ನೆಹರು ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ (ಎನ್ಎಂಎಂಎಲ್) ಹೆಸರನ್ನು ಪ್ರಧಾನ ಮಂತ್ರಿಗಳ ವಸ್ತು ಸಂಗ್ರಹಾಲಯ ಹಾಗೂ ಸೊಸೈಟಿ ಎಂದು ಮರುನಾಮಕರಣ ಮಾಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಟ್ವಿಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “ಅತೀ ದೀರ್ಘಾವಧಿ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿರುವ ನೆಹರುರವರ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಯ, ಸಂಕೀರ್ಣತೆಗಳು ಹಾಗೂ ಅಭದ್ರತೆಯ ದೊಡ್ಡ ಸುಳ್ಳಿನ ಕಂತೆಯನ್ನೇ ಹೊಂದಿದ್ದಾರೆ. ನೆಹರು ಮತ್ತು ಅವರ ಪರಂಪರೆಯನ್ನು ನಿರಾಕರಿಸುವ, ವಿರೂಪಗೊಳಿಸುವ, ಮಾನಹಾನಿ ಮಾಡುವ ಮತ್ತು ನಾಶ ಮಾಡುವ ಏಕೈಕ ಅಂಶದ ಉದ್ದೇಶವನ್ನು ಅವರು ಹೊಂದಿದ್ದಾರೆ. ಅವರು ‘ಎನ್’ ಅಳಿಸಿ ಬದಲಿಗೆ ‘ಪಿ’ ಎಂದು ಹಾಕಿದ್ದಾರೆ. ‘ಪಿ’ ಯು ಕ್ಷುಲ್ಲಕತೆ ಮತ್ತು ಸೇಡಿನ ರಾಜಕಾರಣವನ್ನು ಹೊಂದಿದೆ” ಎಂದು ವಾಗ್ದಾಳಿ ನಡೆಸಿದರು.
ಈ ಸುದ್ದಿ ಓದಿದ್ದೀರಾ? ದ್ವಾರಕಾ ಎಕ್ಸ್‌ಪ್ರೆಸ್‌ವೇ | ಅನುಮೋದಿಸಿದ್ದು ಕಿಮೀಗೆ 18 ಕೋಟಿ, ಖರ್ಚಾಗಿದ್ದು 250 ಕೋಟಿ; ಸಿಎಜಿ ವರದಿ
“ಆದರೆ ಸ್ವಾತಂತ್ರ್ಯ ಚಳವಳಿಯಲ್ಲಿ ನೆಹರುರವರ ಅಮೋಘ ಕೊಡುಗೆಗಳನ್ನು ಮತ್ತು ಭಾರತ ರಾಷ್ಟ್ರದ ಪ್ರಜಾಸತ್ತಾತ್ಮಕ, ಜಾತ್ಯತೀತ, ವೈಜ್ಞಾನಿಕ ಮತ್ತು ಉದಾರವಾದಿ ಅಡಿಪಾಯಗಳನ್ನು ನಿರ್ಮಿಸುವಲ್ಲಿ ಅವರ ಅತ್ಯುನ್ನತ ಸಾಧನೆಗಳನ್ನು ಅವರು ಎಂದಿಗೂ ಕಸಿದುಕೊಳ್ಳಲು ಸಾಧ್ಯವಿಲ್ಲ. ನೆಹರು ಅವರ ಕೊಡುಗೆಗಳು ಈಗ ಮೋದಿ ಮತ್ತು ಅವರ ಹೊಗಳುಭಟ್ಟರ ಆಕ್ರಮಣಕ್ಕೆ ಒಳಗಾಗಿವೆ”ಎಂದು ಬೇಸರ ವ್ಯಕ್ತಪಡಿಸಿದರು.
“ನಿರಂತರ ದಾಳಿಯ ಹೊರತಾಗಿಯೂ, ಜವಾಹರಲಾಲ್ ನೆಹರುರವರ ಪರಂಪರೆಯು ಜಗತ್ತಿಗೆ ಕಾಣಿಸುತ್ತದೆ ಮತ್ತು ಅವರು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುವುದನ್ನು ಮುಂದುವರಿಸುತ್ತಾರೆ” ಎಂದು ತಿಳಿಸಿದ್ದಾರೆ.