ಕೇರಳದ ಪತ್ತನಂತಿಟ್ಟ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ತಮ್ಮ ಪುತ್ರ ಅನಿಲ್ ಆಂಟನಿ ಚುನಾವಣೆಯಲ್ಲಿ ಗೆಲ್ಲಬಾರದು, ಸೋಲಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಎಕೆ ಆಂಟನಿ ಮಂಗಳವಾರ ಹೇಳಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಕೆ ಆಂಟನಿ, “ಚುನಾವಣೆಯಲ್ಲಿ ತಮ್ಮ ಮಗನ ಪಕ್ಷ ಸೋಲಬೇಕು ಮತ್ತು ದಕ್ಷಿಣ ಕೇರಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಂಟೊ ಆಂಟನಿ ಅವರನ್ನು ಜನರು ಗೆಲ್ಲಿಸಬೇಕು” ಎಂದು ಹೇಳಿದ್ದು, “ಕಾಂಗ್ರೆಸ್ ನಾಯಕರ ಮಕ್ಕಳು ಬಿಜೆಪಿ ಸೇರಿದ್ದು ತಪ್ಪು. ಕಾಂಗ್ರೆಸ್ ನನ್ನ ಧರ್ಮ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ಪ್ರಶಾಂತ್ ಕಿಶೋರ್ ಚುನಾವಣಾ ಭವಿಷ್ಯ ‘ಹಾಸ್ಯಾಸ್ಪದ, ಬಿಜೆಪಿ ಪ್ರಾಯೋಜಿತ’ ಎಂದ ಕಾಂಗ್ರೆಸ್
ಕಳೆದ ವರ್ಷದ ಎಪ್ರಿಲ್‌ನಲ್ಲಿ, ಆಂಟನಿ ಅವರ ಪುತ್ರ ಅನಿಲ್, ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾದ ಬಿಬಿಸಿಯ ಸಾಕ್ಷ್ಯಚಿತ್ರದ ಬಗ್ಗೆ ಕಾಂಗ್ರೆಸ್‌ನ ನಿಲುವನ್ನು ಟೀಕಿಸಿದ್ದು ನಂತರ ಬಿಜೆಪಿಗೆ ಸೇರಿದ್ದರು.
ಅನಿಲ್ ಆಂಟನಿ ಹೇಳಿದ್ದು ಹೀಗೆ
ತನ್ನ ತಂದೆಯ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅನಿಲ್ ಆಂಟನಿ, “ಕಾಂಗ್ರೆಸ್ ಹಳೆಯ ನಾಯಕರನ್ನು ಹೊಂದಿದೆ ಮತ್ತು ಇತ್ತೀಚೆಗೆ ಪುಲ್ವಾಮಾ ಭಯೋತ್ಪಾದಕ ದಾಳಿ ಕುರಿತು ಹೇಳಿಕೆಗಳನ್ನು ನೀಡಿ ವಿವಾದವನ್ನು ಹುಟ್ಟುಹಾಕಿದ್ದ ಹಾಲಿ ಸಂಸದ ಮತ್ತು ಕಾಂಗ್ರೆಸ್ ಸದಸ್ಯ ಆಂಟೋ ಆಂಟನಿಯನ್ನು ಬೆಂಬಲಿಸಿದ್ದಕ್ಕಾಗಿ ಮಾಜಿ ರಕ್ಷಣಾ ಸಚಿವರಾದ ತಮ್ಮ ತಂದೆಯ ಮೇಲೆ ಸಹಾನುಭೂತಿ ಹೊಂದಿದೆ” ಎಂದು ಟೀಕಿಸಿದರು. ಹಾಗೆಯೇ “ಪತ್ತನಂತಿಟ್ಟದಲ್ಲಿ ನಾನೇ ಗೆಲ್ಲುತ್ತೇನೆ” ಎಂದರು.
Kerala: On his son and BJP leader Anil Antony contesting elections from Pathanamthitta Lok Sabha seat, Congress leader AK Antony says, “BJP should lose there and Congress should win in Pathanamthitta. Anto Antony (Congress candidate) will win. Congress is my religion.”… pic.twitter.com/xJKdAUoEVG
— ANI (@ANI) April 9, 2024
ಪತ್ತನಂತಿಟ್ಟ ಲೋಕಸಭಾ ಕ್ಷೇತ್ರ
ಕೇರಳದ ಪತ್ತನಂತಿಟ್ಟ ಲೋಕಸಭಾ ಕ್ಷೇತ್ರವು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತ್ರಿಪಕ್ಷೀಯ ಸ್ಪರ್ಧೆಗೆ ಸಾಕ್ಷಿಯಾಗುವ ಸಾಧ್ಯತೆಯಿದೆ. ಬಿಜೆಪಿ ಹಿರಿಯ ಕಾಂಗ್ರೆಸ್ ನಾಯಕ ಎಕೆ ಆಂಟನಿ ಅವರ ಪುತ್ರ ಅನಿಲ್ ಆಂಟನಿಗೆ ಟಿಕೆಟ್ ನೀಡಿದರೆ, ಕ್ಷೇತ್ರದಲ್ಲಿ ಹಾಲಿ ಸಂಸದ ಆಂಟೋ ಆಂಟನಿಗೆ ಕಾಂಗ್ರೆಸ್ ಮತ್ತೆ ಟಿಕೆಟ್ ನೀಡಿದೆ. ಇನ್ನು ಸಿಪಿಐ-ಎಂನಿಂದ ಥಾಮಸ್ ಐಸಾಕ್ ಅವರನ್ನು ಕಣಕ್ಕಿಳಿದಿದ್ದಾರೆ.