ಇತ್ತೀಚೆಗೆ ವಿಧಾನಸೌಧ ಮುಂಭಾಗ ನಡೆದ ಮುಖ್ಯಮಂತ್ರಿಯವರ ಜನಸ್ಪಂದನ ಕಾರ್ಯಕ್ರಮವು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು, ಸ್ವೀಕರಿಸಿದ ಅರ್ಜಿಗಳ ಸಕಾರಾತ್ಮಕ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್ ಅವರು ಸೂಚಿಸಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜನಸ್ಫಂದನ ಕಾರ್ಯಕ್ರಮದ ಪರಾಮರ್ಶೆಗಾಗಿ, ಆಯೋಜನೆಯಲ್ಲಿ ಭಾಗಿಯಾದ ಅಧಿಕಾರಿಗಳ ಸಭೆ ನಡೆಸಿ ಈ ಸೂಚನೆ ನೀಡಿದರು.
“ಜನಸ್ಪಂದನ ಕಾರ್ಯಕ್ರಮದ ಯಶಸ್ಸಿನ ಕುರಿತು ಮಾನ್ಯ ಮುಖ್ಯಮಂತ್ರಿಯವರೂ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರು ಇದಕ್ಕೆ ಸಾಂಸ್ಥಿಕ ರೂಪ ನೀಡಿ ಇನ್ನಷ್ಟು ವ್ಯವಸ್ಥಿತವಾಗಿ ಕಾರ್ಯಕ್ರಮ ನಡೆಸಬೇಕು ಎಂದು ಅಪೇಕ್ಷಿಸಿದ್ದಾರೆ” ಎಂದರು.
ವಿಭಾಗ ಮಟ್ಟದಲ್ಲಿ ಜನಸ್ಪಂದನ
“ಜನಸ್ಪಂದನ ಕಾರ್ಯಕ್ರಮವನ್ನು ವಿಭಾಗ ಮಟ್ಟದಲ್ಲಿ ನಡೆಸುವ ಕುರಿತೂ ಸಹ ಚಿಂತನೆ ನಡೆದಿದೆ. ಮೊದಲಿಗೆ ಕಲಬುರ್ಗಿಯಲ್ಲಿ ವಿಭಾಗಮಟ್ಟದ ಜನಸ್ಪಂದನ ನಡೆಸಲು ಉದ್ದೇಶಿಸಿದೆ. ವಿಭಾಗ ಮಟ್ಟದಲ್ಲಿ ಸಂಬಂಧಿಸಿದ ಜಿಲ್ಲಾಧಿಕಾರಿಗಳು ಖುದ್ದು ಭಾಗವಹಿಸಲು ಸೂಚಿಸಲಾಗುವುದು” ಎಂದು ತಿಳಿಸಿದರು.
11 ದಿನದಲ್ಲಿ 4321 ಅರ್ಜಿ ವಿಲೇವಾರಿ
“ಮೊನ್ನೆ ಸ್ವೀಕರಿಸಲಾದ 14,685 ಅರ್ಜಿಗಳ ಪೈಕಿ 4321 ಅರ್ಜಿಗಳನ್ನು ಈಗಾಗಲೇ ವಿಲೇವಾರಿ ಮಾಡಲಾಗಿದೆ. ಬಾಕಿ ಉಳಿದ ಅರ್ಜಿಗಳನ್ನೂ ಶೀಘ್ರವೇ ವಿಲೇವಾರಿ ಮಾಡುವಂತೆ” ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಭಾರತವನ್ನು ಗೆಲ್ಲಿಸಿದ ಬಡವರ ಮಕ್ಕಳ ಬೆರಗಿನ ಆಟ
“ಮುಂದಿನ ಜನಸ್ಪಂದನ ಕಾರ್ಯಕ್ರಮಗಳನ್ನು ಇನ್ನಷ್ಟು ವ್ಯವಸ್ಥಿತವಾಗಿ ಆಯೋಜಿಸುವಂತೆ ಹಾಗೂ ಸಾರ್ವಜನಿಕ ಕುಂದುಕೊರತೆ ನಿವಾರಣೆಯ ಈ ಕಾರ್ಯಕ್ರಮಗಳು ದೇಶಕ್ಕೇ ಮಾದರಿಯಾಗುವಂತೆ ನಡೆಯಬೇಕು” ಎಂದು ಅವರು ತಿಳಿಸಿದರು.
“ಜನಸ್ಪಂದನದಲ್ಲಿ ತಮ್ಮ ಅಹವಾಲುಗಳೊಂದಿಗೆ ಆಗಮಿಸುವ ಜನರ ಕುರಿತು ಕಾಳಜಿ ವಹಿಸಬೇಕು; ಅವರ ನೋವಿಗೆ ಅಧಿಕಾರಿಗಳು ಸ್ಪಂದಿಸುತ್ತಿದ್ದಾರೆಂಬ ಸಂತೃಪ್ತಿ ಅವರಲ್ಲಿ ಮೂಡಬೇಕು. ನಿಯಮಾನುಸಾರ ಅನುಷ್ಠಾನಗೊಳಿಸಲು ಸಾಧ್ಯವಿಲ್ಲದ ಅಹವಾಲುಗಳಿಗೆ ಸ್ಪಷ್ಟ ಹಿಂಬರಹ ನೀಡಬೇಕು. ಮನವಿದಾರರು ಪದೇ ಪದೇ ಜನಸ್ಪಂದನ ಕಾರ್ಯಕ್ರಮಕ್ಕೆ ಅದೇ ಅಹವಾಲಿನೊಂದಿಗೆ ಆಗಮಿಸುವಂತಾಗಬಾರದು” ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿಯವರ ಕಾರ್ಯದರ್ಶಿ ಡಾ. ಕೆ.ವಿ. ತ್ರಿಲೋಕಚಂದ್ರ ಅವರು ಜನಸ್ಪಂದನ ಕಾರ್ಯಕ್ರಮವನ್ನು ಮುಂದಿನ ಬಾರಿ ಇನ್ನಷ್ಟು ವ್ಯವಸ್ಥಿತವಾಗಿ ಆಯೋಜಿಸುವ ನಿಟ್ಟಿನಲ್ಲಿ ಇಂದಿನ ಸಭೆಯ ಚರ್ಚೆಯ ಅಂಶಗಳನ್ನು ಅಳವಡಿಸಿಕೊಳ್ಳುವಂತೆ ಸೂಚಿಸಿದರು.
ಸಭೆಯಲ್ಲಿ ಇ-ಆಡಳಿತ ಇಲಾಖೆಯ ಕಾರ್ಯದರ್ಶಿ ಉಜ್ವಲ್ ಕುಮಾರ್ ಘೋಷ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.