ಮೈಸೂರು ದಸರಾ ಸಮಯದಲ್ಲಿ ಬಿಜೆಪಿ ನಿರಂತರವಾಗಿ ವಿವಾದ ಹುಟ್ಟುಹಾಕುತ್ತಲೇ ಇದೆ. ಈ ಹಿಂದೆ, ಮಹಿಷ ದಸರಾ ಅಡ್ಡಿಪಡಿಸಿ, ರಗಳೆ, ರಾದ್ದಾಂತ ಎಬ್ಬಿಸುತ್ತಿದ್ದ ಬಿಜೆಪಿ, ಇದೀಗ, ಮೈಸೂರು ದಸರಾದ ದೀಪಾಲಂಕಾರದಲ್ಲೂ ಕ್ಯಾತೆ ತೆಗೆದಿದೆ. ದಸರಾದಲ್ಲೂ ಕೋಮು ರಾಜಕಾರಣ, ಕೋಮು ದ್ವೇಷ ಬಿತ್ತಲು ಮುಂದಾಗಿದೆ.
ದಸರಾ ಪ್ರಯುಕ್ತ ಮೈಸೂರಿನಾದ್ಯಂತ ದೀಪಾಲಂಕಾರ ಮಾಡಲಾಗಿದೆ. ನಗರದ ಬಹುತೇಕ ಭಾಗಗಳು ದೀಪಗಳಿಂದ ಕಂಗೊಳಿಸುತ್ತಿವೆ. ನಾನಾ ಬಗೆಯಲ್ಲಿ ದೀಪಾಲಂಕಾರ ಮಾಡಿಲಾಗಿದೆ. ಅದೇ ರೀತಿ, ಪ್ರಮುಖ ರಸ್ತೆಯೊಂದರಲ್ಲಿ ಗುಂಬಜ್ ಮಾದರಿಯಲ್ಲೂ ದೀಪಾಲಂಕಾರ ಮಾಡಲಾಗಿದೆ. ಅದಕ್ಕೆ, ಬಿಜೆಪಿ ಅಪಸ್ವರ ಎತ್ತಿದೆ.
ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿ ಹಸಿರು ಚಪ್ಪರ ಹಾಕಿ, ಅದಕ್ಕೆ ದೀಪಾಲಂಕಾರ ಮಾಡಲಾಗಿದೆ. ಚಪ್ಪರವನ್ನು ಗುಂಬಜ್ ಮಾದರಿಯಲ್ಲಿ ನಿರ್ಮಿಸಲಾಗಿದೆ. ಅದಕ್ಕೂ ಬಿಜೆಪಿ ಕ್ಯಾತೆ ತೆಗೆದಿದೆ. ಮಾಜಿ ಸಂಸದ ಪ್ರತಾಪ್ ಸಿಂಹ, ಅದನ್ನು ಬದಲಾಯಿಸಬೇಕು ಎಂದಿದ್ದಾರೆ.
ಚಪ್ಪರದ ಚಿತ್ರವನ್ನು ‘ಎಕ್ಸ್‘ನಲ್ಲಿ ಹಂಚಿಕೊಂಡಿರುವ ಪ್ರತಾಪ್ ಸಿಂಹ, ‘ಇದನ್ನು ಬದಲಿಸಲು ಹೇಳಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.
ಪ್ರತಿ ವರ್ಷ ಸಯ್ಯಾಜಿರಾವ್ ರಸ್ತೆಯಲ್ಲಿ ಚಾಂಮುಂಡೇಶ್ವರಿ ವಿದ್ಯುತ್ ಪ್ರಕರಣ ನಿಗಮ ನಿಯಮಿತ (ಚೆಸ್ಕಾಂ)ನಿಂದ ಹಸಿರು ಚಪ್ಪರ ಅಳವಡಿಸಲಾಗುತ್ತದೆ. ಅದೇ ರೀತಿ ಈ ವರ್ಷವೂ ಹಸಿರು ಚಪ್ಪರ ಹಾಕಿದೆ. ವಿಭಿನ್ನ ಮತ್ತು ವಿಶಿಷ್ಟವಾಗಿ ಈ ಬಾರಿ, ಗುಂಬಜ್ ಮಾದರಿಯಲ್ಲಿ ಚಪ್ಪರ ನಿರ್ಮಿಸಿದೆ. ಸಚಿವ ಕೆ.ಜೆ ಜಾರ್ಜ್ ಅವರು ಶುಕ್ರವಾರ ಇದೇ ಚಪ್ಪರದ ಬಳಿಯಿಂದಲೇ ದೀಪಾಲಂಕಾರ ಉದ್ಘಾಟನೆ ಮಾಡಲಿದ್ದಾರೆ.