ಇತ್ತೀಚೆಗೆ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಅದ್ಮಿ ಪಕ್ಷ (ಎಎಪಿ) ಹೀನಾಯ ಸೋಲುಂಡಿದ್ದು, ಭಾರೀ ಮುಖಭಂಗ ಅನುಭವಿಸಿತ್ತು. ಎಎಪಿಯ ಘಟಾನುಘಟಿ ನಾಯಕರಾದ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಮಾಜಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಸೇರಿದಂತೆ ಹಲವರು ಸೋಲುಂಡಿದ್ದಾರೆ. ಎಎಪಿ ತನ್ನ ವರ್ಚಸ್ಸು, ನೆಲೆ ಕಳೆದುಕೊಳ್ಳುತ್ತಿದೆ ಎಂಬ ಅಭಿಪ್ರಾಯಗಳೂ ವ್ಯಕ್ತವಾಗುತ್ತಿದೆ. ಇದೇ ಹೊತ್ತಿನಲ್ಲಿ ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) 15 ಎಎಪಿ ಕೌನ್ಸಿಲರ್‌ಗಳು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಹೊಸ ಪಕ್ಷ ಕಟ್ಟುವುದಾಗಿ ಘೊಷಿಸಿದ್ದಾರೆ.
ಎಂಸಿಡಿ ಕೌನ್ಸಿಲರ್‌ಗಳಾದ ಮುಕೇಶ್ ಗೋಯೆಲ್ ಮತ್ತು ಹಿಮಾನಿ ಜೈನ್ ನೇತೃತ್ವದಲ್ಲಿ 15 ಕೌನ್ಸಿಲರ್‌ಗಳು ಎಎಪಿಗೆ ರಾಜೀನಾಮೆ ನೀಡಿದ್ದಾರೆ. ಪಕ್ಷದೊಳಗಿನ ಆಂತರಿಕ ಸಂಘರ್ಷಗಳೇ ತಾವು ಪಕ್ಷ ತೊರೆಯಲು ಕಾರಣ. ಆಂತರಿಕ ಸಂಘರ್ಷದಿಂದಾಗಿ ಪಾಲಿಕೆಯಲ್ಲಿ ಯಾವುದೇ ಮಹತ್ವದ ಕೆಲಸಗಳು ಪೂರ್ಣಗೊಂಡಿಲ್ಲ ಎಂದು ಹೇಳಿದ್ದಾರೆ.
ಎಎಪಿ ತೊರೆದಿರುವ ಕೌನ್ಸಿಲರ್‌ಗಳು ‘ಇಂದ್ರಪ್ರಸ್ಥ ವಿಕಾಸ್ ಪಕ್ಷ’ ಎಂಬ ಹೊಸ ಪಕ್ಷ ಕಟ್ಟುವುದಾಗಿ ಹೇಳಿಕೊಂಡಿದ್ದಾರೆ.
“ಎಂಸಿಡಿಯಲ್ಲಿ ನಾವು ಅಧಿಕಾರದಲ್ಲಿದ್ದೆವು. ಆದರೂ, ಕಳೆದ 2.5 ವರ್ಷಗಳಲ್ಲಿ ಯಾವುದೇ ಉತ್ತಮ ಕೆಲಸ ಮಾಡಲಾಗಿಲ್ಲ. ದೆಹಲಿ ಅಭಿವೃದ್ಧಿಯೇ ನಮ್ಮ ಸಿದ್ಧಾಂತವಾಗಿದೆ. ಹೀಗಾಗಿ, ನಾವು ಎಎಪಿ ತೊರೆದು, ‘ಇಂದ್ರಪ್ರಸ್ಥ ವಿಕಾಸ್ ಪಕ್ಷ’ವನ್ನು ಕಟ್ಟುತ್ತಿದ್ದೇವೆ. ದೆಹಲಿಯ ಅಭಿವೃದ್ಧಿಗಾಗಿ ದುಡಿಯುವ ಪಕ್ಷಕ್ಕೆ ಬೆಂಬಲ ನೀಡುತ್ತೇವೆ” ಎಂದು ಹಿಮಾನಿ ಜೈನ್ ಹೇಳಿದ್ದಾರೆ.
“ಈಗ 15 ಕೌನ್ಸಿಲರ್‌ಗಳು ಎಎಪಿ ತೊರೆದಿದ್ದೇವೆ. ಎಎಪಿಗೆ ರಾಜೀನಾಮೆ ನೀಡುವವರ ಸಂಖ್ಯೆ ಇನ್ನೂ ಹೆಚ್ಚಾಗಬಹುದು” ಎಂದು ಮುಕೇಶ್ ಗೋಯಲ್ ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಆಪರೇಷನ್ ಸಿಂಧೂರ | ಕಾಂಗ್ರೆಸ್ – ತರೂರ್ ನಡುವೆ ವಾಗ್ಯುದ್ಧ; ಬೇಳೆ ಬೇಯಿಸಿಕೊಳ್ಳುತ್ತಿದೆ ಬಿಜೆಪಿ
ಕೌನ್ಸಿಲರ್‌ಗಳ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿರುವ ಎಎಪಿ ನಾಯಕಿ ಪ್ರಿಯಾಂಕಾ ಕಕ್ಕರ್, “ರಾಜೀನಾಮೆ ನೀಡಿದ ಕೌನ್ಸಿಲರ್‌ಗಳಿಗೆ ಬಿಜೆಪಿಗರು ಆಮಿಷವೊಡ್ಡುತ್ತಿದ್ದಾರೆ.ತಮ್ಮ ಪಕ್ಷಕ್ಕೆ ಸೆಳೆಯಲು ಯತ್ನಿಸುತ್ತಿದ್ದಾರೆ. ಈ ರೀತಿಯ ತಂತ್ರಗಳ ಮೂಲಕ ನಗರಸಭೆಯಲ್ಲಿ ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ” ಎಂದು ಆರೋಪಿಸಿದ್ದಾರೆ.