- ಮೈಸೂರು ವಕೀಲರ ಸಂಘ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿಮತ
- ಮೈಸೂರು ಭಾಗದ ಬಹುತೇಕ ವಕೀಲರು ನನ್ನ ಪರವಾಗಿ ಕೆಲಸ ಮಾಡಿದ್ದಾರೆ: ಸಿಎಂ
ನಾನು ಗೆಲ್ಲಬೇಕೆಂದು ಶುಭ ಹಾರೈಸಿ, ದೇವರಲ್ಲಿ ಪ್ರಾರ್ಥನೆ ಮಾಡಿದವರು ಹಾಗೂ ನೇರವಾಗಿ ನನ್ನ ಪರವಾಗಿ ಕೆಲಸ ಮಾಡಿದವರು ಇದ್ದಾರೆ. ಈ ಬಾರಿ ಗೆಲ್ಲಲು ಮೈಸೂರು ಭಾಗದ ವಕೀಲರ ಕೊಡುಗೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮೈಸೂರು ವಕೀಲರ ಸಂಘದ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಕಾನೂನನ್ನು ಗಂಭೀರವಾಗಿ ಪರಿಗಣಿಸದೆ ಇದ್ದುದರಿಂದ ಎರಡು ಬಾರಿ ಜನರ ಆಶೀರ್ವಾದದಿಂದ ಮುಖ್ಯಮಂತ್ರಿಯಾದೆ. ಮೈಸೂರು ಭಾಗದ ಬಹುತೇಕ ವಕೀಲರು ನನ್ನ ಪರವಾಗಿ ಕೆಲಸ ಮಾಡಿದ್ದಾರೆ” ಎಂದರು.
“ಅವಕಾಶ ವಂಚಿತ ಜನರಿಗೆ ಅವಕಾಶ ದೊರೆತಾಗ ಮತ್ತು ಸಾಮಾಜಿಕ, ಆರ್ಥಿಕ ಸಬಲತೆ ಬಂದಾಗ ಮಾತ್ರ ಸ್ವಾತಂತ್ರ್ಯ ದೊರೆತದ್ದಕ್ಕೆ ಸಾರ್ಥಕವಾಗುತ್ತದೆ. ಈ ದಿಕ್ಕಿನಲ್ಲಿ ಸ್ವಲ್ಪವಾದರೂ ಪ್ರಯತ್ನ ಮಾಡೋಣ ಎಂದು ನಾನು ರಾಜಕೀಯಕ್ಕೆ ಬಂದೆ. ಮುಖ್ಯಮಂತ್ರಿಯಾಗುವ ಅವಕಾಶ ದೊರೆತಾಗ ಸಾಮಾಜಿಕ ನ್ಯಾಯ ದೊರಕುವಂತೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ” ಎಂದು ತಿಳಿಸಿದರು.
“ಐದು ಗ್ಯಾರಂಟಿಗಳನ್ನು ಮೂರು ತಿಂಗಳಲ್ಲಿ ನಾಲ್ಕು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ಕವಿ ದಿ. ಸಿದ್ದಲಿಂಗಯ್ಯನವರು ಕವನಗಳ ಮೂಲಕ ಜನರನ್ನು ಜಾಗೃತಗೊಳಿಸುವ ಕೆಲಸ ಮಾಡಿದ್ದಾರೆ. ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ ಎಂದು ಪ್ರಶ್ನಿಸಿದ್ದಾರೆ. ಸ್ವಾತಂತ್ರ್ಯ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಬಂದಾಗ ಮಾತ್ರ ನಿಜವಾಗಿಯೂ ಸ್ವಾತಂತ್ರ್ಯ ದೊರೆತಂತಾಗುತ್ತದೆ. ಅದಾನಿ ಅಂಬಾನಿಗಳಿಗೆ ಬಂದಿರುವ ಸ್ವಾತಂತ್ರ್ಯ ಕಾಳ, ಬೋರ, ತಿಮ್ಮನಿಗೂ ಬಂದರೆ ದೇಶಕ್ಕೆ ಸ್ವಾತಂತ್ರ್ಯ ಬಂದಂತೆ. ಕೊಂಡುಕೊಳ್ಳುವ ಸಾಮರ್ಥ್ಯ ಎಲ್ಲರಿಗೂ ಬಂದಾಗ ಮಾತ್ರ ದೇಶಕ್ಕೆ ಸ್ವಾತಂತ್ರ್ಯ ದೊರೆತಂತಾಗುವುದು” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ಕಾರಕ್ಕೆ ನೂರು, ಸಮಸ್ಯೆ ನೂರಾರು
ಸಾಮಾಜಿಕ ನ್ಯಾಯ ದೊರಕಿಸಲು ಗಟ್ಟಿ ಹೆಜ್ಜೆ
“1.28 ಕೋಟಿ ಕುಟುಂಬಗಳ ಮನೆಯ ಯಜಮಾನಿಯರಿಗೆ 2000 ರೂ.ಗಳನ್ನು ನೀಡುವ ಗೃಹಲಕ್ಷ್ಮೀ ಯೋಜನೆ ಜಾರಿಯಾಗುತ್ತಿದೆ. ಇದರಿಂದ ಬಡವರಿಗೆ ಬೆಲೆ ಏರಿಕೆಯ ಬಿಸಿಯಿಂದ ಸ್ವಲ್ಪವಾದರೂ ಸಹಾಯ ಮಾಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಆ ಮೂಲಕ ಸಾಮಾಜಿಕ ನ್ಯಾಯ ದೊರಕಿಸಲು ಗಟ್ಟಿಯಾದ ಹೆಜ್ಜೆಗಳನ್ನು ಇಡುವ ಪ್ರಯತ್ನ ಮಾಡುತ್ತಿದ್ದೇವೆ” ಎಂದರು.
ಹೆಚ್.ಗಂಗಾಧರನ್ ಚಿತ್ರ ಅನಾವರಣ
“ಹೆಚ್.ಗಂಗಾಧರನ್ ಅವರ ಚಿತ್ರವನ್ನು ಅನಾವರಣ ಮಾಡಿದ್ದು, ಅವರು ರಾಜಕಾರಣದಲ್ಲಿದ್ದು ಹಾಗೂ ಸ್ವಲ್ಪ ಕಾಲ ವಕೀಲರಾಗಿಯೂ ಕೆಲಸ ಮಾಡಿದ್ದರು. ಒಳ್ಳೆಯ ವ್ಯಕ್ತಿಯಾಗಿದ್ದ ಅವರು ಎಲ್ಲರನ್ನೂ ಗೌರವದಿಂದ ಕಾಣುತ್ತಿದ್ದರು. ಶಾಸಕರಾಗಿದ್ದ ಸಂದರ್ಭದಲ್ಲಿ ಒಟ್ಟಿಗೆ ಆಯ್ಕೆಯಾಗಿದ್ದನ್ನು ಸ್ಮರಿಸಿದ ಮುಖ್ಯಮಂತ್ರಿಗಳು ಅವರ ಚಿತ್ರವನ್ನು ಅನಾವರಣ ಮಾಡಿರುವುದು ಉತ್ತಮ ಕೆಲಸ” ಎಂದು ಹೇಳಿದರು.