- ಶಾಸಕ ದಿನೇಶ್ ಗೂಳಿಗೌಡ ಮಾಡಿದ್ದ ಮನವಿಗೆ ಸಿಎಂ ಸ್ಪಂದನೆ
- ಪ್ರಕರಣದ ಕಡತವನ್ನು ಸಚಿವ ಸಂಪುಟ ಸಭೆಗೆ ತನ್ನಿ: ಸಿಎಂ ಸೂಚನೆ
ಕಾವೇರಿ, ಮೇಕೆದಾಟು ಪಾದಯಾತ್ರೆ ಸೇರಿದಂತೆ ನಾಡಿನ ಹಿತರಕ್ಷಣೆಯ ಹೋರಾಟಗಳಲ್ಲಿ ಭಾಗವಹಿಸಿದ ಹೋರಾಟಗಾರರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯುವಂತೆ ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ ಮಾಡಿದ್ದ ಮನವಿಗೆ ಸಿಎಂ ಸಿದ್ದರಾಮಯ್ಯ ಸ್ಪಂದಿಸಿದ್ದಾರೆ.
ಹೋರಾಟಗಾರರ ಮೇಲಿನ ಪ್ರಕರಣಗಳ ಕಡತವನ್ನು ಸಚಿವ ಸಂಪುಟ ಉಪ ಸಮಿತಿಯ ಮುಂದೆ ತಂದು ಅಗತ್ಯ ಕ್ರಮ ಕೈಗೊಂಡು, ಕ್ಯಾಬಿನೆಟ್ ಮುಂದೆ ತರುವಂತೆ ಗೃಹ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
“ಪ್ರಕರಣಗಳನ್ನು ಹಿಂಪಡೆಯುವ ವಿಚಾರವಾಗಿ ಸಚಿವ ಸಂಪುಟ ಉಪ ಸಮಿತಿಯ ಮುಂದೆ ಕಡತ ಮಂಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಕ್ಯಾಬಿನೆಟ್ ಮುಂದೆ ತರಬೇಕು” ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.
ದಿನೇಶ್ ಗೂಳಿಗೌಡ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಕೈಬಿಡುವಂತೆ ಕ್ರಮ ವಹಿಸಲು ಮನವಿ ಸಲ್ಲಿಸಿದ್ದರು. ಅದಕ್ಕೆ ಸಿಎಂ ಶೀಘ್ರ ಸ್ಪಂದನೆ ನೀಡಿರುವುದಕ್ಕೆ ಶಾಸಕ ದಿನೇಶ್ ಗೂಳಿಗೌಡ ಅವರು ಧನ್ಯವಾದ ಸಲ್ಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಲದ ಗುಂಡಿಗೆ ಮನುಷ್ಯರನ್ನು ಇಳಿಸುವುದು ‘ವಿಶ್ವಗುರು’ವಿಗೆ ಶೋಭೆಯಲ್ಲ
ಮನವಿಯಲ್ಲೇನಿತ್ತು?
ಕಾವೇರಿ ನೀರಿಗೆ ಸಂಬಂಧಿಸಿದಂತೆ ಮೇಕೆದಾಟು ಹಾಗೂ ಇನ್ನಿತರೆ ವಿಷಯಗಳಿಗೆ ಸಾಕಷ್ಟು ಧರಣಿಗಳು, ಪ್ರತಿಭಟನೆಗಳು ಹಾಗೂ ಪಾದಯಾತ್ರೆಗಳು ನಡೆದಿದ್ದು, ಅಂದಿನ ಬಿಜೆಪಿ ಸರ್ಕಾರವು ಹೋರಾಟದ ಕಿಚ್ಚನ್ನು ನಿಯಂತ್ರಿಸಲು ಶಾಸಕರು, ಮಾಜಿ ಶಾಸಕರು, ಹಿರಿಯ ರಾಜಕಾರಣಿಗಳು, ಮುಖಂಡರುಗಳು, ರೈತ ಹೋರಾಟಗಾರರು, ಕನ್ನಡ ಪರ ಸಂಘಟನೆಗಳು ಹಾಗೂ ಸಾರ್ವಜನಿಕರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲು ಮಾಡಿತ್ತು. ಇದರಿಂದಾಗಿ ಹಲವಾರು ಜನ ಇಂದಿಗೂ ವಿನಾಕಾರಣ ನ್ಯಾಯಾಲಯಗಳಿಗೆ ಅಲೆದಾಡುತ್ತಿದ್ದು, ಹೀಗಾಗಿ ಪ್ರಕರಣದಲ್ಲಿರುವವರು ಸೇರಿದಂತೆ ಕುಟುಂಬದವರು ಇದರಿಂದ ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಗೂಳಿಗೌಡ ಗಮನ ಸೆಳೆದಿದ್ದರು.