ಭಾರತಕ್ಕೆ ಇಪ್ಪತ್ತೊಂದನೆಯ ಶತಮಾನದ ಒಪ್ಪುಕೂಟ ವ್ಯವಸ್ಥೆ

Date:

ಪ್ರತಿ ರಾಜ್ಯಗಳು ತಮ್ಮ ರಾಜ್ಯ ಕೇಂದ್ರಿತವಾದ ಆದರೆ ಒಪ್ಪುಕೂಟದ ತತ್ವಗಳನ್ನು ಮೈಗೂಡಿಸಿಕೊಂಡ ಪ್ರಾದೇಶಿಕ ಪಕ್ಷಗಳನ್ನು ಹುಟ್ಟುಹಾಕಿಕೊಳ್ಳಬೇಕು. ತನ್ನ ರಾಜ್ಯದ ಒಳಗೆ ಅಭಿವೃದ್ದಿಗೆ ಶ್ರಮಿಸುತ್ತಾ ಒಪ್ಪುಕೂಟದ ತತ್ವಗಳಿಗೆ ಮತ್ತು ಆಶಯಗಳಿಗೆ ಬದ್ದವಾಗುತ್ತ ಕೆಲಸ ಮಾಡಬೇಕು. ಪ್ರಾದೇಶಿಕ ಪಕ್ಷಗಳು ಬಲಗೊಳ್ಳದೆ ರಾಜಕೀಯವಾಗಿ ಒಪ್ಪುಕೂಟವು ಬಲಗೊಳ್ಳುವುದಿಲ್ಲ.

ಪೀಠಿಕೆ:
ಆಧುನಿಕ ಪ್ರಜಾಪ್ರಭುತ್ವದ ಚಿಂತನೆಗಳು ಹದಿನೆಂಟನೇ ಶತಮಾನದಲ್ಲಿ ಮೊಳೆತು ಹತ್ತೊಂಬತ್ತನೆಯ ಶತಮಾನದಲ್ಲಿ ರಾಷ್ಟ್ರೀಯತೆಯ ಮುಖಾಂತರ ಆಡಳಿತದ ತೆಕ್ಕೆಗೆ ಸೇರಿತು. ಜಗತ್ತಿನಾದ್ಯಂತ ಆಗ ಇದ್ದ ಅರಸೊತ್ತಿಗೆಗಳು ಪ್ರಜಾಪ್ರಭುತ್ವ ರಾಷ್ಟ್ರಗಳಾಗಿ ಮಾರ್ಪಾಟುಗೊಂಡವು. ಇದೇ ಸಂದರ್ಭದಲ್ಲಿ ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯಿದ್ದು, ಸ್ವಾತಂತ್ರ್ಯ ಚಳುವಳಿ ಮೊದಲುಗೊಂಡಿತು. ಸ್ವಾತಂತ್ರ್ಯಕ್ಕೂ ಮುಂಚೆಯೇ ಭಾರತದಲ್ಲಿ ಇದ್ದ ಹಲವು ರಾಜ್ಯಗಳು/ಸಂಸ್ಥಾನಗಳು ಪ್ರಜಾಪ್ರಭುತ್ವವನ್ನು ಅಪ್ಪಿಕೊಳ್ಳಲು ತೊಡಗಿದ್ದವು. ಉದಾಹರಣೆಗೆ, ಮೈಸೂರು ರಾಜ್ಯದಲ್ಲಿ ಜನಪ್ರತಿನಿಧಿಗಳ ಸಭೆಯನ್ನು ಹುಟ್ಟುಹಾಕಲಾಯಿತು.

ಹತ್ತೊಂಬತ್ತನೆಯ ಶತಮಾನದ ಕೊನೆಗೆ ಮತ್ತು ಇಪ್ಪತ್ತನೆಯ ಶತಮಾನದ ಪ್ರಾರಂಭದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ದೇಶದ ರಾಜಕಾರಣ ಮತ್ತು ಸ್ವಾತಂತ್ರ್ಯ ಹೋರಾಟವನ್ನು ಒಳಗೊಳ್ಳಲು ತೊಡಗಿತು. ಇದರ ಪರಿಣಾಮವಾಗಿ ಮೋತಿಲಾಲ್ ನೆಹರು ಅವರ ಮುಂದಾಳತನದಲ್ಲಿ ಕೆನಡ ಮಾದರಿಯ ಡೊಮಿನಿಯನ್ ಸ್ಟೇಟ್ಸ್ ಗಳ ರಚನೆಗೆ ಪ್ರಸ್ತಾವನೆ ಸಲ್ಲಿಸಲಾಯಿತು. ”1935 ಇಂಡಿಯಾ ಕಾಯಿದೆ’ಯಲ್ಲಿ ಭಾರತವನ್ನು ‘ಫೆಡೆರೇಶನ್ ಆಫ್ ಇಂಡಿಯ’ ಎಂದು ಘೋಷಿಸಲಾಗಿತ್ತು. ಇದಕ್ಕೆ ಇಂಗ್ಲೆಂಡಿನ ಸಂಸತ್ತು ಒಪ್ಪಿಗೆಯ ಮುದ್ರೆ ಹಾಕಿತ್ತು. ಆದರೆ ಮುಂದೆ ಸ್ವಾತಂತ್ರ್ಯಾನಂತರ ಸಂವಿಧಾನದ ಕರಡು ಸಿದ್ದಗೊಳಿಸುವಾಗ ಆ ಕಾಯ್ದೆಯಲ್ಲಿ ಸ್ಪಷ್ಟವಾಗಿ ಗುರುತಿಸಲಾಗಿದ್ದ ‘ಫೆಡರೇಶನ್ ಆಫ್ ಇಂಡಿಯ’ ಎಂಬ ಅಂಶವನ್ನು ಕೈಬಿಡಲಾಯಿತು. ಆದರೂ ಏಕೀಕೃತ ವ್ಯವಸ್ಥೆಯ ಗುಣಲಕ್ಷಣಗಳನ್ನು ಮತ್ತು ಫೆಡರಲ್ ಲಕ್ಷಣಗಳನ್ನು ಉಳಿಸಿಕೊಳ್ಳಲಾಯಿತು. ಏಕೆಂದರೆ ಶತಮಾನಗಳಿಂದ ಸಾಂಸ್ಕೃತಿಕ, ಭೌಗೋಳಿಕ, ಪ್ರಾದೇಶಿಕ ಮತ್ತು ಆಚರಣೆಯ ವೈವಿಧ್ಯತೆಯನ್ನು ಮೈವೆತ್ತಂತಹ ದೇಶವು ಭಾರತವಾಗಿತ್ತು. ಮೇಲೆ ಪ್ರಸ್ತಾಪಿಸಿದ ಫೆಡರಲ್ ಎಂಬ ಪರಿಕಲ್ಪನೆಯನ್ನು ನಾವು ಕನ್ನಡದಲ್ಲಿ ‘ಒಪ್ಪುಕೂಟ’ ಎಂದು ಹೇಳಬಹುದು.

ಒಪ್ಪುಕೂಟ ಎಂದರೇನು?
ಒಪ್ಪುಕೂಟ ಎಂದರೆ ತಮ್ಮದೇ ಆದ ನುಡಿ, ಗುರುತು, ಸಂಸ್ಕೃತಿ ಮತ್ತು ಇತಿಹಾಸವನ್ನು ಹೊಂದಿರುವಂತಹ ಮತ್ತು ಭೌಗೋಳಿಕವಾಗಿ ಅಕ್ಕಪಕ್ಕದಲ್ಲಿರುವ ನಾಡುಗಳು, ಆರ್ಥಿಕ ಮತ್ತು ರಾಜಕೀಯ ಕಾರಣಗಳಿಗೋಸ್ಕರ ಒಂದುಗೂಡುವ ವ್ಯವಸ್ಥೆ. ಇಂತಹ ಒಪ್ಪುಕೂಟದಲ್ಲಿ ರಾಜ್ಯಗಳ ಇಲ್ಲವೆ ನಾಡುಗಳ ಸ್ವಾಯತ್ತತೆಗೆ ಯಾವುದೇ ತೆರನಾದ ಕುಂದು ಉಂಟಾಗುವುದಿಲ್ಲ. ಅಲ್ಲದೆ ರಾಜ್ಯಗಳ ಇಲ್ಲವೆ ನಾಡುಗಳ ಆಳ್ವಿಕೆಗಳು ಒಪ್ಪುಕೂಟದ ಕೇಂದ್ರ ಬಿಂದುಗಳಾಗಿರುತ್ತವೆಯೇ ಹೊರತು ಅವು ಹುಟ್ಟು ಹಾಕುವ ಒಪ್ಪುಕೂಟದ ಆಳ್ವಿಕೆಯಲ್ಲ (ಭಾರತದ ಸಂದರ್ಭದಲ್ಲಿ ಒಪ್ಪುಕೂಟದ ಆಳ್ವಿಕೆ ಎಂದರೆ ಕೇಂದ್ರ ಸರ್ಕಾರ ಎಂದು ತಿಳಿಯುವುದು).

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಒಪ್ಪುಕೂಟದ ಗುಣಲಕ್ಷಣಗಳು
ಒಪ್ಪುಕೂಟಗಳನ್ನು ನಡವಳಿಕೆಯ ನೆಲೆಯಲ್ಲಿ ನೋಡಿದಾಗ ಎರಡು ಬಗೆಯ ಒಪ್ಪುಕೂಟಗಳನ್ನು ಕಾಣಬಹುದು.
೧) ಸಡಿಲ ಒಪ್ಪುಕೂಟ
೨) ಸದೃಢ ಒಪ್ಪುಕೂಟ
ಸಡಿಲ ಒಪ್ಪುಕೂಟದಲ್ಲಿ ನಾಡುಗಳು ಕಾಲಕಾಲಕ್ಕೆ ತಮ್ಮ ಜನರ ಆಶಯಗಳಿಗೆ ತಕ್ಕಂತೆ ಕೂಟವನ್ನು ಸೇರುವ ಅಥವಾ ಬಿಡುವ ತೀರ್ಮಾನಗಳನ್ನು ಕೈಗೊಳ್ಳಬಹುದು. ಉದಾಹರಣೆಗೆ: ಯುನೈಟೆಡ್ ಕಿಂಗ್ಡಮ್ ಎಂಬ ಒಪ್ಪುಕೂಟದಲ್ಲಿ ಇಂಗ್ಲೆಂಡ್, ಸ್ಕಾಟ್ಲೆಂಡ್, ನಾರ್ಥರ್ನ್ ಐರ್ಲೆಂಡ್ ಮತ್ತು ವೇಲ್ಸ್ ಎಂಬ ನಾಡುಗಳು ಸೇರಿವೆ. ಸದೃಢ ಒಪ್ಪುಕೂಟದಲ್ಲಿ ನಾಡುಗಳು ಕೂಟದಿಂದ ಹೊರಹೋಗಲು ಸಡಿಲ ಒಕ್ಕೂಟದಂತೆ ಸಾಧ್ಯವಿಲ್ಲ. ಉದಾಹರಣೆಗೆ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ 50 ರಾಜ್ಯಗಳಿವೆ.

ಒಪ್ಪುಕೂಟದ ಈ ವಿವರಣೆಯ ಹಿನ್ನೆಲೆಯಲ್ಲಿ ಭಾರತವು ಒಂದು ಸದೃಢ ಒಪ್ಪುಕೂಟವೇ ಎಂಬುದನ್ನು ಪರೀಕ್ಷಿಸೋಣ.

ಸಂವಿಧಾನದ ಮೂಲಭೂತ ಆಶಯದಲ್ಲಿ ಒಪ್ಪುಕೂಟದ ಲಕ್ಷಣವನ್ನು ಎತ್ತಿಹಿಡಿದಿದ್ದರೂ (ಸಂವಿಧಾನದ ಮೊದಲ ವಾಕ್ಯದಲ್ಲೇ ಹೀಗೆ ಹೇಳಲಾಗಿದೆ – India, that is Bharat, shall be a Union of States) ಸಂವಿಧಾನದ ಕರಡು ಸಿದ್ಧಗೊಂಡಾಗ ಅದು ಏಕೀಕೃತ ವ್ಯವಸ್ಥೆಯ ಕಡೆಗೆ ವಾಲಿಕೊಂಡಿತು. ದೇಶ ವಿಭಜನೆಯ ಸಂದರ್ಭದಲ್ಲಿ ದೇಶವನ್ನು ಒಗ್ಗೂಡಿಸುವ ಭಾವನಾತ್ಮಕ ಕಾರಣದಿಂದಾಗಿ ಸಂವಿಧಾನವು ಒಪ್ಪುಕೂಟದ ಪ್ರಮುಖ ಗುಣಲಕ್ಷಣಗಳನ್ನು ಪರಿಗಣಿಸಲೇ ಇಲ್ಲ. ಒಪ್ಪುಕೂಟವನ್ನು ಸರಿಯಾದ ರೀತಿಯಲ್ಲಿ ಅರಿತುಕೊಳ್ಳಲು ಭಾರತದ ರಾಜಕಾರಣವು ಸಂಪೂರ್ಣವಾಗಿ ಸೋತಿತು. ಇದರ ಕುರುಹಾಗಿ ಭಾರತದ ಮೊದಲ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರ ಪ್ರಸಾದ್ ಅವರ ಈ ಹೇಳಿಕೆಯನ್ನು ಗಮನಿಸಬಹುದು- “ವೈಯಕ್ತಿಕವಾಗಿ, ಸಂವಿಧಾನವು ನಮ್ಮ ಉದ್ದೇಶವನ್ನು ಈಡೇರಿಸುವವರೆಗೂ ಅದು ಒಪ್ಪುಕೂಟದ ಸಂವಿಧಾನವೊ, ಏಕೀಕೃತ ಸಂವಿಧಾನವೊ ಎಂಬುದು ನನಗೆ ಮುಖ್ಯವಲ್ಲ”. ಯಾವ ವ್ಯವಸ್ಥೆಯನ್ನು ಕಟ್ಟಲು ಹೊರಟಿದ್ದರೊ ಆ ವ್ಯವಸ್ಥೆಯ ಕಾರ್ಯಕ್ಷಮತೆಯ ಬಗ್ಗೆ ದಿವ್ಯ ನಿರ್ಲಕ್ಷ್ಯವನ್ನು ಈ ಬೀಸು ಹೇಳಿಕೆ ತೋರಿಸುತ್ತದೆ. ಆದ್ದರಿಂದ, ಸ್ವಾತ್ಯಂತ್ರೋತ್ತರ ಕಾಲಘಟ್ಟದಲ್ಲಿ ನಡೆದ ಹೆಚ್ಚಿನ ಸಂವಿಧಾನದ ತಿದ್ದುಪಡಿಗಳು ಒಪ್ಪುಕೂಟದ ಆಶಯವನ್ನು ದುರ್ಬಲಗೊಳಿಸಿ ಏಕೀಕೃತ ವ್ಯವಸ್ಥೆಯತ್ತ ವಾಲುವುದನ್ನು ನಾವು ಕಾಣಬಹುದು.

ಇದನ್ನು ಓದಿದ್ದೀರಾ?: ಅಂಡರ್‌ 19 ವಿಶ್ವಕಪ್: ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಪೈನಲ್ ಪ್ರವೇಶಿಸಿದ ಭಾರತ

ಭಾರತವು ಏಕೀಕೃತ ವ್ಯವಸ್ಥೆಯತ್ತ ಹೊರಳಿಕೊಳ್ಳುವುದಕ್ಕೆ ಕಾರಣಗಳೇನೆಂದು ಹುಡುಕುತ್ತಾ ಹೊರಟಾಗ ನಾವು ಕಾನ್ಸ್‌ಟಿಟುಯೆಂಟ್ ಅಸೆಂಬ್ಲಿಯಲ್ಲಿ ನಡೆದ ಚರ್ಚೆಗಳಿಗೆ ಬಂದು ನಿಲ್ಲುತ್ತೇವೆ. ಇಲ್ಲಿ ನಡೆದ ಚರ್ಚೆಗಳು ಸಂವಿಧಾನದ ಕರಡಿನ ಮೇಲೆ ಹೇಗೆ ಪ್ರಭಾವ ಬೀರಿತು ಎಂಬುದನ್ನು ಅರಿತುಕೊಳ್ಳೋಣ. ಕಾನ್ಸ್‌ಟಿಟುಯೆಂಟ್ ಅಸೆಂಬ್ಲಿಯಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವಣ ನಂಟು ಹೇಗಿರಬೇಕೆಂಬುದರ ಬಗ್ಗೆ ಹಲವು ಚರ್ಚೆಗಳು ನಡೆದಿವೆ. ಅವುಗಳಲ್ಲಿ ಹೆಚ್ಚಿನವು ಒಪ್ಪುಕೂಟದ ಆಶಯಗಳಿಗೆ ವಿರುದ್ಧವಾಗಿದ್ದವು ಯಾಕೆಂದರೆ ಭಾರತದಲ್ಲಿ ವಿಭಜನೆಯ ನೋವು ಹಸಿಯಾಗಿತ್ತು ಮತ್ತು ಕೆಲವು ಸಂಸ್ಥಾನಗಳು ಬೇರೆಯಾಗಿರಲು ಹಾತೊರೆಯುತ್ತಿದ್ದವು. ಇಂತಹ ಸಂದರ್ಭದಲ್ಲಿಯೇ ಕಾನ್ಸ್‌ಟಿಟುಯೆಂಟ್ ಅಸೆಂಬ್ಲಿಯು ನೇರ್ಪಟ್ಟು, ಚರ್ಚೆಗಳು ನಡೆದುದರಿಂದ ಭಾರತವನ್ನು ಸಮಗ್ರ ರಾಷ್ಟ್ರವಾಗಿ ಒಗ್ಗೂಡಿಸುವೆಡೆಗೆ ಹೆಚ್ಚಿನವರ ಮಾತು ಮತ್ತು ನಿಲುವುಗಳಿದ್ದವು. ಉದಾಹರಣೆಗೆ, ರಾಜ್ಯಗಳ ಮರುವಿಂಗಡಣೆ ಮಾಡುವ ಅಧಿಕಾರದ ಹಂಚಿಕೆಯ ಬಗ್ಗೆ ಮಾತು ಬಂದಾಗ ಕೆಲವರು ಆಯಾ ರಾಜ್ಯಗಳ ಒಪ್ಪಿಗೆ ಇಲ್ಲದೆಯೇ ಕೇಂದ್ರವು ತಾನಾಗಿಯೇ ಮರುವಿಂಗಡಣೆಗೆ ಕೈಹಾಕಬಹುದೆಂದು ವಾದಿಸಿದರೆ, ಕೆಲವರು ಇದಕ್ಕೆ ವಿರೋಧ ತೋರಿದರು. ಕೊನೆಗೂ, ಆರ್ಟಿಕಲ್ 3ರ ಅಡಿಯಲ್ಲಿ ಆಯಾ ರಾಜ್ಯಗಳ ಒಪ್ಪಿಗೆಯಿಲ್ಲದೆ ರಾಜ್ಯಗಳ ಮರುವಿಂಗಡಣೆ ಮಾಡುವ ಪರಮಾಧಿಕಾರ ಸಂಸತ್ತಿಗೆ ಕೊಡಲಾಯಿತು.

ಸಂವಿಧಾನದ ರಚನೆಯ ಹೊತ್ತಿನಲ್ಲೂ ಕೂಡ ಒಪ್ಪುಕೂಟದ ಬಗ್ಗೆ ನಡೆದ ಚರ್ಚೆಗಳು ತೀವ್ರತೆಯ ಮಟ್ಟಕ್ಕೆ ತಲುಪಲಿಲ್ಲ. ಮೈಸೂರು ರಾಜ್ಯವನ್ನು ಪ್ರತಿನಿಧಿಸುತ್ತಿದ್ದ ಟಿ.ಚನ್ನಯ್ಯನವರು ಕೇಂದ್ರ-ರಾಜ್ಯ ನಡುವೆ ಇರಬೇಕಾದ ನಂಟಿನ ಬಗ್ಗೆ ಕನ್ನಡದಲ್ಲಿಯೇ ತಮ್ಮ ಅಭಿಪ್ರಾಯವನ್ನು ಮಂಡಿಸಿದರಾದರೂ, ಹಿಂದಿ ಮತ್ತು ಇಂಗ್ಲಿಷ್ ಅಲ್ಲದ ನುಡಿಗಳಲ್ಲಿ ಮಾತನಾಡುವ ಏರ್ಪಾಟು ಇಲ್ಲದಿದ್ದ ಕಾರಣ ಅಸೆಂಬ್ಲಿಯಲ್ಲಿ ಅವರ ಮಾತುಗಳು ದಾಖಲಾಗಲಿಲ್ಲ.

ಈಗಿನ ಒಕ್ಕೂಟ ವ್ಯವಸ್ಥೆ – ಆರ್ಥಿಕ ನೆಲೆ
ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ರಾಜ್ಯಗಳಿಗೆ ತೆರಿಗೆ ಸಂಗ್ರಹಿಸುವ ಅಧಿಕಾರದ ಹೆಚ್ಚಿನ ಪಾಲನ್ನು ಪಡೆದಿದ್ದವು. ನಂತರದ ಕಾಲಘಟ್ಟದಲ್ಲಿ ನಿಧಾನವಾಗಿ ಈ ಅಧಿಕಾರವನ್ನು ಮೊಟಕುಗೊಳಿಸಲಾಯಿತು. ಭಾರತಕ್ಕೆ ಸ್ವಾತಂತ್ರ್ಯ ಬಂದ ದಿನಗಳಲ್ಲಿ ಸೇವಾಕ್ಷೇತ್ರವು ಇರಲಿಲ್ಲ ಇಲ್ಲವೆ ಅಷ್ಟಾಗಿ ಬೆಳೆದಿರಲಿಲ್ಲ. ಅಲ್ಲದೆ, ಸೇವಾಕ್ಷೇತ್ರವನ್ನು ಸಂವಿಧಾನದಲ್ಲಿ ಕೊಡಲಾಗಿರುವ ರಾಜ್ಯ ಪಟ್ಟಿಯಲ್ಲಾಗಲಿ, ಕೇಂದ್ರದ ಪಟ್ಟಿಯಲ್ಲಾಗಲಿ ಇಲ್ಲವೆ ಜಂಟಿ ಪಟ್ಟಿಯಲ್ಲಾಗಲಿ ನಮೂದಿಸಿರಲಿಲ್ಲ. ಆದರೆ, ಸಂವಿಧಾನದಲ್ಲಿರುವಂತೆ ಯಾವ ಪಟ್ಟಿಯಲ್ಲೂ ಇಲ್ಲದಿದ್ದರೆ ಅದು ಕೇಂದ್ರ ಪಟ್ಟಿಗೆ ಸೇರುತ್ತದೆ ಎಂದು ಹೇಳಿರುವುದರಿಂದ ಸೇವಾಕ್ಷೇತ್ರದ ತೆರಿಗೆ ಕೇಂದ್ರದ ತೆಕ್ಕೆಗೆ ಒಳಪಟ್ಟಿತು. ಆದರೆ, ಇತ್ತೀಚಿನ ದಶಕಗಳಲ್ಲಿ ಸಾಫ್ಟ್ ವೇರ್ ಕ್ಷೇತ್ರವೂ ಒಳಗೊಂಡಿರುವ ಸೇವಾಕ್ಷೇತ್ರ ಇನ್ನಿಲ್ಲದ ಪ್ರಗತಿ ಕಂಡಿದೆ. ಎಷ್ಟರ ಮಟ್ಟಿಗೆ ಅಂದರೆ ಭಾರತದ ಜಿಡಿಪಿಗೆ ಸೇವಾಕ್ಷೇತ್ರದ ಕೊಡುಗೆ 50% ರಷ್ಟಿದೆ. ಒಂದು ವೇಳೆ, ಸೇವಾಕ್ಷೇತ್ರಕ್ಕೆ ತೆರಿಗೆ ಸಂಗ್ರಹಿಸುವ ಅಧಿಕಾರ ರಾಜ್ಯದ ಪಟ್ಟಿಗೆ ಸೇರಿದ್ದರೆ ರಾಜ್ಯಗಳು ಸಾಮಾಜಿಕ ಅಭಿವೃದ್ಧಿ ಕ್ಷೇತ್ರಕ್ಕೆ (ಆರೋಗ್ಯ ಮತ್ತು ಶಿಕ್ಷಣ) ಹೆಚ್ಚಿನ ಹಣವನ್ನು ಮೀಸಲು ಇಡಬಹುದಾಗಿತ್ತು.

ಮೇಲಿನ ಪಟ್ಟಿಯಲ್ಲಿ ಕೊಟ್ಟಿರುವಂತೆ ಕಲಂ 2 ಮತ್ತು ಕಲಂ 3ನ್ನು ಗಮನಿಸಿದರೆ ರಾಜ್ಯಕ್ಕೆ ಹೋಲಿಸಿದರೆ ಕೇಂದ್ರದ ಆದಾಯ ಅಧಿಕವಾಗಿ ಏರಿಕೆಯಾಗಿದೆ. ಅದಕ್ಕೆ ಪ್ರಮುಖ ಕಾರಣ ಸೇವಾಕ್ಷೇತ್ರದಂತಹ ತೆರಿಗೆಗಳು ಬಂದುದರಿಂದ. ಒಪ್ಪುಕೂಟದ ವ್ಯವಸ್ಠೆಯಲ್ಲಿ ರಾಜ್ಯಗಳ ಆದಾಯವೂ ಹೆಚ್ಚುತ್ತ ಇರಬೇಕಾಗಿತ್ತು, ಆದರೆ ದಶಕದಿಂದ ದಶಕಕ್ಕೆ ರಾಜ್ಯಗಳ ಆದಾಯದಲ್ಲಿ ಹೆಚ್ಚಿನ ಏರಿಕೆಯಾಗಿಲ್ಲ. ಕೇಂದ್ರದ ತೆರಿಗೆ ಸಂಗ್ರಹವು ಹೆಚ್ಚಾಗಿ ಕೇಂದ್ರದ ಪಟ್ಟಿಯಲ್ಲಿರುವ ವಿಷಯಗಳ ಮೇಲೆ ಖರ್ಚಾಗಬೇಕಾಗಿತ್ತು. ಉದಾಹರಣೆಗೆ, ರಕ್ಷಣಾ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಆಗಬೇಕಾಗಿತ್ತು. ಆದರೆ ಸ್ವಾತಂತ್ರ್ಯ ನಂತರ ಬಂದ ಕೇಂದ್ರ ಸರ್ಕಾರಗಳು ರಾಜಕೀಯ ಕಾರಣಗಳಿಗೋಸ್ಕರ ಹೆಚ್ಚಾಗಿ ಅದನ್ನು ಜಂಟಿಪಟ್ಟಿಯಲ್ಲಿರುವ ವಿಷಯಗಳ ಮೇಲೆ ಖರ್ಚು ಮಾಡಿದವು. ಇದರಿಂದ ಒಂದು ಕಡೆ ರಾಷ್ಟ್ರದ ರಕ್ಷಣಾವಲಯ ಬಲಗೊಳ್ಳಲಿಲ್ಲ ಇನ್ನೊಂದು ಕಡೆ ರಾಜ್ಯಗಳ ಸಾಮಾಜಿಕ ಕ್ಷೇತ್ರದ ಬೆಳವಣಿಗೆಯೂ ನಿರೀಕ್ಷಿತ ಮಟ್ಟದಲ್ಲಿ ಆಗಲಿಲ್ಲ.

ಮೇಲಿನ ಪಟ್ಟಿಯಲ್ಲಿ ಕೊಟ್ಟಿರುವಂತೆ ಕಲಂ 2 ಮತ್ತು ಕಲಂ 5 ಗಮನಿಸಿದರೆ ಕೇಂದ್ರಕ್ಕೆ ಎಷ್ಟು ಖರ್ಚು ಇದೆಯೋ ಅಷ್ಟೇ ಪ್ರಮಾಣದ ಆದಾಯವಿದೆ. ಆದರೆ ಕಲಂ 3 ಮತ್ತು ಕಲಂ 6 ನ್ನು ಗಮನಿಸಿದರೆ ರಾಜ್ಯಗಳ ಆದಾಯ ಜಿ.ಡಿ.ಪಿ.ಯ 8.61% ಇದ್ದರೆ ಅದರ ಖರ್ಚು 17.05% ಇದೆ. ಅಂದರೆ 8.44ರಷ್ಟು ವ್ಯತ್ಯಾಸವಿದೆ. ಈ ವ್ಯತ್ಯಾಸವನ್ನು ಸರಿದೂಗಿಸಲು ರಾಜ್ಯಕ್ಕೆ ಹೆಚ್ಚಿನ ತೆರಿಗೆ ಸಂಗ್ರಹದ ಅಧಿಕಾರ ಸಿಗಬೇಕು. ಇಲ್ಲವಾದರೆ ಕೇಂದ್ರವು ತನ್ನ ಆರ್ಥಿಕ ಸಂಪನ್ಮೂಲವನ್ನು ರಾಜ್ಯಗಳ ಜೊತೆ ಹಂಚಿಕೊಳ್ಳಬೇಕು.

ಮೇಲಿನ ಟೇಬಲ್ಲಿನಲ್ಲಿ ಕೊಟ್ಟಿರುವಂತೆ ಸ್ವಾತಂತ್ರ್ಯನಂತರದ ದಶಕಗಳಲ್ಲಿ ರಾಜ್ಯಗಳ ವಿತ್ತೀಯ ಕೊರತೆ ಏರುತ್ತಲೇ ಇದೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರವು ಕೊರತೆಯನ್ನು ನೀಗಿಸಲು ರಾಜ್ಯಗಳ ಜೊತೆಗೆ ಆರ್ಥಿಕ ಸಂಪನ್ಮೂಲಗಳನ್ನು ಹಂಚಿಕೊಳ್ಳಬೇಕಾಗಿತ್ತು. ಆದರೆ ಕೇಂದ್ರವು ಒಪ್ಪುಕೂಟದ ತತ್ವಗಳನ್ನು ಬದಿಗಿಟ್ಟಿರುವುದರಿಂದ ರಾಜ್ಯಗಳ ವಿತ್ತೀಯ ಕೊರತೆಯನ್ನು ನೀಗಿಸಲು ಆಗುತ್ತಿಲ್ಲ. ಇದಲ್ಲದೆ ರಾಜ್ಯಗಳು ಕಾಲಕಾಲಕ್ಕೆ ನೆರೆ ಮತ್ತು ಬರದಂತಹ ಪರಿಸ್ಥಿತಿಗಳನ್ನು ನಿಭಾಯಿಸಬೇಕಾಗಿದೆ. ಇದರಿಂದ ರಾಜ್ಯಗಳಿಗೆ ಸಾಮಾಜಿಕ ಅಭಿವೃದ್ಧಿ ಯೋಜನೆಗಳಿಗೂ ಹಣಕಾಸನ್ನು ಒದಗಿಸಲಾಗದ ಕೆಟ್ಟ ಪರಿಸ್ಥಿತಿ ಬಂದೊದಗಿದೆ. ಈ ಎಲ್ಲ ಅಂಶಗಳಿಂದ ಕೆಂದ್ರ ಮತ್ತು ರಾಜ್ಯಗಳ ನಡುವೆ ಇರುವ ಆರ್ಥಿಕ ಅಸಮತೋಲನವು ಹೆಚ್ಚಾಗಿರುವುದು ತಿಳಿಯುತ್ತದೆ. ಈ ಆರ್ಥಿಕ ಅಸಮತೋಲನದಿಂದಾಗಿ ರಾಜ್ಯಗಳ ಆರ್ಥಿಕ ಸಂಪನ್ಮೂಲಗಳಲ್ಲಿ ಕೊರತೆಯುಂಟಾಗಿದೆ. ಇದರ ಪರಿಣಾಮವಾಗಿ ರಾಜ್ಯಗಳ ಮೂಲಭೂತ ಅಭಿವೃದ್ಧಿಯು ಕುಂಠಿತಗೊಂಡಿದೆ.

ಸಂವಿಧಾನದ ಆರ್ಟಿಕಲ್ 271ರ ಪ್ರಕಾರ ಒಕ್ಕೂಟ ಸರ್ಕಾರವು ಕಾಲ ಕಾಲಕ್ಕೆ ನಿಗದಿತ ಸಮಯದವರೆಗೆ ಸರ್ಚಾರ್ಜ್ ಮತ್ತು ಸೆಸ್ ತೆರಿಗೆಗಳನ್ನು (ಸೆಸ್ ಮತ್ತು ಸರ್ಚಾರ್ಜ್ ಅನ್ನುವುದು ತೆರಿಗೆಯ ಮೇಲೆ ತೆರಿಗೆ ವಿಧಿಸುವುದು) ವಿಧಿಸುವ ಅಧಿಕಾರವನ್ನು ಹೊಂದಿದೆ. ಮೇಲಿನ ಟೇಬಲಿನಲ್ಲಿ ಕೊಟ್ಟಿರುವಂತೆ 2011-12ರಲ್ಲಿ ಸರ್ಚಾರ್ಜ್ ಮತ್ತು ಸೆಸ್ಗಳು, ಒಟ್ಟು ತೆರಿಗೆ ಸಂಗ್ರಹದ 6.47% ರಷ್ಟಿತ್ತು ಆದರೆ 2018-19ರ ಸಾಲಿಗೆ ಅದು 12.24% ರಷ್ಟು ಏರಿದೆ. ಅಂದರೆ ಕಳೆದ ಎಂಟು ವರ್ಷಗಳಲ್ಲಿ ಬರೀ ಸರ್ಚಾರ್ಜ್ ಮತ್ತು ಸೆಸ್ ತೆರಿಗೆಗಳ ಸಂಗ್ರಹವೇ ದ್ವಿಗುಣಗೊಂಡಿದೆ. ಮೇಲೆ ತಿಳಿಸಿದ ಕೇಂದ್ರ ಮತ್ತು ರಾಜ್ಯದ ಅರ್ಥಿಕ ಅಸಮತೋಲನವನ್ನು ನೀಗಿಸಲು 14ನೇ ಆರ್ಥಿಕ ಆಯೋಗವು ಸೆಸ್ ಮತ್ತು ಸರ್ಚಾರ್ಜ್ ಮುಖಾಂತರ ಬಂದಂತಹ ಆರ್ಥಿಕ ಸಂಪನ್ಮೂಲವನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳಲು ಶಿಫಾರಸು ಮಾಡಿತ್ತು. ಆದರೂ, ಕೇಂದ್ರ ಸರ್ಕಾರವು ಸಾಂವಿಧಾನಿಕ ಅಧಿಕಾರವನ್ನು ಬಳಸಿ ಈ ಸಂಪನ್ಮೂಲವನ್ನು ಹಂಚಿಕೊಳ್ಳುತ್ತಿಲ್ಲ. ಇದರಿಂದ ರಾಜ್ಯಗಳಿಗೆ ನಷ್ಟವಾದ ಮೊತ್ತ 1,79,292 ಕೋಟಿ ರೂಪಾಯಿಗಳು.

ಮೇಲಿನ ಗ್ರಾಫ್(ಕೆಂಪು)ನಲ್ಲಿ ಕೇಂದ್ರ ಸರ್ಕಾರದ ತೆರಿಗೆ ಆದಾಯದಲ್ಲಿ ಸೆಸ್ಸಿನ ಪಾಲು ಪ್ರತಿಶತ ವರ್ಷದಿಂದ ವರ್ಷಕ್ಕೆ ಏರಿಕೆಯಾಗುವುದನ್ನು ಕಾಣಬಹುದು

ಮೇಲಿನ ಗ್ರಾಫ್(ನೀಲಿ)ನಲ್ಲಿ ತೋರಿಸಿರುವಂತೆ ವರ್ಷದಿಂದ ವರ್ಷಕ್ಕೆ ಸೆಸ್ ಮತ್ತು ಸರ್ಚಾರ್ಜಿನಿಂದಾಗಿ ರಾಜ್ಯ ಸರ್ಕಾರಗಳಿಗೆ ಆದ ನಷ್ಟ

ಜಿ.ಎಸ್ ಟಿ.
ಜಿ.ಎಸ್.ಟಿ.ಯಿಂದ ಬರುವ ಆದಾಯವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೇಗೆ ಹಂಚಿಕೊಳ್ಳಬೇಕೆಂಬುದನ್ನು ಇಲ್ಲಿ ಹೇಳಲಾಗಿದೆ:

1. ಜನಸಂಖ್ಯೆ ಆದಾರಿತ ಆರ್ಥಿಕ ಸಂಪನ್ಮೂಲದ ಹಂಚಿಕೆ ಬೇಡ. ರಾಜ್ಯಗಳ ಪಾಲು ಸಮನಾಗಿ ಹಂಚಿಕೆಯಾಗಲಿ. ಯಾಕೆಂದರೆ ದಕ್ಷಿಣದ ರಾಜ್ಯಗಳು ಜನಸಂಖ್ಯೆಯನ್ನು ನಿಯಂತ್ರಿಸುವಲ್ಲಿ ಸಫಲವಾಗಿವೆ ಆದರೆ ಉತ್ತರದ ರಾಜ್ಯಗಳು ವಿಫಲವಾಗಿವೆ. ಆದ್ದರಿಂದ ಜನಸಂಖ್ಯೆಯ ಆಧಾರಿತ ಹಂಚಿಕೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗುತ್ತದೆ.

2. ಅನುದಾನ(ಆದಾಯ ಕೊರತೆಯ ಅನುದಾನ)ಗಳನ್ನು 14ನೇ ಆರ್ಥಿಕ ಆಯೋಗವು ರಾಜ್ಯಗಳಿಗೆ ಕೊಡಲೇಬೇಕು ಎಂದು ಸೂಚಿಸಿತ್ತು. ಆದರೆ 15ನೇ ಆರ್ಥಿಕ ಆಯೋಗದ ನಿಲುವು ಇದರ ಬಗ್ಗೆ ಅಸ್ಪಷ್ಟತೆಯಿಂದ ಕೂಡಿದೆ. ಈ ಅಸ್ಪಷ್ಟತೆಯನ್ನು ಹೋಗಲಾಡಿಸುವೆಡೆಗೆ ಕೇಂದ್ರ ಸರ್ಕಾರ ಗಮನ ಹರಿಸಬೇಕು.

ಭಾರತಕ್ಕೊಪ್ಪುವ ಒಪ್ಪುಕೂಟ
ಭಾರತದ ಸಂವಿಧಾನದ ರಚನೆಯ ಸಂದರ್ಭದಲ್ಲಿ ಒಪ್ಪುಕೂಟದ ಅಂಶ ಹೇಗೆ ಮೂಲೆಗುಂಪಾಯಿತು ಮತ್ತು ಇವತ್ತಿನ ಭಾರತದ ಸಂದರ್ಭದಲ್ಲಿ ಆರ್ಥಿಕತೆಯ ನೆಲೆಯಲ್ಲಿ ಒಪ್ಪುಕೂಟವು ಯಾವ ಸ್ಥಿತಿ ತಲುಪಿದೆ ಎಂಬುದನ್ನು ಮನಗಂಡೆವು.

ರಾಜ್ಯಗಳಿಂದ ನೇರ ತೆರಿಗೆಯ(ಆದಾಯ ತೆರಿಗೆ) ರೂಪದಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಕೇಂದ್ರವು ಬಾಚಿಕೊಳ್ಳುತ್ತಿದೆ. ಆನಂತರ ಆರ್ಥಿಕ ಆಯೋಗದ ಮೂಲಕ ಹಣಕಾಸಿನ ಹಂಚಿಕೆ ನಡೆಯುತ್ತಿದೆ. ಇದರಿಂದಾಗಿ ರಾಜ್ಯಗಳು ಎಲ್ಲ ಸಂಪನ್ಮೂಲ ಕ್ರೋಡೀಕರಣಕ್ಕೆ ಕೇಂದ್ರದ ಮೇಲೆ ಅವಲಂಬಿತವಾಗಿವೆ. ಇಂತಹ ಪರಿಸ್ಥಿತಿಯಿಂದ ಆಚೆ ಬರಲು, ಒಪ್ಪುಕೂಟವನ್ನು ಮುನ್ನೆಲೆಗೆ ತರಲು ಏನು, ಯಾರು ಮತ್ತು ಹೇಗೆ ಮಾಡಬೇಕು ಎಂಬ ಪ್ರಶ್ನೆಗಳು ಏಳುತ್ತವೆ. ಇವುಗಳಿಗೆ ಒಂದೊಂದಾಗಿ ಉತ್ತರ ಹುಡುಕಿಕೊಳ್ಳೋಣ.

ಏನು ಮಾಡಬೇಕು?
1. ಹೆಚ್ಚಿನ ಆದಾಯ ತರುತ್ತಿರುವ ರಾಜ್ಯಗಳಿಗೆ ಷರತ್ತಿನ ಆಧಾರದ ಮೇಲೆ ನೇರ ತೆರಿಗೆಯ ನಿರ್ದಿಷ್ಟ ಪಾಲು ಸಲ್ಲುವಂತಿರಬೇಕು. ಇದರಿಂದಾಗಿ ರಾಜ್ಯಗಳ ನಡುವೆ ಪೈಪೋಟಿ ಬೆಳೆದು ಪ್ರತಿರಾಜ್ಯವು ತನ್ನ ಯೋಜನೆಗಳಿಗೆ ಆರ್ಥಿಕ ಸಂಪನ್ಮೂಲವನ್ನು ಕ್ರೋಡೀಕರಿಸಿಕೊಳ್ಳಲು ನೆರವಾಗುತ್ತದೆ.

2. ಕೇಂದ್ರದಿಂದ ರಾಜ್ಯಗಳಿಗೆ ಬರುವ ಆರ್ಥಿಕ ಸಂಪನ್ಮೂಲದ ಪಾಲು ಕೂಡ ಹೆಚ್ಚಬೇಕು. ಇದರಿಂದ ಕೇಂದ್ರ ಮತ್ತು ರಾಜ್ಯಗಳ ನಡುವೆ ಇರುವ ಆರ್ಥಿಕ ಸಮತೋಲನ ಕಾಯ್ದುಕೊಳ್ಳಬಹುದು. ಈ ಸಮತೋಲನ ಕಾಯ್ದುಕೊಳ್ಳುವಿಕೆಯೇ ಒಂದು ಸದೃಢ ಒಪ್ಪುಕೂಟದ ಲಕ್ಷಣ.

3. ಸದ್ಯದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಆರ್ಥಿಕ ಸಂಪನ್ಮೂಲ ಹಂಚಿಕೆಯಾಗುವ ಏರ್ಪಾಟಿದೆ. ಆದರೆ ಇದು ಒಪ್ಪುಕೂಟದ ತತ್ವಗಳಿಗೆ ವಿರುದ್ಧವಾಗಿದೆ. ಈ ಸಂಪನ್ಮೂಲಗಳು ಕ್ರೋಡೀಕರಣವು ಮೊದಲು ರಾಜ್ಯದ ಮಟ್ಟದಲ್ಲಿ ನಡೆದು, ನಿರ್ದಿಷ್ಟ ಪ್ರಮಾಣದ ಕ್ರೋಡೀಕರಣಗೊಂಡ ನಂತರ ಮಿಗತೆಯು ಕೇಂದ್ರದ ಪಾಲಾಗಬೇಕು. ಇದರಿಂದ ಕೆಳಮಟ್ಟದ ಸಂಸ್ಥೆಗಳು ಅಂದರೆ ಪಂಚಾಯಿತಿಗಳು ಆರ್ಥಿಕವಾಗಿ ಸದೃಢಗೊಂಡು ಕ್ರಮೇಣ ರಾಜ್ಯವು, ಅದರಿಂದ ಒಕ್ಕೂಟವು ಬಲಿಷ್ಠಗೊಳ್ಳುವುದು.

4. ಕೇಂದ್ರ ಸರ್ಕಾರಕ್ಕೆ ಸಂವಿಧಾನದಲ್ಲಿ ಕೊಡಲಾಗಿರುವ ಪರಮಾಧಿಕಾರದಿಂದ ಮುಂದಿನ ದಿನಗಳಲ್ಲಿ ಆಗುವ ಅನಾಹುತಗಳನ್ನು ತಪ್ಪಿಸಲು ಮತ್ತು ಭಾರತದ ವಿವಿಧತೆಯನ್ನು ಕಾಪಿಟ್ಟುಕೊಳ್ಳಲು ಸಂವಿಧಾನಕ್ಕೆ ತಿದ್ದುಪಡಿಗಳನ್ನು ಮಾಡಬೇಕಾಗಿದೆ. ಒಪ್ಪುಕೂಟದ ತತ್ವಗಳಿಗೆ ಅನುಸಾರವಾಗಿ ಆರ್ಟಿಕಲ್ 3 (ರಾಜ್ಯಗಳ ಮರುವಿಂಗಡಣೆ), ಆರ್ಟಿಕಲ್ 343, 344 ಮತ್ತು 351 (ಒಕ್ಕೂಟದ ಅಧಿಕೃತ ಭಾಷೆ) ಮತ್ತು ಆರ್ಟಿಕಲ್ 246 (ಕೇಂದ್ರ ಪಟ್ಟಿ, ರಾಜ್ಯ ಪಟ್ಟಿ ಮತ್ತು ಜಂಟಿ ಪಟ್ಟಿ)ಗಳಿಗೆ ತಿದ್ದುಪಡಿ ತರಬೇಕಾಗಿದೆ.

ಇದನ್ನು ಓದಿದ್ದೀರಾ?: ಸುದ್ದಿ ವಿವರ | ತೆರಿಗೆ ಪಾಲು ಹಂಚಿಕೆ ದಕ್ಷಿಣದ ರಾಜ್ಯಗಳಿಗೆ ನ್ಯಾಯವಾಗಿದೆಯೆ? 

ಯಾರು ಮಾಡಬೇಕು?
ಇಂತಹ ಒಪ್ಪುಕೂಟದ ಚಿಂತನೆಗಳು ಮತ್ತು ಅದರೆಡೆಗೆ ಕೆಲಸಗಳು ರಾಜ್ಯಗಳಲ್ಲೇ ಮೊದಲು ಶುರುವಾಗಬೇಕು. ಕೇಂದ್ರವು ಎಂದಿಗೂ ಒಪ್ಪುಕೂಟದ ಕಡೆಗೆ ಹೆಜ್ಜೆಯಿಡುವುದಿಲ್ಲ. ರಾಜ್ಯಗಳು ರಾಜಕೀಯವಾಗಿ ಹೊಂದಾಣಿಕೆಗಳನ್ನು ಮಾಡಿಕೊಂಡು ಕೇಂದ್ರದ ಜೊತೆಗೆ ಅಧಿಕಾರಕ್ಕಾಗಿ ಮಾತುಕತೆ ನಡೆಸಬೇಕಾಗಿದೆ. ತನ್ಮೂಲಕ ಅಧಿಕಾರವು ಸಮತೋಲಿತವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಿಗುವಂತಾಗಬೇಕು. ಇದರಿಂದ ಕೇಂದ್ರ ಸರ್ಕಾರದ ನಿರಂಕುಶ ಅಧಿಕಾರವು ಮೊಟಕಾಗುವುದರಿಂದ ಭಾರತವು ದಿಟವಾದ ಅರ್ಥದಲ್ಲಿ ’ಒಟ್ಟಿಗೆ ಬಂದ’ ಒಪ್ಪುಕೂಟವು ಹೊಮ್ಮಬಹುದು.

ಹೇಗೆ ಮಾಡಬೇಕು?
ಪ್ರತಿ ರಾಜ್ಯಗಳು ತಮ್ಮ ರಾಜ್ಯ ಕೇಂದ್ರಿತವಾದ ಆದರೆ ಒಪ್ಪುಕೂಟದ ತತ್ವಗಳನ್ನು ಮೈಗೂಡಿಸಿಕೊಂಡ ಪ್ರಾದೇಶಿಕ ಪಕ್ಷಗಳನ್ನು ಹುಟ್ಟುಹಾಕಿಕೊಳ್ಳಬೇಕು. ತನ್ನ ರಾಜ್ಯದ ಒಳಗೆ ಅಭಿವೃದ್ದಿಗೆ ಶ್ರಮಿಸುತ್ತಾ ಒಪ್ಪುಕೂಟದ ತತ್ವಗಳಿಗೆ ಮತ್ತು ಆಶಯಗಳಿಗೆ ಬದ್ದವಾಗುತ್ತ ಕೆಲಸ ಮಾಡಬೇಕು. ಪ್ರಾದೇಶಿಕ ಪಕ್ಷಗಳು ಬಲಗೊಳ್ಳದೆ ರಾಜಕೀಯವಾಗಿ ಒಪ್ಪುಕೂಟವು ಬಲಗೊಳ್ಳುವುದಿಲ್ಲ. ಸ್ವತಂತ್ರ ಭಾರತದ ಉದ್ದಕ್ಕೂ ಪ್ರಾದೇಶಿಕ ಪಕ್ಷಗಳ ಮಹತ್ವವನ್ನು ರಾಷ್ಟ್ರೀಯ ಇಲ್ಲವೆ ಒಪ್ಪುಕೂಟದ ಮಟ್ಟದಲ್ಲಿ ಅರಿಯಲು ಭಾರತದ ರಾಜಕಾರಣಿಗಳು ಸೋತಿದ್ದಾರೆ. ರಾಷ್ಟ್ರೀಯ ಪಕ್ಷಗಳ ಹೈಕಮಾಂಡ್ ಸಂಸ್ಕೃತಿ ಬ್ರಿಟೀಷರ ವಸಾಹತು ಸಂಸ್ಕೃತಿಯನ್ನು ಅಣಕಿಸುವಂತಿದೆ. ಹಲವು ರಾಜ್ಯಗಳು ಒಂದುಗೂಡಿದ ಮೇಲೆ ಭಾರತ ಎಂಬ ಒಕ್ಕೂಟ ರಾಷ್ಟ್ರವು ಉಗಮಗೊಂಡಿದೆ. ಹಲವು ರಾಜ್ಯಗಳು ಅಂದ ಮೇಲೆ ಹಲವು ಪ್ರಾದೇಶಿಕ ಪಕ್ಷಗಳು ಇರಲೇಬೇಕು. ಅದೇ ಪ್ರಜಾಪ್ರಭುತ್ವದ ಮೂಲ ಗುಣಲಕ್ಷಣ.

ಲೇಖಕರು: ಕೀ.ಶಿ.ನಾಗೇಗೌಡ, ಯೋ.ಬ.ಕುಮಾರ್, ಅಮರ್ ಹೊಳೆಗದ್ದೆ

ಆಕರ ಗ್ರಂಥಗಳು
1. Lancy Lobo (Editor), Mrutuyanjaya Sahu (Editor), Jayesh Shah, Federalism in India: Towards a Fresh Balance of Power, 2014
2. M. Thomas Isaac, R. Mohan, Lekha Chakraborty (Author), C.P. Chandrasekhar, Jayati Ghosh, Challenges to Indian Fiscal Federalism, 2019
3. Constituent Assembly Debates https://www.constitutionofindia.net/

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಸರ್ಕಾರ ಒಪ್ಪದೆ ಜಾತಿಗಣತಿ ವರದಿಯ ಮಾಹಿತಿ ಬಹಿರಂಗ ಪಡಿಸಲು ಸಾಧ್ಯವಿಲ್ಲ: ಜಯಪ್ರಕಾಶ್ ಹೆಗ್ಡೆ

"ರಾಜ್ಯದ 5.98 ಕೋಟಿ ಜನಸಂಖ್ಯೆಯನ್ನು ಸಮೀಕ್ಷೆ ಮಾಡಿದ ಸಾಮಾಜಿಕ ಶೈಕ್ಷಣಿಕ ಜನಗಣತಿ...

ಅಲ್ಪಸಂಖ್ಯಾತರ ಮೇಲೆ ಆರೋಪ ಬಂದರೆ ಪ್ರಕರಣ ಮುಚ್ಚಿಹಾಕಲು ಸರ್ಕಾರದಿಂದ ನಿರ್ದೇಶನ: ಆರ್‌ ಅಶೋಕ್‌ ಆರೋಪ

ಅಲ್ಪಸಂಖ್ಯಾತರ ಮೇಲೆ ಆರೋಪ ಬಂದರೆ ಅದನ್ನು ಮುಚ್ಚಿಹಾಕಿ, ಬಹು ಸಂಖ್ಯಾತರ ಮೇಲೆ...

ಜೂ.15ರೊಳಗೆ ಮುಖ್ಯ ಕಚೇರಿಯಲ್ಲಿನ ಒತ್ತುವರಿ ಜಾಗ ಖಾಲಿ ಮಾಡಿ: ಎಎಪಿಗೆ ಸುಪ್ರೀಂ ಕೋರ್ಟ್ ಆದೇಶ

ಎಎಪಿ ಪಕ್ಷ ತನ್ನ ಮುಖ್ಯ ಕಚೇರಿಯಲ್ಲಿ ದೆಹಲಿ ಹೈಕೋರ್ಟ್‌ನ ಜಾಗವನ್ನು ಒತ್ತುವರಿ...

ದೇವರು-ಧರ್ಮದ ಹೆಸರಲ್ಲಿ ಮರುಳು ಮಾಡಿ ನಾವು ಅಧಿಕಾರ ನಡೆಸಲ್ಲ: ಸಿದ್ದರಾಮಯ್ಯ

ನಾವು ನಿಮ್ಮನ್ನು ದೇವರು-ಧರ್ಮದ ಹೆಸರಲ್ಲಿ ಭಾವನಾತ್ಮಕವಾಗಿ ಕೆರಳಿಸಿ ಅಧಿಕಾರ ನಡೆಸುವುದಿಲ್ಲ. ಅನ್ನ-ಆರೋಗ್ಯ-ಅಕ್ಷರ-ಸೂರು-ನೀರಿಗಾಗಿ...