ಸಿದ್ದರಾಮಯ್ಯನವರು ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆ ಕೊಳಕು ಗುಂಪುಗಾರಿಕೆಗೆ, ಅಸಹ್ಯ ರಾಜಕಾರಣಕ್ಕೆ ದಾರಿ ಮಾಡಿಕೊಟ್ಟಿದೆ. ಇದು ಸಹಜವಾಗಿಯೇ ನರೇಟಿವ್ ಬಿಲ್ಡ್ ಮಾಡುವ ಮಾಧ್ಯಮಗಳಿಗೆ ಸುಲಭದ ಸರಕಾಗಿದೆ. ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತಿದೆ. ಬಿಜೆಪಿ ಬೇಡವೆಂದು ಗಟ್ಟಿ ನಿರ್ಧಾರಕ್ಕೆ ಬಂದು, ಕಾಂಗ್ರೆಸ್ ಆಯ್ಕೆ ಮಾಡಿಕೊಂಡ ಮತದಾರರು, ಮೋಸ ಹೋದವೇ ಎಂಬ ಅನುಮಾನಕ್ಕೆ ಬಿದ್ದಿದ್ದಾರೆ...
ಇಂದು ಬೆಳಗ್ಗೆ ಬೇಕೆಂತಲೆ ಟಿವಿ9, ಸುವರ್ಣ, ಪಬ್ಲಿಕ್, ನ್ಯೂಸ್ 18 ಚಾನೆಲ್‌ಗಳನ್ನು ನೋಡಬೇಕೆನಿಸಿತು. ಟಿವಿ ನೈನ್‌ನಲ್ಲಿ ಬೆಳಗಿನ 9ರ ಬುಲೆಟಿನ್‌ನಲ್ಲಿ ರಂಗನಾಥ್ ಭಾರದ್ವಾಜ್ ಕಾಣಿಸಿಕೊಂಡರು.
”ಓಹ್… ಇವತ್ತೇನೋ ಮಹತ್ವದ ಸುದ್ದಿ ಇದೆ, ಇಲ್ಲದಿದ್ರೆ ಇಂಥ ‘ಸೀನಿಯರ್’ಗಳೆಲ್ಲ ಬೆಳ್ ಬೆಳಗ್ಗೇನೆ ಬಂದು ಕೂರಲ್ಲ” ಎಂಬ ನನ್ನ ಪೂರ್ವಗ್ರಹವನ್ನು ಪಕ್ಕಕ್ಕೆ ಸರಿಸಿ, ಸುದ್ದಿ ಕೇಳಲು ಉತ್ಸುಕನಾದೆ.
”ನೋಡಿ…. ನೋಡಿ… ಎಂಥ ಕ್ರೌರ್ಯ ಇದು? ಇದು, ಇದು ಮನುಷ್ಯರು ಮಾಡುವಂಥದ್ದ… ಪಾಪ ಹಸು… ಮೂಕಪ್ರಾಣಿ, ಅದಕ್ಕಾಗಿರುವ ನೋವನ್ನು ಯಾರತ್ರ ಹೇಳಕೊಳ್ಳುತ್ತೆ ಅದು? ಅಲ್ಲಾ… ನಮ್ಮ ಸಮಾಜ ಎಲ್ಲಿಗೆ ಹೋಗ್ತಾಯಿದೆ ಅಂತ…” ಎಂದು ಹಸು-ಗೋವಿಗೆ ಘಾಸಿ ಮಾಡಿದವನ ಧರ್ಮ ಎಳೆದು ತರುವ ತಂತ್ರ ನಾಜೂಕಾಗಿ ಜಾರಿಯಾಗುತ್ತಿತ್ತು. ಆ ಮೂಲಕ ಜನರ ಭಾವನೆಗಳನ್ನು ಕೆರಳಿಸುವ ಕೆಲಸವೂ ನಡೆದಿತ್ತು. ಮಾತನಾಡುವ ಧಾಟಿ ಬದಲಾಗಿತ್ತು. ಕೊಡುವ ಮಾಹಿತಿಗಿಂತ, ಪ್ರಚೋದನೆ ಹೆಚ್ಚಾಗಿತ್ತು.
ಪಾಪ.. ಭಾರದ್ವಾಜ್ ದುರದೃಷ್ಟವೋ ಏನೋ… ಅವರು ಬಿಗ್ ಬುಲೆಟಿನ್ ಬಿತ್ತರಿಸುವ ಸಮಯಕ್ಕೆ ಸರಿಯಾಗಿ, ಫೀಲ್ಡ್‌ನಲ್ಲಿದ್ದ ವರದಿಗಾರ, ”ಹಸುಗಳ ಕೆಚ್ಚಲು ಕೊಯ್ದವನು ಬಿಹಾರ ಮೂಲದ ಸೈಯದ್ ನಸ್ರು ಎಂಬ ವ್ಯಕ್ತಿ. ಕುಡಿದ ಮತ್ತಿನಲ್ಲಿ ಮಾಡಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಆತನಿಗೆ ಹತ್ತು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ” ಎಂದು ವರದಿ ಒಪ್ಪಿಸಿದ.
ಭಾರದ್ವಾಜ್ ಧ್ವನಿಯ ಏರುಗತಿ ಕುಗ್ಗತೊಡಗಿತು. ಪ್ರಚೋದನೆ ಪಕ್ಕಕ್ಕೆ ಸರಿಯಿತು, ”ನೋಡಿ, ಯಾರೋ ಮಾಡೋ ಕೆಲ್ಸಕ್ಕೆ ಇನ್ಯಾರೋ ಬೆಲೆ ತರಬೇಕಾಗುತ್ತೆ…” ಎಂಬ ಸುದ್ದಿ ತೇಲಿಸುವ ವರಸೆ ಕಾಣತೊಡಗಿತು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಅಧಿಕಾರದ ಹಗ್ಗ ಜಗ್ಗಾಟ, ಹಳಿ ತಪ್ಪುತ್ತಿರುವ ಆಡಳಿತ, ಭ್ರಮನಿರಸನಗೊಂಡ ಜನ
ಆದರೂ ಅವರೇನು ತಮ್ಮ ಯುದ್ಧಸನ್ನದ್ಧ ಮನಸ್ಥಿತಿಯಿಂದ ಹೊರಬರಲಿಲ್ಲ. ಸಿದ್ಧವಾಗಿದ್ದ ಬಾಂಬನ್ನೇನೂ ಬಿಸಾಕಲಿಲ್ಲ. ಹಸು, ಕೆಚ್ಚಲು, ಕ್ರೌರ್ಯಕ್ಕಿಂತ ಹೆಚ್ಚಿನ ಉತ್ಸಾಹವನ್ನು ಇಮ್ಮಡಿಗೊಳಿಸಿಕೊಂಡು, ಮತ್ತೊಂದು ಸುದ್ದಿಯತ್ತ… ಆಳುವ ಸರ್ಕಾರದ ಶಾಸಕಾಂಗ ಸಭೆಯತ್ತ ಹೊರಳಿತು. ”ಕಾಂಗ್ರೆಸ್ ಮನೆ ಹತ್ತಿಕೊಂಡು ಉರಿತಾಯಿದೆ… ಡಿನ್ನರ್ ಪಾಲಿಟಿಕ್ಸ್ ಪ್ರಕೋಪಕ್ಕೆ ಹೋಗಿದೆ, ದಿಲ್ಲಿಯಿಂದ ಸುರ್ಜೆವಾಲಾ ಬಂದಿದಾರೆ, ಶಾಸಕಾಂಗ ಸಭೆ ನಡೆಯಲಿದೆ… ಅಲ್ಲಿ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಚರ್ಚೆಯಾಗುತ್ತೋ ಅಥವಾ ಅಧಿಕಾರ ಹಂಚಿಕೆ, ಕೆಪಿಸಿಸಿ ಅಧ್ಯಕ್ಷ ಸ್ಥಾನ, ಸಚಿವ ಸಂಪುಟ ವಿಸ್ತರಣೆ- ಈ ಎಲ್ಲ ವಿಷಯಗಳೂ ಚರ್ಚೆಯಾಗುತ್ತವೋ ನೋಡಬೇಕು. ಒಬ್ಬರು ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ ಅಂತಾರೆ, ಮತ್ತೊಬ್ಬರು ಐದೊರ್ಷ ಸಿದ್ದರಾಮಯ್ಯನವರೇ ಸಿಎಂ ಅಂತಾರೆ, ಮೊಗದೊಬ್ಬರು ಟೆಂಪಲ್ ರನ್ ಮಾಡ್ತಿದಾರೆ… ಏನ್ ನಡೀತಿದೆ ಅಂತ” ಎಂದು ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಾರೆ.
ಅದಕ್ಕೆ ತಕ್ಕಂತೆ ಸಚಿವರ ಔತಣಕೂಟ, ಸಭೆಗೆ ಹೋಗುವ, ಹೊರಬರುವ ಸಚಿವರ ದೃಶ್ಯಗಳು. ಸರಬರ ಕಾರುಗಳ ಓಡಾಟ, ಸಚಿವರ ವಿವಾದಕ್ಕೆಳೆಸುವ ಹೇಳಿಕೆಗಳು, ಅಲ್ಲಗಳೆವ ಪ್ರತಿಹೇಳಿಕೆಗಳು. ಇದಕ್ಕಿಂತಲೂ ಹೆಚ್ಚಿನ ‘ಅವಧಿ ಮತ್ತು ಅವಕಾಶ’ ವಿರೋಧ ಪಕ್ಷಗಳ ನಾಯಕರ ಹೇಳಿಕೆಗಳಿಗೆ ಮೀಸಲಿಟ್ಟು, ಅದಕ್ಕೆ ಹೆಚ್ಚಿನ ಒತ್ತು ಕೊಟ್ಟು, ಆ ದೃಶ್ಯಗಳು ವೀಕ್ಷಕರ ಮೇಲೆ ಉಂಟು ಮಾಡುವ ಪರಿಣಾಮದತ್ತ ದೃಷ್ಟಿ ನೆಟ್ಟು… ‘ಸಿದ್ದರಾಮಯ್ಯನವರು ಕುರ್ಚಿಯಿಂದ ಕೆಳಗಿಳಿಯುವ ಕಾಲ ಸನ್ನಿಹಿತವಾಯಿತೇ’ ಎಂಬ ಪ್ರಶ್ನೆಯನ್ನು ನೋಡುಗರತ್ತ ಎಸೆಯುತ್ತಾರೆ.
ಕುತೂಹಲ ತಡೆಯಲಾರದೆ ಬೇರೆ ಚಾನಲ್‌ಗಳತ್ತ ರಿಮೋಟ್ ಬಟನ್ ಒತ್ತಿದರೆ… ಅದೇ ಸಮಯಕ್ಕೆ ಅವರೂ ಕೂಡ ಅಷ್ಟೇ ಅಬ್ಬರದಿಂದ, ಅತ್ಯುತ್ಸಾಹದಿಂದ ಅದದೇ ದೃಶ್ಯಗಳನ್ನು, ಹೇಳಿಕೆಗಳನ್ನು, ಪ್ರತಿ ಹೇಳಿಕೆಗಳನ್ನು ಪ್ರಸಾರ ಮಾಡುತ್ತಿದ್ದಾರೆ. ಎಲ್ಲರ ನರೇಟಿವ್ ಒಂದೇ. ಧ್ವನಿ, ಧಾಟಿ, ಏರಿಳಿತ, ಪ್ರಚೋದನೆ… ಎಲ್ಲವೂ ಒಂದೇ. ದೃಶ್ಯ ಸಂಯೋಜನೆಯೂ ಒಂದೇ. ಅಂತಿಮವಾಗಿ- ‘ಸಿದ್ದರಾಮಯ್ಯನವರು ಕುರ್ಚಿಯಿಂದ ಕೆಳಗಿಳಿಯುವ ಕಾಲ ಸನ್ನಿಹಿತವಾಯಿತೇ’ ಎಂಬ ಪ್ರಶ್ನೆಯೂ ಒಂದೇ.
ದೃಶ್ಯ ಮಾಧ್ಯಮಗಳು ಆಳುವ ಕಾಂಗ್ರೆಸ್ ಸರ್ಕಾರದಲ್ಲಿ ಮೇಲೆ ಆಗಾಗ ಬೀಳುತ್ತವೆ. ಕಾಲ ಕಾಲಕ್ಕೆ ಉದ್ಭವಿಸುವ ರಾಜಕೀಯ ಬೆಳವಣಿಗೆಗಳಿಗೆ- ಅದೇನೂ ಹೊಸದಲ್ಲ, ಎಲ್ಲ ಸರ್ಕಾರಗಳಲ್ಲೂ ಇರುವಂಥದ್ದು, ಆದರೂ ಕಾಂಗ್ರೆಸ್ ಸರ್ಕಾರದ ಮೇಲೆ ದೃಶ್ಯ ಮಾಧ್ಯಮಗಳು ಎಲ್ಲಿಲ್ಲದ ‘ಪ್ರೀತಿ’ ತೋರುತ್ತವೆ. ಸರ್ಕಾರ ಸಣ್ಣ ತಪ್ಪು ಮಾಡಿದರೂ, ಕೊಂಚ ಏರುಪೇರು ಆದರೂ, ಸ್ವಾರ್ಥಕ್ಕೆ ಸಚಿವರು ಔತಣಕೂಟಗಳಲ್ಲಿ ಭಾಗಿಯಾದರೂ, ತದ್ವಿರುದ್ಧ ಹೇಳಿಕೆ ಕೊಟ್ಟರೂ- ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಚಾಲ್ತಿಯಲ್ಲಿಟ್ಟಿರುತ್ತವೆ. ಇದು ಈ ಸರ್ಕಾರ ರಚನೆಯಾದ ದಿನದಿಂದಲೂ ಜಾರಿಯಲ್ಲಿದೆ. ಅದು ಕಾಂಗ್ರೆಸ್ ನಾಯಕರಿಗೂ ಗೊತ್ತಿದೆ. ಗೊತ್ತಿದ್ದೂ ಅದದೇ ತಪ್ಪುಗಳನ್ನು ಅವರೂ ಮಾಡುತ್ತಾರೆ, ಇವರೂ ತೋರಿಸುತ್ತಾರೆ.
ದೃಶ್ಯ ಮಾಧ್ಯಮಗಳ ಜೊತೆಗೆ ಕೆಲ ಮುದ್ರಣ ಮಾಧ್ಯಮಗಳು ಕೂಡ ಕೈ ಜೋಡಿಸಿವೆ. ಪ್ರಜಾವಾಣಿ, ವಾರ್ತಾಭಾರತಿ, ಹೆರಾಲ್ಡ್, ಹಿಂದೂಗಳಂತಹ ಕೆಲ ಪತ್ರಿಕೆಗಳನ್ನು ಹೊರತುಪಡಿಸಿದರೆ, ಮಿಕ್ಕೆಲ್ಲ ಪತ್ರಿಕೆಗಳು ಮಾಹಿತಿ ಮಾರುವ, ತಲುಪಿಸುವ ನೆಪದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧದ ನರೇಟಿವ್ ಬಿಲ್ಡ್ ಮಾಡುತ್ತಿವೆ. ಕಾಂಗ್ರೆಸ್ ನಾಯಕರು ಈ ಹುನ್ನಾರವನ್ನು ಅರ್ಥ ಮಾಡಿಕೊಳ್ಳದೇ ಹೋದರೆ; ಮಾಧ್ಯಮಗಳ ಲಾಭಕೋರ ಅಜೆಂಡಾಗಳನ್ನು ಅನುಮಾನಿಸದೇ ಹೋದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಕಸದ ಬುಟ್ಟಿ ಸೇರಿ, ಫ್ಯಾಸಿಸ್ಟರ ಬಿಜೆಪಿ ವಕ್ಕರಿಸುವುದರಲ್ಲಿ ಅನುಮಾನವೇ ಇಲ್ಲ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಗ್ಯಾರಂಟಿ ಗೆಲುವನ್ನು ಮಾರ್ಕೆಟಿಂಗ್ ಮಾಡಿಕೊಳ್ಳಬೇಕೇ ಸರ್ಕಾರ?
ಕರ್ನಾಟಕದ ಜನ ಪ್ರಬುದ್ಧರು. ಕಳೆದ ಬಿಜೆಪಿಯ ಹಲ್ಲಂಡೆಗಳನ್ನು ಸಹಿಸಿ ಸಾಕಾಗಿ, ಕಾಂಗ್ರೆಸ್‌ನತ್ತ ಹೊರಳಿದವರು. ಪ್ರಜಾತಂತ್ರ ಮತ್ತು ಸಂವಿಧಾನ ಶಿಥಿಲಗೊಳ್ಳದಿರಲಿ ಎಂಬ ವೈಚಾರಿಕ ಪ್ರಜ್ಞೆಯಿಂದ ಎಲ್ಲರೂ ಒಂದು ಮನಸ್ಸಿನಂತೆ ಒಂದಾಗಿ, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಅಹಿಂದ ನಾಯಕನಾಗಿ ಹೊರಹೊಮ್ಮಿದ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾರೆ. ಎರಡು ವರ್ಷ ಪೂರೈಸುವ ಹಾದಿಯಲ್ಲಿದ್ದಾರೆ. ಆದರೆ ಉತ್ತಮ ಆಡಳಿತ, ಭ್ರಷ್ಟಾಚಾರ ಮುಕ್ತ ಸರ್ಕಾರ ಕೊಡುವಲ್ಲಿ ಸಿದ್ದರಾಮಯ್ಯನವರು ಸಂಪೂರ್ಣ ಸೋತಿದ್ದಾರೆ.
ಏತನ್ಮಧ್ಯೆ, ಸಿದ್ದರಾಮಯ್ಯನವರು ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆ ಆಗಾಗ ಎದ್ದು ನಿಲ್ಲುತ್ತದೆ. ನಾಯಕರ ನಡುವೆ ಏನು ಮಾತುಕತೆಯಾಗಿದೆ ಎಂದು ಹೇಳದ ನಾಯಕರು, ಕೊಳಕು ಗುಂಪುಗಾರಿಕೆಯಲ್ಲಿ, ಅಸಹ್ಯ ರಾಜಕಾರಣದಲ್ಲಿ ಮುಳುಗೇಳುತ್ತಿದ್ದಾರೆ. ಇದು ಸಹಜವಾಗಿಯೇ ನರೇಟಿವ್ ಬಿಲ್ಡ್ ಮಾಡುವ ಮಾಧ್ಯಮಗಳಿಗೆ ಸುಲಭದ ಸರಕಾಗುತ್ತದೆ. ಕೆಟ್ಟ ಸಂದೇಶ ರವಾನೆಯಾಗುತ್ತದೆ. ಬಿಜೆಪಿ ಬೇಡವೆಂದು ಗಟ್ಟಿ ನಿರ್ಧಾರಕ್ಕೆ ಬಂದು, ಕಾಂಗ್ರೆಸ್ ಪಕ್ಷವನ್ನು ಆಯ್ಕೆ ಮಾಡಿಕೊಂಡ ಮತದಾರರು, ಮೋಸ ಹೋದವೇ ಎಂಬ ಅನುಮಾನಕ್ಕೆ ಬೀಳುತ್ತಾರೆ. ಮತದಾರರಿಗೆ ಮಾಡಿದ ಈ ಮೋಸ ಮತ್ತು ಅವಮಾನ ಕಾಂಗ್ರೆಸ್‌ಗೆ ಅರ್ಥವಾಗುವುದು ಯಾವಾಗ?

ಲೇಖಕ, ಪತ್ರಕರ್ತ