ಮಣಿಪುರ ಹಿಂಸಾಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಮೌನವನ್ನು ಪ್ರಶ್ನಿಸಿರುವ ಕಾಂಗ್ರೆಸ್, ಪ್ರಧಾನಿಯವರು ಈಶಾನ್ಯ ರಾಜ್ಯದಲ್ಲಿನ ಹಿಂಸಾಚಾರದ ಬಗ್ಗೆ “ಸಂಪೂರ್ಣ ಮೌನದ ಪ್ರತಿಜ್ಞೆ” ತೆಗೆದುಕೊಂಡಂತೆ ತೋರುತ್ತಿದೆ ಎಂದು ಆರೋಪಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ದೆಹಲಿಯ ಪ್ರವಾಹ ಪರಿಸ್ಥಿತಿಯ ಬಗ್ಗೆ ಪ್ರಧಾನಿ ಕಾಳಜಿ ತೋರಿದ್ದಾರೆ ಎಂದು ಕೇಳಲು ಸಂತೋಷವಾಗಿದೆ. ಆದರೆ ಇನ್ನೂ ಉರಿಯುತ್ತಿರುವ ಮಣಿಪುರದ ಹಿಂಸಾಚಾರದ ಬಗ್ಗೆಯೂ ಆಸಕ್ತಿ ತೋರಿಸಬೇಕು ಎಂದು ಪ್ರತಿಪಾದಿಸಿದರು.
“ನವದೆಹಲಿಯಲ್ಲಿನ ಪ್ರವಾಹ ಪರಿಸ್ಥಿತಿಯ ಬಗ್ಗೆ ವಿಚಾರಿಸಲು ಪ್ರಧಾನಿ ಪ್ಯಾರಿಸ್‌ನಿಂದ ಗೃಹ ಸಚಿವರಿಗೆ ಕರೆ ಮಾಡಿದ್ದಾರೆ. ಅವರು ಅಂತಹ ಕಾಳಜಿ ತೋರಿದ್ದು ಒಳ್ಳೆಯದು. ಈ ಹಿಂದೆ ಮೋದಿಯವರು ಅಮೆರಿಕದಲ್ಲಿದ್ದಾಗ ಮಣಿಪುರ ಹೊತ್ತಿ ಉರಿಯುತ್ತಿತ್ತು. ಆಗ ಏಕೆ ಕರೆ ಮಾಡಿ ಪ್ರಶ್ನಿಸಲಿಲ್ಲ” ಎಂದು ಜೈರಾಮ್ ರಮೇಶ್ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಭಾರತದ ಐತಿಹಾಸಿಕ ‘ಚಂದ್ರಯಾನ 3’ ಯಶಸ್ವಿ ಉಡಾವಣೆ; 20 ವರ್ಷದ ಹಿಂದೆ ಆರಂಭವಾದ ಯೋಜನೆ ಸಾಗಿದ್ದು ಹೇಗೆ?
“ಪ್ರಧಾನಿ ಫ್ರಾನ್ಸ್‌ನಲ್ಲಿರುವಾಗ ಮಣಿಪುರ ಇನ್ನೂ ಉರಿಯುತ್ತಿತ್ತು. ಆದರೆ ಅವರು ಮಣಿಪುರದ ಬಗ್ಗೆ ಸಂಪೂರ್ಣ ಮೌನದ ಪ್ರತಿಜ್ಞೆ ಮಾಡಿದಂತಿದೆ” ಎಂದು ರಮೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಣಿಪುರಲ್ಲಿ ಮೇ 3 ರಿಂದ ಶುರುವಾದ ಜನಾಂಗೀಯ ಹಿಂಸಾಚಾರದಿಂದ 150ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ, 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಾವಿರಾರು ಮಂದಿ ಆಸ್ತಿಪಾಸ್ತಿ ಕಳೆದುಕೊಂಡು ನಿರಾಶ್ರಿತರ ಶಿಬಿರದಲ್ಲಿ ವಾಸ್ತವ್ಯ ಹೂಡಿದ್ದಾರೆ. ಹತ್ತು ಸಾವಿರಕ್ಕೂ ಹೆಚ್ಚು ನಾಗರಿಕರು ಪಕ್ಕದ ರಾಜ್ಯಗಳಿಗೆ ವಲಸೆ ಹೋಗಿದ್ದಾರೆ. ಇವೆಲ್ಲ ಘಟನೆಯ ಬಗ್ಗೆ ಕಾಂಗ್ರೆಸ್ ಪ್ರಧಾನಿಯಿಂದ ಪ್ರತಿಕ್ರಿಯೆ ಬಯಸಿದೆ.