ಸಹೋದರಿಯ ಹಳೆಯ ಲೈಂಗಿಕ ಪ್ರಕರಣವನ್ನು ಹಿಂಪಡೆಯುವ ವಿಚಾರದಲ್ಲಿ ದಲಿತ ವ್ಯಕ್ತಿ ಹಾಗೂ ಆರೋಪಿಗಳ ನಡುವೆ ವಾಗ್ವಾದ ನಡೆದ ನಂತರ ದಲಿತ ವ್ಯಕ್ತಿಯನ್ನು ಅಮಾನುಷವಾಗಿ ಕೊಂದು, ಆತನ ತಾಯಿಯನ್ನು ನಗ್ನಗೊಳಿಸಿ ಅವಮಾನಿಸಿದ ಅಮಾನವೀಯ ಘಟನೆ ಮಧ್ಯಪ್ರದೇಶ ರಾಜ್ಯದ ಸತ್ನಾ ಜಿಲ್ಲೆಯಲ್ಲಿ ನಡೆದಿದೆ.
18 ವರ್ಷದ ದಲಿತ ಸಮುದಾಯದ ನಿತಿನ್ ಅಹಿರ್ವಾರ್ ಕೊಲೆಯಾದ ಯುವಕ. ನಿತಿನ್ ಕೊಲೆಯನ್ನು ತಡೆಯಲು ಬಂದ ಅವರ ತಾಯಿಯನ್ನು ಆರೋಪಿಗಳು ನಗ್ನಗೊಳಿಸಿ ಅವಮಾನಿಸಿದ್ದಾರೆ. ಮೃತನ ಮನೆಯನ್ನು ಕೂಡ ಧ್ವಂಸಗೊಳಿಸಲಾಗಿದೆ.
ಪ್ರಮುಖ ಆರೋಪಿ ವಿಕ್ರಮ್ ಸಿಂಗ್ ಠಾಕೂರ್ ಸೇರಿದಂತೆ ಎಂಟು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಗ್ರಾಮದ ಮುಖಂಡನ ಪತಿ ಸೇರಿದಂತೆ ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರನ್ನು ಬಂಧಿಸಲು ಪೊಲೀಸ್ ತಂಡಗಳು ವಿವಿಧೆಡೆ ಶೋಧ ನಡೆಸುತ್ತಿವೆ.
ಈ ಸುದ್ದಿ ಓದಿದ್ದೀರಾ? ಚೀನಾ ವಶದಲ್ಲಿ ಭಾರತದ ಭೂಮಿ, ಸುಳ್ಳು ಹೇಳುತ್ತಿರುವ ಪ್ರಧಾನಿ: ರಾಹುಲ್ ಗಾಂಧಿ
ಹೆಸರಿಸಲಾದ ಒಂಬತ್ತು ಆರೋಪಿಗಳು ಮತ್ತು ಮೂರ್ನಾಲ್ಕು ಅಪರಿಚಿತ ವ್ಯಕ್ತಿಗಳ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ತಂಡಗಳನ್ನು ರಚಿಸಿದ್ದಾರೆ.
ನಿತಿನ್ ಅವರ ಸಹೋದರಿ 2019 ರಲ್ಲಿ ದಾಖಲಿಸಿದ ಲೈಂಗಿಕ ಕಿರುಕುಳ ಪ್ರಕರಣವನ್ನು ಹಿಂಪಡೆಯಲು ನಿರಾಕರಿಸಿದ ಕಾರಣ ಈ ಪೈಶಾಚಿಕ ಕೃತ್ಯ ಎಸಗಲಾಗಿದೆ. ಪ್ರಮುಖ ಆರೋಪಿ ದೂರು ಹಿಂಪಡೆಯುವಂತೆ ಆರೋಪಿ ಸಂತ್ರಸ್ತೆಯ ಸಹೋದರಿಯ ಮೇಲೆ ಒತ್ತಡ ಹೇರುತ್ತಿದ್ದ. ಇದು ಎರಡು ದಿನಗಳ ಹಿಂದೆ ತಾರಕಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಸೆಕ್ಷನ್ 307ರ ಅಡಿಯಲ್ಲಿ ಪ್ರಮುಖ ಆರೋಪಿ ಸೇರಿದಂತೆ ಒಂಬತ್ತು ವ್ಯಕ್ತಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ನಿತಿನ್ ಮೃತಪಟ್ಟ ನಂತರ, ಸೆಕ್ಷನ್ 302 ಮತ್ತು ಎಸ್‌ಸಿ/ಎಸ್‌ಟಿ ದೌರ್ಜನ್ಯ (ತಡೆ) ಕಾಯಿದೆಯನ್ನು ಸಹ ಅನ್ವಯಿಸಲಾಗಿದೆ” ಎಂದು ಜಿಲ್ಲಾ ಹೆಚ್ಚುವರಿ ಎಸ್ಪಿ ಸಂಜೀವ್ ಉಯಿಕೆ ತಿಳಿಸಿದ್ದಾರೆ.
“ಆರೋಪಿಗಳಾದ ಕೋಮಲ್ ಸಿಂಗ್, ವಿಕ್ರಮ್ ಸಿಂಗ್ ಮತ್ತು ಆಜಾದ್ ಸಿಂಗ್ ಅವರು ನಮ್ಮ ಮನೆಗೆ ಬಂದು ಲೈಂಗಿಕ ಕಿರುಕುಳ ಪ್ರಕರಣವನ್ನು ಹಿಂಪಡೆಯುವಂತೆ ನನ್ನ ಸಹೋದರನಿಗೆ ಹೇಳಿದರು. ಆತ ನಿರಾಕರಿಸಿದಾಗ ಆತನ ಮೇಲೆ ಹಲ್ಲೆ ನಡೆಸಿದರು. ನನ್ನ ತಾಯಿ ಅಡ್ಡ ಬಂದಾಗ ಆಕೆಯ ಮೇಲೂ ಹಲ್ಲೆ ನಡೆಸಿ, ಆಕೆಯನ್ನು ವಿವಸ್ತ್ರಗೊಳಿಸಿ, ನಮ್ಮ ಮನೆಯನ್ನು ಧ್ವಂಸಗೊಳಿಸಿದರು. ಸಹೋದರ ಮತ್ತು ತಾಯಿಯನ್ನು ಬಿಟ್ಟುಬಿಡಿ ಎಂದು ನಾನು ಅವರಲ್ಲಿ ಮನವಿ ಮಾಡಿದೆ. ಆದರೆ, ನನ್ನ ಮೇಲೆ ಅತ್ಯಾಚಾರ ಮಾಡುವುದಾಗಿ ಆರೋಪಿಗಳು ಬೆದರಿಕೆ ಹಾಕಿದರು. ನಾನು ಕಾಡಿನೊಳಗೆ ಓಡಿಹೋಗಿ ಅನಂತರ ಪೊಲೀಸರಿಗೆ ದೂರು ನೀಡಿದೆ” ಎಂದು ನಿತಿನ್ ಸಹೋದರಿ ತಿಳಿಸಿದ್ದಾರೆ.
ಮಧ್ಯಪ್ರದೇಶ ರಾಜ್ಯದಲ್ಲಿ ದಲಿತರ ಮೇಲೆ ನಿರಂತರ ದೌರ್ಜನ್ಯ: ಖರ್ಗೆ ಆಕ್ರೊಶ
ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ಮಧ್ಯಪ್ರದೇಶ ರಾಜ್ಯದ ಸಾಗರ್ ಜಿಲ್ಲೆಯಲ್ಲಿ ದಲಿತ ಯುವಕನನ್ನು ಕ್ರೂರವಾಗಿ ಹಲ್ಲೆ ನಡೆಸಿ ಕೊಂದಿದ್ದಾರೆ. ಗೂಂಡಾಗಳು ಅವನ ತಾಯಿಯನ್ನೂ ಬಿಡಲಿಲ್ಲ. ಸಾಗರದಲ್ಲಿ ಸಂತ ರವಿದಾಸ್ ದೇಗುಲ ಕಟ್ಟುತ್ತೇವೆ ಎಂದು ಬಿಂಬಿಸುತ್ತಿರುವ ಪ್ರಧಾನಿ ಮಧ್ಯಪ್ರದೇಶದಲ್ಲಿ ನಿರಂತರವಾಗಿ ನಡೆಯುತ್ತಿರುವ ದಲಿತ ಮತ್ತು ಆದಿವಾಸಿಗಳ ದಬ್ಬಾಳಿಕೆ, ಅನ್ಯಾಯದ ಬಗ್ಗೆ ಏಕೆ ಮೌನವಾಗಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಮಧ್ಯಪ್ರದೇಶದ ಮುಖ್ಯಮಂತ್ರಿಗಳು ಕ್ಯಾಮೆರಾ ಮುಂದೆ ಹಿಂದುಳಿದವರ ಪಾದಗಳನ್ನು ತೊಳೆಯುವ ಮೂಲಕ ತಮ್ಮ ಅಪರಾಧವನ್ನು ಮರೆಮಾಡಲು ಪ್ರಯತ್ನಿಸುತ್ತಾರೆ. ಆದರೆ ಬಿಜೆಪಿ ಮಧ್ಯಪ್ರದೇಶವನ್ನು ದಲಿತ ದೌರ್ಜನ್ಯಗಳ ಪ್ರಯೋಗಾಲಯವನ್ನಾಗಿ ಮಾಡಿದೆ. ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದಲ್ಲಿ ದಲಿತರ ಮೇಲಿನ ಅಪರಾಧಗಳ ಪ್ರಮಾಣವು ರಾಷ್ಟ್ರೀಯ ಸರಾಸರಿಗಿಂತ ಮೂರು ಪಟ್ಟು ಹೆಚ್ಚಿದೆ. ಮೋದಿಯವರೇ, ಈ ಬಾರಿ ಮಧ್ಯಪ್ರದೇಶದ ಜನರು ಬಿಜೆಪಿಯ ಬಲೆಗೆ ಬೀಳುವುದಿಲ್ಲ, ಕೆಲವು ತಿಂಗಳ ನಂತರ ಸಮಾಜದ ವಂಚಿತ ಮತ್ತು ಶೋಷಿತ ವರ್ಗಗಳ ಸಂಕಟಕ್ಕೆ ಉತ್ತರ ನಿಮಗೆ ಸಿಗುತ್ತದೆ. ಬಿಜೆಪಿ ನಿರ್ಗಮನ ಖಚಿತ” ಎಂದು ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.
ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ, “ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇತ್ತೀಚೆಗೆ ಸಂತ ಗುರು ರವಿದಾಸ್ ಜಿ ಅವರ ಸ್ಮಾರಕಕ್ಕೆ ಬಹಳ ವೈಭವದಿಂದ ಅಡಿಪಾಯ ಹಾಕಿದರು. ಅದೇ ಪ್ರದೇಶದಲ್ಲಿ, ದಲಿತರ ಮೇಲಿನ ದೌರ್ಜನ್ಯಗಳು ಮಿತಿಮೀರಿವೆ. ಇದು ಬಿಜೆಪಿ ಮತ್ತು ಅವರ ಸರ್ಕಾರದ ದ್ವಂದ್ವ ಸ್ವಭಾವಕ್ಕೆ ಜೀವಂತ ಸಾಕ್ಷಿಯಾಗಿದೆ. ಬಿಜೆಪಿ ಸರ್ಕಾರವು ದೌರ್ಜನ್ಯಗಳನ್ನು ನಿಗ್ರಹಿಸಲು ಗಂಭೀರ ಕ್ರಮ ಕೈಗೊಂಡಂತೆ ತೋರುತ್ತಿಲ್ಲ. ಇದು ಅತ್ಯಂತ ದುಃಖಕರ, ಖಂಡನೀಯ ಮತ್ತು ಆತಂಕಕಾರಿಯಾಗಿದೆ” ಎಂದು ಟ್ವೀಟ್ ಮೂಲಕ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.