ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಅನುದಾನದ ವಿಚಾರದಲ್ಲಿ ನಿರಂತರ ಅನ್ಯಾಯ ಮಾಡುತ್ತಿದೆ. ಇದು ಕೇವಲ ಕರ್ನಾಟಕದ ಸಮಸ್ಯೆ ಮಾತ್ರ ಅಲ್ಲ. ಎಲ್ಲ ರಾಜ್ಯಗಳ ಸಮಸ್ಯೆ. ಹಾಗಾಗಿ, ಇಂತಹ ಅನ್ಯಾಯ ಮುಂದುವರಿಯಬಾರದು. ಹಾಗಾಗಿ, ಈ ದೆಹಲಿ ಚಲೋ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ದೆಹಲಿಯ ಹಲಿಯ ಜಂತರ್ ಮಂತರ್‌ನಲ್ಲಿ ಆಯೋಜಿಸಲಾಗಿರುವ ಪ್ರತಿಭಟನೆಗೂ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕ 100 ರೂಪಾಯಿ ತೆರಿಗೆ ಪಾಲು ಕೊಟ್ಟರೆ, ಕೇವಲ 12-13 ರೂ ಮಾತ್ರ ನೀಡುತ್ತಿದೆ. ಇದು ಬಹಳ ದೊಡ್ಡ ಅನ್ಯಾಯ. ಈ ಅನ್ಯಾಯದ ಬಗ್ಗೆ ಒಂದು ದಿನವೂ ಕೂಡ ಕರ್ನಾಟಕದ 25 ಬಿಜೆಪಿ ಸಂಸದರು ಒಮ್ಮೆ ಕೂಡ ಬಾಯಿ ತೆರೆದಿಲ್ಲ” ಎಂದು ಬಿಜೆಪಿ ಸಂಸದರ ವಿರುದ್ಧ ಹರಿಹಾಯ್ದರು.
#WATCH | Delhi: On the Karnataka Congress protest in Delhi, Karnataka CM Siddramaiah says “We expect the Govt will listen to our protest and our main intention is to protect the interest of the state and Kannadigas…” pic.twitter.com/arNp1v5cxW
— ANI (@ANI) February 7, 2024
“ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಪಕ್ಷಾತೀತವಾಗಿ ಪ್ರಶ್ನಿಸಬೇಕು ಎಂದು ನಾನು ಬಿಜೆಪಿಯವರಿಗೂ ಪತ್ರ ಬರೆದಿದ್ದೆ. ಆದರೆ ಅವರು ಭಾಗವಹಿಸುತ್ತಾರೋ ಇಲ್ಲವೋ ಗೊತ್ತಿಲ್ಲ” ಎಂದು ತಿಳಿಸಿದ ಸಿಎಂ, “2018-19ರಲ್ಲಿ ಕೇಂದ್ರ ಸರ್ಕಾರದ ಬಜೆಟ್ ಗಾತ್ರ 24.42 ಸಾವಿರ ಕೋಟಿಯದ್ದಾಗಿತ್ತು. 2023-24ರಲ್ಲಿ 45 ಲಕ್ಷ ಕೋಟಿ ಬಜೆಟ್ ಗಾತ್ರ. ಆಗಲೇ 51 ಸಾವಿರ ಕೋಟಿ ಬರುತ್ತಿತ್ತು. ಈಗ ಐದು ವರ್ಷದ ನಂತರ 50252 ಸಾವಿರ ಕೋಟಿ ಕೊಡುತ್ತಿದ್ದಾರೆ. ಇದು ಅನ್ಯಾಯವಲ್ಲದೆ ಇನ್ನೇನು?” ಎಂದು ಸಿಎಂ ಕೇಳಿದರು.
“ಘೋಷಣೆ ಆಗಿದ್ದ ತೆರಿಗೆ ವಿಶೇಷ ಅನುದಾನ ₹5495 ಕೋಟಿ ಬಾಕಿ ಬಿಡುಗಡೆ ಮಾಡಬೇಕಿತ್ತು. ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ಅದನ್ನು ತಡೆದಿದ್ದಾರೆ. ಇಂದಿನ ಹೋರಾಟದಲ್ಲಿ ನಮ್ಮ ಎಲ್ಲ ಶಾಸಕರು, ಸಚಿವರು ಭಾಗಿಯಾಗಿದ್ದಾರೆ. ಇದು ರಾಜಕೀಯ ಹೋರಾಟ ಅಲ್ಲ, ಇದು ಕನ್ನಡಿಗರ ಹಿತ ಕಾಪಾಡುವ ಚಳವಳಿ” ಎಂದು ಸಿಎಂ ತಿಳಿಸಿದರು.
“ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಬಗ್ಗೆ ರಾಜ್ಯ ಬಜೆಟ್ ಮಂಡನೆಯ ಬಳಿಕ ಶ್ವೇತಪತ್ರ ಹೊರಡಿಸುತ್ತೇವೆ. ಬಜೆಟ್ ಕೂಡ ಒಂದು ಶ್ವೇತಪತ್ರವೇ ಆಗಿದೆ. ಆದರೂ ನಾವು ಶ್ವೇತಪತ್ರ ಹೊರಡಿಸುತ್ತೇವೆ” ಎಂದು ಅವರು ಹೇಳಿದರು.
’12:30ರೊಳಗೆ ಪ್ರತಿಭಟನೆ ಮುಗಿಸಿ’ ಎಂದ ದೆಹಲಿ ಪೊಲೀಸ್
ಕೇಂದ್ರ ಸರ್ಕಾರದ ವಿರುದ್ಧ ಅನುದಾನಕ್ಕಾಗಿ ರಾಜ್ಯದ ಕಾಂಗ್ರೆಸ್ ಸರ್ಕಾರ ಪಡೆ ಸಮರ ಸಾರಿದೆ. ದೆಹಲಿಯ ಜಂತರ್ ಮಂತರ್‌ನಲ್ಲಿ ನನ್ನ ತೆರಿಗೆ ನನ್ನ ಹಕ್ಕು ಹೆಸರಲ್ಲಿ ಚಲೋ ದಿಲ್ಲಿ ಚಳವಳಿಯನ್ನು ಇಂದು(ಫೆ.7) ಹಮ್ಮಿಕೊಂಡಿದ್ದಾರೆ. ಈ ಹೋರಾಟಕ್ಕೆ ದಕ್ಷಿಣದ ರಾಜ್ಯಗಳಾದ ಕೇರಳ, ತಮಿಳುನಾಡು ಕೂಡ ಸಾಥ್ ಕೊಟ್ಟಿದೆ.
ಕರ್ನಾಟಕ ಸರ್ಕಾರ ದೆಹಲಿಯ ಜಂತರ್ ಮಂತರ್‌ನಲ್ಲಿ ರಾಜ್ಯ ಸರ್ಕಾರ ಪ್ರತಿಭಟನೆ ಹಮ್ಮಿಕೊಂಡಿದೆ. ಇಂದು ಬೆಳಿಗ್ಗೆ 11 ಗಂಟೆಗೆ ಕನ್ನಡಿಗರ ನ್ಯಾಯಯುತ ತೆರಿಗೆ ಪಾಲು ಮತ್ತು ಅನುದಾನ ಹಂಚಿಕೆಯಲ್ಲಿ ಆಗುತ್ತಿರುವ ತಾರತಮ್ಯದ ವಿರುದ್ಧ ಧ್ವನಿಯೆತ್ತೋಣ ಬನ್ನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸರ್ಕಾರದ ಎಲ್ಲಾ ಸಚಿವರು, ಕಾಂಗ್ರೆಸ್ನ ಎಲ್ಲ ಶಾಸಕರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಈಗಾಗಲೇ ಎಲ್ಲರೂ ದೆಹಲಿಗೆ ತಲುಪಿದ್ದಾರೆ.
ಆದರೆ, ಈ ನಡುವೆಯೇ ಕೇಂದ್ರ ಸರ್ಕಾರದ ವಿರುದ್ಧ ಅನುದಾನಕ್ಕಾಗಿ ಕಾಂಗ್ರೆಸ್ ಪಡೆಗೆ ದೆಹಲಿ ಪೊಲೀಸರು ಶಾಕ್ ನೀಡಿದ್ದಾರೆ. ಕಾಂಗ್ರೆಸ್ ತೆರಿಗೆ ಪ್ರತಿಭಟನೆಗೆ ಸಮಯ ನಿಗದಿ ಮಾಡಿ ಸೂಚನೆ ನೀಡಿದ್ದು, ಬೆಳಗ್ಗೆ 10:30 ರಿಂದ 12:30ರೊಳಗೆ ಮಾತ್ರ ಪ್ರತಿಭಟನೆ ಮಾಡಬೇಕು, ಅದರೊಳಗೆ ಪ್ರತಿಭಟನೆ ಮುಗಿಸಿ ಸ್ಥಳದಿಂದ ತೆರಳುವಂತೆ ಸೂಚಿಸಿದ್ದಾರೆ.
ಕೇಂದ್ರದ ಮುಂದೆ ಕಾಂಗ್ರೆಸ್ ಬೇಡಿಕೆಗಳು
ರಾಜ್ಯ ಸರ್ಕಾರ ಒಟ್ಟು ಏಳು ಪ್ರಮುಖ ಬೇಡಿಕೆಗಳನ್ನ ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದೆ. ಈ ಚಳವಳಿ ಯಾರ ವಿರುದ್ಧವೂ ಅಲ್ಲ, ಇದು ಕರುನಾಡು ಹಾಗೂ ಕನ್ನಡಿಗರ ಹಿತಕ್ಕಾಗಿ. ಪಕ್ಷಾತೀತವಾಗಿ ಎಲ್ಲರೂ ಈ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಅಂತ ಸಿಎಂ ಸಿದ್ದರಾಮಯ್ಯ ಬಿಜೆಪಿಯವರಿಗೂ ಪತ್ರ ಬರೆದಿದ್ದಾರೆ.