ಲೋಕಸಭೆ ಚುನಾವಣೆಯ ಬಳಿಕ ಐದು ಗ್ಯಾರಂಟಿ ಸ್ಥಗಿತಗೊಳ್ಳುವ ಬಗ್ಗೆ ಮಾಗಡಿ ಕಾಂಗ್ರೆಸ್ ಶಾಸಕ ಬಾಲಕೃಷ್ಣ ಅವರು ನೀಡಿದ್ದ ಹೇಳಿಕೆಯು ಈಗ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಬಿಜೆಪಿ ಪಾಳಯವು, “ಘೋಷಿಸಿದ ಗ್ಯಾರಂಟಿಗಳನ್ನು ಈಡೇರಿಸಲಾಗದೆ ಸ್ವಾಭಿಮಾನಿ ಕನ್ನಡಿಗರನ್ನು ಕಾಂಗ್ರೆಸ್ ಸರ್ಕಾರ ಅವಮಾನಿಸುತ್ತಿದೆ” ಎಂದು ಟೀಕಿಸಿದೆ.
ಕಾಂಗ್ರೆಸ್ ಶಾಸಕನ ಹೇಳಿಕೆಯ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, “ಯಾವುದೇ ಅಡೆತಡೆ ಇಲ್ಲದೆ ಐದು ವರ್ಷವೂ ‘ಗ್ಯಾರಂಟಿ’ ಮುಂದುವರಿಯಲಿದೆ” ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ವೇಳೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಬಾಲಕೃಷ್ಣ ಅವರು ಈ ರೀತಿ ಹೇಳಿಕೆ ಕೊಟ್ಟಿಲ್ಲ. ಲೋಕಸಭೆ ನಂತರ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುವುದು ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ” ಎಂದು ಹೇಳಿದರು.
“ಬಿಜೆಪಿಯವರು ಆ ರೀತಿಯ ಹೇಳ್ತಿದ್ದಾರೆ. ಹಾಗಾಗಿ ಎಚ್ಚರಿಕೆಯಿಂದ ಇರಿ ಎಂದಷ್ಟೇ ಮಾಗಡಿ ಬಾಲಕೃಷ್ಣ ಹೇಳಿದ್ದು. ಗ್ಯಾರಂಟಿ ಯೋಜನೆ ಐದು ವರ್ಷಗಳ ಕಾಲ ಯಾವುದೇ ಅಡೆ ತಡೆ ಇಲ್ಲದೆ ಮುಂದುವರೆಯಲಿದೆ” ಎಂದು ಡಿಕೆಶಿ ಸ್ಪಷ್ಟಪಡಿಸಿದರು.
ಶಾಸಕ ಬಾಲಕೃಷ್ಣ ಹೇಳಿಕೆ ರಾಜ್ಯದ ಜನರಿಗೆ ಅವಮಾನ ಮಾಡಿದಂತೆ ಎನ್ನುವ ವಿಜಯೇಂದ್ರ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಬಿಜೆಪಿಯವರಿಗೆ ಉತ್ತರ ನೀಡಲು ನಾನು ತಯಾರಿಲ್ಲ” ಎಂದು ತಿಳಿಸಿದರು.
ಮಾಗಡಿ ಶಾಸಕ ಬಾಲಕೃಷ್ಣ ಹೇಳಿದ್ದೇನು?
ಮಾಗಡಿ ತಾಲೂಕಿನ ಶ್ರೀಗಿರಿಪುರದಲ್ಲಿ ಮಂಗಳವಾರ ನಡೆದಿದ್ದ ಜನಸ್ಪಂದನ ಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ ಶಾಸಕ ಬಾಲಕೃಷ್ಣ, “ರಾಜ್ಯದ ಜನರಿಗೆ ಐದು ಗ್ಯಾರಂಟಿ ಯೋಜನೆಗಳನ್ನು ಕೊಟ್ಟರೂ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಪಡೆಯದಿದ್ದರೆ ಗ್ಯಾರಂಟಿಗಳನ್ನು ರದ್ದು ಮಾಡುವುದೇ ಒಳ್ಳೆಯದು. ಈ ಕುರಿತು, ಮುಖ್ಯಮಂತ್ರಿ ಅವರಿಗೂ ಹೇಳಿದ್ದೇನೆ” ಎಂದಿದ್ದರು.
ಅಲ್ಲದೇ, “ಒಂದು ವೇಳೆ, ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ನಾವೇನಾದರೂ ಕಡಿಮೆ ಸ್ಥಾನ ಗಳಿಸಿದರೆ, ಜನ ಗ್ಯಾರಂಟಿಗಳನ್ನು ತಿರಸ್ಕರಿಸಿದ್ದಾರೆ ಎಂದರ್ಥ. ಆಗ, ಅವುಗಳನ್ನು ರದ್ದು ಮಾಡಿ ನಾವೂ ಅವರಂತೆ ಮಂದಿರದ ರಾಜಕಾರಣ ಮಾಡಬೇಕಾಗುತ್ತದೆ” ಎಂದಿದ್ದರು.
ಈ ಹೇಳಿಕೆಯನ್ನು ಬಿಜೆಪಿ ಪಾಳಯವು ಕಿಡಿಕಾರಿದ್ದಲ್ಲದೇ, “ಸರ್ಕಾರ ಕನ್ನಡಿಗರಿಗೆ ಅವಮಾನ ಮಾಡುತ್ತಿದೆ” ಎಂದು ಆರೋಪಿಸಿದೆ.
ಘೋಷಿಸಿದ ಗ್ಯಾರಂಟಿಗಳನ್ನು ಈಡೇರಿಸಲಾಗದೆ ಸ್ವಾಭಿಮಾನಿ ಕನ್ನಡಿಗರನ್ನು ಅವಮಾನಿಸುತ್ತಿದೆ @INCKarnataka.
ಕರ್ನಾಟಕದ ಸ್ವಾಭಿಮಾನಿ ಕನ್ನಡಿಗರು ನಿಮ್ಮ ನಕಲಿ ಗ್ಯಾರಂಟಿಗಳಿಗೆ ಎಂದೂ ಕೈ ಚಾಚಿಲ್ಲ, ಮುಂದೆಯೂ ಚಾಚುವುದಿಲ್ಲ.
ಘೋಷಿಸಿದ ಗ್ಯಾರಂಟಿಗಳನ್ನು ಈಡೇರಿಸುವ ತಾಕತ್ತು ಕಾಂಗ್ರೆಸ್ ಸರ್ಕಾರಕ್ಕಿಲ್ಲ. ಆಡಳಿತ ವಿರೋಧಿ ಅಲೆಯಲ್ಲಿ… pic.twitter.com/gEVVOh3wMY
— BJP Karnataka (@BJP4Karnataka) January 31, 2024
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ಐಟಿ ಸೆಲ್, “ಕಾಂಗ್ರೆಸ್ ಸರ್ಕಾರವು ಘೋಷಿಸಿದ ಗ್ಯಾರಂಟಿಗಳನ್ನು ಈಡೇರಿಸಲಾಗದೆ ಸ್ವಾಭಿಮಾನಿ ಕನ್ನಡಿಗರನ್ನು ಅವಮಾನಿಸುತ್ತಿದೆ. ಕರ್ನಾಟಕದ ಸ್ವಾಭಿಮಾನಿ ಕನ್ನಡಿಗರು ನಿಮ್ಮ ನಕಲಿ ಗ್ಯಾರಂಟಿಗಳಿಗೆ ಎಂದೂ ಕೈ ಚಾಚಿಲ್ಲ, ಮುಂದೆಯೂ ಚಾಚುವುದಿಲ್ಲ” ಎಂದು ಹೇಳಿದೆ.
“ಘೋಷಿಸಿದ ಗ್ಯಾರಂಟಿಗಳನ್ನು ಈಡೇರಿಸುವ ತಾಕತ್ತು ಕಾಂಗ್ರೆಸ್ ಸರ್ಕಾರಕ್ಕಿಲ್ಲ. ಆಡಳಿತ ವಿರೋಧಿ ಅಲೆಯಲ್ಲಿ ಮುಳುಗುತ್ತಿರುವ ಕಾಂಗ್ರೆಸ್, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೈ ಸುಟ್ಟು ಕರಕಲಾಗುವ ಕಾರಣ ಈಗ ಕನ್ನಡಿಗರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದೆ. ಗ್ಯಾರಂಟಿ ಹೆಸರಿನಲ್ಲಿ ಜನರಿಂದ ಹೆಚ್ಚಿನ ತೆರಿಗೆ ವಸೂಲಿ ಮಾಡಿ, ಬೆಲೆಯೇರಿಕೆಯ ಬರೆ ಎಳೆದು, ಈಗ ಗ್ಯಾರಂಟಿಗಳಿಗೂ ಕೋಕ್ ನೀಡುತ್ತೇವೆಂಬ ಗೊಡ್ಡು ಬೆದರಿಕೆ ಹಾಕುತ್ತಿದೆ. ಸ್ವಾಭಿಮಾನಿ ಕನ್ನಡಿಗರು ನಿಮ್ಮ ಸುಳ್ಳುಗಳಿಗೆ ಬಲಿಯಾಗದೆ, ನಕಲಿ ಗ್ಯಾರಂಟಿಗಳಿಗೆ ಮಣಿಯದೆ, ಮೋದಿ ಎಂಬ ಅಸಲಿ ಗ್ಯಾರಂಟಿಯನ್ನು ಅಪ್ಪಿಕೊಳ್ಳುವುದು ಖಚಿತ-ನಿಶ್ಚಿತ-ಖಂಡಿತ” ಎಂದು ಬಿಜೆಪಿ ತಿಳಿಸಿದೆ.
ಕಾಂಗ್ರೆಸ್ನಿಂದಲೂ ಕೌಂಟರ್
ಈ ಬಗ್ಗೆ ಕಾಂಗ್ರೆಸ್ ಕೂಡ ಕೌಂಟರ್ ಮಾಡಿದ್ದು, “ನಮ್ಮ ಐದೂ ಗ್ಯಾರಂಟಿ ಯೋಜನೆಗಳು ಜನರ ಕಲ್ಯಾಣಕ್ಕಾಗಿ ಜಾರಿಗೆ ತಂದ ಯೋಜನೆಗಳು. ಐದು ವರ್ಷಗಳ ಕಾಲ ಸರ್ಕಾರ ಇರುವವರೆಗೂ ಈ ಗ್ಯಾರಂಟಿ ಯೋಜನೆಗಳಿಗೆ ಯಾವುದೇ ಕಂಟಕ ಇರುವುದಿಲ್ಲ. ಆದರೆ ಬಿಜೆಪಿ ಗ್ಯಾರಂಟಿ ಯೋಜನೆಗಳು ರದ್ದಾಗುತ್ತವೆ ಅಪಪ್ರಚಾರ ನಡೆಸುತ್ತಿದೆ. ಬಹುಶಃ ಜನರ ಸುಭಿಕ್ಷೆ ಬಿಜೆಪಿಗೆ ಇಷ್ಟವಿದ್ದಂತಿಲ್ಲ” ಎಂದು ಹೇಳಿದೆ.
ನಮ್ಮ ಐದೂ ಗ್ಯಾರಂಟಿ ಯೋಜನೆಗಳು ಜನರ ಕಲ್ಯಾಣಕ್ಕಾಗಿ ಜಾರಿಗೆ ತಂದ ಯೋಜನೆಗಳು.
ಐದು ವರ್ಷಗಳ ಕಾಲ ಸರ್ಕಾರ ಇರುವವರೆಗೂ ಈ ಗ್ಯಾರಂಟಿ ಯೋಜನೆಗಳಿಗೆ ಯಾವುದೇ ಕಂಟಕ ಇರುವುದಿಲ್ಲ.
ಆದರೆ @BJP4Karnataka ಗ್ಯಾರಂಟಿ ಯೋಜನೆಗಳು ರದ್ದಾಗುತ್ತವೆ ಅಪಪ್ರಚಾರ ನಡೆಸುತ್ತಿದೆ, ಬಹುಶಃ ಜನರ ಸುಭಿಕ್ಷೆ ಬಿಜೆಪಿಗೆ ಇಷ್ಟವಿದ್ದಂತಿಲ್ಲ.
ಜನಕಲ್ಯಾಣ ಯೋಜನೆಗಳ…
— Karnataka Congress (@INCKarnataka) January 31, 2024
“ಜನಕಲ್ಯಾಣ ಯೋಜನೆಗಳ ವಿರುದ್ಧವಿರುವ ಬಿಜೆಪಿಗೆ ಅವಕಾಶ ಸಿಕ್ಕರೆ ರದ್ದು ಮಾಡುವುದಕ್ಕೆ ಹಿಂಜರಿಯುವುದಿಲ್ಲ. ಬಿಜೆಪಿ ಬಂಡವಾಳಶಾಹಿಗಳ ಪರವೇ ಹೊರತು ಬಡಜನರ ಪರವಲ್ಲ. ಬಿಜೆಪಿಯ ಯಾವುದೇ ಅಪಪ್ರಚಾರಗಳಿಗೂ ಜನತೆ ಕಿವಿಗೊಡದೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿ ಇನ್ನಷ್ಟು ಜನಕಲ್ಯಾಣ ಕಾರ್ಯಕ್ರಮಗಳನ್ನು ಪಡೆಯಲು ಮುಂದಾಗಬೇಕು” ಎಂದು ಕರೆ ನೀಡಿದೆ.