ದೆಹಲಿ ವಿವಿ ಆವರಣದಲ್ಲಿ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶಿಸಿದ ಎನ್‌ಎಸ್‌ಯುಐ ಕಾರ್ಯದರ್ಶಿ ಲೋಕೇಶ್ ವಿರುದ್ಧದ ನಿಷೇಧ ರದ್ದುಪಡಿಸಿ ಅವರನ್ನು ವಿವಿಗೆ ಮರು ಸೇರ್ಪಡೆಗೊಳಿಸುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ
ಗುಜರಾತ್ ಗಲಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾತ್ರದ ಬಗ್ಗೆ ಸಿದ್ಧವಾದ ಬಿಬಿಸಿ ಸಾಕ್ಷ್ಯಚಿತ್ರದ ಪ್ರದರ್ಶನ ವಿರೋಧಿಸಿ ದೆಹಲಿ ವಿಶ್ವವಿದ್ಯಾಲಯ ನೀಡಿದ ಆದೇಶವನ್ನು ದೆಹಲಿ ಹೈಕೋರ್ಟ್ ರದ್ದುಪಡಿಸಿದೆ.
ನ್ಯಾಯಮೂರ್ತಿ ಪುರುಷೇಂದ್ರ ಕುಮಾರ್ ಕೌರವ್ ಅವರು ದೆಹಲಿ ವಿವಿ ಆದೇಶವನ್ನು ತಿರಸ್ಕರಿಸಿದ್ದಾರೆ. ಈ ಸಂಬಂಧ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಸಂಘಟನೆ (ಎನ್‌ಎಸ್‌ಯುಐ) ರಾಷ್ಟ್ರೀಯ ಕಾರ್ಯದರ್ಶಿ ಲೋಕೇಶ್ ಛಗ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಒಪ್ಪಿಕೊಂಡಿದೆ. ಲೋಕೇಶ್ ಛಗ್ ಅವರನ್ನು ಡಿಬಾರ್ ಮಾಡಿದ ವಿವಿ ಆಡಳಿತದ ಆದೇಶವನ್ನೂ ನ್ಯಾಯಾಲಯ ರದ್ದುಪಡಿಸಿದೆ.
ದೆಹಲಿ ವಿಶ್ವವಿದ್ಯಾಲಯದ ಆವರಣದಲ್ಲಿ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶಿಸಿದ್ದಕ್ಕಾಗಿ ಲೋಕೇಶ್ ಅವರನ್ನು ವಿವಿ ಪ್ರವೇಶಿಸದಂತೆ ವಿಶ್ವವಿದ್ಯಾಲಯ ನೋಟಿಸ್ ಕಳುಹಿಸಿತ್ತು. ಲೋಕೇಶ್ ಅವರನ್ನು ವಿಶ್ವವಿದ್ಯಾಲಯಕ್ಕೆ ಮರು ಸೇರ್ಪಡೆಗೊಳಿಸುವಂತೆ ನ್ಯಾಯಮೂರ್ತಿ ಪುರುಷೇಂದ್ರ ಕುಮಾರ್ ಕೌರವ್ ಆದೇಶಿಸಿದ್ದಾರೆ.
“2021 ಮಾರ್ಚ್ 10ರಂದು ವಿವಿ ನೀಡಿದ ಆದೇಶವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆ ಆದೇಶವನ್ನು ರದ್ದುಗೊಳಿಸಲಾಗಿದೆ. ಅರ್ಜಿದಾರನನ್ನು ಮರಳಿ ವಿವಿಗೆ ಸೇರಿಸಿಕೊಳ್ಳಬೇಕು. ಇಲ್ಲದಿದ್ದರೆ ಅಗತ್ಯ ಕಾನೂನು ಕ್ರಮ ಎದುರಿಸಿ” ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ಜನವರಿ 27ರಂದು ಪ್ರತಿಭಟನೆ ನಡೆಸಿದ ನಂತರ ಎನ್‌ಎಸ್‌ಯುಐ ನಾಯಕನನ್ನು ಒಂದು ವರ್ಷದವರೆಗೆ ವಿವಿ ಪರೀಕ್ಷೆಗೆ ಹಾಜರಾಗದಂತೆ ಆದೇಶಿಸಲಾಗಿತ್ತು. ಪ್ರತಿಭಟನೆಯ ಸಂದರ್ಭದಲ್ಲಿ, ‘ಇಂಡಿಯಾ: ದ ಮೋದಿ ಕ್ವೆಶ್ಚನ್’ ಎಂಬ ಬಿಬಿಸಿ ಸಾಕ್ಷ್ಯಚಿತ್ರವನ್ನು ಸಾರ್ವಜನಿಕವಾಗಿ ಪ್ರದರ್ಶಿಸಲಾಗಿತ್ತು ಎಂದು ವಿವಿ ಆಡಳಿತ ಆರೋಪಿಸಿದೆ.
ಈ ಸುದ್ದಿ ಓದಿದ್ದೀರಾ?: ರಾಮನವಮಿ ಹಿಂಸೆಯ ಎನ್‌ಐಎ ತನಿಖೆಗೆ ಆದೇಶಿಸಿದ ಕೋಲ್ಕತ್ತಾ ಹೈಕೋರ್ಟ್
“ಲೋಕೇಶ್ ಛಗ್ ಒಟ್ಟು ಪ್ರತಿಭಟನೆಯ ಮಾಸ್ಟರ್ ಮೈಂಡ್. ಅವರು ವಿವಿ ಆವರಣದಲ್ಲಿ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡುವಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಒಪ್ಪಿಗೆ ಪಡೆದಿರಲಿಲ್ಲ. ನಿಷೇಧ ಹೇರಿದ ನಂತರವೂ ಪ್ರತಿಭಟನೆ ಆಯೋಜಿಸಿರುವುದು ಅಶಿಸ್ತಿನ ನಡವಳಿಕೆ” ಎಂದು ಸೋಮವಾರ ವಿಚಾರಣೆ ಸಂದರ್ಭದಲ್ಲಿ ದೆಹಲಿ ಹೈಕೋರ್ಟ್‌ಗೆ ವಿವಿ ಆಡಳಿತ ತಿಳಿಸಿತ್ತು.
ಭಾರತದಲ್ಲಿ ಸಾಕ್ಷ್ಯಚಿತ್ರದ ಎರಡು ಭಾಗಗಳ ಪ್ರದರ್ಶನವನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ ಎನ್ನುವ ಸುದ್ದಿ ಪತ್ರಿಕೆಗಳ ಮಾಹಿತಿ ನೋಡಿದ ನಂತರ ವಿದ್ಯಾರ್ಥಿಯ ಮೇಲೆ ಕ್ರಮ ಕೈಗೊಂಡಿದ್ದೇವೆ ಎಂದು ವಿವಿ ಆಡಳಿತ ನ್ಯಾಯಾಲಯದ ಮುಂದೆ ಸಮರ್ಥಿಸಿಕೊಂಡಿತ್ತು.
ದೆಹಲಿ ವಿವಿ ಪರವಾಗಿ ಭಾರತದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ವಾದ ಮಂಡಿಸಿದ್ದರು. ಹಿರಿಯ ವಕೀಲ ಕಪಿಲ್ ಸಿಬಲ್ ಅವರು ವಕೀಲರಾದ ನಮನ್ ಜೋಶಿ, ರಿತಿಕಾ ವೋರಾ ಹಾಗೂ ಅಧಿಕ್ ಚಿಮ್ನಿ ಅವರು ಲೋಕೇಶ್ ಛಗ್ ಪರವಾಗಿ ವಾದಿಸಿದ್ದರು.