“ಒಳಮೀಸಲಾತಿ ಆದೇಶವು ಕೇವಲ ಸರ್ಕಾರಿ ಆದೇಶವಾಗಿದ್ದು, ಅದು ಕಾನೂನಿನ ಚೌಕಟ್ಟಿಗೆ ಬರಲು ಸದನದಲ್ಲಿ ಅಂಗೀಕರಿಸಿ ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಬೇಕಾಗುತ್ತದೆ. ಒಳಮೀಸಲಾತಿಯ ಸರ್ಕಾರಿ ಆದೇಶವು ಕಾನೂನಾಗಿ ಮಾರ್ಪಾಡುವ ನಿಟ್ಟಿನಲ್ಲಿ ಸರ್ಕಾರದ ಸುಗ್ರೀವಾಜ್ಞೆ ಅಗತ್ಯವಿದೆ” ಎಂದು ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಸಾರಥಿ ಗ್ರಾಮದಲ್ಲಿ ಮಾಜಿ ಸಚಿವ ಹೆಚ್.ಆಂಜನೇಯ ಅಭಿಪ್ರಾಯ ವ್ಯಕ್ತಪಡಿಸಿದರು.
ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಸಾರಥಿ ಗ್ರಾಮದಲ್ಲಿ ಭಾನುವಾರ ಸಾರಥಿ ಗ್ರಾಮಸ್ಥರ ಹಿತರಕ್ಷಣಾ ಸಮಿತಿಯಿಂದ ಆಯೋಜಿಸಿದ್ದ ಡಾ.ಬಿ ಆರ್ ಅಂಬೇಡ್ಕರ್ ರವರ ಪ್ರತಿಮೆ ಅನಾವರಣ ಮತ್ತು ಒಳಮೀಸಲಾತಿ ವಿಜಯೋತ್ಸವ ಐತಿಹಾಸಿಕ ಕಾರ್ಯಕ್ರಮದಲ್ಲಿ ಹೊಯ್ಸಳ ಜಿ.ಮಂಜುನಾಥ್ ವೇದಿಕೆಯಲ್ಲಿ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದ ಅವರು,”ಕಳೆದ 30-35 ವರ್ಷಗಳು ನಮ್ಮ ಸಮುದಾಯದ ಹೋರಾಟದಂತೆ ಈ ಕೆಲಸಕ್ಕಾಗಿ ನಾವು ಸರ್ಕಾರವನ್ನು ಒತ್ತಾಯ ಮಾಡಲು ಸಿದ್ದರಾಗಬೇಕು. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿ ನಾನು ಈ ವಿಚಾರವಾಗಿ ಪ್ರಸ್ತಾಪಿಸಿದ್ದೇನೆ. ಮುಂಬರುವ ಅಧಿವೇಶನಗಳಲ್ಲಿ ಇದನ್ನು ಅಂಗೀಕರಿಸುವ ಭರವಸೆ ನೀಡಿದ್ದಾರೆʼʼ ಎಂದು ತಿಳಿಸಿದರು.
“ಸ್ವಾತಂತ್ರ್ಯ ಪೂರ್ವದಲ್ಲಿ ಮಹಿಳೆಗೆ ಇಲ್ಲದ ಸ್ಥಾನಮಾನ, ಸ್ವಾತಂತ್ರ್ಯ ತಂದುಕೊಟ್ಟ ಧೀಮಂತ ನಾಯಕರಾಗಿದ್ದ ಅಂಬೇಡ್ಕರ್, ಎಲ್ಲರಿಗೂ ಬದುಕುವ ಸ್ವಾತಂತ್ರ್ಯಇರಬೇಕು ಎಂಬ ವಿಚಾರ ಹೊಂದಿದ್ದರು. ದೇಶದ ಸಂಪತ್ತು, ಸಮಾನತೆ ಎಲ್ಲ ಸಮುದಾಯಗಳಿಗೆ ದೊರೆಯಬೇಕು ಎಂಬ ಆಶಯ ಹೊಂದಿದ್ದ ಅಂಬೇಡ್ಕರ್ ರವರು ನಮ್ಮ ಸಮುದಾಯದ ನಾಯಕ ಮಾತ್ರ ಅಲ್ಲ, ಎಲ್ಲ ಸಮುದಾಯಗಳ ನಾಯಕ”
“ರಾಜ್ಯದಲ್ಲಿ ಮತ್ತೊಮ್ಮೆ ಸಾಮಾಜಿಕ,ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದೆ. ಎಲ್ಲರ ಸಮಗ್ರ ಮಾಹಿತಿ ವೈಜ್ಞಾನಿಕವಾಗಿ ಪಡೆಯಲಾಗುತ್ತಿದೆ. ಆದರೆ ಕೆಲ ವರ್ಗದವರು ತಮ್ಮ ಜಾತಿಯ ಜನಸಂಖ್ಯೆ ಕಡಿಮೆ ತೋರಿಸಲಾಗುತ್ತಿದೆ ಎಂಬ ಭಾವನೆಯಿಂದ ವಿರೋಧಿಸುತ್ತಿದ್ದಾರೆ ಆದರೆ ಇದು ತಪ್ಪು ಇದರಿಂದ ಎಲ್ಲಾ ಸಮುದಾಯಗಳ ನಿಖರ ಮಾಹಿತಿ ದೊರೆಯಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಶಾಸಕ ಬಿ.ಪಿ ಹರೀಶ್ ಮಾತನಾಡಿ “ಭಾರತ ದೇಶ ಬಡ ರಾಷ್ಟ್ರ ಆಗಬಾರದು ಅನ್ನುವ ದೃಷ್ಟಿಯನ್ನು ಬಾಬಾಸಾಹೇಬ್ ಅಂಬೇಡ್ಕರ್ ಅನುಸರಿಸಿದ್ದರು. ಮಾನವ ಕುಲಕ್ಕೆ ಸಮಾನತೆಯ ದಾರಿಯನ್ನು ತೋರಿದ ಏಕೈಕ ವ್ಯಕ್ತಿ ಎಂದರೆ ಅದು ಅಂಬೇಡ್ಕರ್ ಮಾತ್ರ, ದೇಶದಲ್ಲಿ ಸಮಾನತೆಯಾಗಬೇಕು ಎಂಬ ಅವರ ಕನಸು ನನಸಾಗಬೇಕು” ಎಂದರು.
“ನಾನು ಶಾಸಕನಾಗಿದ್ದಾಗ ಕರ್ನಾಟಕದ ಅಂಬೇಡ್ಕರ್ ಎಂದೇ ಖ್ಯಾತಿ ಪಡೆದಿರುವ ಪ್ರೊ.ಬಿ ಕೃಷ್ಣಪ್ಪ ರವರ ಸ್ಮಾರಕ ಭವನಕ್ಕೆ ಆಗಿನ ಸಮಾಜ ಕಲ್ಯಾಣ ಮಂತ್ರಿಯಾಗಿದ್ದ ನಾರಾಯಣಸ್ವಾಮಿಯವರ ಬಳಿ ಚರ್ಚಿಸಿ ಒಂದು ಕೋಟಿ ರೂ, ಅನುದಾನವನ್ನು ಭವನ ನಿರ್ಮಾಣಕ್ಕೆ ಕೊಡಿಸಿದ್ದು, ಇಂದು ಅಲ್ಲಿ ಹಲವಾರು ಕಾರ್ಯಕ್ರಮ ನಡೆಯುತ್ತಿವೆ ಎಂಬ ಸಂತಸ ನನಗೆ ಹೆಮ್ಮೆ ಆಗುತ್ತದೆ” ಎಂದು ಹೇಳಿದರು.
ಮಾಜಿ ಶಾಸಕ ಎಚ್ ಎಸ್. ಶಿವಶಂಕರ್ ಮಾತನಾಡಿ “ಜೈ ಭೀಮ್” ಎನ್ನುವ ಘೋಷಣೆ ಕೇವಲ ದಲಿತ ಸಮುದಾಯಕ್ಕೆ ಸೇರಿದ್ದಲ್ಲ, ದೇಶದ ಪ್ರತಿಯೊಬ್ಬ ನಾಗರೀಕನು ಬಳಸಬೇಕಾದಂತಹ ಘೋಷಣೆಯಾಗಿದೆ. ಎಲ್ಲ ವರ್ಗದವರು ಎಲ್ಲ ಸಮಾಜದವರು ಸೇರಿ ಭೀಮ ಸಾಮ್ರಾಜ್ಯವನ್ನು ನಿರ್ಮಾಣ ಮಾಡಿದ್ದಾರೆ.
“ಅಂಬೇಡ್ಕರ್ ಅವರು ಕೇವಲ ದಲಿತ ಸಮಾಜಕ್ಕೆ ಮಾತ್ರ ಸೀಮಿತವಾಗಿಲ್ಲ. ಎಲ್ಲ ವರ್ಗದವರಿಗೆ ಸೇರಿದವರು. ಪ್ರೀತಿ, ಸಂತೋಷದಿಂದ ಅಭಿಮಾನದಿಂದ ಎಲ್ಲರೂ ಸೇರಿ ಅಂಬೇಡ್ಕರ್ ಅವರ ಪ್ರತಿಮೆಯನ್ನು ಉದ್ಘಾಟನೆ ಮಾಡಿದ್ದೇವೆ. ದೇವಸ್ಥಾನಗಳ ಗಂಟೆ ಬಾರಿಸಿದರೆ ಸಮಾಜ ದೇಶ ಉದ್ದಾರ ಆಗೋದಿಲ್ಲ’ ಶಾಲೆಗಳ ಗಂಟೆ ಬಾರಿಸಿದರೆ ಸಮಾಜ ಉದ್ದಾರವಾಗುತ್ತದೆ. ದೇವಸ್ಥಾನಗಳಿಂದ ಭಕ್ತಿ ಮಾತ್ರ ಸಿಗಲು ಸಾಧ್ಯ, ಶಾಲೆಯಲ್ಲಿ ಜ್ಞಾನ ಸಂಪಾದನೆ ಮಾಡಿದರೆ ಸಮ ಸಮಾಜ ನಿರ್ಮಾಣವಾಗಲಿದೆ” ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಮಾರಕ ಆಯುಧದೊಂದಿಗೆ ಓಡಾಟ: ಆತಂಕ ಭಯ ಹುಟ್ಟಿಸಿದ ವ್ಯಕ್ತಿ ಬಂಧಿಸಿದ ಪೊಲೀಸರು
ಕಾರ್ಯಕ್ರಮದಲ್ಲಿ ಚೇತನ್ ಅಹಿಂಸಾ, ಎಚ್.ಸಿ.ಗುಡ್ಡಪ್ಪ, ನಂದಿಗಾವಿ ಶ್ರೀನಿವಾಸ್, ಚಂದ್ರಶೇಖರ್ ಪೂಜಾರ್, ಇಂದಿರಾ ಕೃಷ್ಣಪ್ಪ, ಹನಗವಾಡಿ ರುದ್ರಪ್ಪ ಮುಂತಾದವರು ಡಾ. ಅಂಬೇಡ್ಕರ್ ಹಾಗೂ ಈ ದಿನಮಾನಗಳಲ್ಲಿ ನಡೆಯುವ ಪ್ರಸ್ತುತ ವಿದ್ಯಾಮಾನಗಳ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷ ಗೋಣಿಬಸಪ್ಪ ಹಳ್ಳದರ, ಸಾರಥಿ ಗ್ರಾಮಸ್ಥರ ಹಿತರಕ್ಷಣ ಸಮಿತಿಯ ಅಧ್ಯಕ್ಷ ಪಿ ಹನುಮಂತಪ್ಪ, ಮಾಜಿ ಶಾಸಕ ಎಸ್.ರಾಮಪ್ಪ, ಸಮಿತಿಯ ಗೌರವಾಧ್ಯಕ್ಷ ಕಂಚಿಕೆರೆ ಹನುಮಂತಪ್ಪ, ಪ್ರೊ. ಡಿ ಕೃಷ್ಣಪ್ಪ ಟ್ರಸ್ಟಿನ ಅಧ್ಯಕ್ಷ ಇಂದಿರಾ ಕೃಷ್ಣಪ್ಪ, ನಿವೃತ್ತ ಕೆಎಎಸ್ ಅಧಿಕಾರಿ ಹನಗವಾಡಿ ರುದ್ರಪ್ಪ, ಸಮಾಜ ಹೋರಾಟಗಾರ ಚಲನಚಿತ್ರ ನಟ ಚೇತನ್ ಅಹಿಂಸ, ಗ್ಯಾರಂಟಿ ಯೋಜನೆಗಳು ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಎಸ್ ನಿಂಗಪ್ಪ ದೋಣಿ, ಹಿತರಕ್ಷಣ ಸಮಿತಿಯ ಪದಾಧಿಕಾರಿಗಳಾದ ಪ್ರಧಾನ ಕಾರ್ಯದರ್ಶಿ ಡಿ.ಡಿ ಹನುಮಂತಪ್ಪ, ಕಠಾರಿ ಹನುಮಂತಪ್ಪ, ಮಾರುತಿ ನಲವಾಗಲು, ಎಂ ಬಿ ಎಸ್ ಮಾರುತಿ, ಬೊಂಗಾಳಿ ಮಲ್ಲಿಕಾರ್ಜುನಪ್ಪ, ಎಸ್ ಎಂ ನಟರಾಜ, ಜೆಸಿಬಿ ಬಸವರಾಜ್, ಎಚ್ಎಸ್ ಹನುಮಂತಪ್ಪ, ಸಣ್ಣ ಚೌಡಪ್ಪ, ಬಾಲಪ್ಪರ ಹನುಮಂತಪ್ಪ, ಡಿ ಅಂಜನಪ್ಪ, ಹಲವಾಗಲು ರಮೇಶ್, ಕೊಂಡಜ್ಜಿ ಗೋಣೆಪ್ಪ ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರು, ನೂರಾರು ದಲಿತ ಮುಖಂಡರುಗಳು,ಅಭಿಮಾನಿಗಳು ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.