ರಾಜ್ಯ ಬಿಜೆಪಿಯಲ್ಲಿ ಎರಡನೇ ಪಟ್ಟಿಯಲ್ಲಿ ರಾಜ್ಯದ 20 ಲೋಕಸಭಾ ಅಭ್ಯರ್ಥಿಗಳ ಹೆಸರುಗಳು ಪ್ರಕಟಕ್ಕೂ ಮುಂಚೆಯಿಂದಲೂ ದಾವಣಗೆರೆಯಲ್ಲಿ ಸಿದ್ದೇಶ್ವರ ವಿರುದ್ಧ ಬಂಡಾಯ ಜೋರಾಗಿ ಕೇಳಿ ಬಂದಿತ್ತು. ಯಾವುದೇ ಕಾರಣಕ್ಕೂ 7 ಬಾರಿ ಅವಕಾಶ ಕೊಟ್ಟ ಸಂಸದ ಸಿದ್ದೇಶ್ವರರ ಕುಟುಂಬಕ್ಕೆ 8ನೇ ಬಾರಿಗೆ ಅವಕಾಶ ನೀಡಬಾರದು. ಜಿಲ್ಲೆಯ ಸ್ಥಳೀಯರಿಗೆ ಮತ್ತು ಹೊಸ ಮುಖಗಳಿಗೆ ಆದ್ಯತೆ ಕೊಡಬೇಕು ಎಂದು ರೇಣುಕಾಚಾರ್ಯ ಮತ್ತು ಎಸ್ ಎ ರವೀಂದ್ರನಾಥ್ ಬಣದ ಬೆಂಬಲಿಗರು ಸಭೆ ಸೇರಿ ಬಹಿರಂಗ ಬಂಡಾಯ ಸಾರಿದ್ದರು. ಈ ಬಂಡಾಯವನ್ನು ನಿವಾರಿಸಲು ಹಿರಿಯ ನಾಯಕರು ಪ್ರಯತ್ನಿಸಿದರೂ ಕೂಡ ಸಾಧ್ಯವಾಗುತ್ತದೆ ಎಂದು ಎನಿಸಿರಲಿಲ್ಲ.
ಆದರೆ ಇತ್ತೀಚೆಗೆ ಈ ಬಂಡಾಯ ಶಮನದ ದಾರಿ ಹಿಡಿದಿದೆಯೇ, ಮತ್ತೆ ಒಂದಾಗಲಿದ್ದಾರೆಯೇ?
ಮತ್ತು ಕೆಲ ಒಪ್ಪಂದಗಳ ಪ್ರಕಾರ ಬಂಡಾಯದಿಂದ ಹಿಂದೆ ಸರಿದು ತಟಸ್ಥವಾಗಿರಲು ಮಾತುಕತೆ ಆರಂಭವಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ರೇಣುಕಾಚಾರ್ಯ ಮತ್ತು ಇತರರೊಂದಿಗೆ ಇತ್ತೀಚಿಗೆ ತಾನೇ ಲೋಕಸಭಾ ಉಸ್ತುವಾರಿ ರಾಧಾ ಮೋಹನ್ ಮಾತನಾಡಿದ್ದು, ರಾಜ್ಯದ ಮಾಜಿ ಸಚಿವ ಮುರುಗೇಶ್ ನಿರಾಣಿ ಮತ್ತು ಪಕ್ಷದ ಜಿಲ್ಲಾಧ್ಯಕ್ಷ ರಾಜಶೇಖರ್ ಕೂಡ ಭೇಟಿ ನೀಡಿ ಬಂಡಾಯದಿಂದ ಹಿಂದೆ ಸರಿದು ಒಟ್ಟಾಗಿ ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸಿ ಗೆಲುವಿನತ್ತ ಕರೆದುಕೊಂಡು ಹೋಗಲು ಮಾತುಕತೆ ನಡೆಸಿದ್ದರು. ಮತ್ತೊಂದು ಬೆಳವಣಿಗೆಯಲ್ಲಿ ಮುರುಗೇಶ್ ನಿರಾಣಿ ಲೋಕಸಭಾ ಅಭ್ಯರ್ಥಿ ಮಾಜಿ ಸಂಸದ ಸಿದ್ದೇಶ್ವರರವರ ಪತ್ನಿ ಗಾಯತ್ರಿ ಸಿದ್ದೇಶ್ವರ್ ಸ್ವತಃ ತಾವೇ ಬುಧವಾರ ಮತ್ತೊಮ್ಮೆ ರೇಣುಕಾಚಾರ್ಯ ಅವರನ್ನು ಮುಖಾಮುಖಿ ಭೇಟಿ ಮಾಡಿ ತಮ್ಮನ್ನು ಬೆಂಬಲಿಸಿ ಗೆಲುವಿಗೆ ಸಹಕಾರ ನೀಡಲು ಮನವಿ ಮಾಡಿದ್ದು ಬಂಡಾಯ ಯೂ-ಟರ್ನ್ ಪಡೆದುಕೊಳ್ಳಲು ಕಾರಣವಾಗಿದೆ ಎನ್ನಲಾಗಿದೆ.
ಆದರೆ ಇದುವರೆಗೂ ಬಂಡಾಯದಿಂದ ಹಿಂದೆ ಸರಿಯುವ ಮಾತೇ ಇಲ್ಲ, ಅಭ್ಯರ್ಥಿ ಬದಲಾಗಲೇಬೇಕು ಎನ್ನುತ್ತಿದ್ದ ರೇಣುಕಾಚಾರ್ಯ ಮತ್ತು ಟೀಮ್ ಈಗ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮೊದಲಿನಿಂದಲೂ ನಮಗೆ ತುಂಬಾ ಪರಿಚಿತರು, ಅವರೊಂದಿಗೆ ಆತ್ಮೀಯ ಬಾಂಧವ್ಯವಿದೆ, ಕೆಲ ವಿಚಾರಗಳಿಂದ ಇತ್ತೀಚಿಗೆ ದೂರಾಗಿದ್ದೇವೆ ಅಷ್ಟೇ, ಅವರು ಗೆಲುವಿಗೆ ಬೆಂಬಲಿಸಲು ಮನವಿ ಮಾಡಿದ್ದಾರೆ. ಅವರಿಗೆ ಇದು ಒಬ್ಬನ ನಿರ್ಧಾರವಲ್ಲ ಎಲ್ಲರೂ ಸೇರಿ ಕುಳಿತು ಚರ್ಚಿಸಿ ನಿರ್ಧಾರಕ್ಕೆ ಬರುವುದಾಗಿ ತಿಳಿಸಿದ್ದೇವೆ ಎಂದು ಹೇಳಿದ್ದಾರೆ.
ಬಿಜೆಪಿಯ ಬಲ್ಲ ಮೂಲಗಳ ಪ್ರಕಾರ ಶಮನಕ್ಕೆ ಮಾತುಕತೆ ನೆಡೆಯುತ್ತಿದ್ದು ಸದ್ಯದಲ್ಲೇ ಎಲ್ಲರೂ ಒಟ್ಟಾಗಿ ಪಕ್ಷದ ಗೆಲುವಿಗೆ ಸಹಕರಿಸಲಿದ್ದಾರೆ. ಹಾಗಿದ್ದಲ್ಲಿ ಮಾತ್ರ ಕಾಂಗ್ರೆಸ್ಸನ್ನು ಸಮರ್ಥವಾಗಿ ಜಿಲ್ಲೆಯಲ್ಲಿ ಎದುರಿಸಲು ಸಾಧ್ಯ ಎನ್ನುವ ಅಂಶ ಕೇಳಿಬಂದಿದೆ.
ಆದರೂ ದಿನಕ್ಕೊಮ್ಮೆ ವರಸೆ ಬದಲಿಸುವ ಡೆಲ್ಲಿ ಬಾಯ್ಸ್ ಬಂಡಾಯ ಬಿಟ್ಟು ಬಿಜೆಪಿ ಅಭ್ಯರ್ಥಿ ಜೊತೆ ಕೈಜೋಡಿಸುವರೋ ಅಥವಾ ಬಂಡಾಯವನ್ನು ಇನ್ನಷ್ಟು ತೀವ್ರಗೊಳಿಸುವರೋ ಕಾದು ನೋಡಬೇಕಾಗಿದೆ.
ಆದರೆ ಇತ್ತ ಕಾಂಗ್ರೆಸ್ ಅಳೆದು ತೂಗಿ ಲೆಕ್ಕಾಚಾರಗಳೊಂದಿಗೆ ತಡವಾಗಿ ಶಾಮನೂರು ಕುಟುಂಬದ ಸೊಸೆ ಸಚಿವ ಮಲ್ಲಿಕಾರ್ಜುನ್ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ಘೋಷಿಸಿದ ನಂತರ ಕಾಂಗ್ರೆಸ್ ಪಾಳಯದಲ್ಲಿ ಅಸಮಾಧಾನ ತಲೆದೋರುವಂತೆ ಕಾಣುತ್ತಿದೆ.
ಹೀಗೆ ಒಂದು ವರ್ಷದಿಂದಲೂ ಇನ್ಸೈಟ್ ಸಂಸ್ಥಾಪಕ ಕುರುಬ ಸಮುದಾಯದ ಸಿದ್ದರಾಮಯ್ಯನವರ ಆತ್ಮೀಯ ಬಳಗದ ಜಿ ಬಿ ವಿನಯ್ ಕುಮಾರ್ ಹಾಗೂ ಜಿಲ್ಲಾಧ್ಯಕ್ಷ ಎಚ್‍ಪಿ ಮಂಜಪ್ಪ ಹಾಗೂ ಪ್ರಭಾ ಮಲ್ಲಿಕಾರ್ಜುನ್ ಟಿಕೆಟ್ ಗಾಗಿ ಪೈಪೋಟಿ ನಡೆಸಿದ್ದರು. ಅದರಲ್ಲೂ ಮುಖ್ಯವಾಗಿ ಇನ್ಸೈಡ್ ಸಂಸ್ಥಾಪಕ ವಿನಯ್ ಕುಮಾರ್ ಸಿದ್ದರಾಮಯ್ಯ ಅಣತಿಯಂತೆ ವಿಧಾನಸಭಾ ಕ್ಷೇತ್ರಗಳಲ್ಲಿ ಹಳ್ಳಿ ಗಲ್ಲಿಗಳಲ್ಲಿ ಪಾದಯಾತ್ರೆ ನಡೆಸಿ ಜನಸಮುದಾಯದ ಮತ್ತು ಯುವ ಸಮುದಾಯದ ಸಂಪರ್ಕಗಳಿಸಲು ಪ್ರಯತ್ನಿಸಿದ್ದರು ಹಾಗೂ ಜಿಲ್ಲೆಯಲ್ಲಿ ಪ್ರಬಲವಾಗಿ ಟಿಕೆಟ್‌ಗಾಗಿ ಪ್ರಭಾ ಮಲ್ಲಿಕಾರ್ಜುನ್ ಮತ್ತು ವಿನಯ್ ಕುಮಾರ್ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಪ್ರಭಾ ಮಲ್ಲಿಕಾರ್ಜುನ್ ಕೂಡ ಒಂದು ವರ್ಷದಿಂದ ಕಾರ್ಯಕರ್ತರ ಸಭೆಗಳಲ್ಲಿ ಕಾಂಗ್ರೆಸ್ ಸಭೆಗಳಲ್ಲಿ ಇತರ ಸಮುದಾಯಗಳ ಸಭೆಗಳಲ್ಲಿ, ಸಮಾಜ ಸೇವೆಗಳಲ್ಲಿ ತೊಡಗಿಕೊಂಡಿದ್ದು ಜನರ ವಿಶ್ವಾಸ ಗಳಿಸಲು ಪ್ರಯತ್ನಿಸಿದ್ದರು
ಅಂತಿಮವಾಗಿ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಶಾಮನೂರು ಕುಟುಂಬದ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಲೋಕಸಭೆ ಟಿಕೆಟ್ ನೀಡಿದ್ದು, ಇದು ಜಿ ಬಿ ವಿನಯ್ ಕುಮಾರ್ ಮತ್ತು ಅವರ ಅಭಿಮಾನಿಗಳ ಮತ್ತು ಇತರ ಕಾಂಗ್ರೆಸ್‌ನ ಕೆಲ ಕಾರ್ಯಕರ್ತರಲ್ಲೂ ಅಸಮಾಧಾನ ಮೂಡಿಸಿದೆ. ಆಂತರಿಕ ಮೂಲಗಳ ಪ್ರಕಾರ ವಿನಯ್ ಕುಮಾರ್ ಗೆ ಟಿಕೆಟ್ ಕೈತಪ್ಪಲಿದೆ ಎಂದು ಗೊತ್ತಾದ ಕೂಡಲೇ ಅವರ ಅಭಿಮಾನಿ ಬಳಗದವರು, ಕಾಂಗ್ರೆಸ್ನ ಕೆಲ ನಾಯಕರು ಸುದ್ದಿಗೋಷ್ಟಿ ನಡೆಸಿ ಹಿಂದುಳಿದ ವರ್ಗದ ಯುವಕ ವಿನಯ್ ಕುಮಾರ್‌ಗೆ ಟಿಕೆಟ್ ನೀಡುವಂತೆ ಆಗ್ರಹಿಸಿದ್ದಾರೆ. ಇಲ್ಲದಿದ್ದಲ್ಲಿ ಬಂಡಾಯ ಸ್ಪರ್ಧೆಗೆ ವಿನಯ್ ಕುಮಾರ್ ಅವರನ್ನು ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಪಾಳಯದಲ್ಲಿ ಅಸಮಾಧಾನ ತಲೆದೋರಿದ್ದು ಮಾತುಕತೆಯಿಂದ ಶಮನವಾಗುವುದೋ ಅಥವಾ ಬಂಡಾಯದ ದಾರಿ ಹಿಡಿಯುವುದೋ ಎಂದು ನೋಡಬೇಕಾಗಿದೆ.
ದಾವಣಗೆರೆ ಜಿಲ್ಲೆಗೆ ಕುಟುಂಬದ ರಾಜಕಾರಣ ಹೋಗಲಾಡಿಸಲು ಇದೇ ಸೂಕ್ತ ಸುಸಮಯವಾಗಿತ್ತು. ಆಕಸ್ಮಾತ್ ಜಿ.ಬಿ.ವಿನಯ್ ಕುಮಾರ್‌ರವರನ್ನು ಕಡೆಗಣಿಸಿ ಶಾಮನೂರು ಕುಟುಂಬಕ್ಕೆ ಟಿಕೆಟ್ ನೀಡಿರುವುದು ಜಿಲ್ಲೆಯಲ್ಲಿ ಆಸಮಧಾನ ಉಂಟಾಗಿ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಎಐಸಿಸಿ ವೀಕ್ಷಕರ ಪ್ಯಾನಲ್ ನಲ್ಲಿ ಕೊನೆಯ ಹಂತದವರೆಗೂ ವಿನಯ್ ಕುಮಾರ್ ಅವರ ಹೆಸರೇ ಮುಂಚೂಣಿಯಲ್ಲಿತ್ತು. ಆದರೆ ಹಣ ಹಾಗೂ ಒಳರಾಜಕಾರಣ ಕೆಲಸ ಮಾಡಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಟಿಕೆಟ್ ಸಿಗದಿದ್ದರೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಅಭಿಮಾನಿ ಬಳಗದವರು ಒತ್ತಾಯಿಸಿದ್ದಾರೆ. ಸಮೀಕ್ಷೆಗಳ ಆಧಾರದ ಮೇಲೆ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದಾಗಿ ಹೇಳಿದ ಮುಖಂಡರು ತಮ್ಮ ನಿಲುವು ಬದಲಾಯಿಸಿರುವುದು ಸರಿಯಲ್ಲ. ಜನರಭಾವನೆಗಳಿಗೆ ಜನಾಭಿಪ್ರಾಯದಂತೆ ಗೆಲ್ಲುವ ವ್ಯಕ್ತಿಗೆ ಅನ್ಯಾಯ ಮಾಡಬಾರದು ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತು ಬಂಡಾಯ ಸ್ಪರ್ಧೆಗೆ ಒತ್ತಾಯಿಸಿದರು ಎಂದು ತಿಳಿದು ಬಂದಿದೆ.
ಇಂದು ವಿನಯ್ ಕುಮಾರ್ ದಾವಣಗೆರೆಗೆ ಆಗಮಿಸುತ್ತಿದ್ದು ನಂತರ ಸಭೆ ನಡೆಸಿ ತಮ್ಮ ತೀರ್ಮಾನ ಹೇಳಲಿದ್ದಾರೆ ಎಂದು ಮಾಹಿತಿ ಇದೆ.
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆಯು ಕಾಂಗ್ರೆಸ್ ಗೆಲ್ಲಬಹುದಾದ ಕ್ಷೇತ್ರಗಳಲ್ಲಿ ಒಂದಾಗಿದೆ. ವಿನಯ್ ಕುಮಾರ್ ಅವರಿಗೆ ಟಿಕೇಟ್ ಸಿಗದಿದ್ದರೆ ಕಾಂಗ್ರೆಸ್ ಗೆಲುವು ಕಳೆದುಕೊಳ್ಳಬೇಕಾಗುತ್ತದೆ. ಅಹಿಂದ ಯುವಕನಿಗೆ ಕಾಂಗ್ರೆಸ್ ಪಕ್ಷ ಅನ್ಯಾಯ ಮಾಡಿದಂತಾಗುತ್ತದೆ. ಅಲ್ಲದೇ ವಿದ್ಯಾವಂತ ಸಮುದಾಯ ಕಡೆಗಣಿಸಿದ ಕಳಂಕ ಕಾಂಗ್ರೆಸ್ ಗೆ ತಟ್ಟುತ್ತದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ನಡೆದಂತೆ ದಾವಣಗೆರೆಯಲ್ಲಿಯೂ ಸ್ವಾಭಿಮಾನದ ಪ್ರತಿಷ್ಠೆಯ ಕಣವಾಗಲಿದೆ ಎನ್ನುವ ಮಾತು ಕೇಳಿಬರುತ್ತಿದೆ.
ಒಟ್ಟಿನಲ್ಲಿ ಅಂತಿಮವಾಗಿ ಅಳೆದು ತೂಗಿ ಎಚ್ಚರಿಕೆಯಿಂದ ಹೊಸ ಮುಖಗಳಿಗೆ ಮಹಿಳೆಯರಿಗೆ ಎಂದು ಹೇಳುತ್ತಾ ಅಂತಿಮವಾಗಿ ವಂಶಾಡಳಿತಕ್ಕೆ ಮಣೆ ಹಾಕಿದ ಎರಡು ಪಕ್ಷಗಳಿಗೆ ಅಸಮಾಧಾನದ ಮತ್ತು ಬಂಡಾಯದ ಪರಿಸ್ಥಿತಿ ಇದ್ದು ಮುಂದಿನ ದಿನಗಳಲ್ಲಿ ಎರಡು ಪಕ್ಷಗಳ ಹಿರಿಯ ನಾಯಕರು ಬಂಡಾಯವನ್ನು ಯಾವ ರೀತಿ ಶಮನ ಮಾಡಲಿದ್ದಾರೆ ಅಥವಾ ಬಂಡಾಯವೇ ಪಕ್ಷಗಳ ಗೆಲುವಿಗೆ ಅಡಿಯಾಗಲಿದೆಯೇ ಎನ್ನುವುದನ್ನು ಕಾದುನೋಡಬೇಕಾಗಿದೆ. ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಕ್ಷೇತ್ರದ ಮತದಾರ ಯಾವ ನಿರ್ಧಾರವನ್ನು ಮತದಾನದ ದಿನ ತೆಗೆದುಕೊಳ್ಳಲಿದ್ದಾನೆ ಎನ್ನುವುದರ ಮೇಲೆ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು