ಹೈದರಾಬಾದ್ ಫಾರ್ಮಾ ಸಿಟಿ ಮತ್ತು ಶಂಷಾಬಾದ್ ವಿಮಾನ ನಿಲ್ದಾಣ ಮೆಟ್ರೋ ಯೋಜನೆಗಳ ಬದಲಾವಣೆಯಿಂದ ಮುತ್ತಿನ ನಗರಿಯ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಲಕ್ಷಾಂತರ ಕೋಟಿ ರೂಪಾಯಿ ನಷ್ಟವುಂಟಾಗಲಿದೆ ಎನ್ನಲಾಗಿದೆ. ಅಲ್ಲಿ ರಿಯಲ್ ಎಸ್ಟೇಟ್ ಪತನವನ್ನು ತಡೆಯಲು ಕಾಂಗ್ರೆಸ್ ಸರ್ಕಾರ ಹೆಚ್ಚು ದಿನ ಅಧಿಕಾರದಲ್ಲಿರುವುದಿಲ್ಲ ಎಂದು ಕೆಸಿಆರ್ ಮತ್ತು ಅವರ ಬಿಆರ್‌ಎಸ್ ಪಕ್ಷದವರು ಪ್ರಚಾರ ಮಾಡುತ್ತಿದ್ದಾರೆ ಎನ್ನಲಾಗಿದೆ.
1994-99ರ ಅವಧಿಯಲ್ಲಿ ಕರ್ನಾಟಕದಲ್ಲಿ ಜನತಾ ದಳ ಅಧಿಕಾರದಲ್ಲಿತ್ತು. ಆಗ ರಾಮನಗರ-ಬಿಡದಿ ನಡುವೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಬೇಕೆನ್ನುವುದು ದೇವೇಗೌಡರ ಬಯಕೆಯಾಗಿತ್ತು. ಅವರ ಬೀಗರಾಗಿದ್ದ ಡಿ ಸಿ ತಮ್ಮಣ್ಣ ಆಗ ಕೆಐಎಡಿಬಿ ಅಧ್ಯಕ್ಷರಾಗಿದ್ದರು. ಅವರ ನೆರವಿನಿಂದ ದೇವೇಗೌಡರ ಕುಟುಂಬ ರಾಮನಗರ, ಬಿಡದಿ ಸುತ್ತಮುತ್ತ ನೂರಾರು ಎಕರೆ ಜಮೀನು ಖರೀದಿ ಮಾಡಿತ್ತು ಎಂದು ಅವರ ವಿರೋಧಿಗಳು ಗುಲ್ಲೆಬ್ಬಿಸಿದ್ದರು. ನಂತರ ಬಂದ ಎಸ್ ಎಂ ಕೃಷ್ಣ ಸರ್ಕಾರ, ಗೌಡರ ಕುಟುಂಬ ನೂರಾರು ಎಕರೆ ಸ್ವಾಧೀನ ಮಾಡಿಕೊಂಡಿದೆ ಎನ್ನುವ ಮಾಹಿತಿಯ ಚುಂಗು ಹಿಡಿದು ವಿಮಾನ ನಿಲ್ದಾಣಕ್ಕೆ ಬಿಡದಿ ಬೇಡ ಎಂದು ದೇವನಹಳ್ಳಿ ಬಳಿ ಜಾಗ ನಿಗದಿ ಮಾಡಿದ್ದರು.
ಆಂಧ್ರಪ್ರದೇಶದಲ್ಲಿಯೂ ಹೀಗೇ ಆಗಿತ್ತು; ಸಿಎಂ ಆಗಿದ್ದ ಚಂದ್ರಬಾಬು ನಾಯ್ಡು ಹೊಸ ರಾಜ್ಯಕ್ಕೆ ರಾಜಧಾನಿ ನಿರ್ಮಿಸಲು ವಿಜಯವಾಡ ಮತ್ತು ಗುಂಟೂರು ನಗರಗಳ ಮಧ್ಯೆ, ಕೃಷ್ಣಾ ನದಿಯ ದಂಡೆಯ ಮೇಲೆ ಸುಮಾರು 50 ಸಾವಿರ ಎಕರೆ ಭೂಮಿಯನ್ನು ನಿಗದಿ ಮಾಡಿದ್ದರು. ಅದರ ಸುತ್ತಲಿನ ಸಾವಿರಾರು ಎಕರೆಯನ್ನು ನಾಯ್ಡು ಕುಟುಂಬ ಕೊಂಡುಕೊಂಡಿದೆ ಎನ್ನುವ ವದಂತಿ ಇತ್ತು. ಆಂಧ್ರದಲ್ಲಿ ವಿಧಾನಸಭಾ ಚುನಾವಣೆ ನಡೆದು, ವೈ ಎಸ್ ಜಗನ್‌ಮೋಹನ್ ರೆಡ್ಡಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಅಮರಾವತಿ ಒಂದನ್ನೇ ರಾಜಧಾನಿ ಮಾಡುವುದು ಬೇಡ, ಅದರ ಜೊತೆಗೆ ಇತರ ಮೂರು ನಗರಗಳನ್ನು ರಾಜಧಾನಿಗಳನ್ನಾಗಿ ಮಾಡೋಣ ಎಂದು ಜಗನ್ ಘೋಷಿಸಿದರು. ನಂತರ ಈ ವಿಚಾರ ಕೋರ್ಟ್ ಮೆಟ್ಟಿಲೇರಿತು. ಅದು, ಇರಲಿ. ನಾಯ್ಡು ಕುಟುಂಬದ ಸಾವಿರಾರು ಎಕರೆ ಭೂಮಿ ಒಡೆತನವನ್ನು ಗಮನದಲ್ಲಿಟ್ಟುಕೊಂಡೇ ವೈ ಎಸ್ ಜಗನ್‌ಮೋಹನ್ ರೆಡ್ಡಿ ಅಂಥದ್ದೊಂದು ನಿರ್ಧಾರ ತೆಗೆದುಕೊಂಡಿದ್ದರು ಎನ್ನುವುದು ಈಗ ಗುಟ್ಟೇನಲ್ಲ.
ಈಗ ತೆಲಂಗಾಣದಲ್ಲೂ ಅಂಥದ್ದೇ ಬೆಳೆವಣಿಗೆ ಕಂಡುಬಂದಿದೆ. ಹಿಂದಿನ ಕೆಸಿಆರ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ ಹೈದರಾಬಾದ್ ಫಾರ್ಮಾ ಸಿಟಿ (ಎಚ್‌ಪಿಸಿ) ಯೋಜನೆಯ ಮರುಪರಿಶೀಲನೆಗೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮುಂದಾಗಿದ್ದಾರೆ. ಇದಲ್ಲದೇ ಕೆಸಿಆರ್ ಅವಧಿಯ ಹಲವು ಮಹತ್ವದ ಯೋಜನೆಗಳ ಮರುಪರಿಶೀಲನೆಗೂ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಇದರಿಂದಾಗಿ ಹೈದರಾಬಾದ್‌ನ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಅಲ್ಲೋಲಕಲ್ಲೋಲ ಉಂಟಾಗಿದೆ.
ಹೈದರಾಬಾದ್‌ನಲ್ಲಿ ಮಾಹಿತಿ ತಂತ್ರಜ್ಞಾನದ ನಂತರ ಅತಿ ಹೆಚ್ಚು ಜನರಿಗೆ ಉದ್ಯೋಗ ನೀಡಿರುವುದು ಫಾರ್ಮಾ ಇಂಡಸ್ಟ್ರಿ. ಹೈದರಾಬಾದ್ ಸುತ್ತಮುತ್ತ ಭಾರಿ ಹಾಗೂ ಮಧ್ಯಮ ಗಾತ್ರದ ಫಾರ್ಮಾ ಕಂಪನಿಗಳಿವೆ. ಸಗಟು ಔಷಧದ ರಾಜಧಾನಿ ಎಂದೇ ಹೆಸರು ಪಡೆದಿದೆ ಮುತ್ತಿನ ನಗರಿ. ಮಾಲಿನ್ಯದ ಕಾರಣಕ್ಕೆ ಅನೇಕ ಫಾರ್ಮಾ ಕಂಪನಿಗಳಿಗೆ ಬೀಗ ಬಿದ್ದಿರುವ ನಿದರ್ಶನಗಳೂ ಇವೆ. ತೆಲಂಗಾಣದಲ್ಲಿ ಫಾರ್ಮಾ ಇಂಡಸ್ಟ್ರಿಯನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಕೆಸಿಆರ್ ಸರ್ಕಾರ ಹೈದರಾಬಾದ್ ಹೊರವಲಯದ ರಂಗಾರೆಡ್ಡಿ ಜಿಲ್ಲೆಯ ಮೂರು ಮಂಡಲ್‌ಗಳ ವ್ಯಾಪ್ತಿಯಲ್ಲಿ ಫಾರ್ಮಾ ಸಿಟಿ ರೂಪಿಸಲು ಸಿದ್ಧತೆ ನಡೆಸಿತ್ತು. ಹೈದರಾಬಾದ್ ಫಾರ್ಮಾ ಸಿಟಿ (ಎಚ್‌ಪಿಸಿ) ಹೆಸರಿನ ಇದು 10 ಬಿಲಿಯನ್ ಡಾಲರ್ (₹83,320 ಕೋಟಿ) ಮೊತ್ತದ ಭಾರಿ ಯೋಜನೆ. ಇದು ಕೆಸಿಆರ್ ಮಗ ಕೆಟಿಆರ್ ಅವರ ಮಹತ್ವಾಕಾಂಕ್ಷಿ ಯೋಜನೆಯೂ ಆಗಿತ್ತು. ಸರ್ಕಾರವು ಈ ಯೋಜನೆಗಾಗಿ 18000 ಎಕರೆ ಜಮೀನನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದು, ಅದರ ಪೈಕಿ ಈಗಾಗಲೇ 1000 ಎಕರೆ ಭೂಮಿಯನ್ನು ವಶಕ್ಕೆ ಪಡೆದಿತ್ತು. ಉಳಿದ ಭೂಮಿ ಸ್ವಾಧೀನಕ್ಕೆ ಭೂ ಮಾಲೀಕರು ಭಾರಿ ವಿರೋಧ ವ್ಯಕ್ತಪಡಿಸಿದ್ದರು. ಕೆಲವರು ನ್ಯಾಯಾಂಗದ ಮೆಟ್ಟಿಲು ಕೂಡ ಹತ್ತಿದ್ದರು. ರಂಗಾರೆಡ್ಡಿ ಜಿಲ್ಲೆಯಲ್ಲಿ 250 ಎಕರೆ ಭೂ ಸ್ವಾಧೀನಕ್ಕೆ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಕೋರ್ಟ್ ರದ್ದುಪಡಿಸಿತ್ತು. ಆದರೂ ಕೆಸಿಆರ್ ಸರ್ಕಾರ ಯೋಜನೆಯನ್ನು ಜಾರಿ ಮಾಡಿಯೇ ತೀರುವುದಾಗಿ ಪಣ ತೊಟ್ಟಿತ್ತು.
500 ಫಾರ್ಮಾ ಕಂಪನಿಗಳು ಇಲ್ಲಿ ಕಚೇರಿ ತೆರೆಯಲು ಉತ್ಸುಕವಾಗಿದ್ದವು ಮತ್ತು ನೂರಕ್ಕೂ ಅಧಿಕ ಕಂಪನಿಗಳಿಗೆ ಭೂಮಿ ಮಂಜೂರು ಮಾಡಲು ಸಿದ್ಧತೆಗಳು ನಡೆದಿದ್ದವು. ಸ್ಥಳೀಯ ಹಾಗೂ ಜಾಗತಿಕ ಮಟ್ಟದ ಔಷಧ ತಯಾರಿಕಾ ಕಂಪನಿಗಳು ಇಲ್ಲಿ ತಮ್ಮ ಘಟಕಗಳನ್ನು ತೆರೆಯಲು ಸಿದ್ಧವಾಗಿವೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಕೆ ಟಿ ರಾಮರಾವ್ ಚುನಾವಣೆಗೆ ಕೆಲವೇ ದಿನಗಳ ಮುಂದೆ ಹೇಳಿದ್ದರು.
ಕೆಸಿಆರ್ ಸರ್ಕಾರ 2017ರಲ್ಲಿಯೂ ವಿವಿಧ ಯೋಜನೆಗಳಿಗಾಗಿ ಇದೇ ರೀತಿ 20 ಸಾವಿರ ಎಕರೆಯನ್ನು ಬಲವಂತವಾಗಿ ರೈತರಿಂದ ವಶಪಡಿಸಿಕೊಂಡಿತ್ತು. ಈ ಮೂಲಕ ಹಿಂದೆ ಕಾಂಗ್ರೆಸ್ ಸರ್ಕಾರ ಬಡವರಿಗೆ ನೀಡಿದ್ದ ಭೂಮಿಯನ್ನು ಕಿತ್ತುಕೊಂಡಿದೆ ಎಂದು ಸೀತಕ್ಕ ಸೇರಿದಂತೆ ಕೆಲವು ಕಾಂಗ್ರೆಸ್ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದರು. ಹೈದರಾಬಾದ್ ಫಾರ್ಮಾ ಸಿಟಿ ವಿವಾದವು ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಒಂದು ಮುಖ್ಯ ವಿಷಯವಾಗಿತ್ತು. ಕಾಂಗ್ರೆಸ್ ಸರ್ಕಾರ ಬಂದರೆ, ಫಾರ್ಮಾ ಸಿಟಿ ಪ್ರಾಜೆಕ್ಟ್ ಅನ್ನು ರದ್ದುಪಡಿಸುವುದಾಗಿ ರೇವಂತ್ ರೆಡ್ಡಿ ಭರವಸೆ ನೀಡಿದ್ದರು.
ಚುನಾವಣೆಯಲ್ಲಿ ಬಿಆರ್‌ಎಸ್ ಸೋತು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಫಾರ್ಮಾ ಸಿಟಿ ಯೋಜನೆಯ ಮರುಪರಿಶೀಲನೆಗೆ ಮುಂದಾಗಿದೆ. ಫಾರ್ಮಾ ಸಿಟಿಗೆ ಗುರುತಿಸಲಾಗಿದ್ದ ಜಾಗದಲ್ಲಿ ಮೆಗಾ ಟೌನ್ ಶಿಪ್ ಸ್ಥಾಪಿಸಲು ಹಾಗೂ ಫಾರ್ಮಾ ಸಿಟಿಯನ್ನು ನಗರದಿಂದ ದೂರಕ್ಕೆ ಮಾಲಿನ್ಯದ ಸಮಸ್ಯೆ ಜನರನ್ನು ಬಾಧಿಸದಂಥ ಜಾಗಕ್ಕೆ ಸ್ಥಳಾಂತರಿಸುವ ಬಗ್ಗೆ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ರೇವಂತ್ ರೆಡ್ಡಿ ಸೂಚಿಸಿದ್ದಾರೆ. ಹಾಗೆಯೇ ಕೆಸಿಆರ್ ಸರ್ಕಾರದ ಮತ್ತೊಂದು ಮೆಗಾ ಪ್ರಾಜೆಕ್ಟ್ ಆಗಿದ್ದ ಶಂಷಾಬಾದ್ ವಿಮಾನ ನಿಲ್ದಾಣದ ಮೆಟ್ರೋ ಮಾರ್ಗಗಳನ್ನೂ ಕೂಡ ಬದಲಿಸಲು ರೇವಂತ್ ರೆಡ್ಡಿ ಮುಂದಾಗಿದ್ದಾರೆ. ರಾಯದುರ್ಗಂ ಮೂಲಕ ಶಂಷಾಬಾದ್ ಮೆಟ್ರೋ ಮಾರ್ಗಗಳನ್ನು ಬದಲಾವಣೆ ಮಾಡುತ್ತಿರುವುದಾಗಿ ಸಿಎಂ ರೇವಂತ್ ರೆಡ್ಡಿ ಘೋಷಿಸಿದ್ದಾರೆ. ರಾಯದುರ್ಗದ ಬದಲಿಗೆ ಪಾತಬಸ್ತಿ ಅಥವಾ ಎಲ್‌ಬಿ ನಗರದಿಂದ ಶಂಷಾಬಾದ್‌ಗೆ ಮೆಟ್ರೋ ಮಾರ್ಗವನ್ನು ವಿಸ್ತರಿಸುವುದಾಗಿ ಅವರು ತಿಳಿಸಿದ್ದಾರೆ.
ಉದ್ದೇಶಿತ ಹೈದರಾಬಾದ್ ಫಾರ್ಮಾ ಸಿಟಿಗೆ ಹೊಂದಿಕೊಂಡಂತೆ ಸಾವಿರಾರು ಎಕರೆ ಜಮೀನನ್ನು ಕೆಸಿಆರ್ ಕುಟುಂಬದ ಸದಸ್ಯರು ಖರೀದಿಸಿದ್ದಾರೆ ಎನ್ನುವ ಆರೋಪಗಳಿವೆ. ಫಾರ್ಮಾ ಸಿಟಿ ನಿರ್ಮಾಣವಾದರೆ, ಸಹಜವಾಗಿಯೇ ಅದರ ಸುತ್ತಲಿನ ಭೂಮಿಗೆ ಬಂಗಾರದ ಬೆಲೆ ಬರುತ್ತದೆನ್ನುವುದು ಅವರ ಲೆಕ್ಕಾಚಾರವಾಗಿತ್ತು ಎನ್ನಲಾಗಿದೆ. ಅವರ ಲೆಕ್ಕಾಚಾರವನ್ನು ತಲೆಕೆಳಗು ಮಾಡಲೆಂದೇ ರೇವಂತ್ ರೆಡ್ಡಿ ಈ ಎರಡು ಯೋಜನೆಗೆಳ ನೀಲನಕ್ಷೆಯನ್ನು ಬದಲಿಸಲು ಹೊರಟಿದ್ದಾರೆ. ಈ ಮೂಲಕ ಕೆಸಿಆರ್ ಮತ್ತು ಅವರ ಭವಿಷ್ಯದ ರಿಯಲ್ ಎಸ್ಟೇಟ್ ಕನಸುಗಳಿಗೆ ಕೊಳ್ಳಿ ಇಡುವುದು ರೇವಂತ್ ರೆಡ್ಡಿ ಉದ್ದೇಶ.
ಈ ಸುದ್ದಿ ಓದಿದ್ದೀರಾ: ತೆಲಂಗಾಣ: ಎಬಿವಿಪಿಯಿಂದ ಫೈರ್ ಬ್ರಾಂಡ್ ನಾಯಕನವರೆಗೆ; ರೇವಂತ್ ರೆಡ್ಡಿ ನಡೆದುಬಂದ ಹಾದಿ
ಮುಖ್ಯ ವಿಚಾರ ಏನೆಂದರೆ, ಈ ಎರಡು ಯೋಜನೆಗಳ ಬದಲಾವಣೆಯಿಂದ ಹೈದರಾಬಾದ್‌ನ ಕೆಲವು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಲಕ್ಷಾಂತರ ಕೋಟಿ ರೂಪಾಯಿ ನಷ್ಟವುಂಟಾಗಲಿದೆ ಎನ್ನಲಾಗಿದೆ. ಮುಖ್ಯಮಂತ್ರಿಗಳ ಘೋಷಣೆಯ ಹಿಂದೆಯೇ ಸದ್ಯಕ್ಕಂತೂ ಮುತ್ತಿನ ನಗರಿಯ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದೆ. ರಿಯಲ್ ಎಸ್ಟೇಟ್ ಪತನವನ್ನು ತಡೆಯಲು ಕಾಂಗ್ರೆಸ್ ಸರ್ಕಾರ ಹೆಚ್ಚು ದಿನ ಅಧಿಕಾರದಲ್ಲಿರುವುದಿಲ್ಲ ಎಂದು ಕೆಸಿಆರ್ ಮತ್ತು ಅವರ ಬಿಆರ್‌ಎಸ್ ಪಕ್ಷದವರು ಪ್ರಚಾರ ಮಾಡುತ್ತಿದ್ದಾರಂತೆ. ಇದೆಲ್ಲ ಏನೇ ಇದ್ದರೂ, ರಂಗಾರೆಡ್ಡಿ ಜಿಲ್ಲೆಯ ಲಕ್ಷಾಂತರ ರೈತರು ಹೈದರಾಬಾದ್ ಫಾರ್ಮಾ ಸಿಟಿ ಯೋಜನೆ ಸ್ಥಳಾಂತರದ ಸುದ್ದಿ ಕೇಳಿ ನಿಟ್ಟುಸಿರು ಬಿಟ್ಟಿದ್ದಾರೆ.