ಕೋವಿಡ್ ಭ್ರಷ್ಟರ ಮಾಹಿತಿಯನ್ನ ಯತ್ನಾಳ್ ಅವರು, ತಮ್ಮ ಕೇಂದ್ರ ನಾಯಕರಿಗೆ ನೀಡುವ ಬದಲು ಜಸ್ಟಿಸ್ ಕುನ್ನಾ ಅವರ ತನಿಖಾ ಆಯೋಗಕ್ಕೆ ನೀಡಲಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಇತ್ತೀಚೆಗೆ, ಬಿಜೆಪಿ ಸರ್ಕಾರದಲ್ಲಿ ನಡೆದಿದ್ದ ಕೊರೋನಾ ಹಗಣರದ ಬಗ್ಗೆ ಬಿಜೆಪಿ ಹೈಕಮಾಂಡ್‌ಗೆ ಮಾಹಿತಿ ನೀಡಿದ್ದೇನೆ ಎಂದು ಬಿಜೆಪಿ ಶಾಸಕ ಯತ್ನಾಳ್ ಹೇಳಿದ್ದರು. ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್, “ಕೋವಿಡ್‌ನಲ್ಲಿ ಕಾಯಕ ಮರೆತು ಕಳಂಕದ ಕೆಲಸ ಮಾಡಿದ ಭ್ರಷ್ಟರ ಮಾಹಿತಿಯನ್ನ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮ ಕೇಂದ್ರ ನಾಯಕರಿಗೆ ನೀಡಿದರೆ ಏನು ಪ್ರಯೋಜನ” ಎಂದು ಹೇಳಿದ್ದಾರೆ.
“ಕೇಂದ್ರ ನಾಯಕರ ಸಹಕಾರವಿಲ್ಲದೇ 40 ಸಾವಿರ ಕೋಟಿ ಕೋವಿಡ್ ಭ್ರಷ್ಟಾಚಾರ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರದಲ್ಲಿ ನಡೆದಿರುತ್ತಾ. ಕೋವಿಡ್ ಭ್ರಷ್ಟಾಚಾರದ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮಲ್ಲಿರುವ ಮಾಹಿತಿ, ದಾಖಲೆಗಳನ್ನ ಕೇಂದ್ರ ನಾಯಕರಿಗೆ ನೀಡುವ ಬದಲು ಜಸ್ಟೀಸ್ ಕುನ್ಹಾ ಅವರ ತನಿಖಾ ಆಯೋಗಕ್ಕೆ ನೀಡಲಿ” ಎಂದಿದ್ದಾರೆ.
“ಬಸವೇಶ್ವರರ ಅನುಯಾಯಿ ಎಂದು ಹೇಳಿಕೊಳ್ಳುವ ಬಸನಗೌಡ ಯತ್ನಾಳ್ ಅವರು ಅಂತರಂಗ ಶುದ್ದಿ ಬಹಿರಂಗ ಶುದ್ದಿ ಎರಡನ್ನೂ ಪಾಲಿಸಬೇಕು. ನಾಲ್ಕು ಗೋಡೆಗಳ ಮಧ್ಯೆ ಕೇಂದ್ರ ನಾಯಕರಿಗಷ್ಟೇ ಮಾಹಿತಿ ನೀಡಿದ್ದೇನೆ ಎಂದರೆ, ಅದರಿಂದ ಪ್ರಯೋಜನವಿಲ್ಲ” ಎಂದು ಹೇಳಿದ್ದಾರೆ.
“ಬಸವಣ್ಣನವರ ವಚನ ಪ್ರಸ್ತಾಪಿಸಿರುವ ಸಚಿವರು, ಕೋವಿಡ್ ವೇಳೆ ಬಸವಣ್ಣನವರ ಕಾಯಕವೇ ಕೈಲಾಸ ಎಂಬ ಶ್ರೇಷ್ಠ ಸಂದೇಶವನ್ನ ಪಾಲಿಸಬೇಕಿತ್ತು. ಆದರೆ ಜನರ ಜೀವ ಉಳಿಸಲು ಹೋರಾಟ ನಡೆಯುತ್ತಿದ್ದಾಗ ಬರೀ ಕಳಂಕದ ಕೆಲಸದಲ್ಲಿ ತೊಡಗಿದ್ದು ಅತ್ಯಂತ ಅಮಾನವೀಯ” ಎಂದಿದ್ದಾರೆ.