ಆಪರೇಷನ್ ಸಿಂಧೂರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಅಶೋಕ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಅಲಿ ಖಾನ್ ಮಹ್ಮದಾಬಾದ್ ಅವರನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ. ಬಿಜೆಪಿ ಯುವ ಮೋರ್ಚಾ ನಾಯಕರೊಬ್ಬರ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಬಂಧನದ ಬೆನ್ನಲ್ಲೇ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ, “ತಪ್ಪು ಅವರ ಹೆಸರಿನದ್ದು” ಎಂದು ಹೇಳಿದ್ದಾರೆ. ಈ ಮೂಲಕ ಮುಸ್ಲಿಂ ಎಂಬ ಕಾರಣಕ್ಕೆ ನಡೆಯುತ್ತಿರುವ ದಾಳಿ, ದಬ್ಬಾಳಿಕೆಗಳನ್ನು ವಿರೋಧಿಸಿದ್ದಾರೆ.
ಪ್ರಾಧ್ಯಾಪಕ ಅಲಿ ಖಾನ್ ಅವರ ಬಂಧನವನ್ನು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ವಿರೋಧಿಸಿದೆ. ಆಡಳಿತಾರೂಢ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿವೆ. ಜೊತೆಗೆ ಕರ್ನಲ್ ಸೋಫಿಯಾ ಖುರೇಷಿ ಅವರ ಬಗ್ಗೆ ಹೇಳಿಕೆ ನೀಡಿದ ಮಧ್ಯಪ್ರದೇಶ ಸಚಿವ ವಿಜಯ್ ಶಾ ಅವರನ್ನು ಇನ್ನೂ ಏಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿವೆ.
ಇದನ್ನು ಓದಿದ್ದೀರಾ? ಆಪರೇಷನ್ ಸಿಂಧೂರ ಬಗ್ಗೆ ಪೋಸ್ಟ್; ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ಬಂಧನ
“ನಮ್ಮ ಹೆಣ್ಣುಮಕ್ಕಳ ಸಿಂಧೂರ ಅಳಿಸಿದ್ದ ಭಯೋತ್ಪಾದಕರಿಗೆ ತಕ್ಕ ಪಾಠ ಕಲಿಸಲು ಅವರ ಸಹೋದರಿಯನ್ನೇ ಕಳುಹಿಸಿದ್ದೆವು” ಎಂದು ಮಧ್ಯಪ್ರದೇಶ ಬಿಜೆಪಿ ಸರ್ಕಾರದ ಸಚಿವ ವಿಜಯ್ ಶಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕರ್ನಲ್ ಸೋಫಿಯಾ ಖುರೇಷಿ ಅವರ ಕುರಿತು ವಿಜಯ್ ಶಾ ಈ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಇನ್ನು ಮಿಲಿಟರಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ ಮುಸ್ಲಿಂ ಮಹಿಳಾ ಅಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ಅವರನ್ನು ಹಿಂದುತ್ವವಾದಿಗಳು ಹೊಗಳಿದ್ದನ್ನು ಅಲಿ ಖಾನ್ ಮಹ್ಮದಾಬಾದ್ ತಮ್ಮ ಪೋಸ್ಟ್‌ನಲ್ಲಿ ವ್ಯಂಗ್ಯವಾಗಿ ಉಲ್ಲೇಖಿಸಿದ್ದರು. ಹಾಗೆಯೇ ದೇಶದಲ್ಲಿ ಮುಸ್ಲಿಮರ ವಿರುದ್ಧ ನಡೆಯುವ ಬುಲ್ಡೋಜರ್ ದಾಳಿಗಳ ಬಗ್ಗೆಯೂ ಉಲ್ಲೇಖಿಸಿದ್ದರು.
Ali Khan Mahmudabad has been arrested for a thoughtful Facebook post. This is the state of New India under the Modi government.
— Pawan Khera 🇮🇳 (@Pawankhera) May 18, 2025
A historian and academic is jailed not for inciting violence but for advocating against it. His crime? Daring to speak truth to power, exposing the… pic.twitter.com/wLiVNFujTE
ಆದರೆ ಈ ಪೋಸ್ಟ್ ಮಹಿಳಾ ವಿರೋಧಿ ಎಂದು ಹೇಳಿಕೊಂಡು ಹರಿಯಾಣ ರಾಜ್ಯ ಮಹಿಳಾ ಆಯೋಗ ದೂರು ದಾಖಲಿಸಿಕೊಂಡಿದೆ. ಜೊತೆಗೆ ಭಾನುವಾರ ಅಲಿ ಖಾನ್ ಅವರನ್ನು ಬಂಧಿಸಲಾಗಿದೆ. ಈ ಪೋಸ್ಟ್‌ಗಾಗಿ ನಿಮ್ಮ ಬಂಧನ ಮಾಡಲಾಗಿದೆಯೇ? ಇಲ್ಲಿ ಮಹಿಳಾ ಆಯೋಗ ನಿಮಗೆ ಸಮನ್ಸ್ ನೀಡುವ ವಿಚಾರ ಏನಿದೆ ಎಂದು ಹಲವು ನೆಟ್ಟಿಗರು ಪ್ರಶ್ನಿಸಿದ್ದಾರೆ. ಇವೆಲ್ಲವುದರ ನಡುವೆ ವಿಪಕ್ಷಗಳು ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದೆ. ಸಚಿವರ ವಿರುದ್ಧ ಯಾಕೆ ಕ್ರಮಕೈಗೊಂಡಿಲ್ಲ ಎಂದು ಪ್ರಶ್ನಿಸಿದೆ.
ಪ್ರೊಫೆಸರ್ ವಿರುದ್ಧ ತ್ವರಿತ ಪೊಲೀಸ್ ಕ್ರಮ ಕೈಗೊಳ್ಳಲಾಗಿದೆ. ಆದರೆ ಮಧ್ಯಪ್ರದೇಶ ಸಚಿವರ ವಿರುದ್ಧದ ನಿಧಾನಗತಿಯ ತನಿಖೆ ನಡೆಯುತ್ತಿದೆ. ಇದನ್ನು ಹೋಲಿಸಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸಾಮಾಜಿಕ ಮಾಧ್ಯಮ ಪೋಸ್ಟ್ ಮಾಡಿದ್ದಾರೆ. “ಅಧಿಕಾರದಲ್ಲಿರುವವರು ಇತರರ ಬಗ್ಗೆ ಕೆಟ್ಟದಾಗಿ ಮಾತನಾಡಿದ ನಂತರವೂ ಸ್ವತಂತ್ರರು. ಆದರೆ ಸತ್ಯವನ್ನು ಮಾತನಾಡಿದವರನ್ನು ಬಂಧಿಸಲಾಗಿದೆ” ಎಂದು ಪೋಸ್ಟ್ ಮಾಡಿದ್ದಾರೆ.
ಇನ್ನು ಕಾಂಗ್ರೆಸ್ ನಾಯಕರೂ ಅಲಿ ಖಾನ್ ಬಂಧವನ್ನು ಟೀಕಿಸಿದ್ದಾರೆ. “ಇದು ಮೋದಿ ಸರ್ಕಾರದ ಅಡಿಯಲ್ಲಿ ನವ ಭಾರತದ ಸ್ಥಿತಿ” ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಹೇಳಿದ್ದಾರೆ. “ಒಬ್ಬ ಇತಿಹಾಸಕಾರ ಮತ್ತು ಶಿಕ್ಷಣ ತಜ್ಞರನ್ನು ಜೈಲಿಗೆ ಹಾಕಲಾಗಿದೆ. ಹಿಂಸೆಯನ್ನು ಪ್ರಚೋದಿಸಿದ್ದಕ್ಕಾಗಿ ಅಲ್ಲ. ಅದರ ವಿರುದ್ಧ ಪ್ರತಿಪಾದಿಸಿದ್ದಕ್ಕೆ ಬಂಧಿಸಲಾಗಿದೆ. ಇದು ಅಪರಾಧವೇ” ಎಂದು ಪ್ರಶ್ನಿಸಿದ್ದಾರೆ.
ಇದನ್ನು ಓದಿದ್ದೀರಾ? ಉಗ್ರರಿಗೆ ಪಾಠ ಕಲಿಸಲು ಅವರ ಸಹೋದರಿಯನ್ನೇ ಕಳುಹಿಸಿದ್ದೆವು: ಸಚಿವ ವಿಜಯ್ ಶಾ ವಿವಾದಾತ್ಮಕ ಹೇಳಿಕೆ
ಅಧಿಕಾರಕ್ಕೆ ಧೈರ್ಯದಿಂದ ಸತ್ಯ ಹೇಳುವುದು, ಬಿಜೆಪಿಯ ಸಿನಿಕತನದ ಕೋಮುವಾದವನ್ನು ಬಹಿರಂಗಪಡಿಸುವುದು ಮತ್ತು ರಾಷ್ಟ್ರೀಯತೆಯ ಬೂಟಾಟಿಕೆಯನ್ನು ಬೊಟ್ಟು ಮಾಡುವುದನ್ನು ಅಲಿ ಖಾನ್ ಮಾಡಿದ್ದಾರೆ ಎಂದಿದ್ದಾರೆ.
“ಈ ನಡುವೆ ಸಶಸ್ತ್ರ ಪಡೆಗಳನ್ನು ಬಹಿರಂಗವಾಗಿ ಅವಮಾನಿಸಿದ ನಂತರ ಬಿಜೆಪಿ ಸಚಿವರು ಮತ್ತು ಅವರ ಉಪಮುಖ್ಯಮಂತ್ರಿಗಳ ವಿರುದ್ಧ ಯಾವುದೇ ಕ್ರಮವಾಗುವುದಿಲ್ಲ. ಯಾವುದೇ ಎಫ್‌ಐಆರ್‌ಗಳಿಲ್ಲ. ಯಾವುದೇ ಬಂಧನಗಳಿಲ್ಲ. ಅದು ಮೋದಿಯ ಆಡಳಿತದ ದ್ವಂದ್ವ ನೀತಿ” ಎಂದು ಟೀಕಿಸಿದ್ದಾರೆ.
“ಇದು ಒಬ್ಬ ವ್ಯಕ್ತಿಯ ವಿಚಾರವಲ್ಲ. ಇದು ವಾಕ್ ಸ್ವಾತಂತ್ರ್ಯವನ್ನು ನಿಧಾನವಾಗಿ ಉಸಿರುಗಟ್ಟಿಸುವ ಯತ್ನ. ಬಿಜೆಪಿಯನ್ನು ಬುದ್ಧಿಜೀವಿಗಳನ್ನು ಮೌನಗೊಳಿಸಲು ಬಂಧನದ ಅಸ್ತ್ರವನ್ನು ಬಳಸಲಾಗುತ್ತದೆ. ಪ್ರಶ್ನೆಗಳಿಗೆ ಹೆದರುವ, ತನ್ನದೇ ಆದ ಜನರಿಗೆ ಭಯಪಡುವ ಸರ್ಕಾರ ಇದಾಗಿದೆ. ಬರಹಗಾರರು, ಪ್ರಾಧ್ಯಾಪಕರು ಮತ್ತು ವಿಮರ್ಶಕರನ್ನು ಶತ್ರುಗಳೆಂದು ಬ್ರಾಂಡ್ ಮಾಡಲಾಗುತ್ತದೆ. ನಿಜವಾದ ಶತ್ರು ಪ್ರಜಾಪ್ರಭುತ್ವವೇ ಎಂಬಂತೆ ಬಿಂಬಿಸಲಾಗುತ್ತದೆ. ಚರ್ಚೆ ಮತ್ತು ಪ್ರಜಾಪ್ರಭುತ್ವವನ್ನು ಗೌರವಿಸುವ ಭಾರತದ ಪರವಾಗಿ ನಾವು ನಿಲ್ಲುತ್ತೇವೆ. ಆದೇಶ ನೀಡುವುದರ ಪರವಾಗಿ ಅಲ್ಲ” ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.
ಅಲಿ ಖಾನ್ ಅವರ ಪರಿಚಯವನ್ನೂ ಪವನ್ ಖೇರಾ ಮಾಡಿದ್ದಾರೆ. “ಅಟಲ್ ಬಿಹಾರಿ ವಾಜಪೇಯಿ ವಿದೇಶಾಂಗ ಸಚಿವರಾಗಿದ್ದಾಗ 1976-79ರ ಅವಧಿಯಲ್ಲಿ ಭಾರತದ ವಿದೇಶಾಂಗ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಪದ್ಮಭೂಷಣ್ ದಿವಂಗತ ಜಗತ್ ಎಸ್ ಮೆಹ್ತಾ ಅವರ ಮೊಮ್ಮಗ ಅಲಿ ಖಾನ್ ಮಹಮ್ಮದಾಬಾದ್” ಎಂದು ತಿಳಿಸಿದ್ದಾರೆ. ಹಾಗೆಯೇ “ಅವರ ಒಂದೇ ತಪ್ಪು ಈ ಪೋಸ್ಟ್ ಬರೆದಿದ್ದು ಮತ್ತು ಅವರ ಇನ್ನೊಂದು ತಪ್ಪು ಅವರ ಹೆಸರು” ಎಂದು ಹೇಳಿದ್ದಾರೆ.
