- ‘ಬ್ರ್ಯಾಂಡ್ ಬೆಂಗಳೂರು’ ಬಗ್ಗೆ ಎರಡನೇ ಸಭೆ ನಡೆಸಿದ ಡಿಸಿಎಂ
- ‘ಟನಲ್ ಮಾಡುವ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ’
ಸಮಗ್ರ ರಾಜಧಾನಿಯ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ರೂಪಿಸಿರುವ ‘ಬ್ರ್ಯಾಂಡ್ ಬೆಂಗಳೂರು’ ಕಲ್ಪನೆ ಬಗ್ಗೆ ಸಾಮಾನ್ಯ ಜನರಿಂದ ಹಿಡಿದು ಎಲ್ಲ ವರ್ಗದ ಜನರಿಂದ ಸಲಹೆಗಳನ್ನು ಸರ್ಕಾರ ಆಹ್ವಾನಿಸಿದೆ.
ಈ ಕುರಿತು ಬುಧವಾರ ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ‘ಬ್ರ್ಯಾಂಡ್ ಬೆಂಗಳೂರು’ ಬಗ್ಗೆ ಎರಡನೇ ಸಭೆ ನಡೆಯಿತು. ಈ ಸಭೆಯಲ್ಲಿ ಬ್ರಾಂಡ್ ಬೆಂಗಳೂರಿಗೆ ಸಾರ್ವಜನಿಕರು ಮಾಹಿತಿ ನೀಡಲು ಪೋರ್ಟಲ್ ಲಾಂಚ್ ಮಾಡಿದರು.
ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್, “ಬೆಂಗಳೂರಿನಲ್ಲಿ ಚಿಕ್ಕ ಸಮಸ್ಯೆ ಕಂಡುಬಂದರೂ ಹೊರಗೆ ದೊಡ್ಡದಾಗಿ ಬಿಂಬಿತವಾಗುತ್ತೆ. ಕಾರಣ ಬೆಂಗಳೂರು ದೇಶದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ನಗರ. ಹೀಗಾಗಿ ಸಮಗ್ರ ಬೆಂಗಳೂರು ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಈ ಕುರಿತು ಜನರ ಅಭಿಪ್ರಾಯ ಸಂಗ್ರಹಿಸುತ್ತಿದ್ದೇವೆ. ಜುಲೈ 15ರ ಒಳಗೆ ಸಾರ್ವಜನಿಕರು ಸಲಹೆ ಕೊಡಬಹುದು” ಎಂದರು.
“ಈಗಾಗಲೇ ಬಿಲ್ಡರ್ಸ್, ಉದ್ಯಮಿಗಳ ಜೊತೆ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗಿದೆ. ಈಗ ಸಾಮಾನ್ಯ ಜನರ ಸಲಹೆಗಳನ್ನು ನಾವು ಕೇಳುತ್ತೇವೆ. ಮಾಜಿ ಸಿಎಂ ಬೊಮ್ಮಾಯಿ ಅವರ ಸಲಹೆಯನ್ನೂ ಕೇಳುತ್ತೇವೆ. ಅವರ ಭೇಟಿಗೆ ಸಮಯ ಕೇಳಿದ್ದೆ, ಅವರು ಸದ್ಯ ಬ್ಯುಸಿ ಇದ್ದಾರೆ” ಎಂದರು.
“1 ಕೋಟಿ 60 ಲಕ್ಷ ಜನ ಬೆಂಗಳೂರಿನಲ್ಲಿ ಇದ್ದಾರೆ. ಆದರೆ ಪ್ರತಿದಿನ ಬಂದು ಹೋಗುವವರ ಸಂಖ್ಯೆ ಹೆಚ್ಚಿದೆ. ಬೆಂಗಳೂರಿನ ಪ್ರಕೃತಿ ಗಮನದಲ್ಲಿಟ್ಟುಕೊಂಡು ಇಲ್ಲಿ ನೆಲೆಸಲು ಇಷ್ಟಪಡುತ್ತಾರೆ. ಬಜೆಟ್‌ನಲ್ಲಿ ಬೆಂಗಳೂರಿಗೆ ಏನು ಕೊಡಬೇಕು ಅಂತ ಮುಖ್ಯಮಂತ್ರಿ ಅವರು ಅಧ್ಯಯನ ಮಾಡುತ್ತಿದ್ದಾರೆ. ಅದನ್ನು ಅವರೇ ಘೋಷಣೆ ಮಾಡ್ತಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಹೊಸ ʼಸ್ಮಾರ್ಟ್ ಸಿಟಿʼ ದಾವಣಗೆರೆಯ ಭರಾಟೆಯಲಿ ಹಳೆಯ ಡಾವಣಗೇರಿ ಕಳೆಯದಿರಲಿ
ಟನಲ್ ಮಾಡುವ ಬಗ್ಗೆ ಚರ್ಚೆ
“ಪ್ರಮುಖ ನಗರಗಳಲ್ಲಿ ಫುಟ್ ಪಾತ್ ಸಮಸ್ಯೆ ಇದೆ. ಮಲ್ಲೇಶ್ವರಂ, ಬಸವನಗುಡಿಯಲ್ಲಿ ಫುಟ್ ಪಾತ್ ಸಮಸ್ಯೆ ಬಹಳ ಇದೆ. ಬೆಂಗಳೂರು ಟ್ರಾಫಿಕ್ ನಲ್ಲಿ ಕೆಲಸ ಮಾಡಿದ ನಿವೃತ್ತ ಅಧಿಕಾರಿಗಳ ಅಭಿಪ್ರಾಯ ಸಂಗ್ರಹ ಮಾಡುತ್ತೇವೆ. ಟನಲ್ ಮಾಡುವ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಟ್ರೈನ್ ಮತ್ತು ಬಸ್ಸು ಹೋಗುವ ರೀತಿ ಮಾಡಬೇಕು ಅನ್ನೋ ಅಭಿಪ್ರಾಯ ಇದೆ. ಜಯದೇವ ಬಳಿ ಪೈಲಟ್ ಯೋಜನೆ ಅಂತ ಪರಿಗಣಿಸುತ್ತಿದ್ದೇವೆ” ಎಂದರು.
ಏಳು ವಿಚಾರದಲ್ಲಿ ಜನರು ಸಲಹೆ ನೀಡಬಹುದು.
ಸಂಚಾರಮುಕ್ತ ಬೆಂಗಳೂರು
ಹಸಿರು ಬೆಂಗಳೂರು
ಸ್ವಚ್ಛ ಬೆಂಗಳೂರು
ಜನಹಿತ ಬೆಂಗಳೂರು
ಆರೋಗ್ಯಕರ ಬೆಂಗಳೂರು
ಟೆಕ್ ಬೆಂಗಳೂರು
ಜಲಸುರಕ್ಷಾ ಬೆಂಗಳೂರು
www.brandbengaluru.karnataka.gov.in ವೆಬ್ ಸೈಟ್ ನಲ್ಲಿ ಜನರು ಸಲಹೆ ನೀಡಬಹುದು.