಲಿ ಗಮನಾರ್ಹ ಪ್ರಮಾಣದಲ್ಲಿ ಮತಗಳನ್ನು ಆಕರ್ಷಿಸಬಹುದು ಎನ್ನಲಾಗುತ್ತಿದೆ.
90 ಸ್ಥಾನಗಳ ಪೈಕಿ ಕಾಂಗ್ರೆಸ್ ಇದುವರೆಗೆ 83 ಸ್ಥಾನಗಳಿಗೆ, ಬಿಜೆಪಿ 85 ಸ್ಥಾನಗಳಿಗೆ, ಆಮ್ ಆದ್ಮಿ 33, ಬಿಎಸ್‌ಪಿ 26 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಿವೆ.
ಛತ್ತೀಸಗಢದಲ್ಲಿ ಚುನಾವಣೆಯ ಕಾವು ಏರುತ್ತಿರುವುದರ ನಡುವೆಯೇ ಚಾಥ್ ಆಚರಣೆಯ ಪ್ರಯುಕ್ತ ರಾಜ್ಯದ ಚುನಾವಣಾ ದಿನಾಂಕವನ್ನು ಮುಂದೂಡಿಕೆ ಮಾಡಲು ಆಮ್ ಆದ್ಮಿ ಪಕ್ಷ ಹಾಗೂ ಬಿಜೆಪಿಯ ರಮಣ್ ಸಿಂಗ್ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.