“ಬರ ಪರಿಸ್ಥಿತಿಯನ್ನು ಸರ್ಕಾರ ಯಶಸ್ವಿಯಾಗಿ ನಿಭಾಯಿಸುತ್ತಿರುವುದನ್ನು ಸಹಿಸಲಾಗದೇ ಬಿಜೆಪಿ ಸುಳ್ಳು ಪ್ರಚಾರಕ್ಕೆ ಮುಂದಾಗಿದೆ. ನೀರಿನ ವಿಚಾರದಲ್ಲಿ ರಾಜಕೀಯ ಮಾಡೋದು ಬಿಟ್ಟು ಕೇಂದ್ರ ಸರ್ಕಾರದಿಂದ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಲಿ” ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಸವಾಲು ಹಾಕಿದ್ದಾರೆ.
ವಿಧಾನಸೌಧದ ಆವರಣದಲ್ಲಿ ಬಿಡಬ್ಲ್ಯೂಎಸ್ಎಸ್‌ಬಿ ವತಿಯಿಂದ ಆರಂಭಿಸಿರುವ “ನೀರು ಉಳಿಸಿ ಬೆಂಗಳೂರು ಬೆಳಸಿ” ಅಭಿಯಾನಕ್ಕೆ ಚಾಲನೆ ನೀಡಿದ ಶಿವಕುಮಾರ್ ಅವರು, ಅಂತರ್ಜಲ, ಜಲಸಂರಕ್ಷಕ, ಜಲಮಿತ್ರ, ಜಲಸ್ನೇಹಿ ಆ್ಯಪ್‌ಗಳನ್ನು ಬಿಡುಗಡೆ ಮಾಡಿದರು.
ಬೆಂಗಳೂರು ನೀರು ಸಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ʼನೀರು ಉಳಿಸಿ ಬೆಂಗಳೂರು ಬೆಳೆಸಿʼ ಅಭಿಯಾನಕ್ಕೆ ಇಂದು ವಿಧಾನಸೌಧದ ಮುಂಭಾಗದಲ್ಲಿ ಚಾಲನೆ ನೀಡಿದೆ. ಮಳೆ ಕೊರತೆ, ನೀರಿನ ಅಭಾವದಿಂದಾಗಿ ಸದ್ಯ ಬೆಂಗಳೂರು ನೀರಿನ ಆಹಾಕಾರ ಎದುರಿಸುತ್ತಿದ್ದು ಹನಿ ನೀರೂ ಕೂಡ ಮುಖ್ಯ. ಈ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಅಭಿಯಾನ… pic.twitter.com/51M6vQbP59
— DK Shivakumar (@DKShivakumar) March 14, 2024
ಆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಕಾವೇರಿ ನೀರು ಪೂರೈಕೆ ಪ್ರದೇಶಗಳಲ್ಲಿ ನೀರಿನ ಅಭಾವವಿಲ್ಲ. ಕೊಳವೆ ಬಾವಿಗಳು ಬತ್ತಿರುವ ಕಡೆಗಳಲ್ಲಿ ಮಾತ್ರ ಅಭಾವ ಹೆಚ್ಚಾಗಿದೆ. ಆದರೆ ಈ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ತಮಿಳುನಾಡಿಗೆ ನೀರು ಬಿಟ್ಟಿದ್ದೇವೆ ಎಂಬುದು ಸುಳ್ಳು. ನಮ್ಮಲ್ಲಿ ನೀರೇ ಇಲ್ಲದಿರುವಾಗ ತಮಿಳುನಾಡಿಗೆ ಎಲ್ಲಿಂದ ನೀರು ಬಿಡಲು ಸಾಧ್ಯ? ಮೇಲಾಗಿ ಅವರು ನೀರು ಕೇಳಿಯೇ ಇಲ್ಲ. ಬಿಜೆಪಿಯದು ಕೇವಲ ರಾಜಕೀಯ ಗಿಮಿಕ್. ರಾಜ್ಯ ಬಿಜೆಪಿ ನಾಯಕರು ರಾಜಕೀಯ ಬಿಟ್ಟು ಮೇಕೆದಾಟು ಯೋಜನೆಗೆ ಕೇಂದ್ರ ಬಿಜೆಪಿ ಸರ್ಕಾರದಿಂದ ಅನುಮತಿ ಕೊಡಿಸಲಿ” ಎಂದು ತಿಳಿಸಿದರು.
ಮಂಜುನಾಥ್ ಅವರನ್ನು ಗೌರವಿಸುತ್ತೇವೆ
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಡಾ. ಸಿ. ಎನ್. ಮಂಜುನಾಥ್ ಅವರ ಸ್ಪರ್ಧೆ ವಿಚಾರವಾಗಿ ಕೇಳಿದಾಗ, “ನಾವು ಮಂಜುನಾಥ್ ಅವರನ್ನು ಗೌರವಿಸುತ್ತೇವೆ. ಅವರು ಉತ್ತಮ ವೈದ್ಯರು. ಅವರಿಗೆ ನಾವು ಬೆಂಬಲ ನೀಡಿದ್ದೆವು. ಆದರೆ ರಾಜಕೀಯವೇ ಬೇರೆ. ನನ್ನ ಸಹೋದರ ಈ ಕ್ಷೇತ್ರದಲ್ಲಿ ಸಂಸದನ ರೀತಿ ಕೆಲಸ ಮಾಡುತ್ತಿಲ್ಲ, ಗ್ರಾಮ ಪಂಚಾಯ್ತಿ ಸದಸ್ಯನಂತೆ ಜನರ ಮಧ್ಯೆ ನಿಂತು ಕೆಲಸ ಮಾಡುತ್ತಿದ್ದಾರೆ” ಎಂದು ತಿಳಿಸಿದರು.
ಬಿಜೆಪಿ ಪಟ್ಟಿಯಲ್ಲಿ 6 ಹಾಲಿ ಸಂಸದರಿಗೆ ಟಿಕೆಟ್ ಮಿಸ್ ಆಗಿದೆ ಎಂದು ಕೇಳಿದಾಗ, “ನನಗೆ ಬಂದಿರುವ ಮಾಹಿತಿ ಪ್ರಕಾರ 10 ಹಾಲಿ ಸಂಸದರಿಗೆ ಟಿಕೆಟ್ ತಪ್ಪಲಿದೆ. ನಾನು ಅದಕ್ಕೆ ಬದ್ದವಾಗಿದ್ದೇನೆ. ಅದು ಅವರ ಪಕ್ಷದ ವಿಚಾರ. ಅವರು ಏನಾದರೂ ಮಾಡಿಕೊಳ್ಳಲಿ” ಎಂದು ತಿಳಿಸಿದರು.
ಟಿಕೆಟ್ ತಪ್ಪಿರುವವರಲ್ಲಿ ಯಾರಾದರೂ ಕಾಂಗ್ರೆಸ್ ಸೇರ್ಪಡೆಯಾಗುತ್ತಾರಾ ಎಂದು ಕೇಳಿದಾಗ, “ಈ ಸಮಯದಲ್ಲಿ ಇದನ್ನು ಬಿಡಿಸಿ ಹೇಳುವುದಿಲ್ಲ” ಎಂದು ಡಿ ಕೆ ಶಿವಕುಮಾರ್ ತಿಳಿಸಿದರು.
