ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಸಂಚಯ್ ಪಾಟೀಲ್ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ.
ಬೆಳಗಾವಿಯ ಆದರ್ಶ ನಗರದಲ್ಲಿರುವ ಸಂಜಯ್ ಪಾಟೀಲ್ ನಿವಾಸದ ಎದುರು ಕೆಪಿಸಿಸಿ ಸದಸ್ಯೆ ಆಯಿಷಾ ಸನದಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಸಂಜಯ್ ಅವರ ಭಾವಚಿತ್ರಕ್ಕೆ ಹೂವಿನ ಹಾರ, ಬಳೆ ಇಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ, ಬೆಳಗಾವಿ ತಾಲೂಕಿನ ಹಿಂಡಲಗಾದಲ್ಲಿ ನಡೆದಿದ್ದ ಬಿಜೆಪಿ ಸಮಾವೇಶದಲ್ಲಿ ಮಾತನಡಿದ್ದ ಸಂಜಯ್, “ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕ್ಷೇತ್ರದಲ್ಲಿ ನಡೆಯುತ್ತಿರುವ ಈ ಸಮಾವೇಶದಲ್ಲಿ ಅತೀ ಹೆಚ್ಚು ಮಹಿಳೆಯರು ಭಾಗಿಯಾಗಿದ್ದೀರಿ. ಇದರಿಂದ ಅವರಿಗೆ ಇಂದು ರಾತ್ರಿ ನಿದ್ದೆ ಬರುವುದಿಲ್ಲ. ಅದರಲ್ಲೂ ರಮೇಶ್ ಜಾರಕಿಹೊಳಿ ಕೂಡ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ, ಅವರು ಮಾತ್ರೆ ಜೊತೆಗೆ ಒಂದು ಪೆಗ್ ಎಕ್ಸ್ಟ್ರಾ ಹಾಕಿಕೊಳ್ಳಬೇಕು” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಅವರ ಹೇಳಿಕೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿರುವ ಕಾಂಗ್ರೆಸ್ ಕಾರ್ಯಕರ್ತರು ಸಂಜಯ್ ಪಾಟೀಲ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಪ್ರತಿಭಟನೆಯ ವಿಡಿಯೋ ಮಾಡುತ್ತಿದ್ದ ಸಂಜಯ್ ಅವರ ಕಾರು ಚಾಲಕನನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರತಿಭಟನೆ ಹಿನ್ನೆಲೆ, ಸಂಜಯ್ ನಿವಾಸ ಬಳಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ್ ತೆರಳಿ, ಪ್ರತಿಭಟನಾಕಾರರ ಮನವೊಲಿಸಲು ಯತ್ನನಿಸಿದ್ದಾರೆ. ಆದರೆ, ಸಂಜಯ್ ಕ್ಷಮೆಯಾಚಿಸಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ.