ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ರಾಜ್ಯದ ಜನರಿಗೆ ನೀಡಲಾಗಿದ್ದ ಗ್ಯಾರಂಟಿ ಯೋಜನೆಗಳ ಕುರಿತ ವಿಡಿಯೋವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯೂಟ್ಯೂಬ್‌ನಲ್ಲಿ ಬಿಡುಗಡೆಗೊಳಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯ ದಿನವೇ ಈ ವಿಡಿಯೋ ಬಿಡುಗಡೆಗೊಳಿಸಲಾಗಿದ್ದು, ‘ಗ್ಯಾರಂಟಿ ಯೋಜನೆಗಳ ಮೂಲಕ ನಾವು ನಾಡಿನ ಪ್ರತಿಯೊಬ್ಬ ಪ್ರಜೆಗೂ ಘನತೆಯ ಬದುಕಿನ ಸ್ವಾತಂತ್ರ್ಯವನ್ನು ಖಾತ್ರಿಪಡಿಸಿದ್ದೇವೆ. ಬನ್ನಿ, ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು ಗ್ಯಾರಂಟಿ ಯೋಜನೆಗಳೊಂದಿಗೆ ಸಂಭ್ರಮಿಸೋಣ. ದೇಶವಾಸಿಗಳಿಗೆ 77ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಕಾಮನೆಗಳು’ ಎಂದು ವಿವರದಲ್ಲಿ ಬರೆದುಕೊಂಡಿದ್ದಾರೆ.
ವಿಡಿಯೋದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದ ಐದು ಗ್ಯಾರಂಟಿಗಳನ್ನು ಉಲ್ಲೇಖಿಸಲಾಗಿದ್ದು, ‘ಅನ್ನಭಾಗ್ಯ’ ಯೋಜನೆಯು ‘ಹಸಿವಿನಿಂದ ಸ್ವಾತಂತ್ರ್ಯ’, ‘ಶಕ್ತಿ’ ಯೋಜನೆಯಿಂದಾಗಿ ಸ್ತ್ರೀಯರಿಗೆ ‘ಪರಾವಲಂಬನೆಯಿಂದ ಸ್ವಾತಂತ್ರ್ಯ’, ‘ಗೃಹಜ್ಯೋತಿ’ ಯೋಜನೆಯು ‘ಅಂಧಕಾರದಿಂದ ಸ್ವಾತಂತ್ರ್ಯ’ ನೀಡಿದೆ. ಮುಂದಿನ ದಿನಗಳಲ್ಲಿ ‘ಗೃಹ ಲಕ್ಷ್ಮೀ’ ಯೋಜನೆಯ ಮುಖಾಂತರ ‘ಬೆಲೆ ಏರಿಕೆಯಿಂದ’ ಹಾಗೂ ‘ಯುವನಿಧಿ’ಯ ಮೂಲಕ ‘ನಿರುದ್ಯೋಗದಿಂದ ಸ್ವಾತಂತ್ರ್ಯ’ ದೊರೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.