ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್‌ನಲ್ಲಿ ಮತ್ತೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಟೀಕೆ ಮಾಡಿದ್ದಾರೆ. ಅವರು ಭಾಷಣ ಮಾಡಿದ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್ ಮೋದಿ ವಿರುದ್ಧ ಪ್ರತಿದಾಳಿ ನಡೆಸಿದ್ದು, ಮೋದಿ ಸುಳ್ಳು ಹರಡುತ್ತಿದ್ದಾರೆ. ತಮ್ಮ ಆಡಳಿತ ವೈಫಲ್ಯಗಳನ್ನು ಮರೆಮಾಚಲು ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದೆ.
ಸೋಮವಾರ ಲೋಕಸಭೆಯಲ್ಲಿ ಮತ್ತು ಬುಧವಾರ ರಾಜ್ಯಸಭೆಯಲ್ಲಿ ಮಾತನಾಡಿ ಮೋದಿ ಕಾಂಗ್ರೆಸ್ ಪ್ರತ್ಯೇಕವಾದಿ, ಇತಿಹಾಸವನ್ನು ಮರೆಮಾಚಿದೆ ಎಂದು ಆರೋಪಿಸಿದ್ದರು. ಮುಂದಿನ ಲೋಕಸಭಾ ಚುನಾವಣೆಯು ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಯುದ್ಧವೆಂದು ಹೇಳಿದ್ದರು.
ಲೋಕಸಭೆಯಂತೆಯೇ ರಾಜ್ಯಸಭೆಯಲ್ಲೂ ರಾಹುಲ್ ಗಾಂಧಿ ವಿರುದ್ಧ ಮೋದಿ ವಾಗ್ದಾಳಿ ನಡೆಸಿದರು. “ಭಾರತ್ ಜೋಡೋ ನ್ಯಾಯ್ ಯಾತ್ರೆಯ ನೇತೃತ್ವ ವಹಿಸಿರುವ ಗಾಂಧಿ ಇದುವರೆಗೆ ಸಂಸತ್ತಿಗೆ ಹಾಜರಾಗಿಲ್ಲ. ಅವರ ಗೈರು ಹಾಜರಿಯಿಂದ ಲೋಕಸಭೆಯು ಕೆಲವು ಮನರಂಜನೆಯನ್ನು ಕಳೆದುಕೊಂಡಿದೆ. ಆದರೆ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮೇಲ್ಮನೆಯಲ್ಲಿ ಅದನ್ನು ಸರಿದೂಗುತ್ತಿದ್ದಾರೆ” ಎಂದಿದ್ದರು.
ಮೋದಿ ಮಾತುಗಳಿಗೆ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಚುನಾವಣಾ ಭಾಷಣಗಳಲ್ಲಾಗಲೀ, ಸಂಸತ್ತಿನಲ್ಲಾಗಲಿ ಪ್ರಧಾನಿ ಭಾಷಣಗಳು ಕೇವಲ ಸುಳ್ಳಿನ ರಾಶಿಗಳಿಂದ ಕೂಡಿರುತ್ತವೆ. ಅವರು ತಮ್ಮ ಸುಳ್ಳುಗಳಲ್ಲಿ ಮುಳುಗಿದ್ದಾರೆ. ಸಾರ್ವಜನಿಕರಿಗೆ ಸಂಬಂಧಿಸಿದ ಪ್ರತಿಯೊಂದು ಪ್ರಶ್ನೆಯು ಅವರಲ್ಲಿ ಕೋಪ ತರಿಸುತ್ತದೆ. ಕೋಪವು ವಿನಾಶಕ್ಕೆ ಕಾರಣವಾಗುತ್ತದೆಯೇ ವಿನಃ, ಅಭಿವೃದ್ಧಿಗಲ್ಲ,” ಎಂದು ಟ್ವೀಟ್ ಮಾಡಿದ್ದಾರೆ.
“ಮೋದಿಜಿ, ಉಭಯ ಸದನಗಳಲ್ಲಿ ನಿಮ್ಮ ಭಾಷಣದಲ್ಲಿ ನೀವು ಕಾಂಗ್ರೆಸ್ ಬಗ್ಗೆ ಆರೋಪ ಮಾಡಿದ್ದೀರಿ. 10 ವರ್ಷ ಅಧಿಕಾರದಲ್ಲಿದ್ದರೂ ನಿಮ್ಮ, ನಿಮ್ಮ ಸರ್ಕಾರದ ಬಗ್ಗೆ ಮಾತನಾಡುವ ಬದಲು ಕಾಂಗ್ರೆಸ್ ವಿರುದ್ಧ ಮಾತ್ರ ಟೀಕೆ ಮಾಡುತ್ತಿದ್ದಾರೆ. ಇಂದಿಗೂ ಮೋದಿ ಅವರು ಬೆಲೆ ಏರಿಕೆ, ನಿರುದ್ಯೋಗ, ಆರ್ಥಿಕ ಅಸಮಾನತೆಯ ಬಗ್ಗೆ ಮಾತನಾಡಿಲ್ಲ” ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಭಾರತಕ್ಕೆ ಇಪ್ಪತ್ತೊಂದನೆಯ ಶತಮಾನದ ಒಪ್ಪುಕೂಟ ವ್ಯವಸ್ಥೆ
“ವಾಸ್ತವವಾಗಿ, ಸರ್ಕಾರದ ಬಳಿ ಯಾವುದೇ ಡೇಟಾ ಇಲ್ಲ. ಎನ್‌ಡಿಎ ಎಂದರೆ ‘ಡೇಟಾ ಲಭ್ಯವಿಲ್ಲ’ (ನೋ ಡೇಟಾ ಅವೈಲಬಲ್) ಸರ್ಕಾರ ಎಂದರ್ಥ. 2021ರ ಜನಗಣತಿ ನಡೆಸಲಾಗಿಲ್ಲ, ಉದ್ಯೋಗದ ಮಾಹಿತಿ ಇಲ್ಲ, ಆರೋಗ್ಯ ಸಮೀಕ್ಷೆ ನಡೆದಿಲ್ಲ. ಸರ್ಕಾರ ಎಲ್ಲ ಅಂಕಿ-ಅಂಶಗಳನ್ನು ಮುಚ್ಚಿಟ್ಟು ಸುಳ್ಳುಗಳನ್ನು ಹಬ್ಬಿಸುತ್ತದೆ. ‘ಮೋದಿ ಕಿ ಗ್ಯಾರಂಟಿ’ ಕೇವಲ ಸುಳ್ಳನ್ನು ಹರಡಲು ಮಾತ್ರ” ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಬ್ರಿಟಿಷರಿಂದ ಸ್ಫೂರ್ತಿ ಪಡೆದಿದೆ ಎಂಬ ಮೋದಿ ಆರೋಪವನ್ನು ತಳ್ಳಿಹಾಕಿದ ಖರ್ಗೆ, “ಸಂವಿಧಾನದಲ್ಲಿ ನಂಬಿಕೆಯಿಲ್ಲದವರು, ದಂಡಿ ಮೆರವಣಿಗೆ ಮತ್ತು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸದವರು ಇಂದು ಕಾಂಗ್ರೆಸ್‌ಗೆ ದೇಶಭಕ್ತಿ ಬಗ್ಗೆ ಬೋಧಿಸುವ ಧೈರ್ಯ ಮಾಡಿದ್ದಾರೆ” ಎಂದಿದ್ದಾರೆ.
ಯುಪಿಎ ಸರ್ಕಾರದ ಬಗ್ಗೆ ಮೋದಿಯವರು ಲೆಕ್ಕವಿಲ್ಲದಷ್ಟು ಸುಳ್ಳು ಹೇಳಿದ್ದಾರೆ ಎಂದು ಹೇಳಿದ ಖರ್ಗೆ, “ಯುಪಿಎ ಅವಧಿಯಲ್ಲಿ ನಿರುದ್ಯೋಗ ದರವು 2.2% ಆಗಿತ್ತು, ಬಿಜೆಪಿ ಅಧಿಕಾರಾವಧಿಯಲ್ಲಿ ಇದು 45 ವರ್ಷಗಳ ಗರಿಷ್ಠ ಮಟ್ಟದಲ್ಲಿ ಏಕೆ? ಯುಪಿಎ 10 ವರ್ಷಗಳ ಅವಧಿಯಲ್ಲಿ ಸರಾಸರಿ ಜಿಡಿಪಿ ಬೆಳವಣಿಗೆ ದರ ಶೇ.8.13ರಷ್ಟಿತ್ತು, ಮೋದಿ ಅಧಿಕಾರಾವಧಿಯಲ್ಲಿ ಶೇ.5.6ರಷ್ಟಿದೆ ಏಕೆ? ವಿಶ್ವ ಬ್ಯಾಂಕ್ ಪ್ರಕಾರ, 2011ರಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿತ್ತು. ನಾವು 10 ವರ್ಷಗಳಲ್ಲಿ 14 ಕೋಟಿ ಜನರನ್ನು ಬಡತನದಿಂದ ಹೊರತಂದಿದ್ದೇವೆ. ಆದರೆ, ಮೋದಿ ಅವರು ಅಲ್ಲೊಂದು ಇಲ್ಲೊಂದು ಕಡೆ ಭಾಷಣ ಮಾಡುವ ಮೂಲಕ ಸುಳ್ಳು ಹಬ್ಬಿಸುತ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ.
ಆಧಾರ್‌ಗೆ ಅಡಿಪಾಯ ಹಾಕಿದ್ದೂ ಯುಪಿಎ ಸರ್ಕಾರವೇ ಎಂದಿರುವ ಖರ್ಗೆ “ನಾವು 2014ರ ವೇಳೆಗೆ 65 ಕೋಟಿ ಆಧಾರ್ ಕಾರ್ಡ್‌ಗಳನ್ನು ನೋಂದಾಯಿಸಿದ್ದೆವು. ಡಿಬಿಟಿ-ಪಿಎಎಚ್‌ಎಎಲ್ ಅಡಿಯಲ್ಲಿ ಸಬ್ಸಿಡಿಗಳ ನೇರ ವರ್ಗಾವಣೆ ಪ್ರಾರಂಭಿಸಿದ್ದೆವು. ಸ್ವಾಭಿಮಾನ್ ಯೋಜನೆಯಡಿ ಬಡವರ 33 ಕೋಟಿ ಬ್ಯಾಂಕ್ ಖಾತೆಗಳನ್ನೂ ತೆರೆದಿದ್ದೆವು. ಮೋದಿ ಅವರ ‘ಮಾರಾಟ ಮತ್ತು ಲೂಟಿ’ ನೀತಿಯಿಂದ 2022ರ ಏಪ್ರಿಲ್ ವರೆಗೆ 147 ಪಿಎಸ್‌ಯುಗಳ ಪೂರ್ಣ/ಅರ್ಧ/ ಅಥವಾ ಭಾಗಶಃ ಖಾಸಗೀಕರಣವಾಗಿದೆ ಎಂಬುದನ್ನು ನಾವು ನೆನಪಿಸೋಣ. ಸರ್ಕಾರದಲ್ಲಿ 30 ಲಕ್ಷ ಹುದ್ದೆಗಳು ಖಾಲಿ ಇವೆ. ಅದಲ್ಲರೂ, ಎಸ್‌ಸಿ, ಎಸ್‌ಸಿ, ಒಬಿಸಿ ಸಮುದಾಯಗಳಿಗೆ ಧಕ್ಕಬೇಕಿದ್ದ ಉದ್ಯೋಗಗಳೇ ಹೆಚ್ಚಾಗಿ ಖಾಲಿ ಇವೆ. ರೈಲ್ವೆ, ಉಕ್ಕು, ನಾಗರಿಕ ವಿಮಾನಯಾನ, ರಕ್ಷಣೆ ಮತ್ತು ಪೆಟ್ರೋಲಿಯಂ ಎಂಬ ಐದು ಸಚಿವಾಲಯಗಳಲ್ಲಿಯೇ ಸುಮಾರು 3 ಲಕ್ಷ ಹುದ್ದೆಗಳು ಖಾಲಿ ಇವೆ,” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ?: ರಾಜ್ಯದ ಬಿಜೆಪಿ ಸಂಸದರು ಕೋಲೆ ಬಸವನ ರೀತಿ ಮೋದಿ ಎದುರು ತಲೆ ಅಲ್ಲಾಡಿಸ್ತಾರೆ: ಸಿದ್ದರಾಮಯ್ಯ
“ಮೋದಿ ಅವರು ಏಕಲವ್ಯ ಶಾಲೆಗಳ ಬಗ್ಗೆ ಮಾತನಾಡಿದ್ದಾರೆ. ಆದರೆ, ಅವುಗಳಲ್ಲಿ 70% ಶಿಕ್ಷಕರು ಗುತ್ತಿಗೆ ಆಧಾರದ ಮೇಲೆ ನೇಮಕವಾಗಿದ್ದಾರೆ ಎಂಬುದನ್ನು ಹೇಳಲಿಲ್ಲ. ಕಳೆದ 10 ವರ್ಷಗಳಲ್ಲಿ ದೇಶದ ರಫ್ತು ಮತ್ತು ಆಮದುಗಳ ನಡುವಿನ ಅಂತರ ಮೂರು ಪಟ್ಟು ಹೆಚ್ಚಾಗಿದೆ. ಈ ಸತ್ಯ ಗೊತ್ತಿದ್ದರೂ ಸರ್ಕಾರ ಅದನ್ನು ಸಮಸ್ಯೆಯಾಗಿ ಸ್ವೀಕರಿಸದೆ, ಸರಿಪಡಿಸುವ ಯಾವುದೇ ಕ್ರಮಗಳನ್ನು ಕೈಗೊಳ್ಳದಿರುವುದು ದುರದೃಷ್ಟಕರ,’’ ಎಂದರು.
ಮೋದಿ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ ಹಿರಿಯ ನಾಯಕ ಕೆ.ಸಿ ವೇಣುಗೋಪಾಲ್, “ಪ್ರಧಾನಿಗೆ ಖರ್ಗೆ ಅವರ ಮೇಲೆ ಆಕ್ರಮಣ ಮಾಡುವುದು ಫ್ಯಾಷನ್ ಆಗಿದೆ. ಅವರು ಮತ್ತೆ ಗಡಿ ದಾಟಿದ್ದಾರೆ” ಎಂದಿದ್ದಾರೆ.
“ಸಂಸತ್ತಿನಲ್ಲಿ ಅವರ ಎರಡೂ ಭಾಷಣಗಳು ಭಾರತದ ಜನರ ಮೇಲಿನ ಕ್ರೂರ ಹಾಸ್ಯವಾಗಿದೆ. 10 ವರ್ಷಗಳ ಅಧಿಕಾರದ ನಂತರವೂ, ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ಅಗ್ಗದ, ಬಾಲಾಪರಾಧಿ ಮತ್ತು ಸುಳ್ಳುಗಳೊಂದಿಗೆ ದಾಳಿ ಮಾಡುತ್ತಿದ್ದಾರೆ. ಇದು ಅವರ ಆಲೋಚನೆಗಳು ಮತ್ತು ನೈತಿಕತೆಯ ದಿವಾಳಿತನವನ್ನು ತೋರಿಸುತ್ತದೆ,” ಎಂದು ಟ್ವೀಟ್ ಮಾಡಿದ್ದಾರೆ.
“ನಿರುದ್ಯೋಗ ಮತ್ತು ಬೆಲೆ ಏರಿಕೆಯ ಎರಡು ಹೊಡೆತಗಳಿಂದ ತತ್ತರಿಸುತ್ತಿರುವ ಮತದಾರರು ಪ್ರಧಾನಿಯಿಂದ ಪರಿಹಾರಕ್ಕಾಗಿ ಎದುರು ನೋಡುತ್ತಿದ್ದರು. ಆದರೆ, ಮೋದಿ ಬಳಿ ಪರಿಹಾರ ನೀಡಲು ಏನೂ ಇರಲಿಲ್ಲ. ಈ ಭಾಷಣಗಳ ನಂತರ, ಮೋದಿ ಮತ್ತು ಬಿಜೆಪಿಯ ಮತ್ತೊಂದು ಅವಧಿಯು ಬಡ ಮತ್ತು ಮಧ್ಯಮ ವರ್ಗದವರಿಗೆ ಇನ್ನೂ 5 ವರ್ಷಗಳ ಹತಾಶೆಯನ್ನು ಸೂಚಿಸುತ್ತದೆ ಎಂಬುದು ಹೆಚ್ಚು ಸ್ಪಷ್ಟವಾಗುತ್ತಿದೆ. ಪ್ರಧಾನಿಯವರ ಭಾಷಣಗಳಲ್ಲಿನ ದುರಹಂಕಾರ ಮತ್ತು ದ್ವೇಷವು ವಾಸ್ತವದಲ್ಲಿ ಸೋಲಿನ ಭಯವನ್ನು ಸೂಚಿಸುತ್ತದೆ. ಲೋಕಸಭೆ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ ಎಂಬುದನ್ನು ತೋರಿಸುತ್ತದೆ,” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಪರಶುರಾಮ ಥೀಮ್ ಪಾರ್ಕ್ ಹಗರಣದ ತನಿಖೆ ನಡೆದರೆ ಮಾತ್ರ ಪಕ್ಷದ ಚಟುವಟಿಕೆಗಳಲ್ಲಿ ಭಾಗಿ: ಕಾಂಗ್ರೆಸ್ ಕಾರ್ಯಕರ್ತರ ಎಚ್ಚರಿಕೆ
ಲೋಕಸಭೆಯಲ್ಲಿ ಮಧ್ಯಂತರ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಹಿರಿಯ ನಾಯಕ ಶಶಿ ತರೂರ್, ಸರ್ಕಾರದ ಆರ್ಥಿಕ ನಿರ್ವಹಣೆಯ ಬಗ್ಗೆ ಹರಿಹಾಯ್ದರು. “ಸಬ್ಕಾ ಸಾಥ್, ಸಬ್ಕಾ ವಿಕಾಸ್, ಎಲ್ಲ ಭಾರತೀಯರನ್ನು ಒಳಗೊಳ್ಳುವ ಅಭಿವೃದ್ಧಿ ಬರಲಿದೆ ಎಂಬ ಭರವಸೆಯಿಂದ ಜನರು ಬಿಜೆಪಿ ಅಧಿಕಾರ ನೀಡಿದ್ದರು. ಈಗ, ಹತ್ತು ವರ್ಷಗಳ ನಂತರ, ಈ ದೇಶದ ಜನರು ದುಃಖಿತರಾಗಿದ್ದಾರೆ. ಜನರಿಗೆ ಸರ್ಕಾರ ದ್ರೋಹ ಮಾಡಿರುವುದನ್ನು ನಾವು ನೋಡುತ್ತಿದ್ದೇವೆ. ಕಳೆದ 10 ವರ್ಷದಲ್ಲಿ ಅವರ ಆರ್ಥಿಕ ದುರುಪಯೋಗವು ಭಾರತದ ಜನರನ್ನು ವ್ಯಾಪಕವಾದ ಸಂಕಷ್ಟ, ಕಷ್ಟಗಳು, ಕಡಿಮೆ ಆದಾಯ ಮತ್ತು ಹೆಚ್ಚಿನ ನಿರುದ್ಯೋಗದತ್ತ ದೂಡಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಸರ್ಕಾರವು ತನ್ನ ಬೆನ್ನು ತಟ್ಟಿಕೊಳ್ಳುವ ಎಲ್ಲ ವಿಷಯಗಳಲ್ಲಿಯೂ ಗಂಭೀರವಾಗಿ ವಿಫಲವಾಗಿದೆ. ಆರ್ಥಿಕತೆಯನ್ನು ಕಾಡುತ್ತಿರುವ, ಜನರು ಎದುರಿಸುತ್ತಿರುವ ಬಿಕ್ಕಟ್ಟಿಗೆ ಪರಿಹಾರವಿಲ್ಲದ ಮಧ್ಯಂತರ ಬಜೆಟ್‌ಅನ್ನು ಮಂಡಿಸಿದೆ. ಈ ಬಜೆಟ್ ಗಾಳಿಯಲ್ಲಿ ಗುಂಡು ಹಾರಿಸುವಂತಿದೆ. ಇದನ್ನು ಸಂಸತ್ತು ಅರಿತುಕೊಳ್ಳಬೇಕು” ಎಂದು ಹೇಳಿದ್ದಾರೆ.