“ಸಮುದಾಯದ ಮುಂದುವರೆದ ಜನಗಳು ಶೋಷಿತರ ಮತ್ತು ಹಳ್ಳಿಗಳ ಸಂಪರ್ಕ ಬೆಳೆಸಬೇಕಿದೆ. 35-40 ವರ್ಷಗಳ ಒಳ ಮೀಸಲಾತಿ ಸುದೀರ್ಘ ಹೋರಾಟವನ್ನು ಜೀವಂತವಾಗಿ ಇಟ್ಟವರು, ಹಳ್ಳಿಗಳಲ್ಲಿ ಎಸ್‌ಎಸ್‌ಎಲ್‌ಸಿ ಪಿಯುಸಿ ಮತ್ತು ಡಿಗ್ರಿಗಳ ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟ ಮತ್ತು ಶೈಕ್ಷಣಿಕವಾಗಿ ವಂಚಿತರಾದ ಶೋಷಿತ, ಅಸ್ಪೃಶ್ಯ ದಲಿತ ಸಮುದಾಯದ ಜನರು ಒಳಮೀಸಲಾತಿ ಹೋರಾಟವನ್ನು ಜೀವಂತವಾಗಿಟ್ಟರು. ಹಳ್ಳಿಗಳ ಜನಸಾಮಾನ್ಯರು ಸಾಂವಿಧಾನಿಕವಾಗಿ ಹೋರಾಟದ ಮೂಲಕ ಎದುರಿಸಿದರು. ಹಾಗಾಗಿ ದಲಿತರ ಸ್ವಾಭಿಮಾನದ ಬದುಕಿಗಾಗಿ ಹೋರಾಟ ನಮ್ಮ ಮನೆಗಳಿಂದಲೇ ಪ್ರಾರಂಭವಾಗಬೇಕಿದೆ” ಎಂದು ದಾವಣಗೆರೆಯ ಹರಿಹರದ ಮೈತ್ರಿವನದಲ್ಲಿ ಪತ್ರಕರ್ತ, ಚಿಂತಕ ಮತ್ತು ಸಾಮಾಜಿಕ ಹೋರಾಟಗಾರ ಸಂತೋಷ್ ಕೋಡಿಹಳ್ಳಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಮಾದಿಗ ಪ್ರೊಫೆಸರ್ಸ್ ಫೋರಂ, ಮಾದಿಗ ವಿದ್ಯಾರ್ಥಿ ಒಕ್ಕೂಟದ 2ನೇ ಪ್ರಾಧ್ಯಾಪಕರ ಸಮಾವೇಶ, ಮಾದಿಗ ಸಮುದಾಯದ ಅನನ್ಯತೆ ಮತ್ತು ಪ್ರಾತಿನಿಧ್ಯ, ವಿಚಾರ ಸಂಕಿರಣದಲ್ಲಿ ಭಾಗವಹಿಸಿ “ದೇಶದ ಒಳಮೀಸಲು ವಂಚಿತರ ಸ್ಥಿತಿಗತಿಗಳು, ಒಳಮೀಸಲು ತೀರ್ಪಿನ ನಂತರ ಬೆಳವಣಿಗೆಗಳು” ವಿಷಯದ ಕುರಿತು ಉಪನ್ಯಾಸ ನೀಡಿದ ಅವರು “ಸುದೀರ್ಘ ವರ್ಷಗಳ ಹೋರಾಟದ ಫಲವಾಗಿ ಇಂದು ಒಳಮೀಸಲಾತಿಯನ್ನು ಗಳಿಸಿಕೊಂಡಿದ್ದೇವೆ. ಎಲ್ಲರೂ ಸಮುದಾಯದ ಸಂಸ್ಕೃತಿ ಇತಿಹಾಸ ಮತ್ತು ದೌರ್ಬಲ್ಯಗಳನ್ನು ಅಧ್ಯಯನ ಮಾಡಿ ಅದನ್ನು ಶಕ್ತಿಯಾಗಿ ಪರಿವರ್ತಿಸುವ ಹೊರಹೊಮ್ಮುವ ಬಗ್ಗೆ ಸಮುದಾಯದಲ್ಲಿ ಸಕಾರಾತ್ಮಕ ಶಕ್ತಿಯಾಗಿ ಬೆಳೆಯಬೇಕು. ಸಮುದಾಯದ ಮುಂದುವರೆದ ಜನ ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿದಂತೆ ಮೊದಲು ಸಮುದಾಯದ ಜನರನ್ನು ಗೌರವಿಸುವ ಗುಣ ಕಲಿಯಬೇಕು” ಎಂದು ತಿಳಿಸಿದರು.

“ಸಮುದಾಯದ ಆಂತರಿಕ ಸಮಸ್ಯೆಗಳು ಬಹಳ ಇದ್ದು, ಈ ಆಂತರಿಕ ಸಮಸ್ಯೆಗಳು, ಮೌಢ್ಯಗಳನ್ನು ಮತ್ತು ನಮ್ಮಲ್ಲೆ ಇರುವ ತಾರತಮ್ಯವನ್ನು ನಿವಾರಿಸಬೇಕಿದೆ. ನಾಡಿನ ಮೇಲ್ವರ್ಗದ ಬಲಾಢ್ಯರ ಆರ್ಥಿಕ ಶಕ್ತಿ ಈ ಸಮುದಾಯ. ಈ ಸಮುದಾಯ ಎಲ್ಲ ಕಸಬುಗಳನ್ನು ಮಾಡಲು ಶಕ್ತವಿದೆ. ಶ್ರಮ ಮತ್ತು ಕೌಶಲ್ಯ ಈ ಸಮುದಾಯದ ದೊಡ್ಡ ಶಕ್ತಿಯಾಗಿದ್ದು ಇದನ್ನು ಮುಂದಿನ ದಿನಗಳಲ್ಲಿ ಸಮುದಾಯದ ಶೋಷಿತರ ಏಳಿಗೆಗೆ ಬಳಸಿಕೊಳ್ಳಬೇಕಿದೆ” ಎಂದು ಕರೆ ನೀಡಿದರು.
“ಸುಮಾರು 2000ನೇ ಇಸವಿಯವರೆಗೂ ಕಾಂಗ್ರೆಸ್ ಪಕ್ಷಕ್ಕೆ ಎಡಗೈ ಎನ್ನುವ ಒಂದು ಸಮುದಾಯ ಇದೆ ಎನ್ನುವುದೇ ಗೊತ್ತಿರಲಿಲ್ಲ. 50-60 ವರ್ಷಗಳಿಂದ ಮೀಸಲಾತಿಯ ಸೌಲಭ್ಯ ಅನುಭವಿಸುತ್ತಿದ್ದ ಒಂದು ಸಮುದಾಯ ಪರಿಶಿಷ್ಟ ಜಾತಿಗಳೆಂದರೆ ನಾವೇ ಎನ್ನುವಂತೆ ಕಾಂಗ್ರೆಸ್ ನಲ್ಲಿ ಬಿಂಬಿಸಿತ್ತು. ಒಳ ಮೀಸಲಾತಿ ಹೋರಾಟದ ನಂತರವೇ ಎಡಗೈ ಸಮುದಾಯ ಇದೆ ಎನ್ನುವುದು ಬೆಳಕಿಗೆ ಬಂದಿದೆ” ಎಂದು ಅಭಿಪ್ರಾಯಪಟ್ಟರು.
“ಕೂದಲನ್ನು ಸೀಳಿ ನ್ಯಾಯ ಕೊಡುವಂತಹ ಈ ಸಂದರ್ಭದಲ್ಲಿ ಅಸ್ಪೃಶ್ಯರಿಗೆ ಶಿಕ್ಷಣ, ಉದ್ಯೋಗದಲ್ಲಿ ಸಾಮಾಜಿಕ ನ್ಯಾಯವನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಈ ಹಿಂದೆ ಒಳಮೀಸಲಾತಿ ತೀರ್ಪಿನಲ್ಲಿ ನಿರಾಕರಿಸಿದ್ದರು. ಒಳಮೀಸಲಾತಿ ವಿಚಾರವಾಗಿ ಸಂವಿಧಾನದ ಮೊದಲ ತಿದ್ದುಪಡಿ 15/4 ಆರ್ಟಿಕಲ್ ನಂತರ, ಅದರ ಆಧಾರದ ಮೇಲೆ 2024ರ ವರೆಗೆ ಒಳ ಮೀಸಲಾತಿಯ ತೀರ್ಪು ಬರುವವರೆಗೂ ನ್ಯಾಯಾಲಯ ಅಥವಾ ಸರಕಾರ ಒಳ ಮೀಸಲಾತಿ ಕೊಡಲಿಲ್ಲ ಎಂದರೆ ಸಂವಿಧಾನದ ಆಶಯಗಳ ಅರ್ಥ ಇವರಿಗೆ ಸರಿಯಾಗಿ ಅರ್ಥವಾಗಿಲ್ಲ ಎಂದೇ ಅರ್ಥೈಸಿಕೊಳ್ಳಬೇಕಾಗುತ್ತದೆ. ಆದರೂ ಕೂಡ ಸುದೀರ್ಘ ವರ್ಷಗಳ ಹೋರಾಟದ ಇತಿಹಾಸದಲ್ಲಿ ಒಳ ಮೀಸಲಾತಿ ಪಡೆಯುವಲ್ಲಿ ಸಮುದಾಯ ತಾಳ್ಮೆ ಮತ್ತು ತ್ಯಾಗವನ್ನು ಪ್ರದರ್ಶಿಸಿದ್ದು, ಹೋರಾಟದ ಕಿಚ್ಚನ್ನು ಉಳಿಸಿಕೊಂಡಿದ್ದು ಹೆಮ್ಮೆಯ ವಿಷಯ” ಎಂದು ಸಂತಸ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಶಾಲೆಗೆ ರಸ್ತೆ ಅಭಿವೃದ್ಧಿಪಡಿಸಲು ಆರನೇ ತರಗತಿ ವಿದ್ಯಾರ್ಥಿನಿ ಗ್ರಾ.ಪಂ. ಮುಂದೆ ಧರಣಿ
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಶಿವಶರಣ, ಫಕೀರೇಶ ಹಳ್ಳಳ್ಳಿ, ಪ್ರೊ .ಬಿ ಎಲ್ ರಾಜು, ಪ್ರೊ .ರಾಮಚಂದ್ರ ಆರ್ ಕೆ, ಗೋವಿಂದರಾಜು,ಪ್ರೊ. ಸದಾಶಿವ, ಪ್ರೊ.ಪ್ರಕಾಶ್ ಕಟ್ಟಿಮನಿ, ಪ್ರೊ . ಗುಡಪ್ಪ ಸೇರಿದಂತೆ ಅನೇಕರು ಹಾಜರಿದ್ದರು.