- ಸಂತ್ರಸ್ತಳಾದ ಹಿಂದೂ ಹೆಣ್ಣುಮಗಳಿಗೆ ಶೋಭಾ ಕರಂದ್ಲಾಜೆ ನ್ಯಾಯ ಕೇಳುವುದು ಯಾವಾಗ?
- ಬಿಜೆಪಿ ಹೋರಾಟ, ಪ್ರತಿಭಟನೆಗಳನ್ನು ಯಾವಾಗ ಹಮ್ಮಿಕೊಳ್ಳುತ್ತದೆ? ಕಾಂಗ್ರೆಸ್ ಟ್ವೀಟ್
ಉಡುಪಿಯ ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ಮೊಬೈಲ್ ಇಟ್ಟ ಘಟನೆಯ ಬಗ್ಗೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ, ಕೋಲಾಹಲ ಎಬ್ಬಿಸಿದ್ದ ಬೆನ್ನಲ್ಲೇ, ಮಂಗಳೂರಿನಲ್ಲಿ ಸಂಘಪರಿವಾರದ ಸಕ್ರಿಯ ಕಾರ್ಯಕರ್ತನೋರ್ವ ಶೌಚಾಲಯದಲ್ಲಿ ಮೊಬೈಲ್ ಇಟ್ಟು ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ.
ಬಂಧಿತ ಯುವಕನನ್ನು ಮುಲ್ಕಿ ಸಮೀಪದ ಪಕ್ಷಿಕೆರೆ ಹೊಸಕಾಡು ನಿವಾಸಿ ಸುಮಂತ್ ಪೂಜಾರಿ (22) ಎಂದು ಗುರುತಿಸಲಾಗಿದೆ. ಈತ ಹಿಂದೂ ಜಾಗರಣ ವೇದಿಕೆಯ ಸ್ಥಳೀಯ ಘಟಕದ ಸಕ್ರಿಯ ಕಾರ್ಯಕರ್ತ ಎಂದು ತಿಳಿದು ಬಂದಿದೆ. ಆದರೆ ಈವರೆಗೂ ಬಿಜೆಪಿ ಕಡೆಯಿಂದ ಏನೂ ಪ್ರತಿಕ್ರಿಯೆಗಳಾಗಲೀ, ಹೇಳಿಕೆಗಳಾಗಲೀ ಬಂದಿಲ್ಲ.
ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಬಿಜೆಪಿಯ ಕಾಲೆಳೆದಿರುವ ಕಾಂಗ್ರೆಸ್, ‘ಸಂಘಪರಿವಾರದಿಂದ ವಿಡಿಯೋ ಚಿತ್ರೀಕರಣದ ತರಬೇತಿ ಪಡೆದವನೊಬ್ಬ ಬಾತ್ ರೂಮಲ್ಲಿ ಮೊಬೈಲ್ ಕ್ಯಾಮೆರಾ ಇಟ್ಟು ಸಿಕ್ಕಿ ಬಿದ್ದಿರುವ ಸುದ್ದಿ ಇನ್ನೂ ಬಿಜೆಪಿ ಕಚೇರಿಯನ್ನು ತಲುಪಿಲ್ಲವೇ?’ ಎಂದು ಪ್ರಶ್ನಿಸಿದೆ.
ಬಿಜೆಪಿ ಹೋರಾಟ, ಪ್ರತಿಭಟನೆಗಳನ್ನು ಯಾವಾಗ ಹಮ್ಮಿಕೊಳ್ಳುತ್ತದೆ? ಈತನಿಂದ ಸಂತ್ರಸ್ತಳಾದ ಹಿಂದೂ ಹೆಣ್ಣುಮಗಳಿಗೆ ಶೋಭಾ ಕರಂದ್ಲಾಜೆ ನ್ಯಾಯ ಕೇಳುವುದು ಯಾವಾಗ? ಈ ಪ್ರಕರಣದಲ್ಲಿ ಬಿಜೆಪಿ ರಾಜ್ಯಪಾಲರಿಗೆ ದೂರು ನೀಡುವುದಿಲ್ಲವೇ? ಎಂದು ಪ್ರಶ್ನಿಸಿದೆ.
ಇದನ್ನು ಓದಿದ್ಧೀರಾ? ಸ್ನಾನದ ವಿಡಿಯೋ ಪ್ರಕರಣ : ಸಂಘಪರಿವಾರದ ಕಾರ್ಯಕರ್ತನ ವಿರುದ್ಧ ಎಫ್‌ಐಆರ್, ನ್ಯಾಯಾಂಗ ಬಂಧನ
ಘಟನೆ ಏನು?
ಮಂಗಳೂರು ನಗರ ಹೊರವಲಯದ ಮುಲ್ಕಿಯ ಪಕ್ಷಿಕರೆಯಲ್ಲಿ ಪಕ್ಕದ ಮನೆಯ ಯುವತಿಯ ಸ್ನಾನದ ವಿಡಿಯೋಗಾಗಿ ಹಿಂದೂ ಜಾಗರಣ ವೇದಿಕೆಯ ಸ್ಥಳೀಯ ಘಟಕದ ಸಕ್ರಿಯ ಕಾರ್ಯಕರ್ತ ಸುಮಂತ್ ಪೂಜಾರಿ ಮೊಬೈಲ್ ಇಟ್ಟಿದ್ದ. ಆದರೆ, ಯುವತಿಯ ಬದಲಾಗಿ ಯುವತಿಯ ಅಣ್ಣ ಬಚ್ಚಲು ಮನೆಗೆ ಸ್ನಾನಕ್ಕಾಗಿ ಬಂದಿದ್ದ. ಇದೇ ವೇಳೆ ವಿಡಿಯೋ ರೆಕಾರ್ಡಿಂಗ್‌ಗೆ ಇಟ್ಟಿದ್ದ ಮೊಬೈಲ್ ಅನ್ನು ತೆಗೆಯಲೆಂದು ಸುಮಂತ್ ಬಂದಾಗ ಏನೋ ಶಬ್ದವಾಗಿದೆ. ಬಳಿಕ ಮೊಬೈಲ್ ಇರುವುದನ್ನು ಗಮನಿಸಿದ ಯುವತಿಯ ಅಣ್ಣ, ರೆಡ್ ಹ್ಯಾಂಡ್ ಆಗಿ ಹಿಡಿದು ಆರೋಪಿ ಸುಮಂತ್ನನ್ನು ಪೊಲೀಸರಿಗೆ ಒಪ್ಪಿಸಿದ್ದರು.
ಆ ಬಳಿಕ ಪೊಲೀಸರು ‘ಸ್ಟೇಷನ್ ಬೇಲ್’ನ ಮೇಲೆ ಬಿಟ್ಟು ಕಳುಹಿಸಿದ್ದಾರೆ ಎಂದೂ ವರದಿಯಾಗಿತ್ತು. ಸಂಘಪರಿವಾರದ ನಾಯಕರ ಒತ್ತಡಕ್ಕೆ ಮಣಿದ ಪೊಲೀಸರು, ಯುವಕನ ವಿರುದ್ಧ ಠಾಣೆಯಲ್ಲೇ ಜಾಮಿನು ನೀಡಬಹುದಾದ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು ಎನ್ನಲಾಗಿತ್ತು.
ಘಟನೆ ಕಳೆದ ಬುಧವಾರ ರಾತ್ರಿ 11 ಗಂಟೆಗೆ ನಡೆದಿದ್ದು, ಶುಕ್ರವಾರ ತಡವಾಗಿ ಬೆಳಕಿಗೆ ಬಂದಿತ್ತು. ಈ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದ ಬೆನ್ನಲ್ಲೇ, ಆರೋಪಿಯನ್ನು ಮತ್ತೆ ಬಂಧಿಸಿ, ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಸದ್ಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.