ಕಾಂಗ್ರೆಸ್ ಸುನಾಮಿಗೆ ಕೊಚ್ಚಿಹೋಯ್ತಾ ಮೋದಿ ಅಲೆ?

Date:

Advertisements

ಗುಜರಾತ್ ಮಾಡೆಲ್, ಕಪ್ಪುಹಣ ವಾಪಸ್, ಭ್ರಷ್ಟಾಚಾರಕ್ಕೆ ಕಡಿವಾಣ ಎಂಬಿತ್ಯಾದಿ ವಿಷಯಗಳನ್ನಿಟ್ಟುಕೊಂಡು ಅಧಿಕಾರಕ್ಕೆ ಬಂದ ಮೋದಿ ಅವರು 2014ರಿಂದ ತಮ್ಮದೇ ಅಲೆ ಸೃಷ್ಟಿಸಿಕೊಂಡಿದ್ದರು. ಅದೇ ಅಲೆಯಲ್ಲಿ 2019ರ ಲೋಕಸಭಾ ಚುನಾವಣೆಯನ್ನೂ ಭಾರೀ ಬಹುಮತದೊಂದಿಗೆ ಗೆದ್ದಿದ್ದರು. ಮಾತ್ರವಲ್ಲದೇ, ಅದೇ ಮೋದಿ ಅಲೆಯು ಕೆಲವು ರಾಜ್ಯಗಳಲ್ಲಿಯೂ ಬಿಜೆಪಿ ಗೆಲುವಿಗೆ ನೆರವಾಗಿತ್ತು. ಆದರೆ, ಈಗ ಮೋದಿ ಅಲೆ ತಣ್ಣಗಾಗಿದೆ. ಮೋದಿ-ಮೋದಿ ಎಂಬ ಭಕ್ತರ ಕೂಗು ಕಡಿಮೆಯಾಗಿದೆ. ಇದು, ಇತ್ತೀಚೆಗೆ ಮುಗಿದ ಲೋಕಸಭಾ ಚುನಾವಣೆಯಲ್ಲಿಯೇ ಸ್ಪಷ್ಟವಾಗಿದೆ. ಇದೀಗ, ಜಮ್ಮು-ಕಾಶ್ಮೀರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಗಳು ಮೋದಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂಬುದನ್ನು ಸೂಚಿಸುತ್ತಿವೆ.

ಜಮ್ಮು ಕಾಶ್ಮೀರ ಮತ್ತು ಹರಿಯಾಣದಲ್ಲಿ ವಿಧಾನಸಭಾ ಚುನಾವಣೆಗಳು ಮುಗಿದಿವೆ. ಫಲಿತಾಂಶಕ್ಕಾಗಿ ಎಲ್ಲ ಪಕ್ಷಗಳೂ ಮತ್ತು ಇಡೀ ದೇಶವೇ ಎದುರು ನೋಡುತ್ತಿದೆ. ಈ ನಡುವೆ, ಚುನಾವಣೋತ್ತರ ಸಮೀಕ್ಷೆಗಳ ಅಂಕಿಅಂಶಗಳು ಹೊರಬಿದ್ದಿವೆ. ಎರಡೂ ರಾಜ್ಯಗಳಲ್ಲಿ ಬಿಜೆಪಿ ಧೂಳೀಪಟವಾಗಲಿವೆ. ಕಾಂಗ್ರೆಸ್ ಭರ್ಜರಿ ಜಯದೊಂದಿಗೆ ಸುನಾಮಿ ಎಬ್ಬಿಸಲಿದೆ ಎಂದು ಸಮೀಕ್ಷಾ ಅಂಕಿಅಂಶಗಳು ಹೇಳುತ್ತಿವೆ.

ಎರಡೂ ರಾಜ್ಯಗಳೂ ಕೂಡ ತಲಾ 90 ಶಾಸಕ ಸ್ಥಾನಗಳನ್ನು ಹೊಂದಿವೆ. ಎರಡೂ ರಾಜ್ಯಗಳಲ್ಲಿ ಯಾರೇ ಸರ್ಕಾರ ರಚಿಸಬೇಕೆಂದರೂ ಬಹುಮತಕ್ಕೆ ಕನಿಷ್ಠ 46 ಸ್ಥಾನಗಳ ಅಗತ್ಯವಿದೆ. ಎರಡೂ ರಾಜ್ಯಗಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಲಿದೆ ಎಂದು ಸಮೀಕ್ಷೆಗಳು ಹೇಳಿವೆ.

Advertisements

ಹರಿಯಾಣದಲ್ಲಿ 10 ವರ್ಷಗಳ ಬಿಜೆಪಿ ಆಡಳಿತಕ್ಕೆ ಬ್ರೇಕ್ ಬೀಳಲಿದೆ. ಜಮ್ಮು-ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ಕಸಿದುಕೊಂಡಿರುವ ಬಿಜೆಪಿಯನ್ನು ಅಲ್ಲಿನ ಜನರು ಹೊರಗಟ್ಟಲಿದ್ದಾರೆ. ಹರಿಯಾಣದಲ್ಲಿ ಕಾಂಗ್ರೆಸ್ ಸರಾಸರಿ 60 ಸ್ಥಾನಗಳನ್ನು ಗೆಲ್ಲಲಿದೆ. ಆಡಳಿತರೂಢ ಬಿಜೆಪಿ ಹೀನಾಯವಾಗಿ ಸೋಲುವ ಮೂಲಕ ಮುಖಭಂಗ ಅನುಭವಿಸಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ.

ಹರಿಯಾಣದಲ್ಲಿ ಬಿಜೆಪಿಗೆ 20-32 ಸ್ಥಾನಗಳು, ಕಾಂಗ್ರೆಸ್‌ಗೆ 49-61 ಸ್ಥಾನಗಳು ಹಾಗೂ ಇತರರು 3-5 ಸ್ಥಾನಗಳನ್ನು ಗೆಲ್ಲಬಹುದು ಎಂದು ಪೀಪಲ್ಸ್ ಪಲ್ಸ್ ಸಮೀಕ್ಷೆ ಹೇಳಿದೆ.

ಧ್ರುವ್ ರಿಸರ್ಚ್ ಪ್ರಕಾರ, ಬಿಜೆಪಿ 22-32 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 50-62 ಸ್ಥಾನಗಳನ್ನು ಗೆಲ್ಲಲಿದೆ.

NDTV ಸಮೀಕ್ಷೆಯು ಬಿಜೆಪಿಗೆ 20-32, ಕಾಂಗ್ರೆಸ್‌ಗೆ 49-61 ಸ್ಥಾನಗಳು ಬರಲಿದೆ ಎಂದು ಹೇಳಿದೆ.

ದೈನಿಕ್ ಭಾಸ್ಕರ್ ಹೇಳುವಂತೆ, ಕಾಂಗ್ರೆಸ್‌ಗೆ 44-54 ಸ್ಥಾನಗಳನ್ನು ಗೆಲ್ಲಲಿದೆ. ಬಿಜೆಪಿ 25ರಿಂದ 30 ಸ್ಥಾನಗಳನ್ನು ಪಡೆಯಲಿದೆ.

ಇನ್ನು ಜಮ್ಮು ಮತ್ತು ಕಾಶ್ಮೀರದಲ್ಲಿಯೂ ಕಾಂಗ್ರೆಸ್ ಪರವಾದ ಒಲವಿವೆ. ಅಲ್ಲಿ, ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿ ಮಾಡಿಕೊಂಡಿದ್ದು, ಉಭಯ ಪಕ್ಷಗಳು ಸರ್ಕಾರ ರಚಿಸಲಿವೆ. ಕಾಂಗ್ರೆಸ್ ಮೈತ್ರಿಕೂಟವು ಸರಾಸರಿ 50 ಸ್ಥಾನಗಳನ್ನು ಗೆಲ್ಲಲಿವೆ ಎಂದು ಸಮೀಕ್ಷೆಗಳು ಹೇಳಿವೆ.

ದೈನಿಕ್ ಭಾಸ್ಕರ್ ಸಮೀಕ್ಷೆ ಪ್ರಕಾರ, ಬಿಜೆಪಿಗೆ 20-25 ಸ್ಥಾನಗಳನ್ನೂ, ಕಾಂಗ್ರೆಸ್ ಮೈತ್ರಿಕೂಟಕ್ಕೆ 35-40 ಸ್ಥಾನಗಳು, ಪಿಡಿಪಿಗೆ 4-7 ಸ್ಥಾನಗಳು, ಇತರರಿಗೆ 12-16 ಸ್ಥಾನಗಳನ್ನು ಗೆಲ್ಲಲಿವೆ.

ಇಂಡಿಯಾ ಟುಡೆ ಮತ್ತು ಸಿ ವೋಟರ್ ಸಮೀಕ್ಷೆಯ ಹೇಳುವಂತೆ, ಬಿಜೆಪಿ27-32 ಸ್ಥಾನಗಳು, ಕಾಂಗ್ರೆಸ್ ಮೈತ್ರಿಕೂಟವು 40-48 ಸ್ಥಾನಗಳಲ್ಲಿ ಜಯಗಳಿಸಲಿದೆ. ಪಿಡಿಪಿ 6-12 ಹಾಗೂ 6-11 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. .

ಪೀಪಲ್ಸ್ ಪಲ್ಸ್ 23-27 ಸ್ಥಾನಗಳನ್ನು ಬಿಜೆಪಿಗೆ ಸಮೀಕ್ಷೆಯಲ್ಲಿ ನೀಡಿದೆ. ಕಾಂಗ್ರೆಸ್ ಮೈತ್ರಿಗೆ 46-50 ಸ್ಥಾನಗಳು ಹಾಗೂ ಪಿಡಿಪಿ 7-11, ಇತರರು 4-6 ಸ್ಥಾನಗಳು ಗೆಲ್ಲುವ ಸಾಧ್ಯತೆಯಿದೆ.

ರಾಷ್ಟ್ರ ರಾಜಧಾನಿ ದೆಹಲಿಗೆ ಹೊಂದಿಕೊಂಡಂತೆಯೇ ಇರುವ ಹರಿಯಾಣ ಮತ್ತು ಕಣಿವೆ ರಾಜ್ಯವಾದ ಜಮ್ಮು-ಕಾಶ್ಮೀರ – ಮೋದಿ ಆಟಕ್ಕೆ ಬ್ರೇಕ್ ಹಾಕಿವೆ. ಕೇಂದ್ರ ಸರ್ಕಾರದ ಆಡಳಿತ ಕೇಂದ್ರವಾಗಿರುವ ದೆಹಲಿಯ ಸುತ್ತ-ಮುತ್ತಲಿನ ರಾಜ್ಯಗಳಲ್ಲಿಯೂ ಮೋದಿ ಅಲೆ ಕುಸಿದು ಬಿದ್ದಿದೆ ಎಂಬುದನ್ನು ಸಮೀಕ್ಷೆಗಳು ಸೂಚಿಸಿವೆ.

ಪ್ರಧಾನಿ ಮೋದಿ ಅವರು ಹರಿಯಾಣದ ಬಹುತೇಕ ಪಟ್ಟಣಗಳಿಗೆ ಭೇಟಿ ನೀಡಿ, ಬಿಜೆಪಿ ಪರವಾಗಿ ಭಾರೀ ಪ್ರಚಾರ ನಡೆಸಿದ್ದರು. ಬಿಜೆಪಿಯ ಜನಪ್ರಿಯತೆಯನ್ನು ಹೆಚ್ಚಿಸಲು ಹೆಣಗಾಡಿದ್ದರು. ಆದರೆ, ಆಡಳಿತ ವಿರೋಧಿ ಅಲೆಯ ಎದುರು ಮೋದಿ ಅಲೆ ಮೇಲೇಳಲಾಗಿಲ್ಲ.

ರಾಜ್ಯದಲ್ಲಿ ಬಿಜೆಪಿ ವಿರೋಧಿ ಅಲೆಯು ನರೇಂದ್ರ ಮೋದಿಯವರನ್ನೇ ತಿರಸ್ಕರಿಸಬಹುದು. ಆದರೆ, ಇದನ್ನು ಮೋದಿ ಬೆಂಬಲಿಗರು ಮತ್ತು ಅಭಿಮಾನಿಗಳು ಎಂದಿಗೂ ಸಾರ್ವಜನಿಕವಾಗಿ ಒಪ್ಪಿಕೊಳ್ಳುವುದಿಲ್ಲ” ಎಂದು ಬಿಜೆಪಿಯ ಹಿರಿಯ ಮುಖಂಡ ಅಶೋಕ್ ಸುಖೇಜಾ ಹೇಳಿಕೊಂಡಿದ್ದಾರೆ.

2024ರ ಲೋಕಸಭೆ ಚುನಾವಣೆಯಲ್ಲಿ ಹರಿಯಾಣದ 10 ಸ್ಥಾನಗಳಲ್ಲಿ ಐದರಲ್ಲಿ ಮಾತ್ರವೇ ಬಿಜೆಪಿ ಗೆದ್ದಿತ್ತು. ಮತ್ತೈದು ಸ್ಥಾನಗಳನ್ನು ಕಳೆದುಕೊಂಡಿತ್ತು. ಆ ಸ್ಥಾನಗಳನ್ನು ಕಾಂಗ್ರೆಸ್ ದೋಚಿಕೊಂಡಿದ್ದರು. ಲೋಕಸಭಾ ಚುನಾವಣೆಯ ಬಳಿಕ, ರಾಜ್ಯ ಚುನಾವಣೆಯ ವೇಳೆ ಪಕ್ಷದ ನೆಲೆಯನ್ನು ಗಟ್ಟಿ ಮಾಡಿಕೊಳ್ಳಲು ಬಿಜೆಪಿ ಯತ್ನಿಸಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಕಳೆದ 10 ವರ್ಷಗಳಲ್ಲಿ ಮೋದಿ ಮತ್ತು ಬಿಜೆಪಿ ಘೋಷಿಸಿದ್ದ ಹಲವಾರು ಭರವಸೆಗಳು ಇಂದಿಗೂ ಭರವಸೆಯಾಗಿಯೇ ಉಳಿದಿವೆ. ಖಾಯಂ ಉದ್ಯೋಗಗಳ ನಿರೀಕ್ಷೆಯನ್ನೇ ಕಸಿದುಕೊಂಡಿರುವ ಅಗ್ನಿಪಥ್ ಯೋಜನೆಯ ವಿರುದ್ಧವೂ ಯುವಜನರು ಸಿಟ್ಟಾಗಿದ್ದಾರೆ.

ಭಾರತೀಯ ಸೇನೆಗೆ ಹೆಚ್ಚಿನ ಕೊಡುಗೆ ನೀಡುವ ಪ್ರಮುಖ ರಾಜ್ಯಗಳಲ್ಲಿ ಹರಿಯಾಣ ಮೊದಲನೆಯದ್ದು. ತಾವು ಸೇನೆಗಾಗಿ ದುಡಿಯುತ್ತಿದ್ದೇವೆ ಎಂದು ಹರಿಯಾಣಿಗರು ಹೆಮ್ಮೆ ಪಡುತ್ತಾರೆ. ಅಗ್ನಿಪಥ್ ಅವರ ಹಿರಿಮೆಗೆ ಧಕ್ಕೆಯೊಡ್ಡಿದೆ. ಜೊತೆಗೆ, ಕೈಗಾರಿಕಾ ವಲಯವೂ ಸೇರಿದಂತೆ ಔದ್ಯೋಗಿಕ ಕ್ಷೇತ್ರಗಳಲ್ಲಿ ಹರಿಯಾಣ ಯುವಜನರಿಗೆ ಉದ್ಯೋಗದ ಭರವಸೆಯೇ ಇಲ್ಲದಾಗಿದೆ. ಉದ್ಯೋಗ ಹರಸಿ ವಲಸೆ ಹೋಗುವಂತೆ ಮಾಡಿದೆ.

ಜೊತೆಗೆ, ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿದ್ದ ಮೋದಿ ಸರ್ಕಾರ, ಆ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುವಾಗ ರೈತರ ಮೇಲೆ ಕ್ರೌರ್ಯ ಮೆರೆದ ಹರಿಯಾಣ ಬಿಜೆಪಿ ಸರ್ಕಾರದ ವಿರುದ್ಧ ರೈತರೂ ಸೇರಿದಂತೆ ಹರಿಯಾಣದ ಜನರು ಸಿಟ್ಟಾಗಿದ್ದಾರೆ. ಅಲ್ಲದೆ, ಕೋಮು ಗಲಭೆಗಳು, ದಲಿತರು-ಮಹಿಳೆಯರ ಮೇಲಿನ ದೌರ್ಜನ್ಯಗಳು, ಭ್ರಷ್ಟಾಚಾರದ ಆರೋಪಗಳು ಕೂಡ ಬಿಜೆಪಿ ವಿರುದ್ಧ ಸಿಡಿದೇಳುವಂತೆ ಮಾಡಿವೆ.  ಇದೆಲ್ಲವೂ, ಮೋದಿ ಅವರ ಮೇಲಿನ ವಿಶ್ವಾಸ ಕುಂದುವಂತೆ ಮಾಡಿದೆ.

ಇನ್ನು, ರಾಹುಲ್ ಗಾಂಧಿಯವರು ತಮ್ಮ ಅಮೇರಿಕಾ ಪ್ರವಾಸದ ಸಮಯದಲ್ಲಿ, ಹರಿಯಾಣದ ಯುವಕನನ್ನು ಭೇಟಿ ಮಾಡಿದ್ದರು. ಬಳಿಕ ಹರಿಯಾಣಕ್ಕೆ ಭೇಟಿ ನೀಡಿ, ಯುವಜನರ ಮನೆಗಳಿಗೆ ಹೋಗಿದ್ದರು. ಯುವಜನರ ಪರವಾಗಿ ಕಾಂಗ್ರೆಸ್ ರಾಜ್ಯದಲ್ಲಿ ಸಾಕಷ್ಟು ಯೋಜನೆಗಳನ್ನು ತರುವುದಾಗಿ ಘೋಷಿಸಿದರು. ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟದಲ್ಲಿ ರೈತರ ಪರವಾಗಿದ್ದ ಕಾಂಗ್ರೆಸ್, ಎಂಎಸ್ಪಿ ಜಾರಿಗೊಳಿಸಿ, ಅದಕ್ಕೆ ಕಾನೂನು ಖಾತರಿಕೊಡುವ ಭರವಸೆಯನ್ನೂ ನೀಡಿದೆ. ಮಹಿಳೆರಿಗಾಗಿ ಗ್ಯಾರಂಟಿಗಳನ್ನು ಘೋಷಿಸಿದೆ. ಮಾತ್ರವಲ್ಲದೆ, ಹರಿಯಾಣ ಕಾಂಗ್ರೆಸ್‌ ನಲ್ಲಿದ್ದ ಭಿನ್ನಾಭಿಪ್ರಾಯವನ್ನು ಶಮನಗೊಳಿಸಿ, ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯಲು ರಾಹುಲ್ ಶ್ರಮಿಸಿದರು. ಇದು, ಕಾಂಗ್ರೆಸ್‌ಗೆ ಮತ್ತಷ್ಟು ವಿಶ್ವಾಸ ಹೆಚ್ಚಿಸಿತು. ಹೀಗಾಗಿಯೇ, ರಾಜ್ಯದಲ್ಲಿ ಕಾಂಗ್ರೆಸ್ ಸುನಾಮಿ ಎದ್ದಿದೆ. ಸ್ವಂತ ಬಲದಲ್ಲಿ ಸರ್ಕಾರ ರಚಿಸಲಿದೆ. ಸಮೀಕ್ಷೆಗಳೂ ಇದನ್ನೇ ಹೇಳುತ್ತಿವೆ.

ಇನ್ನು, ಜಮ್ಮು ಮತ್ತು ಕಾಶ್ಮೀರದಲ್ಲಿ, ಜಮ್ಮು ಪ್ರದೇಶವನ್ನು ಹೊರತು ಪಡಿಸಿ ಬಿಜೆಪಿಗೆ ನೆಲೆಯಿಲ್ಲ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು 2019ರಲ್ಲಿ ಮೋದಿ ಸರ್ಕಾರ ರದ್ದುಗೊಳಿಸಿ, ರಾಜ್ಯವನ್ನು ಇಬ್ಬಾಗಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿತು. ನಿಷೇಧಾಜ್ಞೆಗಳು, ಗೃಹ ಬಂಧನಗಳನ್ನು ವಿಧಿಸಿ ಅಲ್ಲಿನ ಜನರ ಧ್ವನಿಯನ್ನು ನಿರ್ದಯವಾಗಿ ಹತ್ತಿಕ್ಕಿದೆ. ಬರೋಬ್ಬರಿ 4,000ಕ್ಕೂ ಹೆಚ್ಚು ಕಾಶ್ಮೀರಿಗಳನ್ನು ಮೋದಿ ಸರ್ಕಾರ ಬಂಧಿಸಿದೆ.

ಪ್ರಧಾನಿ ಮೋದಿಯವರು ತಮ್ಮ ಅಜ್ಞಾನ ಮತ್ತು ಪೂರ್ವಾಗ್ರಹದಿಂದಾಗಿ ಕಾಶ್ಮೀರದ ಮೇಲೆ ಕ್ರೌರ್ಯ ಎಸಗಿದ್ದಾರೆ ಎಂದು ಕಾಶ್ಮೀರಿ ಪಂಡಿತರೂ ಸೇರಿದಂತೆ ಜಮ್ಮು-ಕಾಶ್ಮೀರದ ಜನರು ಆಕ್ರೋಶಗೊಂಡಿದ್ದಾರೆ. ಅವರ ಆಕ್ರೋಶವನ್ನು ಇಂದಿನ ವಿಧಾನಸಭಾ ಚುನಾವಣೆಯಲ್ಲಿ ಹೊರಹಾಕಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳನ್ನೇ ಕಣಕ್ಕಿಳಿಸದೆ, ಚುನಾವಣಾ ಕಣದಿಂದ ಓಡಿಹೋಗಿತ್ತು. ಇದೀಗ, ಮತ್ತೆ ಓಡಿಹೋಗಲಾಗದ ಬಿಜೆಪಿ, ಅನಿವಾರ್ಹವಾಗಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರಿನಲ್ಲಿ ಅಬ್ಬರಿಸಿದ ವರುಣ: 36 ಮಿಮೀ ದಾಖಲು, ಇಂದು ಭಾರಿ ಮಳೆಯ ಎಚ್ಚರಿಕೆ

ಮೋದಿ ಅವರು ಮುಖವಿಲ್ಲದ ಮುಖವಿಟ್ಟುಕೊಂಡು ಕಾಶ್ಮೀರಿ ಜನರ ಎದುರು ನಿಂತು ಮತ ಯಾಚಿಸಿದ್ದಾರೆ. ಆದರೆ, ಕಾಶ್ಮೀರಿ ಜನರು ಮೋದಿ ಮುಖ ನೋಡಿ ಬಿಜೆಪಿ ಮತ ಹಾಕುವ ಮಾತೇ ಇಲ್ಲ ಎಂದಿದ್ದಾರೆ. ತಮ್ಮ ನೆಲದಲ್ಲಿ ತಮ್ಮದೇ ಹಕ್ಕುಗಳನ್ನು ಕಸಿದುಕೊಂಡ ಬಿಜೆಪಿಗೆ ಇನ್ನೆಂದು ರಾಜ್ಯದಲ್ಲಿ ನೆಲೆ ಕೊಡುವುದಿಲ್ಲ ಎಂದಿದ್ದಾರೆ. ಬಿಜೆಪಿ ಹೀನಾಯವಾಗಿ ಮಣ್ಣು ಮುಕ್ಕಲಿದೆ ಎಂಬುದನ್ನು ಸೂಚಿಸಿದ್ದಾರೆ.

ಕಾಂಗ್ರೆಸ್ ಮತ್ತು ಎನ್ಸಿ ಮೈತ್ರಿಕೂಟವು ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯತ್ವವನ್ನು ಮರಳಿ ತರುವುದರ ಜೊತೆಗೆ, ಅಲ್ಲಿನ ಜನರ ಅಭಿವೃದ್ಧಿ, ಹಕ್ಕುಗಳಿಗಾಗಿ ಹೋರಾಟ ಮಾಡುವ, ದುಡಿಯುವ ಭರವಸೆಯನ್ನು ಹುಟ್ಟುಹಾಕಿವೆ. ರಾಹುಲ್ ಗಾಂಧಿ ಅವರು ಜಮ್ಮು-ಕಾಶ್ಮೀರದ ಜನರಿಗೆ ಭರವಸೆಯ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ, ಬಿಜೆಪಿ, ಮೋದಿ ವಿರೋಧಿ ಅಲೆ ಹಾಗೂ ಕಾಂಗ್ರೆಸ್ ಭರವಸೆಗಳು ಕಾಶ್ಮೀರದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೇರುವ ಅವಕಾಶ ನೀಡಿವೆ. ಬಿಜೆಪಿಯನ್ನು ಕಣಿವೆ ರಾಜ್ಯ ಹೊರದಬ್ಬಲಿದೆ. ಇದನ್ನು ಚುನಾವಣೋತ್ತರ ಸಮೀಕ್ಷೆಗಳೂ ಸೂಚಿಸಿವೆ.

ಆದಾಗ್ಯೂ, ಜಮ್ಮು-ಕಾಶ್ಮೀರದ ನಿಖರ ಫಲಿತಾಂಶಕ್ಕಾಗಿ ಅಕ್ಟೋಬರ್ 8ರವರೆಗೆ ಹಾಗೂ ಹರಿಯಾಣದ ರಿಸಲ್ಟ್ಗಾಗಿ ಅಕ್ಟೋಬರ್ 10ರವರೆಗೆ ಕಾಯಬೇಕಿದೆ.

e4c01bd9b2970ccfecae47b47af65a36?s=150&d=mp&r=g
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ರಸ್ತೆ ತುಂಬಾ ತಗ್ಗು ಗುಂಡಿಗಳದ್ದೇ ಕಾರುಬಾರು; ಸವಾರರ ಜೀವಕ್ಕೆ ‘ಗ್ಯಾರಂಟಿ’ಯೇ ಇಲ್ಲ!

ರಾಯಚೂರಿನ ಅನ್ವರಿ - ಹಟ್ಟಿ ಚಿನ್ನದ ಗಣಿ ಪಟ್ಟಣಕ್ಕೆ ಹೋಗುವ ಮುಖ್ಯ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

Download Eedina App Android / iOS

X