ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಸಲ್ಲಿಸುವ ಮುಂದಿನ ಪೂರಕ ಆರೋಪಪಟ್ಟಿಯಲ್ಲಿ ಎಎಪಿಯನ್ನು ಆರೋಪಿಯೆಂದು ಹೆಸರಿಸುವುದಾಗಿ ಜಾರಿ ನಿರ್ದೇಶನಾಲಯ (ಇಡಿ) ದೆಹಲಿ ಹೈಕೋರ್ಟ್ಗೆ ತಿಳಿಸಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ತೀರ್ಪನ್ನು ಕಾಯ್ಡಿರಿಸಿದೆ. ಅರ್ಜಿ ವಿಚಾರಣೆ ವೇಳೆ ವಾದ ಮಂಡಿಸಿದ ಇಡಿ ವಕೀಲ ಜೊಹೆಬ್ ಹೊಸೈನ್, “ಮುಂದಿನ ಚಾರ್ಜ್ಶೀಟ್ನಲ್ಲಿ ಎಎಪಿಯನ್ನು ಸಹ ಆರೋಪಿಯನ್ನಾಗಿ ಮಾಡಲಾಗುವುದು” ಎಂದು ಹೇಳಿದೆ.
“ಪ್ರಕರಣದ ಆರೋಪಗಳನ್ನು ಉಲ್ಲೇಖಿಸುವ ಪ್ರಕ್ರಿಯೆಯನ್ನು ವಿಳಂಬಗೊಳಿಸಲು ಆರೋಪಿಗಳಿಂದ ಸಂಘಟಿತ ಪ್ರಯತ್ನಗಳು ನಡೆದಿವೆ” ಎಂದು ತನಿಖಾ ಸಂಸ್ಥೆಯ ವಕೀಲರು ಹೇಳಿದ್ದಾರೆ.
ಸಿಸೋಡಿಯಾ ಅವರಿಗೆ ಜಾಮೀನು ಕೋರಿ ವಾದ ಮಂಡಿಸಿದ ಅವರ ವಕೀಲರು, “ಹಣ ವರ್ಗಾವಣೆ ಮತ್ತು ಭ್ರಷ್ಟಾಚಾರ ಪ್ರಕರಣದಲ್ಲಿ ಇಡಿ ಮತ್ತು ಸಿಬಿಐ ವಿಚಾರಣೆಯನ್ನು ಶೀಘ್ರವಾಗಿ ಮುಗಿಸುವ ಸಾಧ್ಯತೆಗಳೇ ಇಲ್ಲ. ಒಂದೂವರೆ ವರ್ಷದಿಂದ ಸಿಸೋಡಿಯಾ ಜೈಲಿನಲ್ಲಿದ್ದಾರೆ. ಅವರಿಗೆ ಜಾಮೀನು ನೀಡಬೇಕು” ಎಂದರು.
ರಾಜಕೀಯ ಪಕ್ಷವನ್ನು ಪಿಎಂಎಲ್ಎ ವ್ಯಾಪ್ತಿಗೆ ತರಬಹುದು ಎಂದು ಹೈಕೋರ್ಟ್ ಕಳೆದ ತಿಂಗಳು ಗಮನಿಸಿತ್ತು. ಇಡಿ ಎಎಪಿಯನ್ನು ‘ಕಂಪನಿ’ ಮತ್ತು ಕೇಜ್ರಿವಾಲ್ ಅವರನ್ನು ಅದರ ‘ನಿರ್ದೇಶಕ’ ಎಂದು ಹೋಲಿಸಿದೆ.