ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ಪ್ರಕರಣದ ಸಂಪೂರ್ಣ ಹೊಣೆಯನ್ನು ಸಿಎಂ, ಡಿಸಿಎಂ, ಗೃಹ ಸಚಿವರೇ ತೆಗೆದುಕೊಳ್ಳಬೇಕು ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, “ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಗೋವಿಂದ ರಾಜು ಅವರನ್ನು ಕಿತ್ತು ಹಾಕಿರುವುದು ಒಳ್ಳೆಯ ಕ್ರಮ, ಈ ಅಸೂಕ್ಷ್ಮ ಸರ್ಕಾರಕ್ಕೆ ಈಗಲಾದರೂ ಜ್ಞಾನೋದಯವಾಗಿದೆ. ಆದರೆ, ಐವರು ಪೊಲೀಸ್ ಅಧಿಕಾರಿಗಳು ಅಮಾನತು ಮಾಡಿದ್ದು ಸರಿಯಲ್ಲ” ಎಂದು ಹೇಳಿದರು.
“ಸರ್ಕಾರ ಹೀಗೆ ನಡೆದುಕೊಂಡರೆ ಅಧಿಕಾರಿಗಳು ಕೆಲಸ ಮಾಡುವುದಕ್ಕೆ ಸಾಧ್ಯವಿಲ್ಲ. ಸರ್ಕಾರದ ತಪ್ಪು ಮುಚ್ಚಿಕೊಳ್ಳಲು ಅಧಿಕಾರಿಗಳ ತಲೆದಂಡ ಮಾಡಿರುವುದು ಸರಿಯಲ್ಲ. ಸರ್ಕಾರ ಸೂಕ್ಷ್ಮವಾಗಿ ಯೋಚನೆ ಮಾಡಬೇಕಿತ್ತು. ಈ ಘಟನೆಯ ಮೂಲ ಕಾರಣಗಳೇ ಬೇರೆ. ಆ ಕಾರಣಗಳನ್ನು ಸರ್ಕಾರ ಮರೆಮಾಚುತ್ತದೆ” ಎಂದು ಆರೋಪಿಸಿದರು.
ಹೆಣದ ಮೇಲೆ ಬಿಜೆಪಿ-ಜೆಡಿಎಸ್ ರಾಜಕೀಯ ಮಾಡುತ್ತಿವೆ ಎಂದು ಸಿಎಂ, ಡಿಸಿಎಂ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿ, “ಹೆಣದ ಮೇಲೆ ರಾಜಕೀಯ ಮಾಡುವ ಅವಶ್ಯಕತೆ ನಮಗೆ ಇಲ್ಲ. ಇದ್ದ ವಿಷಯವನ್ನೇ ನಾನು ಹೇಳಿದ್ದೇನೆ. ನನ್ನ ಮಿತ್ರ ಪಕ್ಷವೂ ಹೇಳಿದೆ. ನಡೆದಿರುವುದನ್ನು ಹೇಳಿದ್ದೇವೆ. ಇದರಲ್ಲಿ ರಾಜಕೀಯ ಏನಿದೆ? ಕ್ರೀಡಾಂಗಣದ ಮುಂದೆ ಮೃತದೇಹಗಳು ಬಿದ್ದ ಮೇಲೆಯೂ ಕ್ರೀಡಾಂಗಣಕ್ಕೆ ಹೋಗಿ ಕಪ್‌ಗೆ ಮುತ್ತಿಕ್ಕಿ ಶೋ ಮಾಡಿದ್ದು ಯಾರು” ಎಂದು ಪ್ರಶ್ನಿಸಿದರು.
ಸಿಎಂ, ಡಿಸಿಎಂ, ಗೃಹ ಸಚಿವರೇ ಹೊಣೆ ಹೊರಬೇಕು
ಈ ಮೂವರದು ಕೂಡ ತಪ್ಪಿದೆ. ಪಂದ್ಯ ಗೆದ್ದ 24 ಗಂಟೆ ಒಳಗೆ ಆತುರಾತುರವಾಗಿ ಸನ್ಮಾನ ಮಾಡೋದು ಏನಿತ್ತು? ಹೋಗಲಿ, ಸನ್ಮಾನವನ್ನಾದರೂ ಸರಿಯಾಗಿ ಮಾಡಿದ್ರಾ? ಕಾಟಾಚಾರಕ್ಕೆ ಮಾಡಿದರು. ಆಟಗಾರರನ್ನು ಕೂಡ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಇವರು ಕೊಟ್ಟ ಶಾಲು, ಟೋಪಿ ಎಲ್ಲವನ್ನು ಅವರು ತಗೊಂಡು ಹೋದರೋ ಬಿಸಾಡಿ ಹೋದರೋ ಗೊತ್ತಿಲ್ಲ. ತರಾತುರಿಯಲ್ಲಿ ಈ ಕಾರ್ಯಕ್ರಮ ಬೇಕಿತ್ತಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.
“ನೈತಿಕತೆ ಇದ್ದರೆ ಸಿಎಂ, ಡಿಸಿಎಂ, ಗೃಹ ಸಚಿವರು ರಾಜೀನಾಮೆ ಕೊಡಬೇಕು. ಈಗಿನ ಕಾಲದಲ್ಲಿ ನಾವು ರಾಜಕಾರಣಿಗಳು ಭಂಡರು ಅಂತ ತೋರಿಸಿಕೊಂಡಿದ್ದೇವೆ. ಅವರಿಂದ ರಾಜೀನಾಮೆ ನಿರೀಕ್ಷೆ ಮಾಡೋಕೆ ಆಗುವುದಿಲ್ಲ. ವಿರೋಧ ಪಕ್ಷವಾಗಿ ನಾವು ಒತ್ತಾಯ ಮಾಡಿದ್ದೇವೆ. ಹೆಣದ ಮೇಲೆ ರಾಜಕೀಯ ಮಾಡೋ ದುರ್ಗತಿ ನಮಗೆ ಬಂದಿಲ್ಲ. ಅದು ಬರೋದು ಇಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಆರ್‌ಜಿಕರ್ ಆಸ್ಪತ್ರೆ, ಅಣ್ಣಾ ವಿ ವಿ ರೀತಿ ಎಲ್ಲ ಅತ್ಯಾಚಾರ ಪ್ರಕರಣಗಳಲ್ಲೂ ತ್ವರಿತ ನ್ಯಾಯದಾನ ಅತ್ಯಗತ್ಯ
ಆರ್‌ಸಿಬಿ ಗೆಲ್ಲುತ್ತದೆ ಎಂದು ಕನಸು ಬಿದ್ದಿತ್ತಾ
ಫೈನಲ್ ಪಂದ್ಯ ಆರಂಭವಾಗುವುದಕ್ಕೆ ಮೊದಲೇ ಆರ್‌ಸಿಬಿ ಆಡಳಿತ ಮಂಡಳಿ ಕಡೆಯವರು ವಿಜಯೋತ್ಸವ ಮಾಡುತ್ತೇವೆ ಎಂದು ನಗರ ಪೊಲೀಸರಿಗೆ ಅರ್ಜಿ ಸಲ್ಲಿಸಿದ್ದಾರೆ. ಅಂದರೆ ಆರ್‌ಸಿಬಿ ಗೆಲ್ಲುತ್ತದೆ ಎಂದು ಕನಸು ಬಿದ್ದಿತ್ತಾ? ಅಹಮದಾಬಾದ್ ನಲ್ಲಿ ಫೈನಲ್ಸ್ ಪಂದ್ಯ ಆರಂಭವಾಗಿದ್ದು ಏಳೂವರೆ ಗಂಟೆಗೆ. ಇಲ್ಲಿ ನೋಡಿದರೆ ಆರು ಗಂಟೆಗೆಲ್ಲ ವಿಜಯೋತ್ಸವ ಮಾಡುತ್ತೇವೆ, ನಮಗೆ ಅನುಮತಿ ಕೊಡಿ ಪೊಲೀಸರಿಗೆ ಆರ್‌ಸಿಬಿ ಅವರು ಅರ್ಜಿ ಕೊಡುತ್ತಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಮಾಡುತ್ತೇವೆ ಎಂದು ಅರ್ಜಿ ಹಾಕಿದ್ದಾರೆ. ಇದು ಹೇಗೆ ಸಾಧ್ಯ” ಎಂದು ಪ್ರಶ್ನಿಸಿದರು.
“ಈ ಎಲ್ಲ ಪತ್ರಗಳನ್ನು ಯಾರು ಬರೆದಿದ್ದರು? ಪಂದ್ಯ ಮುಗಿದ ಮರುದಿನ ಬೆಳಗ್ಗೆ 7.30ಕ್ಕೆ ಪೊಲೀಸ್ ಕಮೀಷನರ್ ಮೇಲೆ ಒತ್ತಡ ಹಾಕಿದ್ದು ಯಾರು? ಎನ್ನುವುದು ಗೊತ್ತಿದೆ. ಅದನ್ನೇ ಹೇಳಿದ್ದೇನೆ. ನಾನು ವಾಸ್ತವಾಂಶ ತಿಳಿದು ಮಾತಾಡಿದ್ದೇನೆ. ಅಸೂಯೆಯಿಂದ, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ನಾನು ಮಾತನಾಡಿಲ್ಲ” ಎಂದು ಹೇಳಿದರು.
ಡಾ. ರಾಜ್ ಅವರ ನಿಧನದ ದಿನಕ್ಕೆ ಹೋಲಿಸುವುದು ಸರಿಯಲ್ಲ
“ವರನಟ ಡಾ. ರಾಜ್ ಕುಮಾರ್ ಅವರ ನಿಧನದ ಸಂದರ್ಭದಲ್ಲಿ ಏನೇನು ನಡೆಯಿತೋ ಎನ್ನುವುದು ಈಗಾಗಲೇ ಹೇಳಿದ್ದೇನೆ. ಈ ಸರ್ಕಾರ ಅಣ್ಣಾವ್ರ ನಿಧನದ ವಿಷಯ ಇಟ್ಟುಕೊಂಡು ಕಾಲ್ತುಳಿತ ಪ್ರಕರಣದಲ್ಲಿ ರಕ್ಷಣೆ ಪಡೆಯೋದು ಬೇಡ” ಎಂದು ಹೇಳಿದರು.
“ರಾಜ್ ಕುಮಾರ್ ಅವರು ನಿಧನರಾದ ಸಂದರ್ಭದಲ್ಲಿ ಅಶಾಂತಿ ಉಂಟು ಮಾಡಲು ನಿರ್ದಿಷ್ಟವಾಗಿ ಕೆಲವರು ಪ್ರಯತ್ನಪಟ್ಟರು. ಸೀಮೆಎಣ್ಣೆ, ಪೆಟ್ರೋಲ್ ತಂದು ಬೆಂಗಳೂರು ನಗರದಲ್ಲಿ ಶಾಂತಿಯುತವಾಗಿ ನಡೆಯಬೇಕಿದ್ದ ವರನಟರ ಅಂತಿಮಯಾತ್ರೆ, ಅಂತ್ಯ ಸಂಸ್ಕಾರದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸವನ್ನು ಕೆಲವರು ವ್ಯವಸ್ಥಿತವಾಗಿ ಮಾಡಿದರು. ಆಗ ಗೋಲಿಬಾರ್ ಆಯಿತು. ಇಬ್ಬರು ಸಾವನ್ನಪ್ಪಿದರು. ಅದನ್ನು ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಆ ಘಟನೆಗೂ ಕಾಲ್ತುಳಿತಕ್ಕೆ ಹೋಲಿಕೆ ಮಾಡಬಾರದು” ಎಂದರು.