ಈಶ್ವರಪ್ಪನವರು ಹೋದಲ್ಲಿ ಬಂದಲ್ಲಿ “ಅಪ್ಪ- ಮಕ್ಕಳಿಗೆ ಈ ಬಾರಿ ತಕ್ಕ ಶಾಸ್ತಿ ಮಾಡಿ” ಅಂತ ಪ್ರಚಾರ ಆರಂಭಿಸಿದ್ದಾರೆ. ಈಶ್ವರಪ್ಪ ಸ್ಪರ್ಧೆ ಮಾಡಿರುವ ಕಾರಣ ಶಿವಮೊಗ್ಗದಲ್ಲಿ ತ್ರಿಕೋನ ಸ್ಪರ್ಧೆ ಉಂಟಾಗಿದೆ
ಮಲೆನಾಡ ಹೆಬ್ಬಾಗಿಲು ಎಂದು ಕರೆಸಿಕೊಳ್ಳುವ ಶಿವಮೊಗ್ಗ ಜಿಲ್ಲೆ ನಾಲ್ಕು ಮುಖ್ಯಮಂತ್ರಿಗಳನ್ನು ರಾಜ್ಯಕ್ಕೆ ಕೊಟ್ಟಂಥ ಧೀಮಂತ ಊರು. ಕಡಿದಾಳ್ ಮಂಜಪ್ಪ, ಎಸ್ ಬಂಗಾರಪ್ಪ, ಜೆ ಎಚ್ ಪಟೇಲ್ ಹಾಗೂ ಬಿ ಎಸ್ ಯಡಿಯೂರಪ್ಪ ಇಲ್ಲಿಂದ ಮುಖ್ಯಮಂತ್ರಿಯಾದವರು.
ಪ್ರಸ್ತುತ ಶಿವಮೊಗ್ಗ ಜಿಲ್ಲೆಯಲ್ಲಿ ಈ ಬಾರಿ ಲೋಕಸಭಾ ಚುನಾವಣೆ ರಣಕಣ ಜೋರಾಗಿದೆ. ಈ ಬಾರಿ ಅಖಾಡದಲ್ಲಿ ಘಟಾನುಘಟಿ ಅಭ್ಯರ್ಥಿಗಳು ಇದ್ದಾರೆ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಪುತ್ರಿ ಗೀತಾ ಶಿವರಾಜ್ ಕುಮಾರ್ ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಬಿ ವೈ ರಾಘವೇಂದ್ರ ಬಿಜೆಪಿಯಿಂದ 4ನೇ ಬಾರಿ ಜನರ ಆಶೀರ್ವಾದ ಕೇಳುತ್ತಿದ್ದಾರೆ. ಮತ್ತೊಂದು ಕಡೆ ಬಿಜೆಪಿಯ ಪಕ್ಕ ಹಿಂದುತ್ವವಾದಿ ಎಂದು ಕರೆದುಕೊಳ್ಳುವ ಈಶ್ವರಪ್ಪ , “ಈ ಬಾರಿ ಯಡಿಯೂರಪ್ಪನವರೇ ನಮಗೆ, ನಮ್ಮ ಕುಟುಂಬಕ್ಕೆ ಅನ್ಯಾಯ ಮಾಡಿದ್ದಾರೆ” ಎಂದು ಹೇಳಿ ಪಕ್ಷೇತರ ಸ್ಪರ್ಧೆ ಮಾಡಿ ಗೆದ್ದೇ ತೀರುತ್ತೇನೆ ಎಂದು ಶಿವಮೊಗ್ಗ ಜಿಲ್ಲೆಯಾದ್ಯಂತ ಪ್ರಚಾರ ಆರಂಭಿಸಿದ್ದಾರೆ.
ಈಶ್ವರಪ್ಪ ಬಂಡಾಯ ಶಮನಕ್ಕೆ ಬಿಜೆಪಿಯ ಘಟಾನುಘಟಿ ನಾಯಕರುಗಳು ಬಂದು, ಬಂದ ದಾರಿಗೆ ಸುಂಕವಿಲ್ಲ ಎಂದು ತೆರಳಿದ್ದಾರೆ.
ಈ ಮಧ್ಯೆ ಈಶ್ವರಪ್ಪ ಅಮಿತ್ ಶಾರಿಂದ ಕರೆ ಬಂದ ಕಾರಣ ಅವರನ್ನು ಭೇಟಿಯಾಗಲು ದೆಹಲಿಗೆ ತೆರಳಿದ್ದ ಈಶ್ವರಪ್ಪನವರ ಭೇಟಿಗೆ ಅಮಿತ್ ಶಾ ಸಿಕಿಲ್ಲ. ವರಿಷ್ಠರು ಭೇಟಿಗೆ ಸಿಗದಿರುವುದರಿಂದ ಈ ಬಾರಿ ರಾಘವೇಂದ್ರ ಅವರನ್ನು ಸೋಲಿಸಿ ಎನ್ನುವ ಸಂದೇಶ ರವಾನೆಯಾದಂತಾಗಿದೆ ಎಂದು ಪ್ರಚಾರ ಮಾಡುತ್ತಿದ್ದಾರೆ.
ಮುಖ್ಯವಾಗಿ ಈಶ್ವರಪ್ಪ ಅವರಿಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ನಗರದಿಂದ ಬಿಜೆಪಿಯಿಂದ ಟಿಕೆಟ್ ನೀಡಲಿಲ್ಲ. ನಂತರ ಈಶ್ವರಪ್ಪ ಅವರ ಮಗ ಕಾಂತೇಶ್ ಅವರಿಗೆ ಹಾವೇರಿಯಿಂದ ಲೋಕಸಭಾ ಅಭ್ಯರ್ಥಿಯಾಗಿ ಸಹ ಮಾಡಲಿಲ್ಲ. ಇದು ಈಶ್ವರಪ್ಪ ಅವರನ್ನು ಕೆಂಡಾಮಂಡಲ ಮಾಡಿದೆ. ಈ ಚುನಾವಣೆ ಈಶ್ವರಪ್ಪ ಅವರಿಗೆ ಮಾಡು ಇಲ್ಲವೇ ಮಡಿ ಎನ್ನುವಂತೆ ಆಗಿದೆ.
ಈಶ್ವರಪ್ಪನವರು ಹೋದಲ್ಲಿ ಬಂದಲ್ಲಿ ಪ್ರಚಾರದಲ್ಲಿ ಅಪ್ಪ ಮಕ್ಕಳಿಗೆ ಈ ಬಾರಿ ತಕ್ಕ ಶಾಸ್ತಿ ಜನ ಮಾಡಿ ಅಂತ ಪ್ರಚಾರ ಆರಂಭಿಸಿದ್ದಾರೆ. ಈಶ್ವರಪ್ಪ ಸ್ಪರ್ಧೆ ಮಾಡಿರುವ ಕಾರಣ ಶಿವಮೊಗ್ಗದಲ್ಲಿ ತ್ರಿಕೋನ ಸ್ಪರ್ಧೆ ಉಂಟಾಗಿದೆ.
ಇನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆ ಹಾಗೂ ಮಹಿಳಾ ಸಬಲೀಕರಣ ಮತ್ತು ಬಂಗಾರಪ್ಪರವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮಾಡಿದ ಯೋಜನೆಗಳಾದ ಉಚಿತ ವಿದ್ಯುತ್, ಆರಾಧನಾ, ಅಕ್ಷಯ ಯೋಜನೆ, ಗ್ರಾಮೀಣ ಕೃಪಾಂಕ ಹೀಗೆ ತಮ್ಮ ತಂದೆಯು ಮಾಡಿದ್ದ ಜಿಲ್ಲೆಯ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿದ್ದಾರೆ. ಪ್ರಸ್ತುತ ಮಾನ್ಯ ಶಿಕ್ಷಣ ಸಚಿವ ಹಾಗೂ ಸಹೋದರ ಮಧು ಬಂಗಾರಪ್ಪ ಅವರು ಹಿಂದೆ ಮಾಡಿದ್ದ ನೀರಾವರಿ ಯೋಜನೆಗಾಗಿ ಮತ್ತು ಸಂತ್ರಸ್ತರಿಗಾಗಿ ಮಾಡಿದ ಪಾದಯಾತ್ರೆ ಮತ್ತು ಪ್ರಸ್ತುತ ಅವರು ಮಾಡುತ್ತಿರುವ ಕೆಲಸಗಳನ್ನು ಮುಂದಿಟ್ಟು ಜನರ ಆಶೀರ್ವಾದ ಕೇಳುತ್ತಿದ್ದಾರೆ.
ಗೀತಾ ಶಿವರಾಜ್ ಕುಮಾರ್ ಮನೆಯ ಮಗಳಿಗೆ ಗೆಲ್ಲಿಸಿ ಎಂದು ಕೇಳುತ್ತಿದ್ದಾರೆ. ಹಾಗೆ ಶಿವರಾಜ್ ಕುಮಾರ್ ಅವರು ಮನೆಯ ಮಗಳನ್ನು ಬರಿಗೈಯಲ್ಲಿ ಕಳಿಸಿಕೊಡಬೇಡಿ ಎಂದು ಮತದಾರರ ಬಳಿ ಹೇಳುತ್ತಿದ್ದಾರೆ.
ಬಿಜೆಪಿಯ ಬಿ ವೈ ರಾಘವೇಂದ್ರ ಅಭಿವೃದ್ಧಿ ನೋಡಿ ಮೋದಿ ನೋಡಿ ದೇಶಕ್ಕೋಸ್ಕರ ಮತ ನೀಡಿ, ಏರ್ಪೋರ್ಟ್ ಮಾಡಿದೀನಿ, ರಸ್ತೆಗಳು ಮಾಡಿದೀನಿ, ಸ್ಮಾರ್ಟ್ ಸಿಟಿ ಮಾಡಿದೀನಿ, ರೈಲು ತಂದಿದೀನಿ, ಏತ ನೀರಾವರಿ ವ್ಯವಸ್ಥೆ ಮಾಡಿದೀನಿ ಎಂದು ಈ ಬಾರಿ ಮತ್ತಷ್ಟು ಅಭಿವೃದ್ಧಿ ಮಾಡಲು ಅವಕಾಶ ನೀಡಿ ಅಂತ ಹೇಳಿ ಮತ ಕೇಳುತ್ತಿದ್ದಾರೆ. ಶಿವಮೊಗ್ಗದ ಅಲ್ಲಮ ಪ್ರಭು ಮೈದಾನಕ್ಕೆ ಮೋದಿ ಅವರನ್ನು ಕರೆಸಿ ಸಮಾವೇಶ ಮಾಡಿ ಮೋದಿ ಅವರು ಈ ಬಾರಿ ರಾಘವೇಂದ್ರ ಅವರನ್ನ ಗೆಲ್ಲಿಸಿ ಅಂತ ಭಾಷಣ ಮಾಡಿ ಹೋಗಿದ್ದಾರೆ.
ಇಷ್ಟೆಲ್ಲದರ ಮಧ್ಯೆ ಶಿವಮೊಗ್ಗದಲ್ಲಿ ಕಳೆದ ಬಾರಿ ನಡೆದ ವಿಧಾನಸಭೆ ಚುನಾವಣೆಯಲ್ಲಿ 3 ಕ್ಷೇತ್ರ ಕಾಂಗ್ರೆಸ್, 3 ಕ್ಷೇತ್ರ ಬಿಜೆಪಿ ಹಾಗೂ ಒಂದು ಕ್ಷೇತ್ರ ಜೆಡಿಎಸ್ ಗೆದ್ದಿದ್ದು, ಸೊರಬ, ಭದ್ರಾವತಿ, ಹಾಗೂ ಸಾಗರ ಕಾಂಗ್ರೆಸ್ ಪಾಲಾಗಿದೆ, ಇನ್ನ ಶಿವಮೊಗ್ಗ ನಗರ, ತೀರ್ಥಹಳ್ಳಿ ಹಾಗೂ ಶಿಕಾರಿಪುರ ಬಿಜೆಪಿ ಪಾಲಾಗಿದೆ ಇನ್ನು ಶಿವಮೊಗ್ಗ ಗ್ರಾಮಾಂತರ ಭಾಗ ಜೆಡಿಎಸ್ ಪಾಲಾಗಿತ್ತು. ಪ್ರಸ್ತುತ ಬಿಜೆಪಿ ಜೆಡಿಎಸ್ ಮೈತ್ರಿಯಿಂದ ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಕಾರ್ಯಕರ್ತರು ಗೊಂದಲದಲ್ಲಿದ್ದಾರೆ.
ಹಾಗೆ ತೀರ್ಥಹಳ್ಳಿಯಲ್ಲಿ ಜೆಡಿಎಸ್ ಅಲ್ಲಿ ಇದ್ದ ಆರ್ ಎಂ ಮಂಜುನಾಥ್ ಗೌಡ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಹಾಗಾಗಿ ಜಾತಿ ಲೆಕ್ಕಾಚಾರ ನೋಡುವುದಾದರೆ ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಈಡಿಗ ಸಮುದಾಯದ ಮತಗಳಿವೆ. ಈಡಿಗ ಸಮುದಾಯದ ಮತಗಳು ನಿರ್ಣಾಯಕವಾಗಲಿದೆ. ಆದರೆ, ಈ ಬಾರಿ ಕಾಂಗ್ರೆಸ್ ಗೆ ಗ್ಯಾರಂಟಿ ಯೋಜನೆಯು ಅತಿ ಹೆಚ್ಚು ಜನರನ್ನು ತಲುಪಿದ್ದು ಬಡವರು, ದೀನ ದಲಿತರು, ಕೂಲಿ ಕಾರ್ಮಿಕ ವರ್ಗ, ಶ್ರಮಿಕ ವರ್ಗ, ಇವರೆಲ್ಲ ಕಾಂಗ್ರೆಸ್ ಪರವಾಗಿ ಇದ್ದಾರೆ.
ಕಾಂಗ್ರೆಸ್‌ನಿಂದ ಮಹಿಳಾ ಸಹಾನುಭೂತಿ ಆಧಾರ ಮೇಲೆ ಮಹಿಳೆಯರ ಮತಗಳು ಅವಲಂಬಿತವಾಗಿವೆ. ಹಾಗೂ ಬಂಗಾರಪ್ಪ ಅವರ ಪುತ್ರಿ ಹಾಗೂ ಶಿವರಾಜ್ ಕುಮಾರ್ ಪತ್ನಿ ಮತ್ತು ಈಡಿಗ ಸಮುದಾಯದ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಜಾತಿ ಲೆಕ್ಕಾಚಾರದಲ್ಲಿ ವರ್ಕ್ ಔಟ್ ಆಗಬಹುದು. ಹಾಗೆ ಈ ಬಾರಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಮಹಿಳೆಯರ ಮನ ಗೆಲ್ಲುವಲ್ಲಿ ಯಶಸ್ವಿ ಆಗಿದೆ.
ರಾಘವೇಂದ್ರ ಒಳ್ಳೆಯವರು. ಆದರೆ ನಮಗೆ ಕಾಂಗ್ರೆಸ್ ಪಕ್ಷ ಬಂದರೆ ಒಳ್ಳೆಯದು. ಮನೆಗೆ ಬಹಳಷ್ಟು ಅನುಕೂಲ ಆಗುತ್ತಿದೆ ಎಂಬುದು ಮಹಿಳಾ ಮತದಾರರ ಮಾತಾಗಿದೆ. ಇದೆಲ್ಲದರ ಮಧ್ಯೆ ಈಶ್ವರಪ್ಪ ಅವರಿಗೆ ಅವರದೇ ಅದ ಒಂದಷ್ಟು ಬೆಂಬಲ ಇರುವುದಂತು ಸ್ಪಷ್ಟ.
ಹಾಗೆಯೇ, ಶಿವಮೊಗ್ಗ ನಗರದಲ್ಲಿ ಅತಿ ಹೆಚ್ಚು ಬ್ರಾಹ್ಮಣ ಸಮುದಾಯದ ಮತಗಳಿವೆ. ಇವು ಹೆಚ್ಚು ಕಡಿಮೆ ಈ ಬಾರಿ ಈಶ್ವರಪ್ಪ ಸ್ಪರ್ಧೆ ಮಾಡಿದ್ದೆ ಖಚಿತವಾದಲ್ಲಿ ಈ ಬಾರಿ ಬ್ರಾಹ್ಮಣ ಸಮುದಾಯದ ಮತಗಳನ್ನು ರಾಘವೇಂದ್ರ ಕಳೆದುಕೊಳ್ಳುವ ಸಂಭವವಿದೆ.
ತೀರ್ಥಹಳ್ಳಿಯಲ್ಲಿ ಆರ್ ಎಂ ಮಂಜುನಾಥ್ ಗೌಡ ಹಾಗೂ ಕಿಮ್ಮನೆ ರತ್ನಾಕರ್ ಒಂದಾಗಿರುವುದು ಜಿಲ್ಲೆಯಲ್ಲಿ ಒಕ್ಕಲಿಗ ಸಮುದಾಯದ ಮತಗಳು ಸಹ ಬಿಜೆಪಿ ನಿರೀಕ್ಷಿಸಿದ್ದಷ್ಟು ಬರುವುದು ಕಷ್ಟವಿದೆ ಹಾಗೂ ಜಿಲ್ಲೆಯಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಕೂಡ ತಕ್ಕ ಮಟ್ಟಿಗೆ ಇದ್ದು ಇದರಲ್ಲಿ ಕೆಲವಷ್ಟು ಶಿಕಾರಿಪುರದಲ್ಲಿ ಯಡಿಯೂಪ್ಪನವರ ಮುಸ್ಲಿಂ ಬಗ್ಗೆ ಇರುವ ಸಾಫ್ಟ್ ಕಾರ್ನರ್‌ನಿಂದ ಬಿಜೆಪಿಗೆ ಸ್ವಲ್ಪಮಟ್ಟಿಗೆ ಬರಬಹುದು. ಅದು ಶಿಕಾರಿಪುರ ತಾಲೂಕಿಗೆ ಸೀಮಿತ. ಆದರೆ ಉಳಿದಂತೆ ಮುಸ್ಲಿಂ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಮೀಸಲು.
ಇನ್ನು ಹಿಂದುಳಿದ ವರ್ಗ, ದಲಿತರ ಮತಗಳು ಶೇಕಡಾವಾರು ಕಾಂಗ್ರೆಸ್ ಪಕ್ಷದ ಪರವಾಗಿ ಇದ್ದಂತೆ ಕಾಣಿಸುತ್ತ ಇದ್ದೆ. ಇದಕ್ಕೆ ಕಾರಣ ಗ್ಯಾರಂಟಿ ಯೋಜನೆಗಳು ಅಷ್ಟರ ಮಟ್ಟಿಗೆ ಕೆಲಸ ಮಾಡಿದಂತೆ ಜಿಲ್ಲೆಯಲ್ಲಿ ಕಾಣಿಸುತ್ತಿದೆ.
ಈಶ್ವರಪ್ಪ ಹೇಳಿದಂತೆ ಬ್ರಹ್ಮ ಬಂದರೂ ಈ ಬಾರಿ ನಾನು ಸ್ಪರ್ಧೆ ಮಾಡೇ ಮಾಡುತ್ತೇನೆ. ರಾಘವೇಂದ್ರ ಸೋಲುವುದು ಖಚಿತ ಅನ್ನುತ್ತಿದ್ದಾರೆ. ಇದೇನಾದರೂ ನಿಜವಾದರೆ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಸ್ತುತ ವಾತಾವರಣ ಪ್ರಕಾರ ಕಾಂಗ್ರೆಸ್‌ಗೆ ಸುಲಭ ಗೆಲುವು ಸಾಧ್ಯತೆ ಇದೆ.
ಹಾಗಾಗಿ ಈ ಬಾರಿ ಶಿವಮೊಗ್ಗ ಚುನಾವಣೆ ಮತದಾರರ ಪ್ರಕಾರ ಹಿಂದುತ್ವ vs ಹಿಂದುತ್ವ, ಮೋದಿ Vs ಮೋದಿ ಅನ್ನುವಂತೆ ಆಗಿದೆ. ಹಾಗೆ ಹಿಂದುತ್ವ ಅಂದರೆ ನಮ್ಮದು ಅಸಲಿ ಹಿಂದುತ್ವ ಅಂತ ಈಶ್ವರಪ್ಪ ಹೇಳುತ್ತಾರೆ. ರಾಘವೇಂದ್ರ ನಮ್ಮದು ಅಸಲಿ ಅಂತಾರೆ.
ಕೊನೆಯದಾಗಿ ಯಾರು ಅಸಲಿ, ಯಾರು ನಕಲಿ ಎಂಬುದನ್ನು ಮತದಾರ ಪ್ರಭು ಚುನಾವಣೆಯಲ್ಲಿ ನಿರ್ಧಾರ ಮಾಡುತ್ತಾನೆ. ಇಬ್ಬರ ಜಗಳ ಮೂರನೆಯವರಿಗೆ ಲಾಭ ಅನ್ನುವಂತೆ ಆಗಿದೆ. ಇದರ ಮಧ್ಯೆ ಮೋದಿ ಫೋಟೋ ಪ್ರಚಾರಕ್ಕಾಗಿ ಈಶ್ವರಪ್ಪ -ರಾಘವೇಂದ್ರ ನಡುವೆ ತಿಕ್ಕಾಟ ನಡೆಯುತ್ತಿದೆ. ಶಿವಮೊಗ್ಗ ಯಾರಿಗೆ ವಿಜಯ ಕಿರೀಟ ತೋಡಿಸುತ್ತಾನೆ ಎಂಬುದನ್ನು ಕಾದು ನೋಡಬೇಕಿದೆ.