ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಕಳೆದ ಮೂರು ದಿನಗಳಿಂದ ಸಂಯುಕ್ತ ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆಯುತ್ತಿರುವ ‘ಮಹಾಧರಣಿ’ಯ ಆಗ್ರಹಕ್ಕೆ ಸ್ಪಂದಿಸಿರುವ ಸಿಎಂ ಸಿದ್ದರಾಮಯ್ಯ, ಡಿಸೆಂಬರ್ 19ರಂದು ಮಹತ್ವದ ಸಭೆ ನಡೆಸಲು ಒಪ್ಪಿಕೊಂಡಿದ್ದಾರೆ.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಅವರು ಮಹಾಧರಣಿ ನಡೆಯುತ್ತಿದ್ದ ಸ್ಥಳಕ್ಕೆ ಬಂದು ಸರ್ಕಾರದ ಒಪ್ಪಿಗೆ ಪತ್ರವನ್ನು ಸಂಯುಕ್ತ ಹೋರಾಟ ಸಮಿತಿ ಮುಖಂಡರಿಗೆ ನೀಡಿದರು.
ಬಳಿಕ ಮಾತನಾಡಿದ ಅವರು, “ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ನಿನ್ನೆ ಹೋರಾಟಗಾರರು ತಿಳಿಸಿರುವ ಎಲ್ಲ ವಿಷಯಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ವಿವರಿಸಿದ್ದಾರೆ. ರೈತರ, ಕಾರ್ಮಿಕ ಹಾಗೂ ಇತರ ಎಲ್ಲ ಮುಖಂಡರ ಜೊತೆಗೆ ಮೂರು ನಾಲ್ಕು ಗಂಟೆಗಳಾದರೂ ಚರ್ಚೆ ನಡೆಸಬೇಕೆಂದು ಸಿಎಂ ತಿಳಿದುಕೊಂಡಿದ್ದಾರೆ. ಹಾಗಾಗಿ, ಡಿಸೆಂಬರ್ 19ರಂದು ಸಿಎಂ ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಚರ್ಚೆ ನಡೆಸಲು ಸಭೆ ನಿಗದಿ ಮಾಡಿದ್ದಾರೆ. ಹೋರಾಟಗಾರರ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ತಿಳಿದಿದೆ. ದೊಡ್ಡ ಶಕ್ತಿಯ ಪ್ರದರ್ಶನ ಮಾಡಿದ್ದೀರಿ. ಕೇಂದ್ರ ಸರ್ಕಾರ ಕೂಡಾ ಬೇಡಿಕೆಗೆ ನಿಮ್ಮ ಒಪ್ಪಿಕೊಳ್ಳುತ್ತದೆ ಎಂದು ನಾವು ನಂಬಿದ್ದೇವೆ” ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್ ಅವರು ನೀಡಿದ ಸಭೆಯ ಒಪ್ಪಿಗೆ ಪತ್ರವನ್ನು ಸಂಯುಕ್ತ ಹೋರಾಟ ಸಮಿತಿಯ ಮುಖಂಡರಾದ ಬಡಗಲಪುರ ನಾಗೇಂದ್ರ, ನೂರ್ ಶ್ರೀಧರ್, ವರಲಕ್ಷ್ಮೀ, ಬಯ್ಯಾರೆಡ್ಡಿ ಸ್ವೀಕರಿಸಿದರು.