ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಹೆಸರು ಘೋಷಣೆಯಾಗುತ್ತಿದ್ದಂತೆಯೇ ಬಂಡಾಯದ ಬಿಸಿ ಏರತೊಡಗಿದೆ.
ಕೋಲಾರ, ಶಿವಮೊಗ್ಗ ಮಾತ್ರವಲ್ಲದೇ ದಾವಣಗೆರೆಯಲ್ಲೂ ಬಂಡಾಯದ ಬಿಸಿ ಎದ್ದಿದ್ದು, ಹಾಲಿ ಸಂಸದ ಸಿದ್ದೇಶ್ವರ ಪತ್ನಿ ಗಾಯತ್ರಿ ಸಿದ್ದೇಶ್ವರ್ ಅವರಿಗೆ ಲೋಕಸಭಾ ಟಿಕೆಟ್ ಪ್ರಕಟವಾಗುತ್ತಿದ್ದಂತೆ ಅಸಮಾಧಾನಗೊಂಡಿರುವ ಬಿಜೆಪಿ ಮುಖಂಡ. ಮಾಜಿ ಸಚಿವ ರೇಣುಕಾಚಾರ್ಯ ಮತ್ತವರ ಬೆಂಬಲಿಗರು, ಸಿದ್ದೇಶ್ವರ್ ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದಾರೆ.
ಖಾಸಗಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಿದ್ದ ವೇಳೆ, ಸಂಸದ ಜಿ.ಎಂ. ಸಿದ್ದೇಶ್ವರ್ ಒಂದು ರೀತಿ ಸದ್ದಾಂ ಹುಸೇನ್ ಇದ್ದಂತೆ. ಕಳೆದ ಮೂರು ತಿಂಗಳಿನಿಂದ ದಾವಣಗೆರೆ ಕ್ಷೇತ್ರ ಅಭ್ಯರ್ಥಿ ಬದಲಾವಣೆ ಆಗಬೇಕೆಂದು ಕಾರ್ಯಕರ್ತರು ಒತ್ತಾಯಿಸಿದ್ದರು. ಹಾಲಿ ಸಂಸದ ಸಿದ್ದೇಶ್ವರ ಅವರು ನನಗೆ ಅಲ್ಲದಿದ್ದರೂ ನನ್ನ ಕುಟುಂಬದವರಿಗೆ ಕೊಡಿ ಎಂದು ಒತ್ತಡ ಹಾಕಿದ್ದಾರೆ. ಹಾಗಾಗಿ, ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ್ ಅವರಿಗೆ ಟಿಕೆಟ್ ನೀಡಲಾಗಿದೆ. ಇದು ನಾವು ಒಪ್ಪಲ್ಲ” ಎಂದು ತಿಳಿಸಿದರು.

“ನಮಗೆ ಗಾಯತ್ರಿ ಸಿದ್ದೇಶ್ವರ್ ಅವರ ಬಗ್ಗೆ ಗೌರವವಿದೆ. ಆದರೆ, ಸಂಸದ ಸಿದ್ದೇಶ್ವರ್ ಅವರು 20 ವರ್ಷದಿಂದ ಏನೂ ಕೆಲಸ ಮಾಡಿಲ್ಲ. ಏನೂ ಅಭಿವೃದ್ಧಿಯಾಗಿಲ್ಲ. ದಾವಣಗೆರೆಗೆ ಏನೂ ವಿಶೇಷವಾದ ಯೋಜನೆ ತಂದಿಲ್ಲ. ಮನೆಗೆ ತೆರಳುವ ಕಾರ್ಯಕರ್ತರನ್ನು ಭಿಕ್ಷುಕರ ರೀತಿ ನಡೆಸಿಕೊಂಡಿದ್ದಾರೆ. ಇವತ್ತು ಪಕ್ಷದ ಹಿರಿಯರು ಕೂಡ ತಮ್ಮ ಬೇಸರ ಹೊರಹಾಕುತ್ತಿದ್ದಾರೆ. ನಮ್ಮ ಆಗ್ರಹ ಇರುವುದು ಅಭ್ಯರ್ಥಿ ಬದಲಾವಣೆ ಮಾತ್ರ ಎಂದು ಆಕ್ರೋಶ ಹೊರಹಾಕಿದ ರೇಣುಕಾಚಾರ್ಯ, “ಮೋದಿಯವರನ್ನು ಗೆಲ್ಲಿಸುವುದು ನಮ್ಮ ಗುರಿ” ಎಂದಿದ್ದಾರೆ.
ಗಾಯತ್ರಿ ಸಿದ್ದೇಶ್ವರ್ ಅವರಿಗೆ ಟಿಕೆಟ್ ಘೋಷಣೆಯ ಬೆನ್ನಲ್ಲೇ ಮಾಜಿ ಸಚಿವ ಎಸ್ ಎ ರವೀಂದ್ರನಾಥ್ ಮನೆಯಲ್ಲಿ ಅಸಮಾಧಾನಿತರ ಸಭೆ ಸೇರಲಾಗಿತ್ತು. ಈ ಸಭೆಯಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಮಲ್ಲಿಕಾರ್ಜುನ್, ಮಾಜಿ ಶಾಸಕ ಗುರುಸಿದ್ದನಗೌಡ ಪುತ್ರ ಡಾ. ರವೀಂದ್ರ ಸಭೆಯಲ್ಲಿದ್ದರು.
ಮೈಮೇಲೆ ಪೆಟ್ರೋಲ್ ಸುರಿದುಕೊಂಡ ರವೀಂದ್ರನಾಥ್ ಬೆಂಬಲಿಗ!
ಈ ಬಾರಿ ಸ್ಪರ್ಧಿಸುವ ಆಕಾಂಕ್ಷಿಗಳ ಪೈಕಿ ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಅವರು ಕೂಡ ಬಿಜೆಪಿ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ ಅವರಿಗೆ ಟಿಕೆಟ್ ನಿರಾಕರಿಸಿ ಸಿದ್ದೇಶ್ವರ್ ಅವರ ಪತ್ನಿಗೆ ಟಿಕೆಟ್ ನೀಡಿದ್ದಕ್ಕೆ ಆಕ್ರೋಶಗೊಂಡ ಅವರ ಬೆಂಬಲಿಗನೊಬ್ಬ, ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಸಾವಿಗೆ ಶರಣಾಗಲು ಯತ್ನಿಸಿದ ಘಟನೆ ಕೂಡ ಇಂದು ನಡೆದಿದೆ.
ಗುರುವಾರ ದಾವಣಗೆರೆ ತಾಲೂಕಿನ ಶಿರಮಗೊಂಡನಹಳ್ಳಿಯಲ್ಲಿರುವ ಎಸ್.ಎ.ರವೀಂದ್ರನಾಥ್ ನಿವಾಸದ ಬಳಿಯೇ ಯುವಕ ಪೆಟ್ರೋಲ್ ಸುರಿದುಕೊಂಡು ಈ ಯತ್ನ ನಡೆಸಿದ್ದಾನೆ.
