ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (ಇಡಿ) ಗುರುವಾರ ನಿಷೇಧಿತ ಪಿಎಫ್‌ಐ ಸಂಘಟನೆಯ ರಾಜಕೀಯ ಪಕ್ಷವಾದ ಎಸ್‌ಡಿಪಿಐಗೆ ಸಂಬಂಧಿಸಿದ ಹಲವು ಕಚೇರಿಗಳಿಗೆ ದಾಳಿ ನಡೆಸಿದೆ.
ಇತ್ತೀಚಿಗಷ್ಟೇ ಇಡಿ ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ ಕೆ ಫೈಝಿ ಅವರನ್ನು ಬಂಧಿಸಿದ್ದರು. ಇದೀಗ ಎಸ್‌ಡಿಪಿಐಗೆ ಸಂಬಂಧಿಸಿದ ಹಲವು ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ದೆಹಲಿ, ಬೆಂಗಳೂರು ಸೇರಿದಂತೆ ದೇಶದ ಹಲವೆಡೆ ಎಸ್‌ಡಿಪಿಐ ಕಚೇರಿಗಳಲ್ಲಿ ಶೋಧ ಕಾರ್ಯಾಚರಣೆ ನಡೆದಿದೆ.
ಇದನ್ನು ಓದಿದ್ದೀರಾ? ಮೂವರು ಪಿಎಫ್‌ಐ ಸದಸ್ಯರಿಗೆ ಜಾಮೀನು; ಇಡಿ ‘ಕುದುರೆಯ ಮುಂದೆ ಬಂಡಿ ಇರಿಸಿದೆ’ ಎಂದ ದೆಹಲಿ ಹೈಕೋರ್ಟ್
ಎಸ್‌ಡಿಪಿಐ ದೆಹಲಿಯ ಎರಡು ಕಚೇರಿಗಳಲ್ಲಿ, ಕೇರಳದ ತಿರುವನಂತಪುರ, ಮಲಪ್ಪುರಂನಲ್ಲಿ, ಆಂಧ್ರಪ್ರದೇಶದ ನಡ್ಯಾಲ್, ಜಾರ್ಖಂಡ್‌ನ ಪಾಕೂರ್, ಮಹಾರಾಷ್ಟ್ರದ ಥಾಣೆ, ಬೆಂಗಳೂರು, ಚೆನ್ನೈ, ಕೋಲ್ಕತ್ತಾ, ಲಕ್ನೋ ಮತ್ತು ಜೈಪುರದಲ್ಲಿ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ.
ಭಯೋತ್ಪಾದಕ ಕೃತ್ಯಗಳನ್ನು ನಡೆಸುವ ಆರೋಪದಲ್ಲಿ 2022ರ ಸೆಪ್ಟೆಂಬರ್‌ನಲ್ಲಿ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಲಾಗಿದ್ದು, ಕೇಂದ್ರ ಸರ್ಕಾರವು ಇದು ಕಾನೂನುಬಾಹಿರ ಸಂಘಟನೆ ಎಂದು ಕರೆದಿದೆ. ಹಾಗೆಯೇ ಪಿಎಫ್‌ಐ ತನ್ನ ಕ್ರಿಮಿನಲ್ ಕಾರ್ಯಗಳನ್ನು ಎಸ್‌ಡಿಪಿಐ ಸಹಾಯದಿಂದ ಮಾಡುತ್ತಿತ್ತು, ಪಿಎಫ್‌ಐ ಮತ್ತು ಎಸ್‌ಡಿಪಿಐ ನಡುವೆ ನಂಟಿದೆ ಎಂದು ಇಡಿ ಆರೋಪಿಸಿದೆ.
2009ರಲ್ಲಿ ಎಸ್‌ಡಿಪಿಐ ಸ್ಥಾಪಿಸಲಾಗಿದ್ದು, ಅದರ ಮುಖ್ಯ ಕಚೇರಿ ದೆಹಲಿಯಲ್ಲಿದೆ. ಇದು ಪಿಎಫ್‌ಐನ ರಾಜಕೀಯ ಪಕ್ಷ ಎಂಬ ಆರೋಪ ಮಾಡಲಾಗಿದೆ. ಪಿಎಫ್‌ಐ ಸಂಘಟನೆ ನಿಷೇಧದ ಬೆನ್ನಲ್ಲೇ ಎಸ್‌ಡಿಪಿಐ ಮೇಲೆಯೂ ಮನಿ ಲಾಂಡರಿಂಗ್ ಆರೋಪಗಳು ಕೇಳಿಬಂದಿದೆ.
